ಇತ್ತೀಚಿನ ದಿನಗಳಲ್ಲಿ ಡಬಲ್ ಎಂಜಿನ್ ಸರ್ಕಾರ ಆಡಳಿತ ಮತ್ತು ಅಭಿವೃದ್ಧಿ ನಿರ್ವಹಿಸದೇ ಕೇವಲ ಮ್ಯಾನೇಜ್‌ಮೆಂಟ್‌ಗಷ್ಟೇ ಸೀಮಿತಗೊಂಡಿರುವುದು ಸಾರ್ವಜನಿಕರು ಮತ್ತು ಮಾಧ್ಯಮಗಳ ಗಮನಕ್ಕೆ ಬಂದಿದೆ. ಆಳುವ ಸರ್ಕಾರದ ಸಚಿವರೊಬ್ಬರು ಇತ್ತೀಚೆಗೆ ಈ ಸತ್ಯವನ್ನು ಬಹಿರಂಗವಾಗಿ ಒಪ್ಪಿಕೊಂಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಆದರೆ ಸಮಸ್ತ ಭಾರತೀಯರಿಗೂ ಧರ್ಮಾತೀತವಾಗಿ, ಜಾತ್ಯಾತೀತವಾಗಿ ಮತ್ತು ಪ್ರದೇಶಾತೀತವಾಗಿ ಈ ಸ್ವಾತಂತ್ರ್ಯ ಸಿಕ್ಕಿಲ್ಲವೆಂಬುದನ್ನು ಆಳುವವರು ಅರ್ಥ ಮಾಡಿಕೊಳ್ಳಬೇಕು.
ಇಂದಿಗೂ ಕೂಡ ದೇಶದ ಜನಸಂಖ್ಯೆಯಲ್ಲಿ ಶೇ.೧೦ರಷ್ಟು ಜನ ಪಾದಚಾರಿ ಮಾರ್ಗದ ನಿವಾಸಿಗಳಾಗಿರುವುದನ್ನು ಸರ್ಕಾರದ ಅಂಕಿ ಅಂಶಗಳೇ ದೃಢಪಡಿಸುತ್ತವೆ. ಇತ್ತೀಚೆಗೆ ‘ಆಂದೋಲನ’ ಪತ್ರಿಕೆಯ ವ್ಯಂಗ್ಯ ಚಿತ್ರವೊಂದರಲ್ಲಿ ನಗರಕ್ಕೆ ನೀರು ಸರಬರಾಜು ಮಾಡುವ ದೊಡ್ಡ ಪೈಪ್‌ನಲ್ಲಿ ವಾಸಿಸುವ ಕುಟುಂಬವೊಂದರ ಮಗು ನಮ್ಮ ಮನೆಯಲ್ಲಿಯೂ ತಿರಂಗ ಹಾರಿಸಬೇಕೆಂದು ಆಸೆಯಿಂದ ಬಾವುಟ ಹಿಡಿದು ಆಕಾಶದತ್ತ ಹತಾಶೆಯಿಂದ ಎದುರು ನೋಡುತ್ತಿದ್ದ ಸಂಗತಿ ಹೃದಯವನ್ನು ಕಲಕುತ್ತದೆ. ತಿರಂಗ ಅಭಿಯಾನ ಎತ್ತಿ ಹಿಡಿಯುವವರಿಗೆ ಈ ಘನಘೋರ ಸಂಗತಿಯನ್ನು ಅರ್ಥ ಮಾಡಿಕೊಳ್ಳುವ ಹೃದಯವಂತಿಕೆ ಇದೆಯೇ?
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಅಸಂಖ್ಯಾತ ದೇಶಪ್ರೇಮಿಗಳು ಅಂದು ಬೀದಿ ಪಾಲಾದರೆ, ಸ್ವಾತಂತ್ರ್ಯವನ್ನು ವಿರೋಧಿಸಿ ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟವರು ಹಿಂದುತ್ವವಾದದ ಹೆಸರಿನಲ್ಲಿ ಇಂದು ದೇಶವನ್ನು ಆಳುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ನಮ್ಮನ್ನು ಆಳುತ್ತಿರುವವರಿಗೆ ಬಡತನ ನಿರ್ಮೂಲನೆಗಿಂತ ಬಡವರ ನಿರ್ಮೂಲನೆ ಗೌಪ್ಯ ಕಾರ್ಯಸೂಚಿಯಾಗಿದೆ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಗಳನ್ನು ಅರ್ಥಹೀನ ಘೋಷಣೆಗಳು, ಸುಳ್ಳು ಭರವಸೆಗಳು ಮತ್ತು ಪೊಳ್ಳು ಅಭಿಯಾನಗಳ ಮೂಲಕ ದಾರಿತಪ್ಪಿಸುತ್ತಿರುವ ವೈದಿಕಶಾಹಿ ಮತ್ತು ಮಾರುಕಟ್ಟೆ ಶಕ್ತಿಗಳು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ವಿಜೃಂಭಿಸುತ್ತಿವೆ.
