Light
Dark

ವಿದೇಶ ವಿಹಾರ : ಪರಮಾಣು ತಂತ್ರಜ್ಞಾನ ಪ್ರಸರಣ ನಿಷೇಧ ಒಪ್ಪಂದ ಮುಂದುವರಿಸಲು ರಷ್ಯಾ ತೊಡರುಗಾಲು

ಡಿ ವಿ ರಾಜಶೇಖರ್ ಹಿರಿಯ ಪತ್ರಕರ್ತರು

ನ್ಯೂಯಾರ್ಕ್‌ನಲ್ಲಿರುವ ವಿಶ್ವ–ಸಂಸ್ಥೆಯ ಕೇಂದ್ರ ಕಚೇರಿ–ಯಲ್ಲಿ ಮೂರು ವಾರಗಳ ಕಾಲ ನಡೆದ ಪರಮಾಣು ತಂತ್ರಜ್ಞಾನ ಪ್ರಸರಣ ನಿಷೇಧ ಒಪ್ಪಂದ ( ಎನ್‌ಪಿಟಿ) ಮುಂದುವರಿಸುವ ಕುರಿತಾದ ಪರಿಶೀಲನಾ ಸಭೆ ಆತಂಕದಲ್ಲಿಯೇ ಅಂತ್ಯವಾಗಿದೆ. ಎನ್‌ಪಿಟಿಗೆ ಈ ಹಿಂದೆ ಸಹಿ ಮಾಡಿದ್ದ ದೇಶಗಳು ರೂಪಿಸಿದ ಜಂಟಿ ನಿರ್ಣಯಕ್ಕೆ ಒಪ್ಪಿಗೆ ನೀಡಲು ರಷ್ಯಾ ನಿರಾಕರಿಸುವ ಮೂಲಕ ಸಮಸ್ಯೆಯನ್ನು ಸೃಷ್ಟಿಸಿದೆ.
ನಿರ್ಣಯದ ಕರಡಿನಲ್ಲಿದ್ದ ಯುಕ್ರೇನ್‌ನ ಜಪೊರಿಜಾಜಿಯಾದಲ್ಲಿರುವ ಪರಮಾಣು ವಿದ್ಯುತ್ ಸ್ಥಾವರ ಸೃಷ್ಟಿಸಿರುವ ಬಿಕ್ಕಟ್ಟು ಕುರಿತ ಪ್ರಸ್ತಾಪವೇ ರಷ್ಯಾ ಸಹಿ ಮಾಡದಿರಲು ಕಾರಣ.
ಎನ್‌ಪಿಟಿಯನ್ನು ಮುಂದುವರಿಸುವ ಕುರಿತಂತೆ ನಡೆದ ಸಭೆಯಲ್ಲಿ ಉಕ್ರೇನ್‌ನಲ್ಲಿನ ಜಪೊರಿಜಾಜಿಯ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾ ಸೇನೆ ವಶಪಡಿಸಿಕೊಂಡ ನಂತರ ಉಂಟಾಗಿರುವ ಅಪಾಯವನ್ನು ಹಲವು ದೇಶಗಳ ಪ್ರತಿನಿಧಿಗಳು ಪ್ರಸ್ತಾಪಿಸಿದಾಗಲೇ ಕಟುವಾದ ಪ್ರತಿಕ್ರಿಯೆ ಬರಬಹುದೆಂದು ನಿರೀಕ್ಷಿಸಲಾಗಿತ್ತು. ನಿರೀಕ್ಷೆಯಂತೆಯೇ ರಷ್ಯಾ ಅಂತಿಮ ಹಂತದಲ್ಲಿ ಕರಡು ನಿರ್ಣಯವನ್ನು ತಿರಸ್ಕರಿಸುವ ಮೂಲಕ ಅನಿಯಂತ್ರಿತ ಪರಮಾಣು ಶಕ್ತಿ ತಂದೊಡ್ಡಿರುವ ಆತಂಕವನ್ನು ಹೆಚ್ಚಿಸಿದೆ.

