‘ಮಹಾರಾಷ್ಟ್ರದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ 70 ಸಾವಿರ ಕೋಟಿ ರೂಪಾಯಿಗಳ ಹಗರಣದಲ್ಲಿ ಸಿಲುಕಿದೆ’ ಎಂಬುದಾಗಿ ಪ್ರಧಾನಮಂತ್ರಿ ಮೋದಿಯವರು ಮಧ್ಯಪ್ರದೇಶದಲ್ಲಿ ಚುನಾವಣಾ ಭಾಷಣ ಮಾಡುತ್ತಾರೆ. ವಿರೋಧ ಪಕ್ಷಗಳ ಪ್ರತಿಯೊಬ್ಬ ಭ್ರಷ್ಟ ಕಳಂಕಿತ ನಾಯಕನನ್ನೂ ಮಟ್ಟಹಾಕುವುದಾಗಿ ಗರ್ಜಿಸುತ್ತಾರೆ.
ಆನಂತರ ನಾಲ್ಕೇ ನಾಲ್ಕು ದಿನಗಳು. ಜುಲೈ 2ರಂದು ಈ ಆಪಾದನೆಯ ಮುಖ್ಯ ಆರೋಪಿ ಅಜಿತ್ ಪವಾರ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರದ ಉಪಮುಖ್ಯಮಂತ್ರಿ ಹುದ್ದೆಯನ್ನೂ, ಅವರೊಂದಿಗೆ ಬಂದಿರುವ ಇತರೆ ಶಾಸಕರಿಗೆ ಮಂತ್ರಿ ಸ್ಥಾನಗಳನ್ನೂ ನೀಡಲಾಗಿದೆ. ಈ ಶಾಸಕರ ಮೇಲೆಯೂ ಭ್ರಷ್ಚಾಚಾರದ ಗಂಭೀರ ಆರೋಪಗಳಿವೆ ಮತ್ತು ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ಏಜೆನ್ಸಿಗಳನ್ನು ಇವರ ಮೇಲೆ ಛೂ ಬಿಟ್ಟದ್ದು ಇದೇ ‘ಮೋಶಾ’ ಜೋಡಿಯ ಕೇಂದ್ರ ಸರ್ಕಾರ.
ಅಜಿತ್ ಜೊತೆ ಬಿಜೆಪಿ ಸಂಗ ಬೆಳೆಸಿರುವ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಪ್ರಫುಲ್ ಪಟೇಲ್ ಆಸ್ತಿಪಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಕಳೆದ ವರ್ಷವಷ್ಟೇ ಮುಟ್ಟುಗೋಲು ಹಾಕಿಕೊಂಡಿತ್ತು. ತಾವು ಈ ಹಿಂದೆ ಮಹಾರಾಷ್ಟ್ರದ ಲೋಕೋಪಯೋಗಿ ಸಚಿವರಾಗಿದ್ದಾಗ ಸಾವಿರ ಕೋಟಿ ರೂಪಾಯಿಗಳ ಹಗರಣಕ್ಕಾಗಿ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದು ಹೊರಬಂದಿರುವವರು ಇದೇ ಪಕ್ಷದ ಮತ್ತೊಬ್ಬ ತಲೆಯಾಳು ಛಗನ್ ಭುಜಬಲ್. ಇಂತಹುದೇ ಮತ್ತೊಬ್ಬ ನಾಯಕ ಹಸನ್ ಮುಶ್ರಿಫ್. ಜಾರಿ ನಿರ್ದೇಶನಾಲಯ ಈತನ ಬೆನ್ನು ಬಿದ್ದಿತ್ತು. ಪ್ರಫುಲ್ ಪಟೇಲ್‌ಗೆ ಕೇಂದ್ರ ಮಂತ್ರಿ ಸ್ಥಾನದ ಬಹುಮಾನದ ಮಾತಿದೆ. ಭುಜಬಲ್ ಮತ್ತು ಮುಶ್ರಿಫ್‌ಗೆ ಈಗಾಗಲೇ ಮಂತ್ರಿ ಹುದ್ದೆಗಳು ದಕ್ಕಿವೆ.
ಮತ್ತೊಂದು ವಿಪರೀತ ವಿಡಂಬನೆಯನ್ನು ಇಲ್ಲಿ ಗಮನಿಸಲೇಬೇಕಿದೆ. ಅದೆಂದರೆ 2019ರಲ್ಲಿ ಅಜಿತ್ ಪವಾರ್ ಅವರನ್ನು ಇದೇ ರೀತಿ ರಾತ್ರೋರಾತ್ರಿ ಅಪಹರಿಸಿ ಬೆಳಗಿನ ಜಾವ ಉಪಮುಖ್ಯಮಂತ್ರಿಯ ಪ್ರಮಾಣವಚನ ಕೊಡಿಸಿತ್ತು ಬಿಜೆಪಿ. ಆ ಸಂದರ್ಭದಲ್ಲಿ ಅವರ ಮೇಲಿನ 70 ಸಾವಿರ ಕೋಟಿ ರೂಪಾಯಿಗಳ ಆಪಾದನೆಯನ್ನು ಹಿಂಪಡೆಯಲಾಗಿದೆ ಎಂದು ಘೋಷಿಸಲಾಗಿತ್ತು. ಪವಾರ್ ಎನ್.ಸಿ.ಪಿ.ಗೆ ಮರಳಿದ ಕೂಡಲೇ ಈ ಆಪಾದನೆಗೆ ಜೀವ ಬರುತ್ತದೆ. ತೊರೆದ ತಕ್ಷಣವೇ ಅಡಗಿ ಹೋಗುತ್ತದೆ!