ಇಂತಹ ಪ್ರವೃತ್ತಿಗಳನ್ನು ಪ್ರಶ್ನಿಸುವ ಪ್ರಜ್ಞಾವಂತ ಹಾಗೂ ಜವಾಬ್ದಾರಿಯುತ ನಾಯಕ ಸಿದ್ಧರಾಮಯ್ಯರಿಗೆ ಕಿಂಚಿತ್ತೂ ಸ್ವಾತಂತ್ರ್ಯದ ಜ್ಞಾನವಿಲ್ಲವೆಂದು ನಿಂದಿಸುವ ಸ್ಥಳೀಯ ಸಂಸದರ ಹಿಂದುತ್ವ ಪಟಾಲಮ್ ದಿನೇ ದಿನೇ ಹೆಚ್ಚುತ್ತಿರುವುದು ದೇಶದಲ್ಲಿ ಪ್ರಜಾಪ್ರಭುತ್ವ ಕವಲು ದಾರಿಯಲ್ಲಿರುವುದಕ್ಕೆ ಪುರಾವೆಯಾಗಿದೆ.
ಬ್ರಿಟಿಷರಿಗೆ ಶರಣಾದ ಗುಲಾಮಗಿರಿಯ ಸಂಕೇತವೇ ಆದ ಸಾವರ್‌ಕರ್ ಎಂಬ ಸ್ವಾತಂತ್ರ್ಯ ವಿರೋಧಿಗೆ ‘ವೀರ ಸಾವರ್‌ಕರ್’ ಎಂಬ ಬಿರುದನ್ನು ನೀಡುವ ಕಡು ಮೂರ್ಖರೇ ಇಂದು ಅಂಬೇಡ್ಕರ್ ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳನ್ನು ದುರ್ಬಲಗೊಳಿಸಿ ಮನು ಸಂವಿಧಾನ ಮತ್ತು ಆರ್‌ಎಸ್‌ಎಸ್ – ಬಹುರಾಷ್ಟ್ರೀಯ ಕಂಪನಿಗಳ ಪ್ರಭುತ್ವವನ್ನು ಭಾರತದಲ್ಲಿ ಗಟ್ಟಿಗೊಳಿಸಲು ಹೊರಟಿದ್ದಾರೆ.
ಇಂದು ನಮ್ಮನ್ನು ಆಳುತ್ತಿರುವವರು ಅದಾನಿ, ಅಂಬಾನಿ ಮತ್ತು ವಿದೇಶಿ ಮಾರುಕಟ್ಟೆ ಶಕ್ತಿಗಳ ದಾಸರಾಗಿ ೧೯೪೭ರ ರಾಜಕೀಯ ಸ್ವಾತಂತ್ರ್ಯವನ್ನು ನಿಷ್ಕ್ರಿಯಗೊಳಿಸಿ ೨೦೨೨ರಲ್ಲಿ ಆರ್ಥಿಕ ಗುಲಾಮಗಿರಿಗೆ ಭಾರತದ ಸಾರ್ವಭೌಮ ಪ್ರಜೆಗಳನ್ನು ದಬ್ಬಿರುವುದು ಸ್ವಾತಂತ್ರ್ಯ ಅಮೃತಮಹೋತ್ಸವದ ಬಹುದೊಡ್ಡ ವಿಪರ್ಯಾಸವಾಗಿದೆ.
ವಸ್ತುಸ್ಥಿತಿ ಹೀಗಿರುವಾಗ ಶೋಷಿತ ಸಮುದಾಯಗಳ ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರಿ ಪ್ರಾಯೋಜಿತ ಚಿಂತಕರು ಸ್ವಾತಂತ್ರ್ಯದ ಅಮೃತ ಮಹೋತ್ಸವ ತಮಗೆ ಸಂಭ್ರಮ ಉಂಟುಮಾಡಿದ್ದು ಭಾರತ ಸರ್ಕಾರದ ‘ಹರ್ ಘರ್ ತಿರಂಗ ಅಭಿಯಾನ ಶೋಷಿತರ ಬಿಡುಗಡೆಯ ಮಾರ್ಗ’ ಎಂದು ಎದೆಯುಬ್ಬಿಸಿ ಹೇಳುವುದು ಸತ್ಯಕ್ಕೆ ಬಗೆಯುವ ಅಪಚಾರವಾಗಿದೆ. ಇಂತಹ ಪ್ರವೃತ್ತಿಯಿಂದ ನಮ್ಮನ್ನು ನಾವು ಸರಿಯಾಗಿ ಕಂಡುಕೊಳ್ಳಲಾಗುವುದಿಲ್ಲ. ಇದು ಪ್ರಾಮಾಣಿಕತೆ, ಬದ್ಧತೆ ಮತ್ತು ಹೊಣೆಗಾರಿಕೆಗಳಿಂದ ಆತ್ಮಾವಲೋಕನ ಮಾಡಿಕೊಳ್ಳುವ ಕಾಲವಾಗಿದೆ.
