ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್’ ಚಿತ್ರವು ಇದೇ ಗುರುವಾರ (ಆಗಸ್ಟ್ 15) ಬಿಡುಗಡೆ ಆಗಬೇಕಿತ್ತು. ಆದರೆ, ಚಿತ್ರೀಕರಣ ತಡವಾಗಿದ್ದರಿಂದ ಚಿತ್ರದ ಬಿಡುಗಡೆ ಸಹ ಮುಂದಕ್ಕೆ ಹೋಗಿದೆ. ಚಿತ್ರವು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಶೀರ್ಷಿಕೆ ಗೀತೆ ಬಿಡುಗಡೆ ಆಗಿದೆ.
ಹೌದು, ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ಅವರು ನಿರ್ಮಿಸಿರುವ, ನರ್ತನ್ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ‘ಭೈರತಿ ರಣಗಲ್’ ಚಿತ್ರದ ಶೀರ್ಷಿಕೆ ಗೀತೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‍ನಲ್ಲಿ ಬಿಡುಗಡೆ ಆಗಿದೆ.
‘ಕೆಜಿಎಫ್’ ಖ್ಯಾತಿಯ ಕಿನ್ನಾಳ್ ರಾಜ್ ಬರೆದಿರುವ ‘ಇತಿಹಾಸವೇ ನಿಬ್ಬೆರಿಗಿಸುವ ಎತ್ತಿ ಹಿಡಿಯುವ ಮೈಲಿಗಲ್ಲು…’ ಎಂದು ಸಾಗುವ ‘ಭೈರತಿ ರಣಗಲ್’ ಚಿತ್ರದ ಶೀರ್ಷಿಕೆ ಗೀತೆಗೆ ರವಿ ಬಸ್ರೂರು ಸಂಗೀತ ಸಂಯೋಜಿಸಿದರೆ, ಸಂತೋಷ್ ವೆಂಕಿ ಹಾಡಿದ್ದಾರೆ.
ನರ್ತನ್ ಹಾಗೂ ಶಿವಣ್ಣ ಅವರ ಕಾಂಬಿನೇಶನ್‍ನಲ್ಲಿ ಮೂಡಿಬಂದಿದ್ದ ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿರುವ ‘ಭೈರತಿ ರಣಗಲ್’ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.
‘ಭೈರತಿ ರಣಗಲ್’ ಚಿತ್ರದಲ್ಲಿ ಶಿವರಾಜಕುಮಾರ್ ಅವರಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ಮಿಕ್ಕಂತೆ ಬಾಬು ಹಿರಣ್ಣಯ್ಯ, ರಾಹುಲ್ ಬೋಸ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ, ಆಕಾಶ್ ಹಿರೇಮಠ ಸಂಕಲನವಿದೆ.