ಯುಕ್ರೇನ್ ಯುದ್ಧದ ಸಂದರ್ಭದಲ್ಲಿ ಜಪೊರಿಜಾಜಿನಲ್ಲಿರುವ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಮಿಲಿಟರಿ ದಾಳಿ ನಡೆದಿದ್ದು ಸ್ಥಾವರ ಭಾಗಶಃ ಜಖಂಗೊಂಡಿದೆ. ಇದರಿಂದ ವಿಕಿರಣ ಸೋರಿಕೆಯಾಗಿ ಮತ್ತೊಂದು ಚರ್ನೋಬಿಲ್ ಅಥವಾ ಫಿಕೋಸಿಮಾ ಸೃಷ್ಟಿಯಾಗಬಹುದು ಎಂಬುದು ಪರಮಾಣು ತಜ್ಞರ ಆತಂಕ. ಆದರೆ ಪರಮಾಣು ಸ್ಥಾವರಕ್ಕೆ ಅಂಥ ಅಪಾಯವೇನೂ ಆಗಿಲ್ಲ ಎಂದು ರಷ್ಯಾ ಹೇಳುತ್ತಿದೆ. ಆ ಸ್ಥಾವರ ಈಗ ರಷ್ಯಾ ವಶದಲ್ಲಿದ್ದು ಅಲ್ಲಿದ್ದ ಯುಕ್ರೇನ್ ಸಿಬ್ಬಂದಿಯೇ ಅದನ್ನು ನಿರ್ವಹಿಸುತ್ತಿದೆ. ಯುಕ್ರೇನ್ ಈ ಸ್ಥಾವರವನ್ನು ಬ್ಲಾಕ್‌ಮೇಲ್ ಮಾಡಲು ಬಳಸಿಕೊಳ್ಳುತ್ತಿದೆ ಎಂದು ರಷ್ಯಾ ಆರೋಪಿಸುತ್ತಿದೆ.
ಪರಮಾಣು ತಂತ್ರಜ್ಞಾನ ಮತ್ತು ಪರಮಾಣು ಅಸ್ತ್ರಗಳು ಮಾನವ ಕುಲಕ್ಕೆ ತಂದೊಡ್ಡಿರುವ ಅಪಾಯವನ್ನು ತಪ್ಪಿಸುವ ಉದ್ದೇಶದಿಂದ ೧೯೬೮ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದವೊಂದನ್ನು ಮಾಡಿಕೊಳ್ಳಲಾಯಿತು. ಪರಮಾಣು ತಂತ್ರಜ್ಞಾನ ಪ್ರಸರಣವಾಗುವುದನ್ನು, ಹೊಸದಾಗಿ ಪರಮಾಣು ಅಸ್ತ್ರ ನಿರ್ಮಾಣವಾಗುವುದನ್ನು ಮತ್ತು ಬಳಕೆಯಾಗುವುದನ್ನು ತಡೆಯುವುದು ಈ ಒಪ್ಪಂದದ ಉದ್ದೇಶ. ಆ ತಂತ್ರಜ್ಞಾನವನ್ನು ಶಾಂತಿಯುತ ಉದ್ದೇಶಕ್ಕೆ ಬಳಕೆಯಾಗುವಂತೆ ಮಾಡುವುದು, ಅಂತಿಮವಾಗಿ ಪರಮಾಣು ಅಸ್ತ್ರಗಳ ನಾಶಕ್ಕೆ ದಾರಿಮಾಡಿಕೊಡುವುದು ಎನ್‌ಪಿಟಿಯ ಗುರಿ.