ವಾಸ್ತವವಾಗಿ ಯಾವುದೇ ಕಾಲಘಟ್ಟದಲ್ಲಿಯೂ ಭರತಖಂಡದಲ್ಲಿ ಅಧಿಕಾರ ಮತ್ತು ಸಂಪತ್ತುಗಳಿಗಾಗಿ ಯುದ್ಧ ಮಾಡಿಸುವವರು ವೈದಿಕರು, ವೈಶ್ಯರು ಮತ್ತು ಕ್ಷತ್ರಿಯರು, ಯುದ್ಧ ಮಾಡಿ ಮಡಿಯುವವರು ತಳಸಮುದಾಯಗಳ ಅಮಾಯಕರು. ಆದಾಗ್ಯೂ ಇತ್ತೀಚೆಗೆ ‘ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರಲ್ಲಿ ವಿಪ್ರರೇ ಹೆಚ್ಚು’ ಎಂದು ಬ್ರಾಹ್ಮಣ್ಯದ ಅಪ್ಪಟ ವಾರಸುದಾರ ಸ್ಥಳೀಯ ಶಾಸಕರೊಬ್ಬರು ಹೇಳಿರುವುದು ಶತಮಾನದ ಜೋಕ್! ರಾಷ್ಟ್ರಧ್ವಜ ಪ್ರತಿ ಮನೆಯಲ್ಲೂ ಹಾರಲಿ ಎಂದು ಬೊಗಳೆ ಬಿಡುವುದಕ್ಕಿಂತ ದೇಶದ ಜನ ಹಸಿವು, ಅನಾರೋಗ್ಯ, ಅಪೌಷ್ಟಿಕತೆ, ನಿರುದ್ಯೋಗ, ವಸತಿ ಹೀನತೆ, ಕೌಶಲ್ಯ ಹೀನತೆ, ಉದ್ಯೋಗ ಹೀನತೆ ಮತ್ತು ಅಸುರಕ್ಷತೆಗಳಿಂದ ಬಿಡುಗಡೆ ಹೊಂದಲಿ ಎಂದು ಹೇಳುವವರ ಸಂಖ್ಯೆ ಆಳುವ ಪಕ್ಷದಲ್ಲಿ ದಿನೇ ದಿನೇ ಕ್ಷೀಣಿಸುತ್ತಿದೆ.
ಇತ್ತೀಚೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್‌ನಲ್ಲಿ ತಿರಂಗ ಪ್ರಕಾಶಿಸುತ್ತಿರುವುದು ಮೂಲ ನಿವಾಸಿಗಳನ್ನು ದಾರಿತಪ್ಪಿಸುವ ಹುನ್ನಾರವಾಗಿದೆ. ಭಾರತದಲ್ಲಿ ಮನುವಾದಿಗಳನ್ನು ನಂಬಿ ಕೆಟ್ಟವರೇ ಹೆಚ್ಚು ಎಂಬುದಕ್ಕೆ ಪುರಾವೆಗಳನ್ನು ಹುಡುಕುವ ಅವಶ್ಯಕತೆಯಿಲ್ಲ.
ಮುಂದೇನು?
ಮೂಲನಿವಾಸಿಗಳು ಚಾರ್ವಾಕ, ಬುದ್ಧ, ಬಸವ, ಫುಲೆ, ಗಾಂಧಿ, ಅಂಬೇಡ್ಕರ್, ಪೆರಿಯಾರ್, ನಾರಾಯಣಗುರು, ಕುವೆಂಪು ಮೊದಲಾದ ಪೂರ್ವಜರ ತ್ಯಾಗವನ್ನು ಅರಿತಲ್ಲಿ ಭಾರತವನ್ನು ಬ್ರಿಟಿಷರಿಗಿಂತ ಹೆಚ್ಚು ಅಪಾಯಕಾರಿಯಾದ ವೈದಿಕಶಾಹಿಯಿಂದ ಖಂಡಿತವಾಗಿಯೂ ಬಿಡುಗಡೆಗೊಳಿಸಬಹುದು.
