Mysore
13
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಯುದ್ಧ ನಿಲ್ಲದೆ ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವ ಇಲ್ಲ

‘ನ್ಯಾಟೋ’ ಸದಸ್ಯತ್ವ ಪಡೆಯುವಲ್ಲಿ ಉಕ್ರೇನ್‌ನ ಅಧ್ಯಕ್ಷ ವ್ಲಾಡಿಮಿರ್ ಝೆಲನ್‌ಸ್ಕಿ ಮತ್ತೆ ವಿಫಲರಾಗಿದ್ದಾರೆ. ಲಿಥುವೇನಿಯಾದಲ್ಲಿ ಕಳೆದ ವಾರ ಎರಡು ದಿನಗಳ ಕಾಲ ನಡೆದ ನ್ಯಾಟೋ (ಅಮೆರಿಕ, ಯುರೋಪ್ ಮಿಲಿಟರಿ ಮೈತ್ರಿ ಕೂಟ) ಸದಸ್ಯ ದೇಶಗಳ ಶೃಂಗಸಭೆಗೆ ಝೆಲನ್‌ಸ್ಕಿ ಖುದ್ದು ಹಾಜರಾಗಿ ಸದಸ್ಯತ್ವ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದರು. ನ್ಯಾಟೋ ದೇಶಗಳ ನಾಯಕರನ್ನು ಭೇಟಿ ಮಾಡಿ ಸದಸ್ಯತ್ವ ಕೊಡಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದರು. ಶೃಂಗಸಭೆ ಉಕ್ರೇನ್‌ನ ಅರ್ಜಿಯನ್ನು ಪರಿಶೀಲಿಸಿ ಸುದೀರ್ಘವಾಗಿ ಚರ್ಚಿಸಿತಾದರೂ ಸದಸ್ಯತ್ವ ಕೊಡುವ ವಿಚಾರದಲ್ಲಿ ಒಮ್ಮತ ಮೂಡಿಬರಲಿಲ್ಲ. ಒಮ್ಮತ ಮೂಡುವವರೆಗೆ ಮತ್ತು ಯುದ್ಧ ನಿಲ್ಲುವವರೆಗೆ ಸದಸ್ಯತ್ವ ಕೊಡದಿರಲು ನ್ಯಾಟೋ ನಿರ್ಧರಿಸಿದೆ. ಈ ನಿರ್ಧಾರ ನಿಜವಾಗಿಯೂ ಝೆಲನ್‌ಸ್ಕಿ ಅವರಿಗೆ ಆಘಾತ ಉಂಟುಮಾಡಿದೆ.

ಸ್ವೀಡನ್‌ಗೆ ಸದಸ್ಯತ್ವ ಕೊಡುವ ವಿಚಾರದಲ್ಲಿ ಶೃಂಗಸಭೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ. ಸ್ವೀಡನ್‌ಗೆ ಸದಸ್ಯತ್ವ ಕೊಡಬಾರದೆಂದು ಹಠ ಹಿಡಿದಿದ್ದ ಟರ್ಕಿ ಕೊನೆಗೂ ಕೆಲವು ಷರತ್ತುಗಳನ್ನು ಹಾಕಿ ಸದಸ್ಯತ್ವ ಬೆಂಬಲಿಸಲು ಒಪ್ಪಿದೆ. ನ್ಯಾಟೋ ನಿಯಮದ ಪ್ರಕಾರ ಯಾವೊಂದು ನ್ಯಾಟೋ ದೇಶ ಆಕ್ಷೇಪ ಮಾಡಿದರೂ ಸದಸ್ಯತ್ವ ಕೊಡುವ ಹಾಗಿಲ್ಲ. ಮಿಕ್ಕೆಲ್ಲ ದೇಶಗಳು ಒಪ್ಪಿದರೂ ಟರ್ಕಿ ವಿರೋಧ ಮಾಡುತ್ತಿದ್ದರಿಂದ ಸ್ವೀಡನ್‌ಗೆ ಸದಸ್ಯತ್ವ ನೀಡಲು ಸಾಧ್ಯವಾಗಿರಲಿಲ್ಲ. ತಮ್ಮ ದೇಶದ ಪ್ರತ್ಯೇಕತಾವಾದಿ ಖರ್ದರಿಗೆ ಸ್ವೀಡನ್ ನೆಲೆ ನೀಡಿದೆ ಎಂಬ ಕಾರಣವೊಡ್ಡಿ ಟರ್ಕಿಯು ಸ್ವೀಡನ್‌ಗೆ ಸದಸ್ಯತ್ವ ನೀಡುವುದನ್ನು ವಿರೋಧಿಸಿತ್ತು. ಇದೀಗ ಟರ್ಕಿ ಒಪ್ಪಿದ್ದರಿಂದ ಸಮಸ್ಯೆ ಬಗೆಹರಿದಿದೆ.

