Ashburn
21
mist
Light
Dark

ವೈಡ್‍ ಆಂಗ್‍ಲ್ : ಕನ್ನಡ ಚಿತ್ರರಂಗದಲ್ಲೂ ಬರುತ್ತಿದೆ ಬಯೋಪಿಕ್

ಬಾನಾ ಸುಬ್ರಮಣ್ಯ


ಇತರ ಭಾರತೀಯ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಜೀವನ ಚರಿತೆ ತಯಾರಾಗಿರುವುದು ಕಡಿಮೆ ಎಂದೇ ಹೇಳಬೇಕು!

ಕಳೆದ ವಾರ ನಡೆದ ಎರಡು ಕಾರ್ಯಕ್ರಮಗಳು ಸಾಧಕರ ಜೀವನ ಚರಿತೆಗಳು ಚಲನಚಿತ್ರಗಳಾಗುವ ಕುರಿತು ಯೋಚಿಸುವಂತೆ ಮಾಡಿದ್ದವು. ಇವು 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಕಥೇತರ ವಿಭಾಗದಲ್ಲಿ ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿಯ ಚಿತ್ರಕ್ಕಿರುವ ಪ್ರಶಸ್ತಿಪಡೆದ ʻನಾದದ ನವನೀತ ಪಂಡಿತ್‍ ಡಾ. ವೆಂಕಟೇಶ್‍ ಕುಮಾರ್ʼ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಸ್ಥೆಯ ಪರವಾಗಿ ಆಯುಕ್ತರಾದ ಹರ್ಷ ಮತ್ ತುನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಅವರನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಗೌರವಿಸಿದ ಕಾರ್ಯಕ್ರಮ ಮತ್ತು ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಚಿತ್ರ ʻವಿಜಯಾನಂದʼದ ಹಾಡೊಂದರ ಬಿಡುಗಡೆ ಕಾರ್ಯಕ್ರಮ.

ವಿವಿಧ ಕ್ಷೇತ್ರಗಳ ಸಾಧಕರ ಸಾಕ್ಷ್ಯಚಿತ್ರಗಳನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಫಿಲಂಸ್‍ ಡಿವಿಜನ್ ನಿರ್ಮಿಸುತ್ತದೆ. ಸಾವಿರಾರು ಮಂದಿ ಸಾಧಕರ ನಡೆದು ಬಂದದಾರಿ, ಕೊಡುಗೆಗಳು ಅಲ್ಲಿ ದಾಖಲಾಗಿವೆ. ಆದರೆ ಅವು ಜನಸಾಮಾನ್ಯರನ್ನು ತಲಪುವುದು ಕಡಿಮೆ. ಆಸಕ್ತರು ಕೊಂಡುಕೊಳ್ಳುತ್ತಾರೆ ಅಷ್ಟೇ.
ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರಗಳೂ ಆಯಾ ರಾಜ್ಯಗಳ ಸಾಕ್ಷ್ಯಚಿತ್ರಗಳನ್ನು ತಯಾರಿಸುತ್ತವೆ. ಕರ್ನಾಟಕದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಕೆಲಸವನ್ನು ಮಾಡುತ್ತದೆ. ದೇಶದ ಭಾಷೆ ನೀತಿ ಅನುಷ್ಠಾನದೊಂದಿಗೆ ಭಾರತೀಯ ಭಾಷೆಗಳ ಅಭಿವೃದ್ಧಿಗಾಗಿ ಮೈಸೂರಿನಲ್ಲಿ ಸ್ಥಾಪನೆಯಾಗಿರುವ ಭಾರತೀಯ ಭಾಷಾ ಸಂಸ್ಥೆ ಕೂಡಾ ಸಾಕಷ್ಟು ಇಂತಹ ಚಿತ್ರಗಳನ್ನು ನಿರ್ಮಿಸಿದ್ಧಾಗಿ ಹೇಳಲಾಗುತ್ತಿದೆ.
ಕಲಾವಿದ ಕೆ.ಕೆ.ಹೆಬ್ಬಾರ್, ಸಾಹಿತಿ ಅನಂತಮೂರ್ತಿ, ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಮೊದಲಾದವರ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ ಗಿರೀಶ್ ಕಾಸರವಳ್ಳಿಯವರು ಹೇಳುತ್ತಾರೆ, ʻಕರ್ನಾಟಕದಲ್ಲಿ ಅನೇಕ ಸಾಧಕರು ತಮ್ಮ ಸಾಧನೆಯನ್ನು ಬಿಟ್ಟುಹೋಗಿದ್ದಾರೆ. ಅವುಗಳು ಸರಿಯಾಗಿ ದಾಖಲಾಗಿಲ್ಲ. ಅಂತಹ ವ್ಯಕ್ತಿಗಳ ಪರಿಚಯ ಮುಂದಿನ ಪೀಳಿಗೆಗೆ ಆಗಬೇಕುʼ. ಇದಕ್ಕೆ ಪೂರಕವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ. ಎಸ್. ಹರ್ಷ ಅವರ ಮಾತಿತ್ತು. ʻಸಮಾಜಕ್ಕಾಗಿ ದುಡಿದ ಅದೆಷ್ಟೋ ಮುಖಗಳು ಇಂದಿನ ಯುವಪೀಳಿಗೆಗೆ ತಿಳಿದಿಲ್ಲ. ಆಧುನಿಕತೆಯ ಭರಾಟೆಯಲ್ಲಿ ಸ್ವಾತಂತ್ರ್ಯಹೋರಾಟಗಾರರು, ಸಾಮಾಜಿಕ ಹೋರಾಟಗಾರರು ಮತ್ತಿತರ ಸಾಧಕರನ್ನು ಇಂದಿನ ಯುವ ಪೀಳಿಗೆ ಮರೆತಿದೆ. ಇಂತಹವರ ಸಾಕ್ಷ್ಯಚಿತ್ರಗಳು ಅವರಿಗೆ ಸ್ಫೂರ್ತಿಯಾಗಬೇಕು.ʼ
ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರತಿವರ್ಷ ನಾಡಿನ ಸಾಧಕರು, ಪ್ರತಿಭಾವಂತರ ಕುರಿತಂತೆ ಸಾಕ್ಷ್ಯ ಚಿತ್ರಗಳನ್ನು ತಯಾರಿಸುತ್ತದೆ. ಈ ವರೆಗೂ ನೂರಾರು ಮಂದಿಯ ಜೀವನ ಕಥೆಗಳನ್ನು ಇಲಾಖೆ ತಯಾರಿಸಿದೆ. ಇದೇ ಮೊದಲ ಬಾರಿಗೆ ಕಥೇತರ ವಿಭಾಗದಲ್ಲಿ ಇಲಾಖೆ ನಿರ್ಮಿಸಿದ ಹೆಸರಾಂತ ಹಿಂದುಸ್ತಾನಿ ಸಂಗೀತಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್‍ಕುಮಾರ್ ಕುರಿತ ಸಾಕ್ಷ್ಯಚಿತ್ರಕ್ಕೆ ಕಥೇತರ ವಿಭಾಗದಲ್ಲಿ ‘ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಿತ್ರ’ ಎಂಬ ಪ್ರಶಸ್ತಿ ದೊರೆತಿದೆ. ಮಾತ್ರವಲ್ಲ ಇದು ಯುಟ್ಯೂಬ್‍ನಲ್ಲಿ ಲಭ್ಯ ಕೂಡಾ.
ಬೆಳ್ಳಿತೆರೆಯ ಮೇಲೆ ಪುರಾಣಪುರುಷರ ಕಥೆಗಳು ಬಂದಿವೆ. ದೇಶವಿದೇಶಗಳ ಐತಿಹಾಸಿಕ ವ್ಯಕ್ತಿಗಳ ಜೀವನಯಾನ ಚಿತ್ರಿತವಾಗಿವೆ. ಸ್ವಾತಂತ್ರ್ಯ ಹೋರಾಟಗಾರರ, ದೇಶಕ್ಕಾಗಿ ಪ್ರಾಣತೆತ್ತವರ, ಬಲಿದಾನದ ಕಥೆಗಳು ತೆರೆಯ ಮೇಲೆ ಬಂದಿವೆ. ಇತರ ಭಾರತೀಯ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಇಂತಹ ಚಿತ್ರಗಳು ತಯಾರಾಗಿರುವುದು ಕಡಿಮೆ ಎಂದೇ ಹೇಳಬೇಕು.
