Light
Dark

ವಾರೆನೋಟ : ಅರಿಷಡ್ವರ್ಗಗಳ ದುಂಡು ಮೇಜಿನ ಸಭೆ!

ದೇಶದಲ್ಲಿ ಜಾತಿ, ಪಂಗಡಗಳ ಹೆಸರಿನಲ್ಲಿ ಸಂಘಟನೆ ಆಗ್ತಾ ಇದೆ. ಸಂಘಟನೆ ಆದ್ರೆ ಮಾತ್ರ ಈ ದೇಶದಲ್ಲಿ ಬದುಕೋದು ಸಾಧ್ಯ ಅಂತಾ ಅಲ್ಲಲ್ಲಿ ಜಾತಿ ಸಂಘಟಕರು ಹೇಳುತ್ತಿದ್ದ ಮಾತುಗಳನ್ನು ಕೇಳಿದ್ದ ಅರಿಷಡ್ವರ್ಗಗಳೂ ಎಚ್ಚೆತ್ತುಕೊಂಡವು. ತಾವೂ ಸಂಘಟಿತರಾಗಬೇಕು, ಸಂಘಟಿತರಾಗಿಯೇ ಹೋರಾಟ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದವು. ಇರೋದು ಬರೀ ಅರ್ಧ ಡಜನ್ನೇ ಆದರೂ, ಸಿಸ್ಟಾಮ್ಯಾಟಿಕ್ಕಾಗಿ ಆರ್ಗನೈಸ್ ಆದರೆ ಮಾತ್ರ ನಾವು ಪ್ರಬಲರಾಗಿ, ಸಮರ್ಥರಾಗಿ ಇರೋಕೋ ಸಾಧ್ಯ ಎಂಬುದು ಅರಿಷಡ್ವರ್ಗಗಳ ನಂಬಿಕೆ.

ಲೀಡರ್‌ಶಿಪ್ ವಿಷ್ಯಾ ಬಂದಾಗ ನಾನೇ ಲೀಡರ್ ಆಗ್ತಿನಿ ಅಂತಾ ಆರೂ ಜನಾನೂ ಟವಲ್ ಹಾಕಿದ್ರು. ‘ಲೀಡರ್ ಆಗೋ ವಿಷಯದಲ್ಲೇ ನಮ್ಮಲ್ಲಿ ಸಂಘಟನೆ ಇಲ್ಲ ಅಂದ್ರೆ ಹೆಂಗೆ? ಫಸ್ಟು ಸಂಘಟಿತರಾಗೋಣ, ಆಮೇಲೆ ಲೀಡರ್ ಸಲೆಕ್ಟ್ ಮಾಡೋಣ’ ಅಂತಾ ಕಡೆಗೂ ಒಮ್ಮತಕ್ಕೆ ಬಂದವು. ದುಂಡು ಮೇಜಿನ ಸಭೆ ಸೇರಿ ಲೀಡರ್ ಆಯ್ಕೆ ಮಾಡುವ ನಿರ್ಧಾರ ಮಾಡಿದವು.
ಕಾಮ ‘ನಮ್ಮನೇಲೇ ಸಭೆ ಸೇರೋಣ’ ಅಂದಾಗ ಉಳಿದವರೆಲ್ಲರಿಗೂ ಅಸಮಾಧಾನವಾಯ್ತು, ‘ಯಾಕಪ್ಪ ಕಾಮಾ ನಾವೇನ್ ಮನೆ ಇಲ್ದೆ ಬೀದಿಗೆ ಬಿದ್ದೀದೀವಾ ನಮ್ಮನೇಲೆ ಸಭೆ ಸೇರೋಣ’ ಅಂತಾ ಉಳಿದ ಐವರೂ ಆವಾಜು ಹಾಕಿದರು. ಹೀಗಾಗಿ ಸಭೆ ಎಲ್ಲಿ ಸೇರೋದು ಅನ್ನೋ ವಿಷಯದಲ್ಲಿ ಮತ್ತೆ ಭಿನ್ನಾಭಿಪ್ರಾಯ ಬಂತು.