ಅಖಿಲ ಭಾರತ ಮಟ್ಟದಲ್ಲಿ ಬಿಹಾರದಲ್ಲಿ ಇತ್ತೀಚೆಗೆ ನಿತೀಶ್‌ಕುಮಾರ್ ಅವರಿಗೆ ಜ್ಞಾನೋದಯವಾಗಿ ಬಿಜೆಪಿ ಸಖ್ಯ ತೊರೆದು ಆರ್‌ಜೆಡಿ, ಕಾಂಗ್ರೆಸ್, ಕಮ್ಯುನಿಷ್ಟರು ಮೊದಲಾದವರ ಬೆಂಬಲದಿಂದ ಸರ್ಕಾರ ರಚಿಸಿರುವುದು ಪ್ರಜಾಪ್ರಭುತ್ವವಾದಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ಸೋನಿಯಾಗಾಂಧಿ, ಮಮತಾ ಬ್ಯಾನರ್ಜಿ, ಶರದ್‌ಪವಾರ್ , ಫಾರೂಕ್ ಅಬ್ದುಲ್ಲಾ, ಅಶೋಕ್ ಗೆಹ್ಲೋಟ್, ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ, ಕಮಲ್‌ನಾಥ್, ಚಂದ್ರಶೇಖರರಾವ್, ಜಗನ್‌ಮೋಹನ್ ರೆಡ್ಡಿ, ಸ್ಟಾಲಿನ್, ಪಿಣರಾಯಿ ವಿಜಯನ್, ಪ್ರಕಾಶ್ ಕಾರಟ್, ಡಿ.ರಾಜಾ, ರಾಕೇಶ್ ಸಿಂಗ್ ಟಿಕಾಯತ್, ಯೋಗೇಂದ್ರ ಯಾದವ್ ಮೊದಲಾದ ಮುತ್ಸದ್ದಿಗಳು ಒಗ್ಗೂಡಿ ಭಾರತವನ್ನು ಮೂಲಭೂತವಾದಿಗಳಿಂದ ವಿಮೋಚನೆಗೊಳಿಸಬೇಕು.
ಪ್ರಧಾನಿ ಯಾರೇ ಆಗಲಿ ಪ್ರಜಾಪ್ರಭುತ್ವ ಉಳಿಯುವುದು ಮುಖ್ಯ.
ಅಂತೆಯೇ ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಿದ್ಧರಾಮೋತ್ಸವ ಮನುವಾದಿಗಳಲ್ಲಿ ನಡುಕ ಹುಟ್ಟಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಸಿದ್ಧರಾಮಯ್ಯನವರ ನಾಯಕತ್ವ ನವಚೈತನ್ಯ ತುಂಬಿದೆ. ಇತ್ತೀಚಿನ ಸಮೀಕ್ಷೆ ಪ್ರಕಾರ ೨೦೨೩ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸೂಚನೆಯಿದೆ. ಮುಂದೆ ನಮ್ಮದೇ ಅಧಿಕಾರ ಎಂಬ ಭ್ರಮೆಯಿಂದ ಕಾಂಗ್ರೆಸ್ ಪಕ್ಷದವರು ಸುಮ್ಮನೆ ಇದ್ದರೇ ಅಧಿಕಾರ ದಕ್ಕುವುದಿಲ್ಲ. ಕಾಂಗ್ರೆಸ್ ಪಕ್ಷ ದೊಡ್ಡಣ್ಣನ ಧೋರಣೆಯಿಂದ ಹೊರಬಂದು ಜನತಾದಳ, ಬಿಎಸ್ಪಿ, ಎಸ್ಡಿಪಿಐ, ರೈತ ಸಂಘ, ಕಾರ್ಮಿಕ ಸಂಘ ಮೊದಲಾದ ಜಾತ್ಯಾತೀತ ಪಕ್ಷಗಳೊಂದಿಗೆ ಹೃದಯವಂತಿಕೆಯಿಂದ ಹೊಂದಾಣಿಕೆ ಮಾಡಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು ಮತ್ತೊಮ್ಮೆ ಕಲ್ಯಾಣ ಕರ್ನಾಟಕ ರಾಜ್ಯ ಸ್ಥಾಪನೆಗೆ ಅನುಕೂಲವಾಗುತ್ತದೆ. ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದಕ್ಕಿಂತ ಕರ್ನಾಟಕವನ್ನು ಮನುವಾದಿಗಳಿಂದ ಉಳಿಸುವುದು ನಮ್ಮೆಲ್ಲರ ಬಹುದೊಡ್ಡ ಜವಾಬ್ದಾರಿಯಾಗಿದೆ.