ಈ ಒಪ್ಪಂದಕ್ಕೆ ಪರಮಾಣು ಅಸ್ತ್ರಗಳುಳ್ಳ ದೇಶಗಳೂ ಸೇರಿದಂತೆ ೧೯೧ ದೇಶಗಳ ಪ್ರತಿನಿಧಿಗಳು ಸಹಿ ಮಾಡಿದ್ದಾರೆ. ಈ ಒಪ್ಪಂದ ೧೯೭೦ರಿಂದ ಜಾರಿಗೆ ಬಂದಿದೆ. ಭಾರತ ಈ ಒಪ್ಪಂದಕ್ಕೆ ಸಹಿಹಾಕಿಲ್ಲ. ಪರಮಾಣು ತಂತ್ರಜ್ಞಾನವನ್ನು ವಿದ್ಯುತ್, ಔಷಧ ಮುಂತಾದ ಒಳ್ಳೆಯ ಉದ್ದೇಶಗಳಿಗೆ ಮಾತ್ರ ಬಳಸಲಾಗುತ್ತಿದ್ದು ವಿನಾಶಕಾರಿಯಾದ ಪರಮಾಣು ಅಸ್ತ್ರಗಳನ್ನು ತಯಾರಿಸುತ್ತಿಲ್ಲ ಎಂದು ಭಾರತ ಹೇಳುತ್ತ ಬಂದಿದೆ. ಪಾಕಿಸ್ತಾನದ ವಿಜ್ಞಾನಿಯೊಬ್ಬ ತಂತ್ರಜ್ಞಾನವನ್ನು ಕದ್ದು ತಂದು ಆ ದೇಶದಲ್ಲಿ ಪರಮಾಣು ಸ್ಥಾವರಗಳನ್ನು ನಿರ್ಮಾಣ ಮಾಡಿದ. ಅಷ್ಟೇ ಅಲ್ಲ ಆ ವಿಜ್ಞಾನಿ ಹಣಕ್ಕಾಗಿ ತಂತ್ರಜ್ಞಾನವನ್ನು ಇತರ ಕೆಲವು ದೇಶಗಳಿಗೆ ಮಾರಿದ್ದಾನೆ ಎನ್ನುವ ಆರೋಪವೂ ಇದೆ.
ಇದೇನೇ ಇದ್ದರೂ ತಾನು ಪರಮಾಣು ಅಸ್ತ್ರಗಳನ್ನು ತಯಾರಿಸುತ್ತಿಲ್ಲ ಎಂದು ಪಾಕಿಸ್ತಾನ ಹೇಳುತ್ತ ಬಂದಿದೆ. ಭಾರತ ಸಹಿ ಮಾಡದಿರುವುದರಿಂದ ತಾನೂ ಎನ್‌ಪಿಟಿಗೆ ಸಹಿ ಮಾಡುವುದಿಲ್ಲ ಎಂದಿದೆ ಪಾಕಿಸ್ತಾನ. ಇದೇನೇ ಸ್ಪಷ್ಟನೆ ಇದ್ದರೂ ಎರಡೂ ದೇಶಗಳ ಬಳಿ ಪರಮಾಣು ಅಸ್ತ್ರಗಳು ಇರಬಹುದಾದ ಸಂಶಯವನ್ನು ಪರಮಾಣು ಅಸ್ತ್ರಗಳುಳ್ಳ ದೇಶಗಳು ಹೇಳುತ್ತ ಬಂದಿವೆ.
