Mysore
20
overcast clouds
Light
Dark

ವೈಡ್ ಆಂಗಲ್ : ಸುದ್ದಿಗಳ ಸತ್ಯಾಸತ್ಯತೆ ತಿಳಿಯಲು ಪಿಐಬಿಯಲ್ಲಿದೆ ಒಂದು ವಿಭಾಗ

ನಟಿ ರಶ್ಮಿಕಾ ಮಂದಣ್ಣ ಅವರು ಮೊನ್ನೆ ಸುದ್ದಿ ವಾಹಿನಿಗಳ ಮುಂದೆ ಕಾಣಿಸಿಕೊಂಡಿದ್ದು, ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ್ದು, ಜಾಲತಾಣಗಳಲ್ಲಿ ಕಾಣಿಸಿಕೊಂಡಿತು, ವಾಹಿನಿಗಳಲ್ಲಿ ಪ್ರಸಾರವಾದವು. ಅದಕ್ಕೂ ಮೊದಲು ಹಲವು ಯುಟ್ಯೂಬ್ ವಾಹಿನಿಗಳು, ಅವರನ್ನು ಕನ್ನಡ ಚಿತ್ರರಂಗ ಬ್ಯಾನ್ ಮಾಡಿದ್ದಾಗಿ, ತೆಲುಗು ಚಿತ್ರರಂಗ ಬ್ಯಾನ್ ಮಾಡಿದ್ದಾಗಿ ಹೇಳಿದ್ದವು, ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ಬಹುತೇಕ ವಾಹಿನಿಗಳಿಗೆ ಇಂತಹ ವಿವಾದಾತ್ಮಕ, ರೋಚಕ ಸುದ್ದಿಗಳೇ ಆಹಾರ. ಆ ಮೂಲಕ ಚಂದಾದಾರರನ್ನು ಪಡೆದು, ಹಣ ಗಳಿಸುವ ಲೆಕ್ಕಾಚಾರ. ಚೋದ್ಯವೆಂದರೆ ಇಂತಹ ಸುದ್ದಿಗಳನ್ನು ಹೇಳುವ ಹೆಚ್ಚಿನ ವಾಹಿನಿಗಳ ಚಂದಾದಾರರ ಸಂಖೈ ಮೂರಂಕಿ ದಾಟದಿರುವುದೂ ಇದೆ.

‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಿತ್ರರಸಿಕರಿಗೆ ಪರಿಚಯವಾಗಿ ಗಮನ ಸೆಳೆದ ಈ ಕೊಡಗಿನ ಬೆಡಗಿ ಈಗ ದೇಶಾದ್ಯಂತ ಚಿರಪರಿಚಿತೆ. ಕೆಲವು ವಾಹಿನಿಗಳಂತೂ ಆಕೆಯನ್ನು ‘ರಾಷ್ಟ್ರೀಯ ಕ್ರಶ್’ ಎಂದವು. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿರುವ ರಶ್ಮಿಕಾ, ಯಾವುದೋ ಸಂದರ್ಶನದಲ್ಲಿ, ತಮಗೆ ಯಾವ ಭಾಷೆಯೂ ಚೆನ್ನಾಗಿ ಬರುವುದಿಲ್ಲ ಎಂದ ಮಾತೇ ಯುಟ್ಯೂಬ್ ವಾಹಿನಿಗಳಿಗೆ ಸಾಕಾಯಿತು; ಇದು ಕನ್ನಡಕ್ಕೆ ಮಾಡಿದ ‘ಅವಮಾನ’ ಎಂದು ಸಾರಿದವು.