ಮೊನ್ನೆ ʻವಿಜಯಾನಂದʼ ಚಿತ್ರದ ಹಾಡಿನ ಬಿಡುಗಡೆಯ ವೇಳೆ ಸ್ವತಃ ವಿಜಯ ಸಂಕೇಶ್ವರ ಅವರು ಹಾಜರಿದ್ದರು. ಉದ್ಯಮ ಕ್ಷೇತ್ರದಲ್ಲಿ ಅವರದೇ ಆದ ದಾಖಲೆ ನಿರ್ಮಿಸಿರುವ ಅವರ ಜೀವನ ಚರಿತ್ರೆ ಚಿತ್ರದ ದಾಖಲೆಯ ಕುರಿತಂತೆ ಹೇಳಿದರು. ಕನ್ನಡಿಗನೊಬ್ಬನ ಜೀವನ ಚರಿತ್ರೆ ಕನ್ನಡದಲ್ಲಿಯೇ ಚಿತ್ರವಾಗಿ ತಯಾರಾಗುತ್ತಿರುವುದು ಇದೇ ಮೊದಲನೆಯದು ಎನ್ನುವುದು ನಿಜಕ್ಕೂ ದಾಖಲಾರ್ಹ.
ಕನ್ನಡಿಗ ಸಿಂಪ್ಲಿ ಡೆಕ್ಕನ್‍ನ ಜಿ.ಆರ್.ಗೋಪಿನಾಥ್‍ ಆತ್ಮಚರಿತ್ರೆ ʻಸಿಂಪ್ಲಿಫ್ಲೈ: ಎ ಡೆಕ್ಕನ್ ಒಡಿಸ್ಸಿʼಯನ್ನು ಆಧರಿಸಿ ತಮಿಳಲ್ಲಿ ʻಸೂರರೈ ಪೊಟ್ರು ಚಿತ್ರ ತಯಾರಾಗಿತ್ತು. ಸೂರ್ಯ ನಿರ್ಮಿಸಿ, ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಆ ಚಿತ್ರವನ್ನು ಸುಧಾಕೊಂಗರ ನಿರ್ದೇಶಿಸಿದ್ದರು. ಆ ಸಾಲಿನಲ್ಲಿ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಅದು ಪಡೆಯುವಲ್ಲಿ ಯಶಸ್ವಿಯೂ ಆಯಿತು. ಹಿಂದಿ, ಮರಾಠಿ, ತಮಿಳು, ತೆಲುಗು ಭಾಷೆಗಳಲ್ಲಿ ಸಾಕಷ್ಟು ಬಯೋಪಿಕ್‍ಗಳು ತಯಾರಾಗಿವೆ. ಅವುಗಳಲ್ಲಿ ಬಹುತೇಕ ಆಗಿ ಹೋದ ಸಾಧಕರ ಜೀವನ ಕಥೆಗಳೇ ಹೆಚ್ಚು. ಎಂ.ಎಸ್.ಧೋನಿ. ದಂಗಲ್, ಅಜರ್, 83, ಮೇರಿಕೋಮ್, ಭಾಗ್ ಮಿಲ್ಕಾ ಭಾಗ್ ಹೀಗೆ ಕ್ರೀಡಾಕ್ಷೇತ್ರಕ್ಕೆ ಸಂಬಂಧಿಸಿದ ಚಿತ್ರಗಳು ಇತ್ತೀಚೆಗೆ ಹೆಚ್ಚು ತಯಾರಾಗಿವೆ.