‘ಹೀಗೆ ಪದೇ ಪದೇ ಭಿನ್ನಾಭಿಪ್ರಾಯ ಇಟ್ಕೊಂಡು ಸಂಘಟನೆ ಆಗೋದು ಕಷ್ಟ ಕಣ್ರಪಾ.. ಯಾವುದಾದ್ರೂ ಸ್ಟಾರ್ ಹೋಟೆಲ್‌ನಲ್ಲೇ ಸಭೆ ಸೇರೋಣ’ಅಂತಾ ಕಾಮ ನೀಡಿದ ಸಲಹೆಗೆ ಎಲ್ಲರೂ ಒಕ್ಕೊರಲಿಂದ ಒಪ್ಪಿದರು. ಅಂತೂ ಇಂತೂ ದುಂಡು ಮೇಜಿನ ಸಭೆಯ ದಿನಾ ಬಂದೇ ಬಿಟ್ಟಿತ್ತು. ಪಂಚತಾರಾ ಹೋಟೆಲ್ಲಿನ ಸಭಾಂಗಣದಲ್ಲಿ ಸಭೆ. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳು ಸಭೆಗೆ ಹಾಜರಾಗಿದ್ದವು.
ಆರಂಭದಲ್ಲೇ ಲೀಡರ್‌ಶಿಪ್ಪಿಗಾಗಿ ಟವಲ್ ಹಾಕಿದ್ದ ಕಾಮ ತಾನೇ ಸಭೆಯ ಅಧ್ಯಕ್ಷತೆ ವಹಿಸಿರುವಂತೆ, ಮಾತಿಗಾರಂಭಿಸಿತು.
‘ನೋಡಿ ಬಂಧುಗಳೇ, ಇವತ್ತುಂದಿನಾ ನಾವೆಲ್ಲ ಇಲ್ಲಿ ಯಾಕೆ ಸಭೆ ಸೇರಿದ್ದೀವಿ ಅಂದ್ರೆ, ನಾವೂ ಸಂಘಟಿತರಾಗಬೇಕಿದೆ. ಸಂಘಟಿತರಾಗದೇ ಇದ್ದರೆ ನಮಗೆ ಬೆಲೆಯೇ ಇರೊಲ್ಲ , ಜತೆಗೆ ನಮ್ಮನ್ನು ಒಡೆದು ಆಳುವವರು ಹೆಚ್ಚಾಗುತ್ತಿದ್ದಾರೆ. ನಾವು ಆರೂ ಜನ ಒಟ್ಟಿಗೆ ಇದ್ದರೆ ನಮ್ಮುನ್ನಾ ಯಾರೂ ಏನೂ ಮಾಡಕಾಗಲ್ಲ , ಹಾಗಾಗಿ ನಾವೆಲ್ಲ ಒಟ್ಟಾಗೋಣ. ಇವತ್ತುಂದಿನಾ ನಮ್ಮ ಸಂಘಟನೆಯ ಲೀಡರ್‌ಶಿಪ್ಪಿಗೆ ನಾನೇ ಸಮರ್ಥ ಅಂತ ನನ್ನ ಅನಿಸಿಕೆ, ನೀವೆಲ್ಲ ಬೆಂಬಲ ನೀಡಿ ನನಗೆ ನಾಯಕತ್ವ ನೀಡಬೇಕು’ ಎಂದು ಮನವಿ ಮಾಡಿತು. ಕಾಮನ ಮಾತಿನಿಂದ ಕ್ರೋಧನಿಗೆ ಕೋಪಾನೇ ಬಂತು. ‘ಅಲ್ಲಪ್ಪಾ ಕಾಮ, ಡೈರೆಕ್ಟಾಗಿ ನಾನೇ ಲೀಡರ್ ಆಗ್ತೀನಿ ಅಂತಾ ಕ್ಲೈಮ್ ಮಾಡೋದು ಯಾವ ಸೀಮೆ ಶಿಷ್ಟಾಚಾರಾ? ಇದುಕ್ಕೆ ನಾವು ಸಭೆ ಸೇರಬೇಕಿತ್ತಾ?’ ಅಂತಾ ತನ್ನ ಕ್ರೋಧವನ್ನೆಲ್ಲಾ ಹೊರ ಹಾಕಿತು.
