Mysore
19
mist

Social Media

ಬುಧವಾರ, 24 ಡಿಸೆಂಬರ್ 2025
Light
Dark

‘ಕೆಡಿ – ದಿ ಡೆವಿಲ್‍’ ಸಂಗೀತದ ಖರ್ಚಿನಲ್ಲಿ ಒಂದು ಸಿನಿಮಾ ಮಾಡಬಹುದಿತ್ತಂತೆ!

‘ಜೋಗಿ’ ಪ್ರೇಮ್‍ ನಿರ್ದೇಶನದ ‘ಕೆಡಿ – ದಿ ಡೆವಿಲ್‍’ ಚಿತ್ರದ ‘ಶಿವ ಶಿವ …’ ಎಂಬ ಮೊದಲ ಹಾಡನ್ನು ಡಿ. 24ರಂದು ಬಿಡುಗಡೆ ಮಾಡಲಾಗಿದೆ. ಈ ಚಿತ್ರದ ಹಾಡುಗಳಿಗೆ ಮಾಡಿದ ಖರ್ಚಿನಲ್ಲಿ ಒಂದು ಚಿತ್ರವನ್ನೇ ನಿರ್ಮಾಣ ಮಾಡಬಹುದಿತ್ತು ಎಂದು ಸಂಗೀತ ನಿರ್ದೇಶಕ ಅರ್ಜುನ್‍ನ್ಯ ಹೇಳಿಕೊಂಡಿದ್ದಾರೆ.

‘ಶಿವ ಶಿವ …’ ಲಿರಿಕಲ್ ವಿಡಿಯೋ ಬಿಡುಗಡೆ ಸಮಾರಂಭ ಒರಾಯನ್ ಮಾಲ್‌ನಲ್ಲಿ ಇತ್ತೀಚೆಗೆ ನಡೆಯಿತು. ಈ ಹಾಡಿಗೆ ಪ್ರೇಮ್ ಹಾಗೂ ಕೈಲಾಶ್‌ ಖೇರ್ ದನಿಯಾಗಿದ್ದು, ಉಳಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಅಲ್ಲಿನ ಗಾಯಕರೇ ಹಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ‘’ಕೆಡಿ’ ಚಿತ್ರದ ಸಂಗೀತಕ್ಕೆ ಹಾಕಿದ ಹಣದಲ್ಲಿ ಒಂದು ದೊಡ್ಡ ಸಿನಿಮಾನೇ ಮಾಡಬಹುದಿತ್ತು. ಪ್ರೇಮ್ ಅನುಮತಿ ಇಲ್ಲದೆ ಒಂದು ಹುಲ್ಲು ಕಡ್ಡಿನೂ ಅಲ್ಲಾಡೋದಿಲ್ಲ. ಹಾಡುಗಳ ಸಂಯೋಜನೆಯಲ್ಲಿ ಟ್ರ್ಯಾಕ್ ಸಿಂಗರ್ ಕೂಡ ಅವರೇ ಆಗಿರುತ್ತಾರೆ. ಕೀ ಬೋರ್ಡ್ ಒಂದನ್ನು ನಮಗೆ ಬಿಡುತ್ತಾರೆ. ಅದೂ ಬಂದಿದ್ದರೆ, ಅವರೇ ಮಾಡಿಬಿಡುತ್ತಿದ್ದರೇನೋ? ಸಂಗೀತದ ಕೆಲಸಗಳು ನಡೆಯುವಾಗ ಅವರು ಜೊತೆಗೇ ಇರುತ್ತಾರೆ. ಯೂರೋಪ್ ನಲ್ಲಿ 264 ಪೀಸ್ ಆರ್ಕೆಸ್ಟ್ರಾ ಮಾಡಿಸಿದ್ದಾರೆ‌’ ಎಂದು ಚಿತ್ರದ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು.

