Light
Dark

ವಿ4 : ವಿತ್ತ ; ವಿಜ್ಞಾನ ; ವಿಶೇಷ ; ವಿಹಾರ

ವಿತ್ತ

ಪೊವೆಲ್ ಅಲ್ಲಿ ಸೀನಿದರೆ ಇಲ್ಲಿ ನೆಗಡಿ!

ಅಮೆರಿಕ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಮತ್ತೆ ಬಡ್ಡಿದರ ಹೆಚ್ಚಿಸುವ ಮುನ್ಸೂಚನೆ ನೀಡಿದ್ದಾರೆ. ಈ ಮುನ್ಸೂಚನೆಯನ್ನು ಹಣಕಾಸು ವಲಯ ಎಚ್ಚರಿಕೆಯೆಂದೇ ಪರಿಗಣಿಸಿದೆ. ಈಗಾಗಲೇ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಲು ಆಕ್ರಮಣಕಾರಿ ಅಭಿಯಾನವನ್ನು ನಡೆಸುತ್ತಿದೆ. ಜಾಗತಿಕ ಹಣಕಾಸು ನೀತಿ ನಿರೂಪಕರ ‘ಜಾಕ್ಸನ್ ಹೋಲ್’ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜೆರೋಮ್ ಪೊವೆಲ್ ‘ಹಣದುಬ್ಬರದ ವಿರುದ್ಧದ ನಮ್ಮ ಹೋರಾಟ ಕೊನೆಗೊಂಡಿಲ್ಲ, ಮತ್ತಷ್ಟು ಬಡ್ಡಿ ಏರಿಕೆ ಅನಿವಾರ್ಯ’ ಎಂದರು. ಅವರ ಭಾಷಣ ಕೇಳಿ ಅಮೆರಿಕದ ವಾಲ್‌ಸ್ಟ್ರೀಟ್ ಬೆಚ್ಚಿದೆ. ಷೇರುಪೇಟೆ ಒಂದೇ ದಿನ ಶೇ.೩ರಷ್ಟು ಕುಸಿದಿದೆ. ಪೊವೆಲ್ ಅವರ ಭಾಷಣದ ಪರಿಣಾಮ ಭಾರತದ ಷೇರುಪೇಟೆಯ ಮೇಲೂ ಆಗಲಿದೆ. ಸೋಮವಾರ ಸೂಚ್ಯಂಕಗಳು ಎಷ್ಟು ಕುಸಿಯಲಿವೆ, ರೂಪಾಯಿ ಎಷ್ಟು ಕುಸಿಯಲಿದೆ ಎಂಬುದರ ಲೆಕ್ಕಾಚಾರ ನಡೆದಿದೆ. ಭಾರತದಲ್ಲಿ ಹಣದುಬ್ಬರದ ಸಮಸ್ಯೆಯಷ್ಟೇ ಇಲ್ಲ, ರೂಪಾಯಿ ಮೌಲ್ಯ ಕುಸಿತ, ವ್ಯಾಪಾರ ಕೊರತೆ, ವಿತ್ತೀಯ ಕೊರತೆ ಹೆಚ್ಚಳದ ಸಮಸ್ಯೆಯೂ ಇದೆ. ಗರ್ನರ್ ಶಕ್ತಿಕಾಂತ ದಾಸ್ ಅವರು ಪೊವೆಲ್ ಅವರ ಮಾರ್ಗದಲ್ಲೇ ಸಾಗುವುದು ಅನಿವಾರ್ಯ!


ವಿಜ್ಞಾನ

ಜೇಮ್ಸ್ ವೆಬ್ ನ ಹೊಸ ಶೋಧನೆ!