‘ಸಮಾಧಾನ ಮಾಡ್ಕೋ ಕ್ರೋಧ, ಇವತ್ತುಂದಿನಾ ನಮುಗ್ ನಾವೇ ಲೀಡರ್‌ಗಳಾಗಬೇಕು, ಇಲ್ಲಿ ಯಾರೂ ಯಾರುನ್ನೂ ಲೀಡರ್ ಮಾಡಲ್ಲಪಾ..’ ಅಂತಾ ಲೋಭ ಹೇಳಿತು.
‘ಲೋಭ ಹೇಳಿದ್ದುನ್ನಾ ನಾನೂ ಎಂಡಾರ್ಸ್ ಮಾಡ್ತೀನಿ. ಇವತ್ತುಂದಿನಾ ನಮ್ಮುನ್ನಾ ನಾವೇ ಪ್ರಮೋಟ್ ಮಾಡ್ಕೋಬೇಕು, ಇಲ್ಲಾಂದ್ರೆ ನಾವು ಸೀನ್‌ನಲ್ಲೇ ಇರಲ್ಲ.. ಅದುನ್ನಾ ನಾವೆಲ್ರೂ ಅರ್ಥಮಾಡ್ಕೋಬೇಕು’ ಅಂತಾ ಮೋಹ ಹೇಳಿತು. ‘ಲೋಭ, ಮೋಹ ಇಬ್ರೂ ಮಾತುನ್ನಾ ನಾನು ಒಪ್ಪೊಲ್ಲ.. ಲೀಡರ್ ಆಗ್ಬೇಕು ಅಂದ್ರೆ ಲೀಡರ್‌ಶಿಪ್ ಕ್ವಾಲಿಟಿ ಇರಬೇಕು. ಅಂತಹ ಕ್ವಾಲಿಟಿ ಯಾರಿಗಿದೆ ಅವರಿಗೆ ಲೀಡರ್‌ಶಿಪ್ ಕೊಡೋಣಾ, ಬರೀ ಮಾತಲ್ಲೇ ಯಾರೂ ಮನೆ ಕಟ್ಟಬೇಡಿ’ ಎಂದು ಆವಾಜು ಹಾಕಿತು ಮದ.
ನಿಧಾನವಾಗಿ ಐದೂ ಜನರ ಮಾತು ಆಲಿಸಿದ ಮತ್ಸರ, ‘ನೋಡ್ರಪಾ, ಎಲ್ಲರಲ್ಲೂ ಒಂದೊಂದು ಲೀಡರ್‌ಷಿಪ್ ಕ್ವಾಲಿಟಿ ಇದೆ. ಆದರೆ ಎಲ್ಲಾ ಲೀಡರ್‌ಷಿಪ್ ಕ್ವಾಲಿಟಿ ಎಲ್ಲರಲ್ಲೂ ಇಲ್ಲ ಅನ್ನೋ ಸತ್ಯಾನಾ ನಾವು ಅರ್ಥ ಮಾಡ್ಕೋಬೇಕು. ಪದೇ ಪದೇ ಭಿನ್ನಾಭಿಪ್ರಾಯ ವ್ಯಕ್ತ ಪಡಿಸದೇ ಒಮ್ಮತದಿಂದ ನಾಯಕನನ್ನು ಆಯ್ಕೆ ಮಾಡಬೇಕು. ಯಾರಿಗೆ ಎಷ್ಟು ಕ್ವಾಲಿಟಿ ಇದೇ ಅನ್ನೋದಕ್ಕಿಂತಲೂ ಈ ಹೊತ್ತಿನಲ್ಲಿ ಬೇಕಾಗಿರುವ ಕ್ವಾಲಿಟಿ ಯಾರಲ್ಲಿದೆ ಅವರನ್ನಾ ನಾವು ಲೀಡರ್ ಆಗಿ ಸ್ವೀಕಾರ ಮಾಡಬೇಕು’ ಎಂದು ಹೇಳಿತು. ಉಳಿದವರೆಲ್ಲರೂ ತಲೆದೂಗಿದರು.
