Mysore
23
broken clouds
Light
Dark

‘ಯುಐ’ ಬಿಡುಗಡೆಯ ನಂತರ ರಜನಿಕಾಂತ್ ಜೊತೆಗೆ ಉಪೇಂದ್ರ ನಟನೆ

ರಜನಿಕಾಂತ್‍ ಅಭಿನಯದ ‘ಕೂಲಿ’ ಚಿತ್ರದಲ್ಲಿ ನಟ-ನಿರ್ದೇಶಕ ಉಪೇಂದ್ರ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಆದರೆ, ಚಿತ್ರತಂಡದವರಾಗಲೀ, ಉಪೇಂದ್ರ ಆಗಲೀ ಈ ಕುರಿತು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಹೀಗಿರುವಾಗಲೇ, ‘ಯುಐ’ ಬಿಡುಗಡೆಯ ನಂತರ ರಜನಿಕಾಂತ್ ಜೊತೆಗೆ ನಟಿಸುತ್ತಿರುವುದಾಗಿ ಉಪೇಂದ್ರ ಹೇಳಿಕೊಂಡಿದ್ದಾರೆ.

ರಜನಿಕಾಂತ್‍ ಅಭಿನಯದ ಚಿತ್ರಗಳಲ್ಲಿ ಇತ್ತೀಚೆಗೆ ಬೇರೆ ಭಾಷೆಯ ನಟರು ಆಗಾಗ ಕಾಣಿಸಿಕೊಳ್ಳುವುದು ಉಂಟು. ‘ಜೈಲರ್‍’ ಚಿತ್ರದಲ್ಲಿ ಶಿವರಾಜಕುಮಾರ್, ಜಾಕಿ ಶ್ರಾಫ್‍, ಮೋಹನ್‍ ಲಾಲ್‍ ಮುಂತಾದವರು ನಟಿಸಿದ್ದರು. ‘ಕೂಲಿ’ ಚಿತ್ರದಲ್ಲಿ ಮೊದಲು ನಾಗಾರ್ಜುನ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ನಾಗಾರ್ಜುನ ಆ ಪಾತ್ರವನ್ನು ತಿರಸ್ಕರಿಸಿದ ಸುದ್ದಿಯಾಗಿತ್ತು. ಈಗ ಅದೇ ಪಾತ್ರವನ್ನು ಉಪೇಂದ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಮಾತಮಾಡಿರುವ ಉಪೇಂದ್ರ, ರಜನಿಕಾಂತ್‍ ಜೊತೆಗೆ ನಟಿಸುವ ಅವಕಾಶ ಸಿಕ್ಕ ತಕ್ಷಣ ಒಪ್ಪಿಕೊಂಡಿದ್ದಾಗಿ ಹೇಳಿದ್ದಾರೆ. ‘ರಜನಿಕಾಂತ್ ಯೋಗಿಯಂತವರು. ಅಂಥವರ ಜೊತೆಗೆ ನಟಿಸುವುದಕ್ಕೆ ನನಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ‘ಕೂಲಿ’ ಚಿತ್ರದಲ್ಲೊಂದು ಪ್ರಮುಖವಾದ ಪಾತ್ರ ಮಾಡುತ್ತಿದ್ದೇನೆ. ಅಕ್ಟೋಬರ್‍ನಿಂದ ನನ್ನ ಪಾತ್ರದ ಚಿತ್ರೀಕರನ ನಡೆಯಲಿದೆ. ಅಷ್ಟರಲ್ಲಿ ನನ್ನ ನಿರ್ದೇಶನದ ‘ಯುಐ’ ಚಿತ್ರವು ಬಿಡುಗಡೆ ಆಗಿರುತ್ತದೆ’ ಎಂದು ಹೇಳಿದ್ದಾರೆ.

ಕೆಲವು ವರ್ಷಗಳ ಹಿಂದೆ, ಉಪೇಂದ್ರ ಅವರು ‘ಸೂಪರ್‍’ ಚಿತ್ರವನ್ನು ನಿರ್ದೇಶಿಸಿದಾಗ, ಆ ಚಿತ್ರವನ್ನು ರಜನಿಕಾಂತ್‍ ನೋಡಿದ್ದರು. ಚೆನ್ನೈನಿಂದ ಚಿತ್ರ ನೋಡುವುದಕ್ಕೆ ಅವರು ಬೆಂಗಳೂರಿಗೆ ಬಂದಿದ್ದರು ಎನ್ನುವುದು ವಿಶೇಷ. ಚಿತ್ರ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಈಗ ರಜನಿಕಾಂತ್‍ ಅವರ ಜೊತೆ ಉಪೇಂದ್ರ ನಟಿಸುತ್ತಿರುವುದು ವಿಶೇಷ.

ಅಂದಹಾಗೆ, ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘ಯುಐ’ ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್‍ ಹಂತದಲ್ಲಿದ್ದು, ಸದ್ಯದಲ್ಲೇ ಮುಕ್ತಾಯವಾಗಲಿದೆ. ಚಿತ್ರವು ಅಕ್ಟೋಬರ್‍ನಲ್ಲಿ ಬಿಡುಗಡೆ ಆಗಲಿದೆ ಎಂದು ಈಗಾಗಲೇ ಘೋಷಿಸಲಾಗಿದೆ. ಆದರೆ, ಸರಿಯಾ ದಿನಾಂಕ ಇನ್ನಷ್ಟೇ ಹೊರಬೀಳಬೇಕಿದೆ.