ತಮ್ಮನ್ನು ಪರಿಚಯಿಸಿದ ‘ಕಿರಿಕ್ ಪಾರ್ಟಿ’ ಚಿತ್ರದ ನಿರ್ದೇಶಕರಾದ ರಿಷಭ್ ಶೆಟ್ಟಿ ಅವರ ಹೊಸ ಚಿತ್ರ ‘ಕಾಂತಾರ’ ತೆರೆಕಂಡ ಮೊದಲ ವಾರಾಂತ್ಯವಿರಬೇಕು. ಮುಂಬೈಯಲ್ಲಿದ್ದ ರಶ್ಮಿಕಾ ಅವರನ್ನು ಎದುರಾದ ಮಾಧ್ಯಮದವರೊಬ್ಬರು ಆ ಚಿತ್ರ ನೋಡಿದ್ದೀರಾ ಎಂದು ಪ್ರಶ್ನಿಸಿದಾಗ, ಇನ್ನೂ ಅದನ್ನು ನೋಡದ ಆಕೆ, ‘ಇಲ್ಲ’ ಎಂದು ಉತ್ತರಿಸುತ್ತಾರೆ. ಅದು ಯುಟ್ಯೂಬ್ ವಾಹಿನಿಗಳ ಕೈಗೆ ಸಿಕ್ಕು ತರಹೇವಾರಿ ಸುದ್ದಿಯಾಗುತ್ತದೆ. ತಮ್ಮ ಒತ್ತಡದ ಕೆಲಸದ ನಡುವೆ ಆ ಚಿತ್ರ ನೋಡಲು ಸಮಯ ಸಿಗದೆ ಇರುವುದು, ಆಕೆಯ ‘ಅಹಂಕಾರ’ವಾಗಿ ಬಿಂಬಿಸಲ್ಪಡುತ್ತದೆ. ಆ ಸುದ್ದಿ, ಅದಕ್ಕೆ ಬರುವ ಪ್ರತಿಕ್ರಿಯೆಗಳು ಇಂದಿನ ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವರ್ತಮಾನಗಳ ಗುಣಮಟ್ಟವನ್ನು ಹೇಳುತ್ತದೆ ಎನ್ನುವುದು ಬೇರೆ ಮಾತು. ಅವರನ್ನು ಭೇಟಿಯಾದ ಮಾಧ್ಯಮದವರು ಮೊನ್ನೆ ಬ್ಯಾನ್ ಬಗ್ಗೆ ಪ್ರಶ್ನಿಸಿದರು. ತಮಗೆ ಈ ಕುರಿತಂತೆ ಏನೂ ತಿಳಿಯದು, ಪತ್ರವೋ ಇನ್ನೊಂದೋ ಏನೂ ಬಂದಿಲ್ಲ ಎಂದರು. ತಾವು ‘ಕಾಂತಾರ’ ಚಿತ್ರವನ್ನು ನೋಡಿದ್ದು, ನಿರ್ದೇಶಕರಿಗೆ ಈ ಬಗ್ಗೆ ಹೇಳಿದ್ದು ಇತ್ಯಾದಿ ಹೇಳಿದರು.

ಬ್ಯಾನ್, ನಿಷೇಧ ಕುರಿತಂತೆ ಇರುವ/ಮಾಡುವ ಸುದ್ದಿಗಳು ಇಂತಹ ತಾಣಗಳಲ್ಲಿ ಹೆಚ್ಚು ಹೆಚ್ಚು ಕಾಣಬಹುದು. ಸುದ್ದಿಗಳ ಸತ್ಯಾಸತ್ಯತೆಯನ್ನು ತಿಳಿಯಲು ಪಿಐಬಿ ಯಲ್ಲಿ ಒಂದು ವಿಭಾಗವೇ ಇದೆ. ಸಾಮಾಜಿಕ ಜಾಲತಾಣಗಳ ನಿಯಂತ್ರಣದ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಬ್ಯಾನ್ ಪ್ರಸ್ತಾಪವಾಗುತ್ತಲೇ ಕಳೆದ ವಾರದ ಬೆಳವಣಿಗೆಯೊಂದು ನೆನಪಾಗು ತ್ತದೆ. ಎರಡು ಮೂರು ತಿಂಗಳ ಹಿಂದೆ, ‘ಜೊತೆ ಜೊತೆಯಲಿ’ ಸರಣಿಯಿಂದ ಅದರ ಮುಖ್ಯಪಾತ್ರ ನಿರ್ವಹಿಸುತ್ತಿದ್ದ ನಟ ಅನಿರುದ್ಧ ಅವರನ್ನು ತೆಗೆದು, ಆ ಪಾತ್ರಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಲಾಗಿತ್ತು. ಧಾರಾವಾಹಿಗಳಲ್ಲಿ ಇದೇನೂ ಹೊಸ ದಲ್ಲ. ನಿರ್ಮಾಪಕ/ನಿರ್ದೇಶಕರು ಮತ್ತು ಕಲಾವಿದರ ನಡುವೆ ಭಿನ್ನಾಭಿ ಪ್ರಾಯಕ್ಕೋ, ಕಾಲ್‌ಶೀಟ್ ಹೊಂದಾಣಿಕೆ ಆಗದ ಕಾರಣಕ್ಕೋ, ಇನ್ನೊಂದೋ ನಟರು ಬದಲಾದ ಸಾಕಷ್ಟು ಉದಾಹರಣೆಗಳಿವೆ. ಸಿಹಿಕಹಿ ಚಂದ್ರು ನಿರ್ದೇ ಶಿಸುತ್ತಿದ್ದ ‘ಪಾ.ಪ.ಪಾಂಡು’ ಸರಣಿಯ ಪಾಂಡು ಪಾತ್ರಧಾರಿ ಚಿದಾನಂದ ಅವರನ್ನು, ಸರಣಿ ಅತ್ಯಂತ ಜನಪ್ರಿಯತೆಯ ದಿನಗಳಲ್ಲಿ ತೆಗೆದು ಹಾಕಿ ಆ ಜಾಗಕ್ಕೆ ಜಹಾಂಗೀರ್ ಅವರನ್ನು ಕರೆತರಲಾಗಿತ್ತು.