ಇತ್ತೀಚೆಗಷ್ಟೇ ಕಾರ್ಯಾಚರಣೆ ಆರಂಭಿಸಿರುವ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ನಿರ್ಣಾಯಕ ಸಂಶೋಧನೆಯೊಂದನ್ನು ದಾಖಲಿಸಿದೆ. ಸೌರವ್ಯೆಹ ಗ್ರಹದ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಇರುವುದನ್ನು ಮೊದಲ ಬಾರಿಗೆ ಪತ್ತೆ ಹಚ್ಚಿ ಅಚ್ಚರಿ ಮೂಡಿಸಿದೆ. ‘ಈ ಸಂಶೋಧನೆ ಮಹತ್ವವಾದದ್ದು, ನಿರ್ವಿವಾದವಾದದ್ದು, ಇಂಗಾಲದ ಡೈಆಕ್ಸೈಡ್ ಖಂಡಿತವಾಗಿಯೂ ಅಲ್ಲಿ ಇದೆ’ ಎಂದು ಗ್ರಹಗಳ ವಿಜ್ಞಾನಿ ಮತ್ತು ವಾಷಿಂಗ್ಟನ್ ಡಿಸಿಯಲ್ಲಿರುವ ಕಾರ್ನೆಗೀ ಇನ್ಸ್ಟಿಟ್ಯೂಷನ್ ಫಾರ್ ಸೈನ್ಸ್‌ನ ಪೀಟರ್ ಗಾವೊ ಹೇಳಿದ್ದಾರೆ. ಹಿಂದಿನ ಅವಲೋಕನಗಳಲ್ಲಿ ಇಂಗಾಲದ ಡೈಆಕ್ಸೈಡ್‌ನ ಸುಳಿವುಗಳಿವೆ, ಆದರೆ ಅದನ್ನು ನಿರ್ಣಾಯಕವಾಗಿ ದೃಢೀಕರಿಸಲಾಗಿರಲಿಲ್ಲ ಎಂದೂ ಹೇಳಿದ್ದಾರೆ. ಹೊಸ ಸಂಶೋಧನೆಯನ್ನು ಆಗಸ್ಟ್ ೨೪ ರಂದು ಚ್ಟಗಿಜಿ.ಟ್ಟಜ ಗೆ ಸಲ್ಲಿಸಲಾಗಿದೆ. ಹೊಸ ದೂರದರ್ಶಕದಿಂದ ಸಂಶೋಧಿಸಲಾದ ಮೊದಲ ವಿವರವಾದ ಈ ವೈಜ್ಞಾನಿಕ ಫಲಿತಾಂಶ ಅಂಗೀಕರಿಸಲಾಗಿದೆ. ಭೂಮಿಯಂತೆಯೇ ಇರುವ ಚಿಕ್ಕದಾದ, ಬಂಡೆ ಸ್ವರೂಪದ ಈ ಗ್ರಹದ ವಾತಾವರಣದಲ್ಲಿ ಹಸಿರುಮನೆ ಅನಿಲವನ್ನು ಕಂಡುಹಿಡಿಯುವ ಮಾರ್ಗವೀಗ ವಿಸ್ತಾರಗೊಂಡಿದೆ.


ವಿಶೇಷ

ಚೀನಾ ರೈಫಲ್ ನುಸುಳಿದ್ದು ಹೇಗೆ?

ಭಯೋತ್ಪಾದನೆ ಪೀಡಿತ ಕಾಶ್ಮೀರದಲ್ಲಿ ಸೇನಾ ಪಡೆಗಳು ಹೊಡೆದುರುಳಿಸುವ ಭಯೋತ್ಪಾದಕರ ಬಳಿ ಎಕೆ ೪೭ ರೈಫಲ್ ಗಳು ಸಿಗುತ್ತಿವೆ. ಪಾಕ್ ಮೂಲದ ಭಯೋತ್ಪಾದಕರಿಗೆ ಪಾಕಿಸ್ತಾನದ ಗೂಢಾಚಾರ ಸಂಸ್ಥೆ ಐಎಸ್‌ಐ ಎಕೆ ೪೭ ರೈಫಲ್‌ಗಳನ್ನು ಒದಗಿಸುತ್ತದೆ. ಅಚ್ಚರಿಯ ಸಂಗತಿ ಎಂದರೆ ಇತ್ತೀಚೆಗೆ ಭದ್ರತಾ ಪಡೆಗಳು ಉರಿಯ ನಿಯಂತ್ರಣ ರೇಖೆಯ ಉದ್ದಕ್ಕೂ ಭಯೋತ್ಪಾದಕರ ಒಳನುಸುಳುವಿಕೆಯನ್ನು ಹಿಮ್ಮೆಟ್ಟಿಸಲು ನಡೆಸಿದ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಮೂವರು ಉಗ್ರರಿಂದ ಚೀನಾ ನಿರ್ಮಿತ ಎಂ-೧೬ ಅಸಾಲ್ಟ್ ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಚೀನಾದ ಎಂ-೧೬ ರೈಫಲ್ ಭಯೋತ್ಪಾದಕರ ಬಳಿ ಪತ್ತೆಯಾಗಿದೆ. ‘ಇದು ಅಸಾಮಾನ್ಯ ಸಂಗತಿ’ ಎಂದು ಸೇನೆ ಬಣ್ಣಿಸಿದೆ. ಉರಿಯ ಕಮಲ್‌ಕೋಟೆ ಪ್ರದೇಶದಲ್ಲಿ ಭಾರತದೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಉಗ್ರರನ್ನು ಭದ್ರತಾ ಪಡೆಗಳು ಗುಂಡಿಟ್ಟು ಕೊಂದಿದ್ದವು. ‘ಸಾಮಾನ್ಯವಾಗಿ, ನಾವು ಎಕೆ ಸರಣಿಯ ರೈಫಲ್ ನೋಡಿದ್ದೇವೆ. ಕೆಲವೊಮ್ಮೆ, ಎಂ- ೪ ರೈಫಲ್‌ಗಳನ್ನು ವಶಪಡಿಸಿಕೊಂಡಿದ್ದೇವೆ. ಆದರೆ, ಚೀನಾ ನಿರ್ಮಿತ ಎಂ-೧೬ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ’ ಎಂದು ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಅಜಯ್ ಚಂದಪುರಿ ಹೇಳಿದ್ದಾರೆ.