ಉಕ್ರೇನ್ ದೇಶಕ್ಕೆ ಸದಸ್ಯತ್ವ ನೀಡುವ ವಿಚಾರದಲ್ಲಿ ನ್ಯಾಟೋ ಸದಸ್ಯ ದೇಶಗಳು ಆಕ್ಷೇಪ ಎತ್ತಿವೆ. ಮುಖ್ಯವಾಗಿ ಪ್ರಜಾತಂತ್ರಕ್ಕೆ ಬದ್ಧವಾಗಿರುವ ಬಗ್ಗೆ, ಭ್ರಷ್ಟಾಚಾರ ನಿಗ್ರಹ ವಿಚಾರದಲ್ಲಿ ಸ್ಪಷ್ಟನೆ ಇಲ್ಲ, ಜೊತೆಗೆ ಉಕ್ರೇನ್ ಯುದ್ಧದಲ್ಲಿದೆ ಎಂಬ ಕಾರಣ ನೀಡಿ ಇನ್ನೂ ಸದಸ್ಯತ್ವ ಕೊಡಬಾರದೆಂಬ ಅಭಿಪ್ರಾಯವನ್ನು ವ್ಯಕ್ತಮಾಡಿದವು. ಹೀಗಾಗಿ ಉಕ್ರೇನ್‌ಗೆ ಸದಸ್ಯತ್ವ ನೀಡುವ ವಿಚಾರವನ್ನು ಮುಂದೂಡಲಾಗಿದೆ. ಯುದ್ಧ ನಿಲುಗಡೆಯಾದ ನಂತರ ಸದಸ್ಯತ್ವ ನೀಡಬಹುದೆಂಬುದು ಆಕ್ಷೇಪ ಎತ್ತಿದ ದೇಶಗಳ ವಾದ. ಅಂದರೆ ಮೊದಲು ಯುದ್ಧ ನಿಲ್ಲಬೇಕು. ನ್ಯಾಟೋ ಸದ್ಯಸ್ಯತ್ವ ಪಡೆಯುವ ಅಂತಿಮ ಹಂತದಲ್ಲಿದೆ ಉಕ್ರೇನ್ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಹೇಳಿರುವುದಷ್ಟೆ ಉಕ್ರೇನ್‌ಗೆ ಸಮಾಧಾನದ ವಿಷಯ.

ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಬೇಕಾದರೆ ಎರಡೂ ದೇಶಗಳ ನಡುವೆ ಒಪ್ಪಂದವಾಗಬೇಕು. ಕದನವಿರಾಮ ಘೋಷಣೆಯಾಗಬೇಕು. ದುರಂತ ಎಂದರೆ ಈ ಸಾಧ್ಯತೆಗಳು ಸದ್ಯಕ್ಕೆ ಕಾಣದಿರುವುದು. ಟರ್ಕಿ ಮೊದಲು ಸಂಧಾನಕ್ಕೆ ಇಳಿದಿತ್ತು. ಆದರೆ ಅದು ಸಫಲವಾಗಲಿಲ್ಲ. ನಂತರ ಭಾರತದ ಪ್ರಯತ್ನವೂ ಯಶಸ್ವಿಯಾಗಲಿಲ್ಲ. ಈ ಮಧ್ಯೆ ಚೀನಾ ಯುದ್ಧ ವಿರಾಮ ಘೋಷಿಸುವಂತೆ ಮಾಡಲು ಹಲವು ರೀತಿಯ ಸೂತ್ರಗಳನ್ನು ಮುಂದಿಟ್ಟಿತ್ತು. ಆದರೆ ಅವುಗಳಿಗೆ ಎರಡೂ ದೇಶಗಳು ಸಮ್ಮತಿ ಸೂಚಿಸಲಿಲ್ಲ. ಮುಖ್ಯವಾಗಿ ಉಕ್ರೇನ್ ಕೇಳುತ್ತಿರುವುದು ಆಕ್ರಮಿತ ಪ್ರದೇಶಗಳನ್ನು ರಷ್ಯಾ ತೆರವು ಮಾಡಬೇಕೆಂಬುದು. ಆದರೆ ರಷ್ಯಾ ಅದಕ್ಕೆ ಸಿದ್ಧವಿಲ್ಲ. ಕ್ರೈಮಿಯಾ, ಲೆಹನಸ್ಕ್, ಜಪೋರಿಜಿಯಾ, ಖೆರ‍್ಸನ್, ಮೈಕಲವ್‌ನ ಕೆಲವು ಭಾಗಗಳನ್ನು ರಷ್ಯಾ ಅತಿಕ್ರಮಿಸಿಕೊಂಡಿದೆ. ಎಲ್ಲೆಲ್ಲಿ ರಷ್ಯಾ ಜನರು ಮತ್ತು ರಷ್ಯಾ ಬೆಂಬಲಿತ ಜನರು ಇದ್ದಾರೋ ಆ ಪ್ರದೇಶಗಳೆಲ್ಲಾ ತನಗೆ ಸೇರಬೇಕು, ಅವುಗಳನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳುತ್ತ ಬಂದಿದ್ದಾರೆ. ಈಗಾಗಲೇ ಅತಿಕ್ರಮಿಸಿಕೊಂಡಿರುವ ಪ್ರದೇಶಗಳನ್ನು ರಷ್ಯಾಕ್ಕೆ ಬಿಟ್ಟುಕೊಡಬೇಕು ಮತ್ತು ಎಂದೂ ನ್ಯಾಟೋ ಸದಸ್ಯತ್ವ ಕೇಳಬಾರದು ಎಂಬ ಷರತ್ತನ್ನು ರಷ್ಯಾ ಹಾಕಿದೆ. ಈ ಷರತ್ತುಗಳಿಗೆ ಒಪ್ಪಿದರೆ ಕದನ ವಿರಾಮಕ್ಕೆ ತಾನು ಸಿದ್ಧ ಎಂದು ರಷ್ಯಾ ಹೇಳಿದೆ. ಆದರೆ ತನ್ನ ಒಂದಿಂಚು ಪ್ರದೇಶವನ್ನೂ ಬಿಟ್ಟುಕೊಡುವುದಿಲ್ಲ ಎಂಬ ನಿಲುವನ್ನು ಉಕ್ರೇನ್ ತೆಗೆದುಕೊಂಡಿದೆ. ಹೀಗಾಗಿ ಸಂಧಾನ ಅಸಾಧ್ಯವಾದಂಥ ಸ್ಥಿತಿ ನಿರ್ಮಾಣವಾಗಿದೆ.

ಯುದ್ಧ ನಿಲ್ಲದ ಈ ಸಂದರ್ಭದಲ್ಲಿ ನ್ಯಾಟೋ ಸದಸ್ಯತ್ವ ನೀಡಿದರೆ ನ್ಯಾಟೋ ಸೇನೆ ಉಕ್ರೇನ್ ಗಡಿಗೆ ಬಂದು ರಷ್ಯಾ ವಿರುದ್ಧ ಯುದ್ಧ ಮಾಡಬೇಕಾಗುತ್ತದೆ. ಅದರ ಪರಿಣಾಮ ಘೋರವಾಗಿರಲೂ ಬಹುದು. ಹೀಗಾಗಿ ಯುದ್ಧ ನಿಲುಗಡೆಯಾಗದೆ ಸದಸ್ಯತ್ವ ಇಲ್ಲ ಎಂದು ಸ್ಪಷ್ಟವಾಗಿ ನ್ಯಾಟೋ ದೇಶಗಳು ಹೇಳಿವೆ. ಹಾಗಾದರೆ ಯುದ್ಧ ನಿಲ್ಲುವುದಾದರೂ ಹೇಗೆ?