ಆದರೆ ನಿರ್ಮಾಪಕರು ತಮ್ಮ ಭಿನ್ನಾಭಿಪ್ರಾಯವನ್ನು ಆ ನಟನ ಭವಿಷ್ಯಕ್ಕೆ ಕುತ್ತಾಗುವಂತೆ ಬೆಳೆಸಿರಲಿಲ್ಲ. ಆದರೆ, ‘ಜೊತೆ ಜೊತೆಯಲಿ’ ನಿರ್ಮಾಪಕರು ಬೇರೆಯೇ ದಾರಿ ಹಿಡಿದರು. ಇತ್ತೀಚೆಗೆ ಹುಟ್ಟಿಕೊಂಡಿದೆ ಎನ್ನಲಾಗಿರುವ ಕಿರುತೆರೆ ನಿರ್ಮಾಪಕರ ಸಂಘದ ಸದಸ್ಯರೆಲ್ಲ ಸೇರಿ, ಮುಂದೆ ಯಾರೂ ಅನಿರುದ್ಧ ಅವರಿಗೆ ತಮ್ಮ ಧಾರಾವಾಹಿಗಳಲ್ಲಿ ಪಾತ್ರಗಳನ್ನು ನೀಡಬಾರದು ಎನ್ನುವ ನಿರ್ಧಾರವನ್ನು ತೆಗೆದುಕೊಂಡರಲ್ಲದೆ, ವಾಹಿನಿಗಳ ಮುಖ್ಯಸ್ಥರನ್ನು ಭೇಟಿಯಾಗಿ, ಅನಿರುದ್ಧ ನಟಿಸುವ ಯಾವುದೇ ಸರಣಿಯನ್ನು ಪ್ರಸಾರ ಮಾಡಕೂಡದು ಎಂದೂ ಕೋರಿಕೊಂಡರು. ಬೇರೆ ಯಾವ ರಾಜ್ಯದಲ್ಲೇ ಆಗುತ್ತಿದ್ದರೂ, ತಮ್ಮ ವೃತ್ತಿಗೆ ತೊಂದರೆ ಮಾಡಿದವರ ವಿರುದ್ಧ ಸಂಬಂಧಪಟ್ಟವರು ಕಾನೂನು ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಇಲ್ಲಿ ಅಂತಹದ್ದೇನೂ ಆಗಲಿಲ್ಲ, ಬಿಡಿ.

ನಿರ್ದೇಶಕ ಎಸ್.ನಾರಾಯಣ ಅವರು ಉದಯ ವಾಹಿನಿಗಾಗಿ ‘ಸೂರ್ಯ ವಂಶ’ ಹೆಸರಿನ ಧಾರಾವಾಹಿ ನಿರ್ದೇಶಿಸುತ್ತಿದ್ದು, ಅದರ ಕೇಂದ್ರ ಪಾತ್ರಧಾರಿ ಅನಿರುದ್ಧ. ಕಿರುತೆರೆ ನಿರ್ಮಾಪಕರ ಸಂಘ ನಾರಾಯಣ ಅವರನ್ನು ಭೇಟಿಯಾಗಿ, ಅನಿರುದ್ಧ ಅವರ ವಿರುದ್ಧದ ತಮ್ಮ ಅಹವಾಲು ಹೇಳಿಕೊಂಡದ್ದೇ ಅಲ್ಲದೆ, ಸರಣಿಯಲ್ಲಿ ಅವರಿಗೆ ಪಾತ್ರ ನೀಡುವುದರ ಕುರಿತಂತೆ ಮರುಚಿಂತನೆ ಮಾಡುವಂತೆ ಒತ್ತಾಯಿಸಿದ್ದೂ ಆಯಿತು.