ಎನ್‌ಪಿಟಿ ಒಪ್ಪಂದವಾದ ನಂತರ ಐದು ವರ್ಷಗಳಿಗೊಮ್ಮೆ ಮೂಲ ಒಪ್ಪಂದಕ್ಕೆ ಸಹಿ ಮಾಡಿದ ದೇಶಗಳು ಒಂದು ಕಡೆ ಸಭೆ ಸೇರಿ ಪರಮಾಣು ಅಸ್ತ್ರಗಳ ವಿಚಾರದಲ್ಲಿ ಏನು ಪ್ರಗತಿಯಾಗಿದೆ, ಪ್ರಗತಿಯಾಗದಿದ್ದರೆ ಏಕೆ ಆಗಿಲ್ಲ ಮುಂತಾದ ಅಂಶಗಳ ಬಗ್ಗೆ ಚರ್ಚೆ ನಡೆಸಿ ಮುಂದಿನ ಹೆಜ್ಜೆ ಬಗ್ಗೆ ನಿರ್ಧಾರ ಮಾಡಬೇಕಿದೆ. ಮೂಲ ಒಪ್ಪಂದ ಮುಂದುವರಿಸುವ ಬಗ್ಗೆ ಜಂಟಿ ಹೇಳಿಕೆಯೊಂದಕ್ಕೆ ಸಹಿಮಾಡಬೇಕಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಭೆಯೇ ನಡೆಯದೆ ಇದ್ದ ಉದಾಹರಣೆಗಳಿವೆ. ಇತ್ತೀಚಿನ ನಿದರ್ಶನ ೨೦೨೦ರಲ್ಲಿ ನಡೆಯಬೇಕಿದ್ದ ಸಭೆ ಈ ವರ್ಷ ನಡೆದು ಅಂತಿಮವಾಗಿ ಯಾವುದೇ ನಿರ್ಣಯ ತೆಗೆದುಕೊಳ್ಳದೇ ಹೋದದ್ದೇ ಆಗಿದೆ.
ಪರಮಾಣು ಅಸ್ತ್ರಗಳು ವಿನಾಶಕಾರಿಯಾದವು. ವಿನಾಶದ ಭೀತಿಯನ್ನು ಬೇರೆಯವರಲ್ಲಿ ಹುಟ್ಟಿಸಿ ‘ಶಕ್ತಿ ರಾಜಕೀಯ’ ಮಾಡುವ ತಂತ್ರ ಇತ್ತೀಚಿನ ದಿನಗಳಲ್ಲಿ ಮುಂಚೂಣಿಗೆ ಬಂದಿದೆ. ಯುಕ್ರೇನ್ ಮೇಲೆ ರಷ್ಯಾ ಸೇನಾ ದಾಳಿ ನಡೆಸಿದ ಪ್ರಕರಣದಲ್ಲಿ ಯಾವ ದೇಶವೂ ನೇರವಾಗಿ ಯುಕ್ರೇನ್ ನೆರವಿಗೆ ಹೋಗಲಿಲ್ಲ. ಪಾಶ್ಚಿಮಾತ್ಯ ದೇಶಗಳಾಗಲಿ, ಯೂರೋಪ್ ಒಕ್ಕೂಟದ ಯಾವುದೇ ದೇಶವಾಗಲಿ ಯುಕ್ರೇನ್ ವಿರುದ್ಧದ ಈ ಯುದ್ಧದಲ್ಲಿ ಮಧ್ಯಪ್ರವೇಶಿಸಿದರೆ ಪರಮಾಣು ಬಾಂಬ್ ಹಾಕಲು ಹಿಂಜರಿಯುವುದಿಲ್ಲ ಎಂದು ರಷ್ಯಾ ಬೆದರಿಕೆ ಹಾಕಿತು. ಈ ಬೆದರಿಕೆಯಿಂದಾಗಿಯೇ ಯಾವುದೇ ಶಕ್ತಿಶಾಲಿ ದೇಶ ಯುಕ್ರೇನ್ ಪರವಾಗಿ ತನ್ನ ಸೈನಿಕರನ್ನು ಯುದ್ಧಕ್ಕೆ ಇಳಿಸಲಿಲ್ಲ. ಯುದ್ಧಾಸ್ತ್ರಗಳನ್ನು ಮಾತ್ರ ಯುಕ್ರೇನ್‌ಗೆ ಪೂರೈಸುತ್ತಿವೆ.
