ಮತ್ತೊಬ್ಬ ಅಧ್ಯಕ್ಷರನ್ನು ಜೈಲಿಗೆ ಅಟ್ಟಿದ ಕಾಂಗ್ರೆಸ್, ರಾಜಕೀಯ ಅಸ್ಥಿರತೆ, ಭ್ರಷ್ಟಾಚಾರದಿಂದ ಕುಸಿದ ದೇಶ
ಲ್ಯಾಟಿನ್ ಅಮೆರಿಕದ ಬಡದೇಶಗಳಲ್ಲಿ ಒಂದಾದ ಪೆರುವಿನಲ್ಲಿ ಜನಪ್ರತಿನಿಧಿಗಳ ಸಭೆ(ಕಾಂಗ್ರೆಸ್) ಅಧ್ಯಕ್ಷರನ್ನು ಪದಚ್ಯುತಗೊಳಿಸಿ ಬಂಧಿಸಿ ಜೈಲಿಗೆ ಅಟ್ಟಿದೆ. ಅಧ್ಯಕ್ಷರಾಗಿದ್ದ ಪೆಡ್ರೋ ಕಾಸ್ಟಿಲ್ಲೋ ಬಂಡಾಯ ಮತ್ತು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಅವರ ಮೇಲೆ ಸಂಸತ್ತಿನಲ್ಲಿ ಮಾಗ್ದಂಡನೆ ನಿರ್ಣಯ ಮಂಡನೆಯಾಗಿ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯಲು ತೀರ್ಮಾನವಾಗಿತ್ತು. ಈ ತೀರ್ಮಾನದ ಕೆಲವೇ ನಿಮಿಷಗಳಲ್ಲಿ ಈ ಕ್ರಮದಿಂದ ತಪ್ಪಿಸಿಕೊಂಡು ಅಧಿಕಾರದಲ್ಲೇ ಉಳಿಯಲು ಅವರು ಕಳೆದ ವಾರ ಸಂಸತ್ತನ್ನೇ ವಿಸರ್ಜಿಸಿ ಹೊಸದಾಗಿ ಚುನಾವಣೆಗಳನ್ನು ನಡೆಸುವ ಘೋಷಣೆ ಮಾಡಿದ್ದರು. ಅವರ ಘೋಷಣೆಗೆ ದೇಶದ ಕಾಂಗ್ರೆಸ್ ಆಗಲಿ, ಮಿಲಿಟರಿ, ಅಷ್ಟೇ ಏಕೆ ಸಂಪುಟ ಸದಸ್ಯರೂ ಬೆಂಬಲ ನೀಡಲಿಲ್ಲ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅವರನ್ನು ಪದಚ್ಯುತಗೊಳಿಸಿ ಉಪಾಧ್ಯಕ್ಷೆಯಾಗಿದ್ದ ದಿನಾ ಎರ್ಸಿಲಿಯಾ ಬೊಲಯಾರ್ಟೆ ಜಿಗಾರ ಅವರನ್ನು ಹೊಸ ಅಧ್ಯಕ್ಷರನ್ನಾಗಿ ಆಯ್ಕೆಮಾಡಿದೆ. ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಮಾರ್ಕ್ಸ್‌ವಾದದಿಂದ ಬೊಲಯಾರ್ಟೆ ಅವರಿಗೆ ತಮ್ಮದೇ ರಾಜಕೀಯ ನೆಲೆ ಇಲ್ಲ. ವಕೀಲಿ ವೃತ್ತಿಯಿಂದ ೨೦೨೧ರ ಚುನಾವಣೆಯಲ್ಲಿ ನೇರವಾಗಿ ಸಂಸತ್ತಿಗೆ ಆಯ್ಕೆಯಾದವರು. ದೇಶ ಈಗ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂಥ ಕ್ಲಿಷ್ಟ ಪರಿಸ್ಥಿತಿುಂಲ್ಲಿ ಅವರು ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಲ್ಯಾಟಿನ್ ಅಮೆರಿಕ ಪ್ರದೇಶದ ವಿವಿಧ ದೇಶಗಳಲ್ಲಿ ಎಡಪಂಥೀಯ ನಾಯಕರು ಮತ್ತೆ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಎಡ ಪಂಥೀಯರೇ ಆದ ಬೊಲಯಾರ್ಟೆ ಪೆರುವಿನ ರಾಜಕೀಯ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಮೊದಲು ‘ರಾಜಕೀಯ ಸ್ಥಿರತೆ ತಂದು ನಂತರ ಅಭಿವೃದ್ಧಿ ಕಡೆಗೆ ಗಮನ ಕೊಡೋಣ’ ಎಂದು ತಮ್ಮ ಮುಂದಿನ ದಾರಿಯನ್ನು ಪ್ರಕಟಿಸಿದ್ದಾರೆ.