ಮೊದಲು ಡಕಾಯಿತಳಾಗಿ ನಂತರ ಸಮಾಜದ ಮುಖ್ಯವಾಹಿನಿಗೆ ಬಂದ ಫೂಲನ್‍ದೇವಿ ಜೀವನಕಥೆಯನ್ನು ಶೇಖರ್ ಕಪೂರ್ʻ ಬ್ಯಾಂಡಿಟ್‍ಕ್ಷೀನ್ ʼ ಹೆಸರಲ್ಲಿ ತೆರೆಗೆ ತಂದಿದ್ದರು. ಆ ಚಿತ್ರ ದೆಹಲಿಯಲ್ಲಿ ನಡೆದ ಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡಾಗ ಸ್ವತಃ ಫೂಲನ್ ದೇವಿ ಅಲ್ಲಿ ತನ್ನ ಅನುಭವವನ್ನು ಹೇಳಿದ್ದಿದೆ. ʻಮೀಸಿಂಧೂತಾಯಿಸಪ್ಕಾಳ್ʼ ಮಹಾರಾಷ್ಟ್ರದಲ್ಲಿ ಸಾವಿರಾರು ಮಂದಿಗೆ ಅನಾಥರಿಗೆ ಆಶ್ರಯ ನೀಡಿದ, ಸಿಂಧೂತಾಯಿ ಜೀವನಕಥೆ. ಗೋವಾದಲ್ಲಿ ಆ ಚಿತ್ರ ಪ್ರದರ್ಶನವಾದ ಸಂದರ್ಭದಲ್ಲಿ ಅವರು ಹಾಜರಿದ್ದರು. ಪತ್ರಕರ್ತರೊಂದಿಗೆ ತಮ್ಮ ಬದುಕಿನ ಕಥೆಯನ್ನು ಹಂಚಿಕೊಂಡಿದ್ದರು.
ಮೊನ್ನೆ ವಿಜಯ ಸಂಕೇಶ್ವರ ಅವರು ತಮ್ಮ ಚಿತ್ರದ ಕುರಿತಂತೆ ಹೇಳುತ್ತಾ, ʻನನ್ನ ಜೀವನಾಧಾರಿತ ಸಿನಿಮಾ ಮಾಡುವುದಾಗಿ ನಿರ್ದೇಶಕಿ ರಿಶಿಕಾ ಶರ್ಮ ಕೇಳಿದಾಗ, ಈ ಚಿಕ್ಕ ಹುಡುಗಿ ಏನು ಮಾಡುತ್ತಾಳೆ ಅನಿಸಿತು. ಆದರೆ ಈಗ, ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಿಶಿಕಾ ಬಹಳ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ನನ್ನ ಮಗ ಆನಂದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನನ್ನ ಕುಟುಂಬವರೆಲ್ಲಾ ಉದ್ಯಮಿಗಳು. ನಮ್ಮ ತಂದೆಯವರು ಸಹ. ನಾನು ಹದಿನೈದನೇ ವಯಸ್ಸಿಗೆ ಕೆಲಸ ಶುರು ಮಾಡಿದೆ. ನಮ್ಮತಂದೆ ಬಳಿ ಹೋಗಿ ಟ್ರಾನ್ಸ್ ಪೋರ್ಟ್ ಬ್ಯುಸಿನೆಸ್ ಶುರು ಮಾಡುತ್ತೇನೆ ಅಂದಾಗ ಅವರು ಗಾಬರಿಯಾದರು. ಅಂದು ಒಂದು ಲಾರಿಯಿಂದ ಆರಂಭವಾದ ನನ್ನ ಉದ್ಯಮ, ಇಂದು ಬೃಹತಾಗಿ ಬೆಳೆದಿದೆ. ಟ್ರಾನ್ಸ್ ಪೋರ್ಟ್ ಹಾಗೂ ಮಾಧ್ಯಮ ಎರಡರಲ್ಲೂ ನಾವು ಮುಂದಿದ್ದೇವೆ. ನನ್ನ ಹಿಂದಿನ ಶಕ್ತಿ ನನ್ನ ಪತ್ನಿ ಲಲಿತಾ ಎಂದರೆ ತಪ್ಪಾಗಲಾರದು. ನನ್ನ ಮಗ ಆನಂದ ಈಗ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾನೆ. ಮೊಮ್ಮಗ ಶಿವ ಸದ್ಯದಲ್ಲೇ ಹೊಸ ಉದ್ಯಮ ಶುರು ಮಾಡಲಿದ್ದಾನೆ. ಈ ಚಿತ್ರ ಮಾಡಬೇಕಾದರೆ ನಾನು ನಿರ್ದೇಶಕರಿಗೆ ಹೇಳಿದ್ದೆ. ನನ್ನ ಜೀವನ ಹೇಗಿತ್ತೊ ಹಾಗೆ ತೋರಿಸಬೇಕು. ಬೇರೆ ಏನೂ ಸೇರಿಸಬಾರದು ಅಂತ. ನಾನು ಚಿಕ್ಕ ವಯಸ್ಸಿನಲ್ಲಿ ಹೇಗಿದ್ದೆನೋ, ನಿಹಾಲ್ ಹಾಗೆ ಕಾಣುತ್ತಾರೆ. ಆ ಮೀಸೆ, ಬಣ್ಣಬಣ್ಣದ ಅಂಗಿಗಳು ಎಲ್ಲವು.. ಆ ವಯಸ್ಸಿನಲ್ಲಿ ನಾನು ಹಾಗೆ ಇದ್ದೆ. ನಾಯಕಿ ಸಿರಿ ಪ್ರಹ್ಲಾದ್‍ ಕೂಡ ನನ್ನ ಹೆಂಡತಿಯನ್ನೇ ಹೋಲುತ್ತಾರೆ. ಈ ಚಿತ್ರ ಯುವಕರಿಗೆ ಸ್ಪೂರ್ತಿಯಾಗಲಿ.ʼ ಎಂದರು.