ರಷ್ಯಾದಂಥ ಶಕ್ತಿ ದೇಶದ ಮಿಲಿಟರಿಯನ್ನು ಪರಮಾಣು ಅಸ್ತ್ರಗಳಿಲ್ಲದ ಪುಟ್ಟ ದೇಶ ಎದುರಿಸಬೇಕಾಗಿ ಬಂದಿದೆ. ಇಂದು ರಷ್ಯಾ ಇಂಥ ಪರಮಾಣು ಅಸ್ತ್ರ ಬಳಸುವ ಬೆದರಿಕೆ ಒಡ್ಡಿದೆ, ನಾಳೆ ಅಮೆರಿಕ, ಚೀನಾ ಮತ್ತಿತರ ಪರಮಾಣು ಶಕ್ತಿ ದೇಶಗಳು ಅದೇ ಕೆಲಸ ಮಾಡಬಹುದು. ಪರಮಾಣು ಶಕ್ತಿಯಿಲ್ಲದ ದೇಶದ ಮೇಲೆ ಪರಮಾಣು ಶಕ್ತಿ ದೇಶ ಸೇನಾ ದಾಳಿ ನಡೆಸಲು ದಾರಿ ಮಾಡಿಕೊಟ್ಟಿರುವುದು ಆಘಾತಕಾರಿ. ಯುಕ್ರೇನ್ ದೇಶದ ವಿನಾಶವನ್ನು ತಪ್ಪಿಸಬಹುದಾದಂಥ ಯಾವ ವ್ಯವಸ್ಥೆಯೂ ಇಲ್ಲದಿರುವುದು ಒಂದು ದೊಡ್ಡ ದುರಂತ.
ಎನ್‌ಪಿಟಿ ಸಭೆಯ ಗತಿ ಹೀಗಾಗುತ್ತಿರುವ ಸಂದರ್ಭದಲ್ಲಿಯೇ ಪರಮಾಣು ತಂತ್ರಜ್ಞಾನವನ್ನು ಬಾಂಬ್ ಮತ್ತಿತರ ವಿನಾಶಕಾರಿ ಶಸ್ತ್ರಗಳನ್ನು ತಯಾರಿಸಲು ಬಳಸಬಾರದೆಂಬ ೨೦೧೫ರ ಇರಾನ್ ಜೊತೆಗಿನ ಒಪ್ಪಂದ ಕೂಡ ವಿಯನ್ನಾದಲ್ಲಿ ಮರುಪರಿಶೀಲನೆಗೆ ಒಳಗಾಗಿದೆ. ೨೦೧೫ರಲ್ಲಿಯೇ ಈ ಒಪ್ಪಂದ ಆಗಿತ್ತಾದರೂ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಏಕಾಏಕಿ ಒಪ್ಪಂದದಿಂದ ಹೊರಬರುವುದಾಗಿ ಪ್ರಕಟಿಸಿದ್ದರು.
ಅಂದಿನಿಂದ ನನೆಗುದಿಗೆ ಬಿದ್ದಿದ್ದ ಒಪ್ಪಂದಕ್ಕೆ ಮರುಜೀವ ಕೊಡಲು ಅಮೆರಿಕ ಸೇರಿದಂತೆ ಪಶ್ಚಿಮದ ದೇಶಗಳು ಮತ್ತು ಫ್ರಾನ್ಸ್ ಸೇರಿದಂತೆ ಯೂರೋಪ್ ದೇಶಗಳ ಪ್ರತಿನಿಧಿಗಳು ಮಾತುಕತೆ ನಡೆಸಿದರು. ಹಳೆಯ ಒಪ್ಪಂದದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ ಪರಿಣಾಮ ಅದರ ಕರಡನ್ನು ಇರಾನ್‌ಗೆ ಕೊಡಲಾಗಿದೆ. ಇರಾನ್ ತತ್‌ಕ್ಷಣ ಒಪ್ಪಿಗೆ ನೀಡಲು ನಿರಾಕರಿಸಿದ್ದರಿಂದ ಅಥವಾ ಅಧ್ಯಯನ ಮಾಡಬೇಕೆಂದು ಕರಡನ್ನು ಇರಾನ್ ವಿದೇಶಾಂಗ ಸಚಿವರು ತಮ್ಮ ದೇಶಕ್ಕೆ ವಾಪಸ್ ಹೋದದ್ದರಿಂದ ಈ ಒಪ್ಪಂದವೂ ನನೆಗುದಿಗೆ ಬಿದ್ದಂತಾಗಿದೆ.
