ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್ ಕಳೆದ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗಿದೆ. ಕನ್ನಡದ ಅತೀ ಹೆಚ್ಚು ಬಜೆಟ್‍ನ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾರ್ಟಿನ್ ಬಿಡುಗಡೆಯಾದ 10 ದಿನಗಳಲ್ಲಿ ಕೊನೆಗೂ 20 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗಿದೆ.
ಮಾರ್ಟಿನ್ ಚಿತ್ರ ಬಿಡಗುಡೆಯಾದ ಸಂದರ್ಭದಲ್ಲಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಬ್ಬದ ಸೀಸನ್ ಆಗಿದ್ದರೂ, ನಿರೀಕ್ಷಿತ ಕಲೆಕ್ಷನ್ ಕಾಣಲಿಲ್ಲ. ಬಾಕ್ಸ್ ಆಫೀಸ್ ಗಳಿಕೆ ಟ್ರಾಕ್ ಮಾಡುವ ಸಕ್ನಿಕ್ ಡಾಟ್‍ಕಾಮ್ ಪ್ರಕಾರ, ಮಾರ್ಟಿನ್ ಚಿತ್ರವು ಮೊದಲ ಮೂರು ದಿನಗಳಲ್ಲಿ ಗಳಿಕೆ ಮಾಡಿರುವ ಮೊತ್ತ ಕೇವಲ 15.50 ಕೋಟಿ ರೂ. ಮಾತ್ರ. ಈ ಪೈಕಿ ಮೊದಲ ದಿನ ಚಿತ್ರವು 6.7 ಕೋಟಿ ರೂ. ಗಳಿಕೆ ಮಾಡಿದರೆ, ಎರಡನೇ ದಿನ 5.5 ಕೋಟಿ ರೂ. ಸಂಗ್ರಹ ಮಾಡಿದೆ. ಮೂರನೆಯ ದಿನ 3.35 ಕೋಟಿ ರೂ. ಗಳಿಕೆ ಆಗಿದೆ. ಒಟ್ಟಾರೆ ಮೂರು ದಿನಗಳಲ್ಲಿ ಚಿತ್ರವು ಇಡೀ ದೇಶಾದ್ಯಂತ ಗಳಿಕೆ ಮಾಡಿರುವ ಮೊತ್ತ ಕೇವಲ 15.5 ಕೋಟಿ ರೂ. ಮಾತ್ರ.
100 ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಲಾಗಿದ್ದ ಮತ್ತು ಕನ್ನಡದ ಅತ್ಯಂತ ದೊಡ್ಡ ಬಜೆಟ್‍ನ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ಗ ‘ಮಾರ್ಟಿನ್ ಒಟ್ಟಾರೆ ಎಷ್ಟು ಗಳಿಕೆ ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ಅದೇ ಸಕ್ನಿಕ್ ಪ್ರಕಾರ, 10 ದಿನಗಳ ಅಂತ್ಯಕ್ಕೆ ಚಿತ್ರವು 20 ಕೋಟಿ 60 ಲಕ್ಷ ರೂ. ಗಳಿಕೆ ಮಾಡಿದೆಯಂತೆ. ಇನ್ನು. ಮೊದಲ ವಾರದ ಅಂತ್ಯಕ್ಕೆ ಚಿತ್ರವು 19.4 ಕೋಟಿ ರೂ. ಸಂಗ್ರಹಿಸಿತ್ತು ಎಂಬ ಮಾಹಿತಿ ಇದೆ.
ಕೆಲವು ದಿನಗಳ ಹಿಂದೆ ಚಿತ್ರದ ಸಂತೋಷ ಕೂಟ ನಡೆದ ಸಂದರ್ಭದಲ್ಲಿ ಚಿತ್ರದ ಕಲೆಕ್ಷನ್ ಕುರಿತು ಮಾತನಾಡಿದ್ದ ಧ್ರುವ ಸರ್ಜಾ, ‘ಚಿತ್ರದ ಕಲೆಕ್ಷನ್ ಈಗಲೇ ಗೊತ್ತಾಗುವುದಿಲ್ಲ. ಸದ್ಯ ಎರಡು ದಿನಗಳ ಕೆಲಕ್ಷನ್ ಅಷ್ಟೇ ಗೊತ್ತಾಗಿದೆ ಎಂದು ಹೇಳಿದ್ದರು.
ಮಾರ್ಟಿನ್ ಚಿತ್ರವನ್ನು ವಾಸವಿ ಕಂಬೈನ್ಸ್ನಡಿ ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಸರ್ಜಾ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದು, ಎ.ಪಿ.ಅರ್ಜುನ್ ನಿರ್ದೇಶನ ಮಾಡಿದ್ದಾರೆ.