2019ರಲ್ಲಿ ಬಿಡುಗಡೆಯಾದ ‘ರಾಂಧವ’ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರು ಭುವನ್ ಪೊನ್ನಣ್ಣ. ಆದರೆ, ಆ ನಂತರದ ದಿನಗಳಲ್ಲಿ ಅವರು ಹೀರೋ ಆಗಿ ಮುಂದುವರೆಯುವುದಕ್ಕೆ ಸಾಧ್ಯವಾಗಲೇ ಇಲ್ಲ. ಇದೀಗ ಅವರು ಯೋಗರಾಜ್ ಭಟ್ ಅಭಿನಯದ ಚಿತ್ರವೊಂದರಲ್ಲಿ ನಾಯಕರಾಗಿ ಮಿಂಚುವುದಕ್ಕೆ ರೆಡಿಯಾಗಿದ್ದಾರೆ.
ಈ ವರ್ಷ ಆರಂಭದಲ್ಲಿ ಬಿಡುಗಡೆಯಾದ ‘ಮನದ ಕಡಲು’ ಚಿತ್ರದ ನಂತರ ಯೋಗರಾಜ್ ಭಟ್ ಯಾವೊಂದು ಚಿತ್ರದಲ್ಲೂ ನಿರ್ದೇಶಿಸಿರಲಿಲ್ಲ. ‘ಮತ್ತೆ ಮೊದಲಿಂದ’ ಎಂಬ ಆಲ್ಬಂ ರೂಪಿಸುವಲ್ಲಿ ಬ್ಯುಸಿಯಾಗಿದ್ದರು. ಈಗ ಅವರು ‘ಹಲೋ 123’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅದರಲ್ಲಿ ಭುವನ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅಮೃತಾ ಸಿನಿಕ್ರಾಫ್ಟ್ ಸಂಸ್ಥೆಯ ಮೂಲಕ ಏಳು ಚಿತ್ರಗಳನ್ನು ಘೋಷಿಸಿದ್ದ ವಿಜಯ್ ಟಾಟಾ, ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇತ್ತೀಚೆಗೆ, ‘ಹಲೋ 123’ ಚಿತ್ರದ ಸ್ಕ್ರಿಪ್ಟ್ ಪೂಜೆ ಮತ್ತು ಶೀರ್ಷಿಕೆ ಅನಾವರಣಗೊಂಡಿದೆ. ಹರ್ಷಿಕಾ ಹಾಗೂ ಭುವನ್ ಪುತ್ರಿ ತ್ರಿದೇವಿ ಅಮೃತ ಹಸ್ತದಿಂದ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಈ ಸಂದರ್ಭದಲ್ಲಿ ಭುವನ್, ಯೋಗರಾಜ್ ಭಟ್ ಮತ್ತು ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿರುವ ವಿ. ಹರಿಕೃಷ್ಣಗೆ ಅಡ್ವಾನ್ಸ್ ಕೊಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಗಿದೆ.
ಸದ್ಯಕ್ಕೆ ಶೀರ್ಷಿಕೆ ಅನಾವರಣವಾಗುವುದರ ಜೊತೆಗೆ ಸ್ಕ್ರಿಪ್ಟ್ ಪೂಜೆ ನಡೆದಿದೆ. ಉಳಿದ ಕೆಲಸಗಳು ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಯೋಗರಾಜ್ ಭಟ್ ಅಮೇರಿಕಾ ಪ್ರವಾಸ ಹೊರಟಿದ್ದು, ಅವರು ಬಂದ ನಂತರ ಉಳಿದ ಕೆಲಸಗಳು ಶುರುವಾಗಲಿದ್ದು, ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆಯಂತೆ. ಎಲ್ಲಾ ಅಂದುಕೊಂಡಂಗೆ ಆದರೆ, ‘ಹಲೋ 123’ ಮುಂದಿನ ವರ್ಷ ಮಾರ್ಚ್ ವೇಳೆಗೆ ಬಿಡುಗಡೆ ಆಗಲಿದೆ.