ಹಾಗೆ ನೋಡಿದರೆ ಪದಚ್ಯುತ ಅಧ್ಯಕ್ಷ ಪೆಡ್ರೋ ಕಾಸ್ಟಿಲೋ ಕೂಡಾ ಕಮ್ಯನಿಸ್ಟರೇ ಆಗಿದ್ದರು. ರೈತ ಕುಟುಂಬದಿಂದ ಬಂದ ಅವರು ಪೆರು ಜನರಲ್ಲಿ ಹೊಸ ಭರವಸೆಯನ್ನು ಹುಟ್ಟಿಸಿದ್ದರು. ಅವರು ಅಧಿಕಾರದಲ್ಲಿ ಇದ್ದದ್ದು ೧೭ ತಿಂಗಳು. ಅವರ ಮೇಲಿದ್ದ ಆರೋಪ ಅವರು ಸಂವಿಧಾನದ ವಿರುದ್ಧ, ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿದ್ದರು ಎಂಬುದಾಗಿತ್ತು. ಇದರ ಜೊತೆಗೆ ಅವರು ತಮ್ಮದೇ ಆದ ರಹಸ್ಯ ಗುಂಪೊಂದನ್ನು ಕಟ್ಟಿ ಅದರ ಮೂಲಕ ದೊಡ್ಡ ದೊಡ್ಡ ಕುಳಗಳಿಂದ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪವೂ ಇತ್ತು. ಹೀಗಾಗಿ ಅವರನ್ನು ಪದಚ್ಯುತಗೊಳಿಸಲಾಗಿದೆ.
ವಿಶ್ವದಲ್ಲಿ ಸೋವಿಯತ್ ಪ್ರಣೀತ ಕಮ್ಯೂನಿಸಂ ಆಡಳಿತ ಅಂತ್ಯವಾದ ನಂತರ ಕಮ್ಯೂನಿಸ್ಟರು ಭಿನ್ನ ಪಕ್ಷಗಳನ್ನು ಸ್ಥಾಪಿಸಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರು ಕಮ್ಯೂನಿಸ್ಟ್ ತತ್ವಗಳಿಗೇನೂ ಬದ್ಧರಾಗಿರುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿಯೇ ಅವರೆಲ್ಲಾ ಕೆಲಸ ಮಾಡುತ್ತಿದ್ದಾರೆ. ಆದರೆ ಬಲಪಂಥವನ್ನು ಕಟುವಾಗಿ ವಿರೋಧಿಸುವ ಒಂದು ಮುಖ್ಯ ತತ್ವವನ್ನು ಅವರು ಪಾಲಿಸಿಕೊಂಡು ಬರುತ್ತಿದ್ದಾರೆ. ಚಿಲಿ, ಕೊಲಂಬಿಯಾ, ಬ್ರೆಜಿಲ್, ಅರ್ಜೈಂಟೈನ, ಪೆರು ಮತ್ತಿತರ ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಅಧಿಕಾರಕ್ಕೆ ಬಂದಿರುವವರೆಲ್ಲಾ ಹಿಂದಿನ ಕಮ್ಯುನಿಸ್ಟರೆ. ಎಸ್ಟಿಲೋ, ಬೊಲಯಾರ್ಟೆ ಕೂಡಾ ಆ ಗುಂಪಿಗೆ ಸೇರಿದವರು. ಹೀಗಾಗಿ ಅವರು ಮುಕ್ತ ಮಾರುಕಟ್ಟೆ ಮತ್ತು ಪ್ರಜಾತಂತ್ರ ವ್ಯವಸ್ಥೆಯಲ್ಲಿಯೇ ಕೆಲಸ ಮಾಡುತ್ತ ಬಂದಿದ್ದಾರೆ. ಪ್ರಜಾತಂತ್ರ ಎಂದರೆ ಮೊದಲು ಕಂಡುಬರುವುದು ಭ್ರಷ್ಟಾಚಾರ. ಪೆರುವಿನಲ್ಲಿ ಒಂದು ಪಿಡುಗಾಗಿರುವುದು ಅದೇ ಭ್ರಷ್ಟಾಚಾರ.