ವಿಹಾರ

ರೌದ್ರಾವತಾರಿ ಜಲಪಾತ!

ಕೊಡಗಿನಲ್ಲಿ ಮಳೆಗಾಲ ಬಂತೆಂದರೆ ಜಲಪಾತಗಳು ಮೈಕೈ ತುಂಬಿಕೊಂಡ ಬೆಡಗಿಯರಂತೆ ವಯ್ಯಾರದಿಂದ ಬಳುಕುತ್ತವೆ. ಕೊಡಗಿನಲ್ಲಿ ಹಲವಾರು ರುದ್ರರಮಣೀಯ ಜಲಪಾತಗಳಿದ್ದು, ಇವುಗಳ ಪೈಕಿ ಕೋಟೆ ಅಬ್ಬಿ ಜಲಪಾತ ಕೂಡ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಮಡಿಕೇರಿಯಿಂದ ಸುಮಾರು ೨೦ ಕಿ.ಮೀ. ದೂರದಲ್ಲಿರುವ ಕೋಟೆ ಅಬ್ಬಿ ಜಲಪಾತ ನಿಜಕ್ಕೂ ಒಂದು ಮೋಹಕ ಜಲಪಾತ. ಈ ಜಲಪಾತವನ್ನು ನೋಡಲು ತೆರಳುವವರಿಗೆ ಮಡಿಕೇರಿಯಿಂದ ಜಲಪಾತದವರೆಗೆ ಯಾವುದೇ ಬಸ್ ಸೌಕರ್ಯವಿಲ್ಲ. ಹಾಗಾಗಿ ಮಡಿಕೇರಿಯಿಂದ ಬಾಡಿಗೆಗೆ ಜೀಪು ಅಥವಾ ಸ್ವಂತ ವಾಹನಗಳಲ್ಲಿ ತೆರಳಬಹುದು. ಅಂಕುಡೊಂಕಾದ ರಸ್ತೆಯಲ್ಲಿ ಕಾಡು, ಕಾಫಿ, ಏಲಕ್ಕಿ ತೋಟದ ನಡುವೆ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿದ್ದರೆ ದಾರಿ ಸಾಗುವುದೇ ಗೊತ್ತಾಗುವುದಿಲ್ಲ.

ಗುಡ್ಡದಲ್ಲಿ ತೋಟದ ನಡುವೆ ರಭಸದಿಂದ ಭೋರ್ಗರೆಯುತ್ತಾ ಹರಿಯುವ ನದಿ ರಸ್ತೆಯಿಂದಲೇ ಕಾಣಸಿಗುತ್ತದೆ. ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಗಳಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲಿಯೂ ಮಳೆಗಾಲದಲ್ಲಿ ಇದರ ರೌದ್ರಾವತಾರವನ್ನು ಹತ್ತಿರದಿಂದ ನೋಡಿದರೆ ಆ ಸುಂದರ ಕ್ಷಣಗಳನ್ನು ಖಂಡಿತ ಮರೆಯಲಾರರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