ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ವೆಬ್ ಸರಣಿಗಳ ಸಂಖ್ಯೆ ಕಡಿಮೆಯೇ. ಅಪರೂಪಕ್ಕೆಂಬಂತೆ ಅಲ್ಲೊಂದು ಇಲ್ಲೊಂದು ವೆಬ್ ಸರಣಿಗಳು ಕನ್ನಡದಲ್ಲಿ ನಿರ್ಮಾಣವಾಗುತ್ತಿವೆ. ಈ ಸಾಲಿಗೆ ಇದೀಗ ‘ಅಯ್ಯನ ಮನೆ’ ಎಂಬ ಹೊಸ ಸರಣಿಯು ಸೇರಿದೆ.
ZEE5 ಮತ್ತೊಂದು ಹೊಸ ಸಾಹಸ ಮಾಡಿದ್ದು, ಮಿನಿ ವೆಬ್ ಸೀರೀಸ್ ಪರಿಚಯಿಸಿದೆ. ZEE5ನಲ್ಲಿ ಸ್ಟ್ರೀಮ್ ಆಗುತ್ತಿರುವ ಮೊದಲ ಕನ್ನಡ ಮಿನಿ ವೆಬ್ ಸರಣಿಯನ್ನು ನಟಿ-ನಿರ್ದೇಶಕ ರಮೇಶ್ ಇಂದಿರಾ ನಿರ್ದೇಶನ ಮಾಡಿದ್ದಾರೆ. ಆ ಸರಣಿಗೆ ‘ಅಯ್ಯನ ಮನೆ’ ಎಂದು ಹೆಸರಿಡಲಾಗಿದೆ. ಪ್ರತಿ ಮನೆಯೂ ಸ್ವರ್ಗವಾಗಿರುವುದಿಲ್ಲ. ಅಲ್ಲಿ ಎಷ್ಟೋ ಮುಚ್ಚಿಟ್ಟ ವಿಷಯಗಳು ಇರುತ್ತವೆ ಅನ್ನೋದನ್ನು ಈ ಮಿನಿ ಸೀರೀಸ್ ಮೂಲಕ ರಮೇಶ್ ಇಂದಿರಾ ಹೇಳಲು ಹೊರಟಿದ್ದಾರೆ.
ರಮೇಶ್ ಇಂದಿರಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ʼಅಯ್ಯನ ಮನೆʼ ವೆಬ್ ಸರಣಿಯನ್ನು ಶೃತಿ ನಾಯ್ಡು ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಚಿಕ್ಕಮಗಳೂರಿನ ‘ಅಯ್ಯನ ಮನೆ’ ಕುಟುಂಬದಲ್ಲಿ ಅಡಗಿರುವ ಸತ್ಯಗಳ ಸುತ್ತಕಥೆ ಸಾಗುತ್ತದೆ. ಇದೊಂದು ಮಿಸ್ಟ್ರಿ ಕಥೆಯಾಗಿದ್ದು, ಪ್ರೇಕ್ಷಕರನ್ನು ಪ್ರತಿ ಕ್ಷಣ ಕುತೂಹಲಕ್ಕೀಡು ಮಾಡುತ್ತದೆ.
ಈ ಸರಣಿಯ ಕುರಿತು ಮಾತನಾಡುವ ರಮೇಶ್ ಇಂದಿರಾ, ‘ಅಯ್ಯನ ಮನೆ’ ರೋಚಕತೆ ಜೊತೆಗೆ ಭಯ, ನಂಬಿಕೆ ಮತ್ತು ಫ್ಯಾಮಿಲಿ ಕಥೆಯೊನ್ನೊಳಗೊಂಡಿದೆ. ಈ ವೆಬ್ ಸರಣಿ ಕರ್ನಾಟಕ ಸಂಸ್ಕೃತಿ, ಸಂಪ್ರದಾಯದವನ್ನು ಅನಾವರಣ ಮಾಡುತ್ತದೆ. ‘ಅಯ್ಯನ ಮನೆ’ ವೆಬ್ ಸರಣಿ ಪ್ರೇಕ್ಷಕರನ್ನು ಸೀಟಿನ ತುದಿಗೆ ಕೂರುವಂತೆ ಮಾಡುತ್ತದೆ’ ಎಂದಿದ್ದಾರೆ.
ಏಳು ಎಪಿಸೋಡ್ ಹೊಂದಿರುವ ಈ ಸರಣಿಯಲ್ಲಿ ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ಮುಂತಾದವರು ಅಭಿನಯಿಸಿದ್ದಾರೆ. ಇದು ಭಯ, ನಂಬಿಕೆ ಮತ್ತು ವಿಧಿಯ ಸುತ್ತ ಸುತ್ತುವ ಕಥೆಯಾಗಿದ್ದು, ಇದೇ ತಿಂಗಳ 25ರಿಂದ ZEE5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.