ನ್ಯಾಟೋ ಸಂಘಟನೆಯ ನಿಲುವು ಝೆಲನ್‌ಸ್ಕಿ ಅವರಿಗೆ ಬೇಸರ ತಂದಿದೆ. ತಮ್ಮ ಅಸಮಾಧಾನವನ್ನೂ ಅವರು ಹೊರಹಾಕಿದ್ದಾರೆ. ಯುದ್ಧ ಮುಂದು ವರಿಸಬೇಕಾದ ಅನಿವಾರ್ಯ ಸ್ಥಿತಿ ಝೆಲನ್‌ಸ್ಕಿಗೆ ಈಗ ಬಂದಿದೆ. ಅಮೆರಿಕ ಸೇರಿದಂತೆ ಹಲವು ನ್ಯಾಟೋ ದೇಶಗಳು ಮತ್ತಷ್ಟು ಯುದ್ಧಾಸ್ತ್ರಗಳನ್ನು ಕೊಡುವ ಭರವಸೆಯನ್ನು ಅವರಿಗೆ ನೀಡಿವೆ. ಜಿ-7 ಬಲಿಷ್ಠ ದೇಶಗಳು ಉಕ್ರೇನ್‌ಗೆ ಶಾಶ್ವತವಾಗಿ ಭದ್ರತೆ ನೀಡುವಂಥ ಕಾರ್ಯಕ್ರಮ ರೂಪಿಸುವುದಾಗಿ ಭರವಸೆ ನೀಡಿವೆ. ಈ ದೇಶಗಳು ಹೇಳುತ್ತಿರುವುದು ಇಷ್ಟೆ: ಅತಿಕ್ರಮಿತ ಪ್ರದೇಶಗಳನ್ನು ವಾಪಸ್ ಪಡೆಯುವುದಕ್ಕಾಗಿ ಮಾತ್ರ ತಾವು ಕೊಡುವ ಯುದ್ಧಾಸ್ತ್ರಗಳನ್ನು ಬಳಸಬೇಕು. ರಷ್ಯಾ ದೇಶದ ಮೇಲೆ ಈ ಅಸ್ತ್ರಗಳನ್ನು ಬಳಸಬಾರದು ಎಂಬ ಷರತ್ತನ್ನು ಹಾಕಿವೆ. ಝೆಲನ್‌ಸ್ಕಿ ಬಗೆಹರಿಯಲಾರದಂಥ ಇಕ್ಕಟ್ಟಿಗೆ ಈಗ ಸಿಕ್ಕಿಕೊಂಡಿದ್ದಾರೆ. ಝೆಲನ್‌ಸ್ಕಿ ರಷ್ಯಾದ ಜೊತೆ ರಾಜಿ ಮಾಡಿಕೊಳ್ಳಲೇಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಈ ಕಗ್ಗಂಟನ್ನು ಬಿಡಿಸುವಂಥ ಉಪಾಯ ಯಾರ ಬಳಿಯೂ ಇಲ್ಲ.