ಹ್ಞಾಂ, ಕನ್ನಡದಲ್ಲಿ ಕನ್ನಡಿಗರ ಚಿತ್ರಗಳು ತಯಾರಾಗಿದೆ. ಆದರೆ ಅವು ಅವರ ಕಾಲಾನಂತರ ತಯಾರಾದವು. ಬಸವಣ್ಣ, ಅಲ್ಲಮ, ಪುರಂದರದಾಸ, ಕನಕದಾಸ, ರಾಘವೇಂದ್ರ ಸ್ವಾಮಿ, ಶಿಶುನಾಳ ಷರೀಫ, ಪಂಚಾಕ್ಷರ ಗವಾಯಿ, ಪುಟ್ಟರಾಜ ಗವಾಯಿ, ಸಾವಿತ್ರಿಬಾಯಿ ಫುಲೆ ಹೀಗೆ ಚಿತ್ರಗಳು ಬಂದಿವೆ.
ಸಾಕಷ್ಟು ಮಂದಿ ಸಾಧಕರು ವಿವಿಧ ಕ್ಷೇತ್ರಗಳಲ್ಲಿದ್ದಾರೆ. ಅವರ ಜೀವನಕಥೆಗಳು ಚಲನಚಿತ್ರಗಳಾಗಿಯೋ, ಸಾಕ್ಷ್ಯಚಿತ್ರಗಳಾಗಿಯೋ ದಾಖಲಾದರೆ, ಅವು ಮುಂದಿನ ಪೀಳಿಗೆಗೆ ತಮ್ಮ ಹಿಂದಿನವರು ನಡೆದು ಬಂದದಾರಿಯ ಪರಿಚಯ ಮಾಡಿಕೊಡುವುದರಜೊತೆ ಕೆಲವರಿಗಾದರೂ ಸ್ಫೂರ್ತಿಯಾಗಬಹುದು.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಹೆಸರಾಂತ ಛಾಯಾಗ್ರಾಹಕ, ನಿರ್ದೇಶಕ ಅಶೋಕ ಕಶ್ಯಪ್‍ ಅವರನ್ನು ಸರ್ಕಾರ ನೇಮಿಸಿದೆ. ಎಸ್‍ಜೆಪಿಯಲ್ಲಿ ಛಾಯಾಗ್ರಹಣಡಿಪ್ಲೋಮಾ ಪಡೆದಿದ್ದ ಅಶೋಕ ಅವರು ಅದೇ ತಾನೇ ಆರಂಭವಾಗಿದ್ದ ದೂರದರ್ಶನದಲ್ಲಿ ಕೆಲವು ವರ್ಷಗಳ ಕೆಲಸಮಾಡಿ, ಉಪೇಂದ್ರ ಅವರ ʻಶ್ʼ ಮೂಲಕ ಸಿನಿಮಾ ಛಾಯಾಗ್ರಾಹಕರಾದವರು. ʻಶಾಪʼದ ಮೂಲಕ ನಿರ್ದೇಶಕರೂ ಆದ ಅಶೋಕ್ ಆ ಚಿತ್ರದ ಛಾಯಾಗ್ರಹಣಕ್ಕಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.ಅಕಾಡೆಮಿ ಕೂಡಾ ಸಾಧಕರ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವಲ್ಲಿ ಗಮನನೀಡಬಹುದು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