ಎಪ್ಪತ್ತು ಸಾವಿರ ಕೋಟಿ ರೂಪಾಯಿಗಳು ಎಂಬುದು ಸಣ್ಣ ಮೊತ್ತವೇನೂ ಅಲ್ಲ. ಅಷ್ಟೊಂದು ದೊಡ್ಡ ಮೊತ್ತದ ಅವ್ಯವಹಾರ ನಡೆದಿದ್ದು, ಆಪಾದಿತರನ್ನು ಮಟ್ಟ ಹಾಕುವುದಾಗಿ ಬಹಿರಂಗವಾಗಿ ಸಾರಿದವರು ಸಣ್ಣ ವ್ಯಕ್ತಿಯೇನೂ ಅಲ್ಲ. ಪ್ರಧಾನಿಯವರೇ ಖುದ್ದು ಮಟ್ಟ ಹಾಕುವುದಾಗಿ ಹೇಳಿದ ವ್ಯಕ್ತಿ, ಅವರದೇ ಪಕ್ಷದಲ್ಲಿ ನಾಲ್ಕೇ ದಿನಗಳಲ್ಲಿ ಉಪಮುಖ್ಯಮಂತ್ರಿಯಾಗುತ್ತಾನೆ ಎಂದರೆ ಅದಕ್ಕಿಂತ ದೊಡ್ಡ ಪವಾಡ ಉಂಟೇ?
ಬಿಜೆಪಿಯ ಬಳಿ ದೈತ್ಯ ವಾಶಿಂಗ್ ಮಶಿನ್ ಉಂಟು. ಗಂಗಾಜಲವನ್ನೇ ಬಳಸಲಾಗುವ ಈ ವಾಷಿಂಗ್ ಮಶಿನಿಗೆ ಹಾಕಿದರೆ ಭ್ರಷ್ಟಾತಿಭ್ರಷ್ಟರೂ, ಕಡು ಪಾತಕಿಗಳೂ ಪವಿತ್ರರಾಗಿ ಹೊರ ಬರುತ್ತಾರೆ ಎಂಬ ವ್ಯಂಗ್ಯವೊಂದು ಚಾಲ್ತಿಯಲ್ಲಿದೆ. ಅತಿರಂಜಿತ ಎನಿಸಿದರೂ ಅಸತ್ಯವೇನೂ ಅಲ್ಲ.
ಭಾರತೀಯ ರಾಜಕಾರಣದ ಮಹಾರಥಿಗಳಲ್ಲಿ ಒಬ್ಬರಾದ ಶರದ್ ಪವಾರ್ ಅವರ ಪಕ್ಷವನ್ನು ಮೋಶಾ ಜೋಡಿ ಈ ಹಂತದಲ್ಲಿ ಒಡೆದದ್ದಾದರೂ ಯಾಕೆ?
ಬಿಜೆಪಿ ಕೈಗೊಂಬೆ ಶಿಂಧೆ ಸರ್ಕಾರಕ್ಕೆ ಬಹುಮತದ ಕೊರತೆಯೇನೂ ಇರಲಿಲ್ಲ. ತನ್ನ ಸರ್ಕಾರದ ಸ್ಥಿರತೆಗೇನೂ ಧಕ್ಕೆ ಒದಗಿರಲಿಲ್ಲ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ‘ಮೋಶಾ’ ನಡೆಸಿರುವ ‘ತಯಾರಿ’ಯಿದು. ಈ ಮುನ್ನ ಬಿಹಾರದಲ್ಲಿ ನಿತೀಶ್ ಬಿಜೆಪಿಯ ಸಂಗ ತೊರೆದು ಆರ್.ಜೆ.ಡಿ. ಜೊತೆ ಕೈ ಜೋಡಿಸಿದ್ದರು. ಮಹಾರಾಷ್ಟ್ರದಲ್ಲೂ ಹಿನ್ನಡೆ ಎದುರಾಗಿದೆ. ಈ ಎರಡೂ ರಾಜ್ಯಗಳ ಒಟ್ಟು ಲೋಕಸಭಾ ಸ್ಥಾನಗಳ ಸಂಖ್ಯೆ ೮೮. ಈ ಸಂಖ್ಯೆ ಕೈ ಕೊಟ್ಟರೆ ಎಂಬ ಗಾಬರಿ ಬಿಜೆಪಿಯದು.
ವರ್ಷದ ಹಿಂದೆ ಶಿವಸೇನೆಯನ್ನೂ ಒಡೆದು ಸರ್ಕಾರ ರಚಿಸಿದ್ದಾಯಿತು. ಆದರೆ ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಹೆಚ್ಚಿನ ಸೀಟುಗಳನ್ನು ಗೆದ್ದು ಮೋದಿಯವರನ್ನು ಪುನಾ ಪ್ರಧಾನಿ ಮಾಡಲು ಶಿಂಧೆ ಶಿವಸೇನೆಯ ಸಾಮರ್ಥ್ಯ ಸಾಲದು ಎಂಬ ಜ್ಞಾನೋದಯ ