ಈ ವರ್ಷದ ನಿರೀಕ್ಷಿತ ಚಿತ್ರಗಳ ಪೈಕಿ ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್’ ಸಹ ಒಂದು. ಯಾವಾಗ ಚಿತ್ರವು ‘ಮಫ್ತಿ’ಯ ಪ್ರೀಕ್ವೆಲ್ ಎಂದು ಸುದ್ದಿಯಾಯಿತೋ, ಆಗಿನಿಂದಲೂ ಚಿತ್ರದ ಬಗ್ಗೆ ಅಭಿಮಾನಿಗಳ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮನೆಮಾಡಿವೆ.
ಇಷ್ಟು ದಿನ ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಲೇ ಇದ್ದರು. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದ್ದು, ಚಿತ್ರವು ನವೆಂಬರ್ 14ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಬೆಂಗಳೂರಿನ ಯಲಹಂಕಾದಲ್ಲಿರುವ ಗೆಲೆರಿಯಾ ಮಾಲ್‍ನಲ್ಲಿ ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ‘ಭೈರತಿ ರಣಗಲ್’ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಯಿತು.
ಮಾಲ್‍ನ ಗೋಡೆಯ ಮೇಲೆ 48 ಅಡಿ ಎತ್ತರದ ಗ್ರಾಫಿಟಿ ರಚಿಸಲಾಗಿದ್ದು, ಅದರಲ್ಲಿ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ಶಿವರಾಜಕುಮಾರ್ ಎದುರು ಜನ ಕೈಮುಗಿದು ನಿಂತಿರುವ ಈ ಬೃಹತ್ ಚಿತ್ರಕಲೆಯನ್ನು ಗೀತಾ ಶಿವರಾಜಕುಮಾರ್ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ನರ್ತನ್ ಸಹ ಹಾಜರಿದ್ದರು.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ‘ಭೈರತಿ ರಣಗಲ್’ ಚಿತ್ರವು ಆಗಸ್ಟ್ 15ರಂದು ಬಿಡುಗಡೆಯಾಗಬೇಕಿತ್ತು. ಕೆಲವು ತಿಂಗಳುಗಳ ಹಿಂದೆಯೇ ಸ್ವಾತಂತ್ರ್ಯೋತ್ಸವದಂದು ಚಿತ್ರ ಬಿಡುಗಡೆ ಆಗಲಿದೆ ಎಂದು ಶಿವರಾಜಕುಮಾರ್ ಘೋಷಣೆ ಮಾಡಿದ್ದರು. ಆದರೆ, ಚಿತ್ರೀಕರಣ ಸಂಪೂರ್ಣವಾಗದ ಕಾರಣ ಚಿತ್ರವನ್ನು ಮುಂದೂಡಲಾಯ್ತು. ಆ ನಂತರ ಚಿತ್ರವು ಅಕ್ಟೋಬರ್‍ನಲ್ಲಿ ಬಿಡುಗಡೆ ಎಂದು ಹೇಳಲಾಯ್ತು. ಅಕ್ಟೋಬರ್‍ನಲ್ಲಿ ಉಪೇಂದ್ರ ಅಭಿನಯದ ‘ಯುಐ’ ಸೇರಿದಂತೆ ಒಂದಿಷ್ಟು ಚಿತ್ರಗಳು ಬಿಡುಗಡೆ ಆಗುತ್ತಿರುವುದರಿಂದ, ಚಿತ್ರವನ್ನು ನವೆಂಬರ್ 15ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ.
‘ಭೈರತಿ ರಣಗಲ್’ ಚಿತ್ರವನ್ನು ಗೀತಾ ಪಿಕ್ಚರ್ಸ್ ಬ್ಯಾನರ್‍ನಡಿ ಗೀತಾ ಶಿವರಾಜಕುಮಾರ್ ನಿರ್ಮಿಸಿದರೆ, ನರ್ತನ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ. ಚಿತ್ರದಲ್ಲಿ ಶಿವರಾಜಕುಮಾರ್, ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್, ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಮುಂತಾದವರು ನಟಿಸಿದ್ದಾರೆ.