ದಕ್ಷಿಣ ಸಿನಿರಂಗದತ್ತ ಬಾಲಿವುಡ್ ತಾರೆಯರು ಬರುವುದು ಹೊಸದೇನಲ್ಲ. ಈಗಾಗಲೇ ಅನೇಕ ನಟ-ನಟಿಯರು ಸ್ಯಾಂಡಲ್‌ವುಡ್, ಟಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿತ್ತಿದ್ದಾರೆ. ಈ ಸಾಲಿನಲ್ಲಿ ಇದೀಗ ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಸೇರ್ಪಡೆಯಾಗಿದ್ದಾರೆ.
ಅನುರಾಗ್ ಕಶ್ಯಪ್ ತಮಿಳಿನ ʼಮಹಾರಾಜʼ, ತೆಲುಗಿನ ʼಡಕಾಯಿತ್ʼ ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದ ಅವರು, ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಹಾಸ್ಯ ನಟ-ನಿರ್ದೇಶಕ ಸಂಜಯ್ ಶಾಸ್ತ್ರಿ ನಿರ್ದೇಶನ ಮಾಡುತ್ತಿರುವ ಕನ್ನಡದ ‘8’ ಸಿನಿಮಾದಲ್ಲಿ ಅನುರಾಗ್ ಕಶ್ಯಪ್ ನಟಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆದ ‘8’ ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ಇದೊಂದು ಎಮೋಷನಲ್ ಕಥೆಯಾಗಿದ್ದು, ಜೀವನ ಎಲ್ಲರಿಗೂ ಎರಡನೇ ಅವಕಾಶ ನೀಡುತ್ತದೆ. ಈ ಸಿನಿಮಾದ ಭಾಗವಾಗಿರುವುದಕ್ಕೆ ಅರವಿಂದ್ ಹಾಗೂ ಸಂಜಯ್ ಅವರಿಗೆ ಧನ್ಯವಾದ ಎಂದರು.
ಫುಟ್‌ಬಾಲ್ ಆಟದ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದೆ. ಎವಿಆರ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾದ ನಿರ್ಮಾಣ ಆಗುತ್ತಿದೆ. ಈ ಚಿತ್ರಕ್ಕೆ ಅರವಿಂದ್ ವೆಂಕಟೇಶ್ ರೆಡ್ಡಿ ಹಣ ಹೂಡುತ್ತಿದ್ದು, ನಾಯಕ ನಟನಾಗಿ ಬಿಗ್‌ಬಾಸ್ ಖ್ಯಾತಿಯ ಮಹೇಶ್ ಕಾರ್ತಿಕ್ ನಟಿಸುತ್ತಿದ್ದಾರೆ.