ಅಲ್ಲಿಯವರೆಗೂ ಸುಮ್ಮನೆ ಕೂತಿದ್ದ ಕಾಮ, ನೋಡ್ರಪಾ.. ಇವತ್ತುಂದಿನಾ ಎಲ್ಲೆಲ್ಲೂ ನಂದೇ ಸುದ್ದಿ. ನಾನು ಯಾರನ್ನೂ ಬಿಟ್ಟಿಲ್ಲ.. ನನ್ನಿಂದಾಗಿಯೇ ನಿಮ್ಮ ಉಳಿದ ಐವರಿಗೆ ಬೆಲೆ ಬರೋದು.. ಸೋ ನಾನೇ ಲೀಡರ್ ಆಗ್ತೀನಿ’ ಅಂದಿತು. ‘ಅದೇನ್ ಲೀಡರ್‌ಶಿಪ್ ಕ್ವಾಲಿಟಿ ಇದೆ ಅಂತಾ ಸಭೆಗೆ ವಿವರಿಸಬೇಕು, ಎಲ್ಲರನ್ನೂ ಕನ್ವಿನ್ಸ್ ಮಾಡಬೇಕು’ ಎಂದು ಮದ ಕಾಮನಿಗೆ ಸಲಹೆ ಮಾಡಿತು. ಕಾಮ ಕೂಲಾಗಿ ಹೇಳಿತು. ‘ನೋಡಿ ಇವತ್ತುಂದಿನಾ ನಾನು ಮನಸ್ಸು ಮಾಡಿದ್ರೆ, ಕಾವಿ, ಖಾದಿ, ಖಾಕಿ ಸೇರಿದಂತೆ ಯಾರನ್ನೂ ಬಿಡೋದಿಲ್ಲ. ನನ್ನ ಸಹವಾಸ ಮಾಡಿದವರು ಇದುವರೆಗೆ ಯಾರೂ ಉಳಿದಿಲ್ಲ. ಒಂದಲ್ಲಾ ಒಂದಿನ ಗುಟ್ಟು ರಟ್ಟಾಗೇ ಆಗುತ್ತೆ.. ಎಂತೆಂಥೋರೆಲ್ಲರೂ ನನ್ನ ಸಹವಾಸ ಮಾಡಿ ಪಾತಾಳಕ್ಕೆ ಬಿದ್ದೋಗಿದ್ದಾರೆ ಅಂದ್ಮೇಲೆ ನಾನೇ ನಮ್ ಸಂಘಟನೆಗೆ ಮೊದಲ ಲೀಡರ್ ಆಗೋದ್ರಲ್ಲಿ ತಪ್ಪೇನಿದೆ? ಅಂದಿತು ಕಾಮ. ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳು ಮೇಜುಕುಟ್ಟಿ ಬೆಂಬಲಿಸಿದವು. -ಹೀಗೆ ಅರಿಷಡ್ವರ್ಗಗಳ ಸಂಘಟನೆಯ ಮೊದಲ ನಾಯಕನಾಗಿ ಕಾಮನ ಆಯ್ಕೆ ಸರ್ವಾನುಮತದಿಂದ ನಡೆಯಿತು!
-‘ಅಷ್ಟಾವಕಾ

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