ಪರಮಾಣು ತಂತ್ರಜ್ಞಾನ ಕುರಿತಂತೆ ಕರಡು ಒಪ್ಪಂದದಲ್ಲಿ ಹಾಕಿರುವ ಷರತ್ತುಗಳನ್ನು ಇರಾನ್ ಇನ್ನೂ ಒಪ್ಪಬೇಕಿದೆ. ಈ ಒಪ್ಪಂದ ಜಾರಿಗೆ ಬಂದರೆ ಇರಾಕ್‌ನ ಪರಮಾಣು ಸ್ಥಾವರಗಳು ಮತ್ತು ಪರಮಾಣು ತಂತ್ರಜ್ಞಾನ ಅಧ್ಯಯನ ಕೇಂದ್ರಗಳು ಅಂತಾರಾಷ್ಟ್ರೀಯ ಪರಮಾಣು ಪರಿವೀಕ್ಷಕರ ವೀಕ್ಷಣೆಗೆ ಬಾಗಿಲು ತೆರೆಯಬೇಕಾಗುತ್ತದೆ. ಪ್ರತಿಯಾಗಿ ಇರಾನ್ ಮೇಲೆ ಅಮೆರಿಕ, ಯೂರೋಪ್ ವಿಧಿಸಿರುವ ಆರ್ಥಿಕ ಮತ್ತಿತರ ನಿರ್ಬಂಧಗಳು ರದ್ದಾಗಲಿವೆ. ೨೦೧೫ರ ಒಪ್ಪಂದವನ್ನು ತಾನು ಉಲ್ಲಂಘಿಸಿಲ್ಲ ಎಂದು ಇರಾನ್ ಹೇಳಿಕೊಂಡಿದೆ. ಆದರೆ ಯುರೇನಿಯಂ ಅನ್ನು ಬಾಂಬ್ ತಯಾರಿಕೆಗೆ ಬೇಕಾದಷ್ಟು ಮಟ್ಟದಲ್ಲಿ ಸಂಸ್ಕರಿಸಿರುವ ಬಗ್ಗೆ ಪರಮಾಣು ಸ್ಥಾವರಗಳಲ್ಲಿ ಕುರುಹುಗಳು ಕಂಡುಬಂದಿವೆ ಎಂದು ಅಂತಾರಾಷ್ಟ್ರೀಯ ಪರಮಾಣು ತಜ್ಞರು ಹೇಳಿರುವುದನ್ನು ಇರಾನ್ ಗಮನಕ್ಕೆ ತರಲಾಗಿದೆ. ಆದರೆ ತನಗೆ ಪರಾಮಾಣು ಅಸ್ತ್ರಗಳ ನಿರ್ಮಾಣ ಉದ್ದೇಶ ಇಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.