ಇದೇನೇ ಇದ್ದರೂ ಪೆರು ದೇಶದ ರಾಜಕೀಯ ಅನೇಕ ರೀತಿಯ ಸ್ಥಿತ್ಯಂತರಗಳನ್ನು ದಾಟಿ ಈ ಸ್ಥಿತಿಗೆ ಬಂದು ನಿಂತಿದೆ. ಪೆರು ಒಂದು ಕಾಲದಲ್ಲಿ ಸರ್ವಾಧಿಕಾರಿಗಳ ಬೀಡು, ಶತಶತಮಾನಗಳ ಕಾಲ ಜನರು ಗುಲಾಮರಂತೆ ಬದುಕಿದ್ದಾರೆ. ಜನರ ಹಲವು ಹೋರಾಟಗಳ ನಂತರ ೧೯೭೮ -೮೦ರ ಅವಧಿಯಲ್ಲಿ ಪ್ರಜಾತಂತ್ರ ನಿಧಾನವಾಗಿ ದೇಶದಲ್ಲಿ ಬೇರು ಬಿಡಲು ಆರಂಭಿಸಿತು. ೧೯೯೩ರ ವೇಳೆಗೆ ಹೊಸ ಸಂವಿಧಾನ ಜಾರಿಗೆ ಬಂತು. ಅಂದಿನಿಂದ ಈವರೆಗೆ ಸಂವಿಧಾನಕ್ಕೆ ಹಲವು ತಿದ್ದುಪಡಿಗಳು ಆಗಿವೆ. ಆದರೆ ಸಂವಿಧಾನದ ಪ್ರಕಾರ ಆಡಳಿತಗಾರರು ಆಡಳಿತ ನಡೆಸದೆ ಅಧಿಕಾರವನ್ನು ಕೇಂದ್ರೀಕರಿಸಿಕೊಳ್ಳುವುದೇ ಸಮಸ್ಯೆಯಾಗಿದೆ. ಕ್ಯಾಸ್ಟಿಲೋ ಮಾಡಿದ್ದು ಅದೇ. ಪ್ರಜಾತಂತ್ರ ವ್ಯವಸ್ಥೆ ಜಾರಿಗೆ ಬಂದ ಮೇಲೆ ಪೆರು ದೇಶದಲ್ಲಿ ಕಳೆದ ಏಳು ವರ್ಷಗಳಲ್ಲಿ ಏಳು ಮಂದಿ ಅಧ್ಯಕ್ಷರು ಪದಚ್ಯುತಗೊಂಡಿದ್ದಾರೆ ಎನ್ನುವುದನ್ನು ನೋಡಿದರೆ ದೇಶದಲ್ಲಿ ರಾಜಕೀಯ ಯಾವ ಸ್ಥಿತಿಯಲ್ಲಿದೆ ಎನ್ನುವುದನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ್ದೇ ದೊಡ್ಡ ಸಮಸ್ಯೆ. ಪೆರು ಕೂಡಾ ಇದಕ್ಕೆ ಹೊರತಾಗಿಲ್ಲ. ೨೦೧೮ರಲ್ಲಿ ಅಧ್ಯಕ್ಷರಾಗಿ ಬಂದ ಮಾರ್ಟಿನ್ ವಿಜಾರಾ ಅವರ ಮೇಲೆ ಭ್ರಷ್ಟಾಚಾರದ ಆರೋಪ ಬಂದು ಅವರನ್ನು ಒಂದೇ ವರ್ಷದಲ್ಲಿ ಪದಚ್ಯುತಗೊಳಿಸಲಾಯಿತು. ಅವರ ಹಿಂದೆ ಗವರ್ನರ್ ಆಗಿದ್ದಾಗ ಸರ್ಕಾರದ ದೊಡ್ಡ ಕಾಮಗಾರಿಯೊಂದನ್ನು ಖಾಸಗಿ ಕಂಪೆನಿಯೊಂದಕ್ಕೆ ಮಂಜೂರು ,ಮಾಡಲು ಆರು ಲಕ್ಷ ಡಾಲರ್ ಲಂಚ ಪಡೆದಿದ್ದರೆಂಬ ಆರೋಪಕ್ಕೆ ಅವರು ಸಿಕ್ಕಿದ್ದರು. ೨೦೧೬-೧೮ರಲ್ಲಿ ಅಧಿಕಾರದಲ್ಲಿದ್ದ ಪೆಡ್ರೋ ಪಾಬ್ಲೋ ಕಜಿನಸ್ಕಿ ಅವರು ಮಂತ್ರಿಯಾಗಿದ್ದಾಗ ಬ್ರೆಜಿಲ್‌ನ ಕಂಪೆನಿಯೊಂದಕ್ಕೆ ಕಾಮಗಾರಿಯ ಗುತ್ತಿಗೆ ನೀಡಲು ಲಂಚ ಪಡೆದಿದ್ದರೆಂಬ ಆರೋಪ ಬಂದಿತ್ತು. ಅವರೇ ರಾಜೀನಾಮೆ ಕೊಟ್ಟು ಹೊರಹೋದರು. ೨೦೧೬ರಲ್ಲಿ ಒಲ್ಲಯಾಟೂ ಹುಮಾಲೆ, ೧೯೮೫ರಲ್ಲಿ ಅಲಮ್ ಗಾರ್ಸಿಯಾ, ೨೦೦೧ರಲ್ಲಿ ಅಧಿಕಾರದಲ್ಲಿದ್ದ ಅಲೆಕ್ಸಾಂಡರ್ ಟೊಲೆಡೋ ಇದೇ ರೀತಿ ಆರೋಪಕ್ಕೆ ಒಳಗಾಗಿ ಅಧ್ಯಕ್ಷ ಪದವಿ ತ್ಯಜಿಸಬೇಕಾಗಿ ಬಂತು. ೧೯೯೦ರಲ್ಲಿ ಆಲ್ಬರ್ಟೋ ಫೂಜಿಮೋರಿ ಅವರಿಗೆ ೨೫ ವರ್ಷ ಜೈಲು ಶಿಕ್ಷೆಯಾಗಿದೆ. ಭ್ರಷ್ಟಾಚಾರದ ಅನೇಕ ಆಪಾದನೆಗಳ ಜೊತೆಗೆ ತಮಗೆ ಆಗದವರನ್ನು ಕೊಲ್ಲುವ ರಹಸ್ಯ ತಂಡವೊಂದನ್ನು ಅವರು ಕಟ್ಟಿ ನಡೆಸುತ್ತಿದ್ದರು ಎಂಬ ಆರೋಪ ಕೂಡಾ ಇತ್ತು. ಪೆರುವಿನ ಆಧುನಿಕ ಇತಿಹಾಸ ಇಷ್ಟು ಕೆಟ್ಟದಾಗಿದೆ.
ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಹೊರಳಿದ ಮೇಲೆ ಪೆರು ಅಭಿವೃದ್ಧಿ ಆಶ್ಚರ್ಯ ಹುಟ್ಟಿಸಿತ್ತು. ಅದೊಂದು ಪವಾಡವೆಂದೇ ತಿಳಿಯಲಾಗಿತ್ತು. ದೇಶದಲ್ಲಿ ಅಪಾರವಾದ ಸಂಪನ್ಮೂಲ ಇದೆ. ಮುಖ್ಯವಾಗಿ ಚಿನ್ನ, ತಾಮ್ರ, ಬೆಳ್ಳಿ, ಕಬ್ಬಿಣ, ಅನಿಲ, ತೈಲ ಇದೆ. ಆದರೆ ಆ ಸಂಪತ್ತನ್ನು ಬಳಸಿಕೊಂಡು ಬೆಳೆಯುವಂಥ ಇಚ್ಛಾಶಕ್ತಿ ಆಡಳಿತಗಾರರಿಗೆ ಇಲ್ಲ. ರಾಜಕೀಯ ಕ್ಷೋಭೆಯ ನಡುವೆಯೂ_ ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ವೇಗವಾಗಿತ್ತು. ಆದರೆ ಕೋವಿಡ್ ಪಿಡುಗಿನಿಂದಾಗಿ ದೇಶ ಮತ್ತೆ ಕೆಳಕ್ಕೆ ಬಿದ್ದಿದೆ. ಕೋವಿಡ್ ನಿರ್ವಹಣೆ ತೀರಾ ಕಳಪೆಯಾಗಿದ್ದರಿಂದ ಸತ್ತವರ ಸಂಖ್ಯೆ ಹೆಚ್ಚು. ಸಹಸ್ರಾರು ಜನರು ಸತ್ತಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿದೆ. ಒಂದು ಲಕ್ಷ ಜನರಲ್ಲಿ ೫೦೩ ಜನ ಸರಾಸರಿ ಸತ್ತಿರುವರೆಂದು ಅಂದಾಜು ಮಾಡಲಾಗಿದೆ. ಈ ಪಿಡುಗು ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದ್ದು ಚೇತರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾಗುವುದೆಂದು ಹೇಳಲಾಗಿದೆ.