ಲೈಟ್ ಹುಡುಗರನ್ನು ಒಳಗೊಂಡು, ನಿರ್ಮಾಪಕರವರೆಗೆ ಸದಸ್ಯರಾಗಿರುವ ಸಂಘಟನೆ ಕರ್ನಾಟಕ ಟೆಲಿವಿಶನ್ ಅಸೋಸಿಯೇಷನ್ ಇದೆ. ತಮ್ಮ ಸದಸ್ಯರ ಹಿತ ಕಾಯಬೇಕಾದ ಸಂಘಟನೆ ಈ ಪ್ರಕರಣದ ಕುರಿತಂತೆ ಏಕೆ ಮೌನವಾಗಿತ್ತೋ ತಿಳಿಯದು. ಈ ನಡುವೆ, ವಿಷ್ಣುವರ್ಧನ್ ಅವರ ಕುಟುಂಬದವರ ಹೊಸ ಮನೆಯ ಪ್ರವೇಶದ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಽಕಾರಿಗಳು ಶುಭ ಹಾರೈಸಲು ಬಂದವರು, ಅನಿರುದ್ಧ ಅವರೊಂದಿಗೆ ಕಿರುತೆರೆಯ ಈ ಬೆಳವಣಿಗೆಯ ಕುರಿತಂತೆ ಮಾತನಾಡಿ ವಿವರವಾಗಿ ಪತ್ರವೊಂದನ್ನು ಕೊಡುವಂತೆ ಕೇಳಿದ್ದಾರೆ. ಅದರಂತೆ, ಅನಿರುದ್ಧ ವಿವರಗಳನ್ನು ನೀಡಿ ಪತ್ರ ಬರೆದಿದ್ದಾರೆ. ಇದರ ಜೊತೆಯಲ್ಲಿಯೇ, ಅನಿರುದ್ಧ ಅವರ ಮಹಿಳಾ ಅಭಿಮಾನಿಗಳು ವಾಣಿಜ್ಯ ಮಂಡಳಿ ಹಾಗೂ ಟಿವಿ ಅಸೋಸಿಯೇಷನ್ ಎರಡಕ್ಕೂ ಪತ್ರ ಬರೆದು, ತಮ್ಮ ನೆಚ್ಚಿನ ನಟನಿಗೆ ನ್ಯಾಯ ಕೊಡಿಸುವಂತೆ ಕೋರಿದ್ದಾರೆ.

ವಾಣಿಜ್ಯ ಮಂಡಳಿ ಸಂಧಾನಕ್ಕೆ ಹೊರಟಿತು. ಕಳೆದ ಶುಕ್ರವಾರ ಕಿರುತೆರೆ ನಿರ್ಮಾಪಕರ ಸಂಘವನ್ನು ಮಾತುಕತೆಗೆ ಬರುವಂತೆ ಕೋರಿತು. ಅನಿರುದ್ಧ ಅವರನ್ನೂ ಕರೆಯಿತು. ಮೊದಲ ದಿನ ಇದು ಸಫಲವಾಗಲಿಲ್ಲ. ಮಾರನೇ ದಿನವೂ ಅನಿರುದ್ಧ ಬಂದಿದ್ದರು. ಮಾಧ್ಯಮದ ಮಂದಿಯೂ ಇದ್ದರು. ಕಿರುತೆರೆ ನಿರ್ಮಾಪಕರ ಸಂಘ, ಟಿವಿ ಅಸೋಸಿಯೇಷನ್ ಮಾತುಕತೆಗಾಗಿ ಅನಿರುದ್ಧ ಅವರನ್ನು ಬೇರೊಂದು ಕಡೆ ಕಾದಿದ್ದವು. ಕಿರುತೆರೆಯ ಸಮಸ್ಯೆಯೊಂದಕ್ಕೆ ವಾಣಿಜ್ಯ ಮಂಡಳಿಯಲ್ಲಿ ಸಂಧಾನಕ್ಕೆ ಕರೆದದ್ದು ಸರಿಯಾದ ನಡೆ ಅಲ್ಲ ಎಂದವರು ಹಲವರಿದ್ದರು. ಅದರದ್ದೇ ಆದ ಸಂಘಟನೆ ಇತ್ತು, ಅದರ ಮೂಲಕ ಪರಿಹರಿಸುವುದೇ ಸರಿಯಾದ ಮಾರ್ಗ ಎನ್ನುವುದಾಗಿತ್ತು ಅವರ ಅಭಿಪ್ರಾಯ.