ಪರಮಾಣು ತಂತ್ರಜ್ಞಾನ ಕುರಿತಂತೆ ಆದ ಯಾವುದೇ ಒಪ್ಪಂದ ಊರ್ಜಿತಗೊಳ್ಳದಿದ್ದರೂ ಪರಮಾಣು ಬಾಂಬ್ ಹಾಕಬಹುದಾದಂಥ ಪರಿಸ್ಥಿತಿ ಎಲ್ಲೂ ನಿರ್ಮಾಣವಾಗದಿರುವುದು ಸಮಾಧಾನದ ಸಂಗತಿ. ಬೆದರಿಕೆಗಳು ಇತ್ತೀಚಿನ ವರ್ಷಗಳಲ್ಲಿ ಕೇಳಿ ಬಂದವಾದರೂ ಅಪಾಯ ಸಂಭವಿಸಿಲ್ಲ. ಎನ್‌ಪಿಟಿಯ ಹೊರತಾಗಿಯೂ ಅಮೆರಿಕ ಮತ್ತು ರಷ್ಯಾ ನಡುವೆ ಪರಮಾಣು ಅಸ್ತ್ರಗಳ ಸಂಖ್ಯೆಯನ್ನು ಕಡಿಮೆ ಮಾಡುವ ವಿಚಾರದಲ್ಲಿ ಒಪ್ಪಂದಗಳು ಆಗಿವೆ. ಅವು ಬಹುಪಾಲು ಜಾರಿಯೂ ಆಗಿವೆ. ೧೯೬೮ರಲ್ಲಿ ವಿಶ್ವದಲ್ಲಿ ಇದ್ದ ಪರಮಾಣು ಅಸ್ತ್ರಗಳ ಸಂಖ್ಯೆ ಸುಮಾರು ಎಪ್ಪತ್ತು ಸಾವಿರ. ಆದರೆ ಈಗ ೨೦೨೨ರಲ್ಲಿ ಅವುಗಳ ಸಂಖ್ಯೆ ೧೪ ಸಾವಿರಕ್ಕೆ ಇಳಿದಿದೆ ಎಂಬ ಮಾಹಿತಿಯಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ. ಹಾಗೆಂದು ಪರಮಾಣು ಅಸ್ತ್ರಗಳು ತಯಾರಾಗುತ್ತಲೇ ಇಲ್ಲ ಎಂದಲ್ಲ. ಪ್ರಯೋಗಾಲಯಗಳಲ್ಲಿ ಅತ್ಯಾಧುನಿಕ ರಹಸ್ಯ ಪರಮಾಣು ಬಾಂಬ್‌ಗಳು ತಯಾರಾಗಿದ್ದರೂ ಆಶ್ಚರ್ಯಪಡಬೇಕಾದ್ದಿಲ್ಲ.
ಎಲ್ಲಿಯವರೆಗೆ ಈಗ ಇರುವ ಪರಮಾಣು ಶಸ್ತ್ರಗಳು ನಾಶವಾಗುವುದಿಲ್ಲವೋ ಮತ್ತು ಎಲ್ಲಿಯವರೆಗೆ ಪರಮಾಣು ತಂತ್ರಜ್ಞಾನವನ್ನು ಶಸ್ತ್ರಗಳ ತಯಾರಿಕೆಗೆ ಬಳಸಲಾಗುತ್ತದೆಯೋ ಅಲ್ಲಿಯವರೆಗೆ ಮನುಷ್ಯ ಜನಾಂಗಕ್ಕೆ ನೆಮ್ಮದಿ ಇಲ್ಲ. ಪರಿಸ್ಥಿತಿಯಲ್ಲಿ ಸುಧಾರಣೆ ತರಬೇಕಾದರೆ ವಿಶ್ವಸಂಸ್ಥೆ ಬಲಗೊಳ್ಳಬೇಕು. ಅಂತರರಾಷ್ಟ್ರೀಯ ಪರಮಾಣು ವಿಜ್ಞಾನಿಗಳು ಎಲ್ಲ ದೇಶಗಳಿಗೆ ಹೋಗಿ ಪರಮಾಣು ಸ್ಥಾವರಗಳನ್ನು ಪರಿಶೀಲಿಸಿ ತಂತ್ರಜ್ಞಾನವನ್ನು ಜೀವಜಗತ್ತಿಗೆ ಅನುಕೂಲವಾಗುವಷ್ಟು ಪ್ರಮಾಣಕ್ಕೆ ಸೀಮಿತಗೊಳಿಸಬೇಕು. ಇದರ ಜೊತೆಯಲ್ಲಿಯೇ ಹಾಲಿ ಅಸ್ತಿತ್ವದಲ್ಲಿರುವ ಪರಮಾಣು ಅಸ್ತ್ರಗಳನ್ನು ನಾಶಮಾಡಬೇಕು. ಆಗ ಮಾತ್ರ ಪರಮಾಣು ತಂತ್ರಜ್ಞಾನ ಮತ್ತು ಶಸ್ತ್ರಗಳ ಭೀತಿ ಹೋಗಬಹುದು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