ಕನ್ನಡ ಮೂಲದ ಅರ್ಜುನ್ ಸರ್ಜಾ ಹಲವು ತೆಲುಗು-ತಮಿಳು ಚಿತ್ರಗಳಲ್ಲಿ ನಾಯಕರಾಗಿ ನಟಿಸಿರುವುದು ಗೊತ್ತೇ ಇದೆ. ಇತ್ತೀಚಿನ ವರ್ಷಗಳಲ್ಲಿ ಅವರು ಪೋಷಕ ಪಾತ್ರಗಳಿಗೆ ಶಿಫ್ಟ್ ಆಗಿದ್ದು, ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ವಿಜಯ್ ಅಭಿನಯದ ‘ಲಿಯೋ’ ಎಂಬ ತಮಿಳು ಚಿತ್ರದಲ್ಲಿ ಅವರು ವಿಲನ್ ಪಾತ್ರದಲ್ಲೂ ಕಾಣಿಸಿಕೊಂಡಿದ್ದರು.
ಈಗ ಅರ್ಜುನ್ ಸರ್ಜಾ ಇನ್ನೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ‘ತಲಾ’ ಅಜಿತ್ ಕುಮಾರ್ ನಟಿಸುತ್ತಿರುವ ‘ವಿಡಮುಯಾರ್ಚಿ’ ಸದ್ಯಕ್ಕೆ ತಮಿಳಿನ ಬಹುನಿರೀಕ್ಷಿತ ಚಿತ್ರ. ಇದೀಗ ಈ ಚಿತ್ರದಲ್ಲಿ ‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸೋಮವಾರ ಬೆಳಿಗ್ಗೆ ಅವರ ಮೊದಲ ನೋಟ ಬಿಡುಗಡೆಯಾಗಿದೆ.
ಬಿಡುಗಡೆಯಾಗಿರುವ ಪೋಸ್ವರ್‍ನಲ್ಲಿ ‘ಆ್ಯಕ್ಷನ್ ಕಿಂಗ್’ ಅರ್ಜುನ್ ಸರ್ಜಾ ರಸ್ತೆಯ ಮೇಲೆ ಸ್ಟೈಲಿಶ್ ಆಗಿ ನಿಂತಿದ್ದಾರೆ. ಹಿನ್ನಲೆಯಲ್ಲಿ ಅಜಿತ್ ಅವರ ನೆರಳು ಕಾಣುತ್ತದೆ. ‘ಪ್ರಯತ್ನಗಳು ಎಂದಿಗೂ ವಿಫಲವಾಗುವುದಿಲ್ಲ’ ಎಂಬ ಕುತೂಹಲ ಕೆರಳಿಸುವ ಅಡಿಬರಹವು ಈ ಚಿತ್ರಕ್ಕಿದ್ದು, ಚಿತ್ರದ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.
ಅಜಿತ್ ಮತ್ತು ಅರ್ಜುನ್ ಸರ್ಜಾ ಜೊತೆಯಾಗಿ ನಟಿಸುತ್ತಿರುವುದು ಇದು ಮೊದಲೇನಲ್ಲ. ಅಜಿತ್ ಅವರ ವೃತ್ತಿಜೀವನದಲ್ಲಿ, ಬ್ಲಾಕ್ಬಸ್ಟರ್ ಚಲನಚಿತ್ರಗಳಲ್ಲಿ ಒಂದಾದ ‘ಮಂಗತ’ ಚಿತ್ರದಲ್ಲಿ ಅಜಿತ್ ಮತ್ತು ಅರ್ಜುನ್ ನಟಿಸಿದ್ದರು. ಜೊತೆಗೆ ತ್ರಿಷಾ ಸಹ ಆ ಚಿತ್ರದಲ್ಲಿ ನಟಿಸಿದ್ದರು. ಈಗ ಮೂವರೂ ಈ ಚಿತ್ರದಲ್ಲಿ ರಿಪೀಟ್ ಆಗುತ್ತಿರುವುದು ವಿಶೇಷ.
ಬಹಳ ರಿಸ್ಕ್ ಇರುವ ಸ್ಟಂಟ್‍ಗಳಿರುವ ಈ ಚಿತ್ರದಲ್ಲಿ ಅಜಿತ್, ತ್ರಿಷಾ ಮತ್ತು ಅರ್ಜುನ್ ಜೊತೆಗೆ ಆರವ್, ರೆಜಿನಾ ಕಸಾಂದ್ರ, ನಿಖಿಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಾಗಿಲ್ ತಿರುಮೇನಿ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರವನ್ನು ತಮಿಳಿನ ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ.
‘ವಿಡಮುಯಾರ್ಚಿ’ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಬಹಳ ದೊಡ್ಡ ಮೊತ್ತಕ್ಕೆ ಸನ್ ಟಿವಿ ಪಡೆದುಕೊಂಡಿದ್ದರೆ, OTT ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಈ ಚಿತ್ರವು ಅಕ್ಟೋಬರ್ 31 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.