ಕೆಲವು ವರ್ಷಗಳ ಹಿಂದೆ ಸಾ.ರಾ. ಗೋವಿಂದು, ಓಂ ಪ್ರಕಾಶ್ ರಾವ್, ಎಸ್. ಮಹೇಂದರ್, ಬಸಂತ್ ಕುಮಾರ್ ಪಾಟೀಲ್ ಮುಂತಾದ ಹಲವು ನಿರ್ಮಾಪಕರು, ನಿರ್ದೇಶಕರೆಲ್ಲಾ ಹೀರೋಗಳಾಗಿ ಜನರನ್ನು ರಂಜಿಸುವ ಪ್ರಯತ್ನವನ್ನು ಮಾಡಿದ್ದರು. ಈಗ ಆ ಸಾಲಿಗೆ ಹಿರಿಯ ನಿರ್ಮಾಪಕ ಮತ್ತು ವಿತರಕ ಶಿಲ್ಪಾ ಶ್ರೀನಿವಾಸ್ ಸಹ ಸೇರಿದ್ದಾರೆ.
‘ಉಪೇಂದ್ರ’, ‘ಪರ್ವ’ ಮುಂತಾದ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸುವುದರ ಜೊತೆಗೆ ವಿತರಕರಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿರುವ ಶಿಲ್ಪ ಶ್ರೀನಿವಾಸ್, ಇದೀಗ ಹೀರೋ ಆಗಿದ್ದಾರೆ. ಚಿತ್ರದ ಹೆಸರು ಸಹ ‘ಶಿಲ್ಪಾ ಶ್ರೀನಿವಾಸ್’ ಎನ್ನುವುದು ವಿಶೇಷ. ಇತ್ತೀಚೆಗೆ ಈ ಚಿತ್ರಕ್ಕೆ ಹೊಸಕೊಟೆಯ ಗಟ್ಟಿಗನಬ್ಬೆಯಲ್ಲಿ ಚಾಲನೆ ದೊರೆಯಿತು. ನಟ-ಸಂಕಲನಕಾರ ನಾಗೇಂದ್ರ ಅರಸ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ವಿಶೇಷವೆಂದರೆ, ಕಳೆದ ವರ್ಷ ಶಿಲ್ಪಾ ಶ್ರೀನಿವಾಸ್ ಮಗ ಭರತ್, ‘ಮೆಜೆಸ್ಟಿಕ್ 2’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮಗನ ಚಿತ್ರ ಬಿಡುಗಡೆಯಾಗುವುದಕ್ಕೆ ಮೊದಲೇ ಅಪ್ಪನ ಚಿತ್ರ ಸಹ ಪ್ರಾರಂಭವಾಗಿದೆ.
ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ಮುಗಿಲ ಮಲ್ಲಿಗೆ’ ಚಿತ್ರದ ನಿರ್ದೇಶಕ ಆರ್ .ಕೆ. ಗಾಂಧಿ, ‘ಶಿಲ್ಪಾ ಶ್ರೀನಿವಾಸ್’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಲಿದ್ದಾರೆ. ಅನಿರುದ್ಧ ಶಾಸ್ತ್ರಿ ಸಂಗೀತ, ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ಕಿಶೋರ್ ಕಾಸರಗೋಡು, ಸ್ವಾತಿ ಲಿಂಗರಾಜ್, ಪ್ರಿಯಾಂಕ, ಶೋಭರಾಜ್, ನಾಗೇಂದ್ರ ಅರಸ್ ಮುಂತಾದವರು ನಟಿಸುತ್ತಿದ್ದಾರೆ.
ಹೊಸಕೋಟೆ, ಚಿಕ್ಕಬಳ್ಳಾಪುರ ಅಲ್ಲದೆ ಬೆಂಗಳೂರಲ್ಲಿ ಒಟ್ಟು ಎರಡು ಹಂತಗಳಲ್ಲಿ ‘ಶಿಲ್ಪಾ ಶ್ರೀನಿವಾಸ್’ ಚಿತ್ರದ ಚಿತ್ರೀಕರಣ ನಡೆಯಲಿದೆ.