ವಿಶ್ವಬ್ಯಾಂಕ್ ಪ್ರಕಾರ ಪೆರು ಹೆಚ್ಚು ಅಭಿವೃದ್ಧಿಯನ್ನು ಮುಂದಿನ ವರ್ಷಗಳಲ್ಲಿ ಸಾಧಿಸುವ ಸಾಧ್ಯತೆ ಇದೆ. ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿ ಪಡೆದಿರುವ ದೇಶಗಳಲ್ಲಿ ಪೆರುವೂ ಕೂಡ ಒಂದು. ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಪೆರು ವಿಶ್ವದಲ್ಲಿ ೪೭ನೇ ಸ್ಥಾನದಲ್ಲಿದೆ (೨೦೨೧) ಎಂದೂ ವಿಶ್ವಬ್ಯಾಂಕ್ ಹೇಳಿದೆ. ಕೋವಿಡ್‌ಗೆ ಮೊದಲು ಪೆರು ವಿಶ್ವದಲ್ಲಿ ಅತಿ ಹೆಚ್ಚು ಬೆಳ್ಳಿ ಮತ್ತು ತಾಮ್ರವನ್ನು ಉತ್ಪಾದಿಸುವ ದೇಶಗಳಲ್ಲಿ ಒಂದಾಗಿತ್ತು. ಮತ್ತೇ ಅಭಿವೃದ್ಧಿ ಸಾಧಿಸುವಂಥ ಇಚ್ಚಾಶಕ್ತಿ ಇರುವ ನಾಯಕತ್ವ ಮತ್ತು ರಾಜಕೀಯ ಸ್ಥಿರತೆ ದೇಶದಲ್ಲಿ ನಿರ್ಮಾಣವಾದರೆ ಮಾತ್ರ ನಿರೀಕ್ಷೆತಯ ಪ್ರಗತಿ ಸಾಧಿಸಲು ಸಾಧ್ಯ.
ಇದೇನೇ ಇದ್ದರೂ ಪೆರು ದೇಶದ ರಾಜಕೀಯ ಅನೇಕ ರೀತಿಯ ಸ್ಥಿತ್ಯಂತರಗಳನ್ನು ದಾಟಿ ಈ ಸ್ಥಿತಿಗೆ ಬಂದು ನಿಂತಿದೆ. ಪೆರು ಒಂದು ಕಾಲದಲ್ಲಿ ಸರ್ವಾಧಿಕಾರಿಗಳ ಬೀಡು, ಶತಶತಮಾನಗಳ ಕಾಲ ಜನರು ಗುಲಾಮರಂತೆ ಬದುಕಿದ್ದಾರೆ. ಜನರ ಹಲವು ಹೋರಾಟಗಳ ನಂತರ ೧೯೭೮ -೮೦ರ ಅವಧಿಯಲ್ಲಿ ಪ್ರಜಾತಂತ್ರ ನಿಧಾನವಾಗಿ ದೇಶದಲ್ಲಿ ಬೇರು ಬಿಡಲು ಆರಂಭಿಸಿತು. ೧೯೯೩ರ ವೇಳೆಗೆ ಹೊಸ ಸಂವಿಧಾನ ಜಾರಿಗೆ ಬಂತು. ಅಂದಿನಿಂದ ಈವರೆಗೆ ಸಂವಿಧಾನಕ್ಕೆ ಹಲವು ತಿದ್ದುಪಡಿಗಳು ಆಗಿವೆ. ಆದರೆ ಸಂವಿಧಾನದ ಪ್ರಕಾರ ಆಡಳಿತಗಾರರು ಆಡಳಿತ ನಡೆಸದೆ ಅಧಿಕಾರವನ್ನು ಕೇಂದ್ರೀಕರಿಸಿಕೊಳ್ಳುವುದೇ ಸಮಸ್ಯೆಯಾಗಿದೆ.