ಅಂದೇ ಸಂಜೆ ಟಿವಿ ಅಸೋಸಿಯೇಷನ್ ‘ಜೊತೆ ಜೊತೆಯಲಿ’ ಸರಣಿಯ ನಿರ್ಮಾಪಕ/ನಿರ್ದೇಶಕ ಆರೂರು ಜಗದೀಶ್ ಮತ್ತು ನಟ ಅನಿರುದ್ಧ ನಡುವಿನ ಭಿನ್ನಾಭಿಪ್ರಾಯ ಹಾಗೂ ನಂತರದ ಬೆಳವಣಿಗೆಗಳನ್ನು ಮರೆತು ಮುಂದೆ ಸಾಗುವಂತೆ ಮಾತುಕತೆಯ ಮೂಲಕ ನಿರ್ಧರಿಸುವಲ್ಲಿ ಸಫಲವಾಯಿತು. ‘ಹಿಂದಿನದನ್ನೆಲ್ಲ ಮರೆತು, ಅವರವರ ಕೆಲಸದಲ್ಲಿ ಮುಂದುವರಿಯಲು ಇಬ್ಬರೂ ನಿರ್ಧರಿಸಿದ್ದಾರೆ. ಇಲ್ಲಿ ಯಾರೂ ಬ್ಯಾನ್ ಅನ್ನೋ ಪದ ಬಳಸಿರಲಿಲ್ಲ. ಯಾರೂ ಬಳಸುವಂತೆಯೂ ಇಲ್ಲ’ ಎಂದು ಸಂಧಾನದಲ್ಲಿ ಮುಖ್ಯಪಾತ್ರ ವಹಿಸಿದ್ದ ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ಅವರು ಪ್ರಕಟಿಸಿದರು.

ಇಲ್ಲಿ ಯಾರೂ ಯಾರ ಕ್ಷಮೆಯನ್ನು ಕೇಳುವ ಪ್ರಸ್ತಾಪವೂ ಇರಲಿಲ್ಲ. ಎರಡೂ ಕಡೆ ತಪ್ಪುಗಳಾಗಿದ್ದವು ಎನ್ನುವ ಮಾತೂ ಕೇಳಿಬಂತು. ಕಳೆದ ಮೂರು ವರ್ಷಗಳಿಗಿಂತಲೂ ಹೆಚ್ಚುಕಾಲ ಜೊತೆಗಿದ್ದು, ಹೀಗಾಗಬಾರದಿತ್ತು. ಈ ಸರಣಿಯ ಜನಪ್ರಿಯತೆಗೆ ಕಾರಣಕರ್ತರು ಅಭಿಮಾನಿಗಳು. ಅವರಿಗೆ ಈ ಬೆಳವಣಿಗೆಯಿಂದ ನೋವಾಗಿದ್ದರೆ ಅವರ ಕ್ಷಮೆ ಕೋರುತ್ತೇನೆ ಎಂದು ನಂತರ ಅನಿರುದ್ಧ ಅವರು ಮಾಧ್ಯಮಗಳ ಮುಂದೆ ಹೇಳಿದರು.

ಬೇರೆಬೇರೆ ಕಾರಣಗಳಿಗಾಗಿ, ಚಿತ್ರರಂಗದಲ್ಲಿ ಅವಕಾಶಗಳನ್ನು ಕಳೆದು ಕೊಂಡವರಿದ್ದಾರೆ. ಅದು ಕನ್ನಡ ಮಾತ್ರವಲ್ಲ, ಇತರ ಭಾಷೆಗಳ ಚಿತ್ರರಂಗದಲ್ಲೂ ಆಗಿತ್ತು. ಕಿರುತೆರೆಯ ಆರಂಭದ ದಿನಗಳಲ್ಲಿ ಜನಪ್ರಿಯ ನಟರು ಅಲ್ಲಿ ಪಾಲ್ಗೊಳ್ಳು ವುದನ್ನು ಬಹುತೇಕ ಭಾರತೀಯ ಭಾಷಾ ಚಿತ್ರರಂಗಗಳೂ ವಿರೋಽಸಿದ್ದವು. ಮಲಯಾಳಂ ಚಿತ್ರರಂಗದಲ್ಲಿ ಜನಪ್ರಿಯ ನಟ ಶ್ರೀನಿವಾಸನ್ ಅವರು ಕಿರುತೆರೆಗೆ ಹೋದ ಕಾರಣ ಅವರಿಗೆ ಒಂದು ವರ್ಷ ಚಿತ್ರರಂಗದಲ್ಲಿ ನಿಷೇಧವಿತ್ತು. ಚಿತ್ರಸಾಹಿತಿಯೂ ಆಗಿದ್ದ ಅವರು, ನಾನು ನಟನೆ ಇಲ್ಲದೇ ಹೋದರೆ ಚಿತ್ರಸಾಹಿತ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾಗಿ ವರದಿಯಾಗಿತ್ತು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