ಶಿವರಾಜಕುಮಾರ್ ಇದೇ ಶುಕ್ರವಾರ (ಜುಲೈ 12) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಭೈರವನ ಕೊನೆಯ ಪಾಠ’ ಚಿತ್ರದ ಮೊದಲ ನೋಟ ಬಿಡುಗಡೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚಿತ್ರಂಡ, ಹುಟ್ಟುಹಬ್ಬದವರೆಗೂ ಕಾಯಲಿಲ್ಲ. ಅಂದು ಶಿವಣ್ಣ ಅಭಿನಯದ ಬೇರೆ ಚಿತ್ರಗಳ ಟೀಸರ್, ಪೋಸ್ಟರ್ ಬಿಡುಗಡೆ ಆಗುವ ಸಾಧ್ಯತೆ ಇರುವುದರಿಂದ ಮತ್ತು ಅದರ ಮಧ್ಯೆ ತಮ್ಮ ಚಿತ್ರವು ಕಳೆದು ಹೋಗಬಾರದೆಂಬ ದೃಷ್ಟಿಯಿಂದ, ಬಿಡುಗಡೆಗೂ ಮೊದಲೇ ‘ಭೈರವನ ಕೊನೆಯ ಪಾಠ’ ಚಿತ್ರದ ಮೊದಲ ನೋಟ ಬಿಡುಗಡೆ ಮಾಡಿದೆ.
ಹೌದು, ಹೇಮಂತ್ ರಾವ್ ನಿರ್ದೇಶನದ ಮತ್ತು ವೈಶಾಖ್ ಜೆ ಗೌಡ ನಿರ್ಮಾಣದ ‘ಭೈರವನ ಕೊನೆಯ ಪಾಠ’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಕಾರಣ, ಈ ಚಿತ್ರದಲ್ಲಿ ಶಿವಣ್ಣ ವೀರಯೋಧನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಎರಡು ಪೋಸ್ಟರ್‍ಗಳು ಬಿಡುಗಡೆಯಾಗಿದ್‍ದು, ಎರಡು ಲುಕ್‍ಗಳಲ್ಲಿ ಶಿವರಾಜಕುಮಾರ್ ಕಾಣಿಸಿಕೊಂಡಿದ್ದಾರೆ. ಗಡ್ಡ ಹಾಗೂ ಮೀಸೆ ಬೆಳ್ಳಗಾಗಿದೆ. ಯುದ್ದದ ಪೋಷಾಕು ತೊಟ್ಟು, ಬೆನ್ನಿಗೆ ಬಾಣಗಳನ್ನು ಕಟ್ಟಿಕೊಂಡು ಯುದ್ಧಕ್ಕೆ ಸಜ್ಜಾಗಿದ್ದಾರೆ. ಪೋಸ್ಟರ್ ನಲ್ಲಿ ಹಂಪಿಯ ಕಮಲ ಮಹಲ್ ಕೂಡ ಇರುವುದು ಸಿನಿಮಾ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ಈ ಚಿತ್ರದ ಕುರಿತು ಮಾತನಾಡುವ ಶಿವಣ್ಣ, ‘ಅಪ್ಪಾಜಿ, ಈ ರೀತಿಯ ಪಾತ್ರಗಳನ್ನು ನಿಭಾಯಿಸುವುದರಲ್ಲಿ ಹೆಸರುವಾಸಿಯಾಗಿದ್ದರು. ಈಗ ನನಗೆ ಅಂಥದ್ದೊಂದು ಅವಕಾಶ ಸಿಕ್ಕಿದೆ. ಭೈರವನ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಹೇಮಂತ್ ಎಂ ರಾವ್ ಮತ್ತು ತಂಡದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.
ಹೇಮಂತ್ ಎಂ ರಾವ್ ಅವರಿಗೆ ‘ಭೈರವನ ಕೊನೆಯ ಪಾಠ’ ಮಹತ್ವಾಕಾಂಕ್ಷೆಯ ಚಿತ್ರವಾಗಿದೆಯಂತೆ. ‘ಇದೇ ಮೊದಲ ಬಾರಿಗೆ ಸೂಪರ್‌ಸ್ಟಾರ್ ಸಿನಿಮಾವನ್ನು ನಿರ್ದೇಶಿಸುವ ಜವಾಬ್ದಾರಿಯು ಸವಾಲಿನ ಕೆಲಸವಾಗಿದೆ. ಶಿವಣ್ಣ ಜೊತೆ ಕೆಲಸ ಮಾಡುವುದು ಪ್ರತಿಯೊಬ್ಬ ನಿರ್ದೇಶಕರ ಆಸೆ. ಇಡೀ ದಿನ ಬೆಟ್ಟದ ಮೇಲೆ ಫೋಟೋಶೂಟ್ ನಡೆದಿದೆ. ಇದು ಕೆಲವು ಶತಮಾನಗಳ ಹಿಂದಿನ ಸಿನಿಮಾ’ ಎಂದಷ್ಟೇ ಹೇಳಿದ್ದು, ಚಿತ್ರಕ್ಕೆ ಸಂಬಂಧಿಸಿದ ಮಿಕ್ಕ ವಿಷಯಗಳನ್ನು ಗೌಪ್ಯವಾಗಿಟ್ಟಿದ್ದಾರೆ.
‘ಭೈರವನ ಕೊನೆ ಪಾಠ’ ಚಿತ್ರವನ್ನು ವೈಶಾಖ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಖ್ ಜೆ ಗೌಡ ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.