ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘45’, ಈ ವರ್ಷದ ನಿರೀಕ್ಷಿತ ಚಿತ್ರಗಳಲ್ಲೊಂದು. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಈ ಮಧ್ಯೆ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಚಿತ್ರವು ಆಗಸ್ಟ್ 15ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಮೇಶ್ ರೆಡ್ಡಿ ನಿರ್ಮಾಣದ ಮತ್ತು ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ‘45’ ಚಿತ್ರದ ಚಿತ್ರೀಕರಣ ಕೆಲವು ತಿಂಗಳುಗಳ ಹಿಂದೆ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿದ್ದವು. ಟೊರೊಂಟೋದ ಖ್ಯಾತ VFX ಸಂಸ್ಥೆಯಾದ MARZನಲ್ಲಿ VFX ಕೆಲಸಗಳು ನಡೆಯುತ್ತಿವೆ. ಹೀಗಿರುವಾಗಲೇ, ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
ಈ ಬಾರಿ ಶುಕ್ರವಾರದಂದು ಆಗಸ್ಟ್ 15 ಬರಲಿದೆ. ಒಟ್ಟಿಗೆ ಮೂರು ದಿನಗಳ ರಜೆ ಸಿಗುವುದರಿಂದ, ಅಂದು ಚಿತ್ರದ ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಅದಕ್ಕೆ ಇನ್ನೂ ಏಳು ತಿಂಗಳು ಕಾಯಬೇಕು. ಕನ್ನಡದಲ್ಲಿ ಈ ವರ್ಷದ ಮೊದಲ ಕೆಲವು ತಿಂಗಳುಗಳಲ್ಲಿ ಯಾವುದೇ ನಿರೀಕ್ಷಿತ ಮತ್ತು ದೊಡ್ಡ ಬಜೆಟ್‍ನ ಚಿತ್ರ ಬಿಡುಗಡೆಗಿಲ್ಲ. ಇದ್ದಿದ್ದು ‘45’ ಮತ್ತು ‘ಕೆಡಿ – ದಿ ಡೆವಿಲ್’ ಚಿತ್ರಗಳು ಮಾತ್ರ. ಇದೀಗ, ‘45’ ಚಿತ್ರವು ಆಗಸ್ಟ್ 15ರಂದು ಬಿಡುಗಡೆ ಎಂದು ಘೋಷಿಸಲಾಗಿದೆ. ಇನ್ನು, ‘ಕೆಡಿ – ದಿ ಡೆವಿಲ್’ ಚಿತ್ರ ಯಾವಾಗ ಬರುತ್ತದೋ ಎಂಬ ಕುತೂಹಲ ಎಲ್ಲರಿಗೂ ಇದೆ.
‘45’ ಚಿತ್ರದ ಜೊತೆಗೆ ಆಗಸ್ಟ್ 15ರಂದು ರಜನಿಕಾಂತ್ ಅಭಿನಯದ ‘ಕೂಲಿ’, ಹೃತಿಕ್ ರೋಶನ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಅಭಿನಯದ ‘ವಾರ್ 2’ ಮತ್ತು ಸನ್ನಿ ಡಿಯೋಲ್ ಅಭಿನಯದ ‘ಲಾಹೋರ್ – 1947’ ಚಿತ್ರಗಳು ಸಹ ಬಿಡುಗಡೆಯಾಗಲಿವೆ ಎಂಬ ಸುದ್ದಿ ಇದೆ. ಆದರೆ, ಈ ಮೂರೂ ಚಿತ್ರಗಳ ಬಿಡುಗಡೆ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.
‘45’ ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಜೊತೆಗೆ ಕೌಸ್ತುಭ ಮಣಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಸತ್ಯ ಹೆಗಡೆ ಛಾಯಾಗ್ರಹಣವಿದೆ.