ಈ ಚಿತ್ರದ ವಿಶೇಷವೆಂದರೆ, ಚಿತ್ರದ ಸಂಗೀತಕ್ಕಾಗಿ ಸಂಗೀತ ನಿರ್ದೇಶಕ ಅರ್ಜುನ್‍ ಜನ್ಯ 260 ಪೀಸ್‍ ಆರ್ಕೆಸ್ಟ್ರಾ ಬಳಸಿದ್ದಾರೆ. ಇತ್ತೀಚೆಗಷ್ಟೇ, ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರಕ್ಕಾಗಿ 90 ಪೀಸ್‍ ಆರ್ಕೆಸ್ಟ್ರಾ ಬಳಸಿದ್ದಾಗಿ ಸುದ್ದಿಯಾಗಿತ್ತು. ಇನ್ನು, ಇದಕ್ಕೂ ಮುನ್ನ ಭಾರತದಲ್ಲಿ ಶಾರೂಖ್‍ ಖಾನ್‍ ಅಭಿನಯದ ‘ಜವಾನ್‍’ ಚಿತ್ರಕ್ಕೆ 180 ಪೀಸ್ ಆರ್ಕೆಸ್ಟ್ರಾ ಬಳಸಿದ್ದು ದಾಖಲೆಯಾಗಿತ್ತು. ಈಗ ಆ ದಾಖಲೆಯನ್ನು ‘ಕೆಡಿ – ದಿ ಡೆವಿಲ್‍’ ಮುರಿದಿದೆ.

ಅದಕ್ಕೆ ಪ್ರತಿಫಲವಾಗಿ ಹಾಡುಗಳು ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಲಾಗಿದ್ದು, ‘ಕೆಡಿ – ದಿ ಡೆವಿಲ್‍’ ಚಿತ್ರದ ಸಂಗೀತದ ಹಕ್ಕುಗಳನ್ನು ಆನಂದ್‍ ಆಡಿಯೋದವರು ದಾಖಲೆಯ 17.70 ಕೋಟಿ ರೂ.ಗಳಿಗೆ ಪಡೆದಿದ್ದಾರೆ ಎಂಬ ಸುದ್ದಿ ಇದೆ. ಈ ವಿಷಯವನ್ನು ಸ್ವತಃ ಪ್ರೇಮ್‍ ಹೇಳಿಕೊಂಡಿದ್ದಾರೆ.

ಈ ಹಾಡಿನ ಕುರಿತು ಮಾತನಾಡುವ ಪ್ರೇಮ್‍, ‘ಹೊಸ ವರ್ಷಕ್ಕೆ ನಮ್ಮ ಚಿತ್ರದ ಮೊದಲ ಹಾಡಾಗಿ ‘ಶಿವ ಶಿವ …’ ಬಿಡುಗಡೆಯಾಗಿದೆ. ಜನಪ್ರಿಯ ಜಾನಪದ ಹಾಡಿನ ಸಾಲಿಟ್ಟುಕೊಂಡು ಈ ಹಾಡು ಬರೆಯಲಾಗಿದೆ. ಮೊದಲ ಎರಡು ಸಾಲುಗಳು ಮಾತ್ರ ಜಾನಪದ ಹಾಡಿನ ಸಾಲಾಗಿರುತ್ತದೆ. ಮಿಕ್ಕಂತೆ ಮಂಜುನಾಥ ಗೌಡ ಈ ಹಾಡನ್ನು ಬರೆದಿದ್ದಾರೆ. ಹಿಂದಿ ಹಾಡನ್ನು ಅಜಯ್ ದೇವಗನ್, ತೆಲುಗು ಹಾಡನ್ನು ಹರೀಶ್ ಶಂಕರ್ ಹಾಗೂ ತಮಿಳು ಹಾಡನ್ನು ಲೋಕೇಶ್ ಕನಕರಾಜ್ ಬಿಡುಗಡೆ ಮಾಡಿದ್ದಾರೆ’ ಎಂದರು.

‘ಕೆಡಿ – ದಿ ಡೆವಿಲ್‍’ ಚಿತ್ರಕ್ಕೆ ಪ್ರೇಮ್‍ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್‍. ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್‍, ರಮೇಶ್‍ ಅರವಿಂದ್‍, ಸಂಜಯ್‍ ದತ್‍, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್‍ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್‍ ಛಾಯಾಗ್ರಹಣ ಚಿತ್ರಕ್ಕಿದೆ.

Tags:
error: Content is protected !!