ಹಾಗಾದರೆ ಮುಂದೇನಾಗುತ್ತದೆ? ಯುದ್ಧ ಮುಂದುವರಿಯುತ್ತದೆ. ಎರಡು ಮೂರು ವರ್ಷ ಯುದ್ಧ ಮಾಡುತ್ತ ಕೊನೆಗೆ ಎರಡೂ ದೇಶಗಳು ತಾವೇ ತಾವಾಗಿ ಯುದ್ಧ ನಿಲ್ಲಿಸಬಹುದು. ಯುದ್ಧದ ಆರ್ಥಿಕ ಪರಿಣಾಮಗಳಿಂದ ರಷ್ಯಾ ಹೀಗೆ ಮಾಡಬಹುದು. ಪರಮಾಣು ಅಸ್ತ್ರ ಬಳಸುವ ತಪ್ಪು ಹೆಜ್ಜೆಯನ್ನು ರಷ್ಯಾ ಇಡುವ ಸಾಧ್ಯತೆ ಇಲ್ಲ. ರಷ್ಯಾದಲ್ಲಿ ನಾಯಕತ್ವ ಬದಲಾಗಬಹುದಾದ ಸಾಧ್ಯತೆಯೂ ಇಲ್ಲದಿರುವುದರಿಂದ ಪುಟಿನ್ ಅಧಿಕಾರದಲ್ಲಿ ಉಳಿಯುತ್ತಾರೆ. ಬೇರೆ ದೇಶಗಳಿಂದ ಯುದ್ಧಾಸ್ತ್ರ ಪಡೆದು ಎಷ್ಟು ಕಾಲ ಉಕ್ರೇನ್ ಯುದ್ಧ ಮುಂದುವರಿಸಲು ಸಾಧ್ಯ? ದಿನೇ ದಿನೇ ರಷ್ಯಾ ಸೇನೆ ಉಕ್ರೇನನ್ನು ನಾಶಮಾಡುತ್ತಲೇ ಇದೆ. ಅದು ಕೂಡ ಶಾಶ್ವತವಾಗಿ ಯುದ್ಧ ಮಾಡಿಕೊಂಡಿರಲು ಸಾಧ್ಯವಿಲ್ಲ. ಆಫ್ಘಾನಿಸ್ತಾನದಲ್ಲಿ ಆದಂತೆ ಒಂದು ದಿನ ಉಕ್ರೇನ್ ಗಡಿಯಿಂದ ಸೇನೆಯನ್ನು ರಷ್ಯಾ ಹಿಂತೆಗೆದುಕೊಳ್ಳಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಈ ಯುದ್ಧ ಜಗತ್ತಿನ ಮೇಲೆ ಉಂಟುಮಾಡಿರ ಬಹುದಾದ ಘೋರ ಪರಿಣಾಮ ಆರ್ಥಿಕವಾದುದು. ರಷ್ಯಾದಿಂದ ಪೂರೈಕೆ ಯಾಗುತ್ತಿದ್ದ ಅನಿಲ ಮತ್ತು ತೈಲ ನಿಂತ ಮೇಲೆ ಇಡೀ ಯೂರೋಪ್ ಇಂಧನ ಸಮಸ್ಯೆಯಿಂದ ಬಳಲಿದೆ. ಹೆಚ್ಚು ಬೆಲೆಗೆ ಅನಿಲ ಮತ್ತು ತೈಲವನ್ನು ಕೊಂಡು ದೇಶಗಳು ಆರ್ಥಿಕವಾಗಿ ಬಡವಾಗಿವೆ. ಇಡೀ ಯುರೋಪ್ ಹಣದುಬ್ಬರ ದಿಂದ ನರಳುತ್ತಿದೆ. ಆಫ್ರಿಕಾದ ದೇಶಗಳಿಗೆ ಆಹಾರ ಧಾನ್ಯಗಳನ್ನು ಉಕ್ರೇನ್ ರಫ್ತು ಮಾಡುತ್ತಿತ್ತು. ಅದಕ್ಕೂ ಈಗ ಅಡಚಣೆಯಾಗಿದೆ. ಮುಂದೆ ಸ್ಥಳೀಯವಾಗಿ ಸಂಘರ್ಷಗಳು ತಲೆದೋರಿ ಎಲ್ಲ ಕಡೆ ಅಶಾಂತಿಯ ವಾತಾವರಣ ನಿರ್ಮಾಣ ವಾಗಬಹುದು. ಆರ್ಥಿಕ ನಿರ್ಬಂಧಗಳಿಂದಾಗಿ ಈಗಾಗಲೇ ರಷ್ಯಾ ಒಂಟಿಯಾ ಗಿದೆ. ಕ್ರಮೇಣ ರಷ್ಯಾದಲ್ಲಿಯೂ ಸಂಘರ್ಷದ ವಾತಾವರಣ ನಿರ್ಮಾಣ ವಾಗಬಹುದು. ಅದರ ಪರಿಣಾಮವನ್ನು ಈಗಲೇ ಊಹಿಸುವುದು ಕಷ್ಟ.

ಈ ಮಧ್ಯೆ ಮುಂದಿನ ತಿಂಗಳು ದಕ್ಷಿಣ ಆಫ್ರಿಕಾದ ಜೋಹನ್ಸ್ ಬರ್ಗ್‌ನಲ್ಲಿ ನಡೆಯಲಿರುವ ‘ಬ್ರಿಕ್ಸ್’ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ದೇಶಗಳ ಸಂಘಟನೆ) ಶೃಂಗ ಸಭೆಗೆ ರಷ್ಯಾದ ಅಧ್ಯಕ್ಷ ಪುಟಿನ್ ಹಾಜರಾದರೆ ಅವರನ್ನು ಅಲ್ಲಿ ಬಂಧಿಸಲಾಗುವುದೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಈಗ ವಿವಾದ ಎಬ್ಬಿಸಿದೆ. ಯುದ್ಧ ಸಿಡಿದ ಸಮಯದಲ್ಲಿ ಉಕ್ರೇನ್‌ನ ನೂರಾರು ಮಕ್ಕಳನ್ನು ರಷ್ಯಾ ಸೇನೆ ಅಪಹರಿಸಿ ಬೇರೆ ಕಡೆ ಸಾಗಿಸಿದ ಯುದ್ಧಾಪರಾಧ ಆಪಾದನೆಯೊಂದು ರಷ್ಯಾದ ಅಧ್ಯಕ್ಷ ಪುಟಿನ್ ಅವರ ಮೇಲೆ ಬಂದಿದೆ. ಈ ಸಂಬಂಧವಾಗಿ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಪುಟಿನ್ ಅವರಿಗೆ ಬಂಧನ ವಾರೆಂಟ್ ಕೊಟ್ಟಿದೆ. ಅಂತಾರಾಷ್ಟ್ರೀಯ ಅಪರಾಧಗಳ ತನಿಖೆಗೆ ಸಹಕರಿಸುವ ಒಪ್ಪಂದವೊಂದಕ್ಕೆ ದಕ್ಷಿಣ ಆಫ್ರಿಕಾ ಸೇರಿದಂತೆ ಎಲ್ಲ ದೇಶಗಳೂ ಸಹಿ ಮಾಡಿದ್ದು, ಇದೀಗ ಅದನ್ನು ಪಾಲಿಸಬೇಕಾದ ಅನಿವಾರ್ಯತೆ ದಕ್ಷಿಣ ಆಫ್ರಿಕಾಕ್ಕೆ ಬಂದಿದೆ. ಒಪ್ಪಂದವನ್ನು ಉಲ್ಲಂಘಿಸುವಂತೆಯೂ ಇಲ್ಲ, ಪುಟಿನ್ ಅವರನ್ನು ಬಂಧಿಸುವಂತೂ ಇಲ್ಲ. ಈ ಬಿಕ್ಕಟ್ಟಿನಿಂದ ಪಾರಾಗಲು ಬ್ರಿಕ್ಸ್ ಶೃಂಗಸಭೆಗೆ ಬರದಿರುವಂತೆ ದಕ್ಷಿಣ ಆಫ್ರಿಕಾ ಪುಟಿನ್ ಅವರಿಗೆ ಮನವಿ ಮಾಡಿಕೊಂಡಿದೆ. ಆದರೆ ರಷ್ಯಾ ಈ ಮನವಿಯನ್ನು ತಿರಸ್ಕರಿಸಿದೆ. ಹೀಗಾಗಿ ಬಿಕ್ಕಟ್ಟು ತಲೆದೋರಿದ್ದು ಶೃಂಗಸಭೆ ಅನಿವಾರ್ಯವಾಗಿ ಡಿಜಟಲ್ ಮಾಧ್ಯಮ ದಲ್ಲಿ ನಡೆಯುವ ಸಾಧ್ಯತೆ ಇದೆ. ತಮ್ಮ ದೇಶದಲ್ಲಿ ನಡೆಯಲಿ ಎಂದು ಚೀನಾ ನಾಯಕರು ಹೇಳಿದರೆ ಬಿಕ್ಕಟ್ಟು ಬೇರೆ ಸ್ವರೂಪ ಪಡೆಯಬಹುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!