Mysore
29
few clouds

Social Media

ಮಂಗಳವಾರ, 15 ಏಪ್ರಿಲ 2025
Light
Dark

‘ಸೂರಪ್ಪ’ ಬಾಬು ನಿರ್ಮಾಣದಲ್ಲಿ ಉಪೇಂದ್ರ ಹೊಸ ಚಿತ್ರ; ಏ.30ಕ್ಕೆ ಹೆಸರು ಘೋಷಣೆ

‘ಕೋಟಿಗೊಬ್ಬ 3’ ಚಿತ್ರದ ಸೋಲು, ನಷ್ಟ ಮತ್ತು ವಿವಾದಗಳಿಂದ, ನಿರ್ಮಾಣದಿಂದ ಕೆಲವು ಸಮಯ ದೂರವೇ ಇದ್ದ ನಿರ್ಮಾಪಕ ‘ಸೂರಪ್ಪ’ ಬಾಬು, ಆ ನಂತರ ಶಿವರಾಜಕುಮಾರ್‍ ಮತ್ತು ಗಣೇಶ್‍ ಅಭಿನಯದ ಚಿತ್ರವೊಂದನ್ನು ನಿರ್ಮಿಸುವುದಾಗಿ ಹೇಳಿದ್ದರು. ದರ್ಶನ್‍ಗೂ ಹೊಸ ಚಿತ್ರವೊಂದಕ್ಕೆ ಅಡ್ವಾನ್ಸ್ ಕೊಟ್ಟಿದ್ದರು. ಆದರೆ, ಆ ಎರಡೂ ಚಿತ್ರಗಳು ಕಾರಣಾಂತರಗಳಿಂದ ಮುಂದುವರೆಯಲೇ ಇಲ್ಲ. ಶಿವಣ್ಣ-ಗಣೇಶ್‍ ಅಭಿನಯದ ಚಿತ್ರದ ಸುದ್ದಿಯೇ ಇಲ್ಲ. ಹಾಗೆಯೇ, ಬಾಬುಗೆ ಅಡ್ವಾನ್ಸ್ ವಾಪಸ್ಸು ಕೊಟ್ಟಿದ್ದರ ಕುರಿತು ದರ್ಶನ್‍, ಕೆಲವು ತಿಂಗಳುಗಳ ಹಿಂದೆ ಹೇಳಿಕೊಂಡಿದ್ದರು.

‘ಸೂರಪ್ಪ’ ಬಾಬು ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆ ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಲೇ ಇಲ್ಲ. ಹೀಗಿರುವಾಗಲೇ ಅವರು ಹೊಸದೊಂದು ಚಿತ್ರವನ್ನು ನಿರ್ಮಿಸುತ್ತಿರುವ ಸುದ್ದಿ ಇದೆ. ಈ ಚಿತ್ರವನ್ನು ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶನ ಮಾಡಿದರೆ, ಉಪೇಂದ್ರ ಅದರಲ್ಲಿ ನಾಯಕನಾಗಿ ನಟಿಸಲಿದ್ದಾರೆ.

ಕನ್ನಡ ಚಿತ್ರರಂಗ ಕಂಡ ಜನಪ್ರಿಯ ನಟ-ನಿರ್ದೇಶಕ ಜೋಡಿಗಳ ಪೈಕಿ ಉಪೇಂದ್ರ ಮತ್ತು ನಾಗಣ್ಣ ಅವರ ಜೋಡಿ ಸಹ ಒಂದು. ಈ ಹಿಂದೆ ‘ಗೌರಮ್ಮ’, ‘ಕುಟುಂಬ’, ‘ಓಂಕಾರ’ ಮತ್ತು ‘ದುಬೈ ಬಾಬು’ ಚಿತ್ರಗಳನ್ನು ಈ ಜೋಡಿ ಮಾಡಿತ್ತು. ಉಪೇಂದ್ರ ಅಭಿನಯದಲ್ಲಿ ಹಿರಿಯ ನಿರ್ದೇಶಕ ನಾಗಣ್ಣ, ಕನಕದಾಸರ ಕುರಿತಾದ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿಯೊಂದು ಕೆಲವು ವರ್ಷಗಳ ಹಿಂದೆ ಕೇಳಿ ಬಂದಿತ್ತು. ಆದರೆ, ಆ ಚಿತ್ರ ಮುಂದುವರೆಯಲಿಲ್ಲ.

ಈಗ ನಾಗಣ್ಣ ಮತ್ತು ಉಪೇಂದ್ರರ ಜೊತೆಯಾಟದಲ್ಲಿ ಹೊಸ ಚಿತ್ರ ನಿರ್ಮಿಸುತ್ತಿದ್ದಾರೆ ಬಾಬು. ಅಲ್ಲಿಯವರೆಗೂ ಚಿತ್ರರಂಗದಲ್ಲಿ ಬರಹಗಾರರಾಗಿ, ಸಹನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಉಪೇಂದ್ರ ಅವರನ್ನು‘ತರ್ಲೆ ನನ್ಮಗ’ ಚಿತ್ರದ ಮೂಲಕ ನಿರ್ದೇಶಕರನ್ನಾಗಿ ಪರಿಚಯಿಸಿದ್ದೇ ಅವರು. ಆ ನಂತರ ಉಪೇಂದ್ರ ಜೊತೆಗೆ ಅವರು ಚಿತ್ರ ಮಾಡಿರಲಿಲ್ಲ.

ಇನ್ನು, ನಾಗಣ್ಣ ನಿರ್ದೇಶನದಲ್ಲಿ ‘ಸೂರಪ್ಪ’, ‘ಕೋಟಿಗೊಬ್ಬ’ ಮತ್ತು ‘ಬಂಧು-ಬಳಗ’ ಚಿತ್ರಗಳನ್ನು ಬಾಬು ನಿರ್ಮಿಸಿದ್ದರು. ಮೊದಲೆರಡು ಚಿತ್ರಗಳಲ್ಲಿ ವಿಷ್ಣುವರ್ಧನ್‍ ನಟಿಸಿದರೆ, ‘ಬಂಧು-ಬಳಗ’ ಚಿತ್ರದಲ್ಲಿ ಶಿವರಾಜಕುಮಾರ್‍ ನಟಿಸಿದ್ದರು. ಈಗ ಉಪೇಂದ್ರ ಅಭಿನಯದ ಹೊಸ ಚಿತ್ರವೊಂದನ್ನು ನಿರ್ಮಿಸುವುದಕ್ಕೆ ಸಜ್ಜಾಗುತ್ತಿದ್ದಾರೆ.

ಈ ಹೊಸ ಚಿತ್ರದ ಶೀರ್ಷಿಕೆ ಏನು, ಯಾವಾಗ ಶುರು ಎಂಬ ಬಗ್ಗೆ ಚಿತ್ರತಂಡ ಇನ್ನಷ್ಟೇ ಹೊರಬೀಳಬೇಕಿದೆ. ಅಕ್ಷಯ ತೃತೀಯ ಹಬ್ಬದ ಪ್ರಯುಕ್ತ ಏಪ್ರಿಲ್‍.30ರಂದು ಚಿತ್ರದ ಹೆಸರು ಅನಾವರಣವಾಗಲಿದೆ.

Tags: