ಬೆಂಗಳೂರು: ಸೆಪ್ಟೆಂಬರ್.2ರಂದು ನಟ ಸುದೀಪ್ ಅವರಿಗೆ 51ನೇ ಜನ್ಮದಿನದ ಸಂಭ್ರಮ. ಈ ವರ್ಷ ಬೆಂಗಳೂರಿನ ಜಯನಗರದಲ್ಲಿರುವ ಎಂಇಎಸ್ ಮೈದಾನದಲ್ಲಿ ಜನ್ಮದಿನವನ್ನು ಆಚರಿಸಿಕೊಳ್ಳಲು ಸುದೀಪ್ ನಿರ್ಧಾರ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಸುದೀಪ್ ಅವರು, ನನ್ನ ಮನೆಯ ಬಳಿ ಜನ್ಮದಿನದ ಆಚರಣೆಗೆ ಅವಕಾಶ ಇಲ್ಲ. ಈ ವರ್ಷ ಎಂಇಎಸ್ ಮೈದಾನದಲ್ಲಿ ಬೆಳಿಗ್ಗೆ 11.30ರವರೆಗೆ ಸುದೀಪ್ ಇರಲಿದ್ದಾರೆ.
ವರ್ಷಗಳು ಉರುಳುತ್ತಿದ್ದಂತೆ ಅಭಿಮಾನಿಗಳ ಸಂಖ್ಯೆಯೂ ಕೂಡ ಜಾಸ್ತಿಯಾಗುತ್ತಿದೆ. ಕಳೆದ ವರ್ಷದ ಸಂಭ್ರಮಾಚರಣೆ ವೇಳೆ ಸ್ವಲ್ಪ ಗೊಂದಲವಾಯ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಮನೆಯ ಬಳಿ ಹುಟ್ಟುಹಬ್ಬ ಆಚರಿಸದಂತೆ ಅಕ್ಕಪಕ್ಕದ ಮನೆಯವರು ಹಾಗೂ ಪೊಲೀಸರು ವಿನಂತಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಯನಗರದ ಎಂಇಎಸ್ ಮೈದಾನದಲ್ಲಿ ಸಿಗುತ್ತೇನೆ ಎಂದರು.
ಇನ್ನು ಈ ಬಾರಿಯ ಬಿಗ್‌ಬಾಸ್ ಕಾರ್ಯಕ್ರಮವನ್ನು ಸುದೀಪ್ ನಡೆಸಿಕೊಡುವುದು ಅನುಮಾನ ಎನ್ನುವ ಊಹಾಪೋಹದ ಬಗ್ಗೆ ಮಾತನಾಡಿದ ಅವರು, ಬಿಗ್‌ಬಾಸ್ ಹೊಸ ಆವೃತ್ತಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಕಾರ್ಯಕ್ರಮ ನಡೆಸಿಕೊಡುವಲ್ಲಿ ನನ್ನ ಭಾಗದಿಂದ ಹೆಚ್ಚು ಪ್ರಯತ್ನವಿದೆ. ಶೋ ಮಾಡಲು ಆಸಕ್ತಿಯೂ ಇದೆ. ಆದರೆ ಕೆಲವೊಮ್ಮೆ ನಾವು ಮುಂದುವರಿಯಬೇಕಾಗುತ್ತದೆ. ಅವರು ಹೊಸ ಮುಖ ಹುಡುಕಲಿ ಎಂದು ವೈಯಕ್ತಿಕವಾಗಿ ಬಯಸುತ್ತೇನೆ ಎಂದರು.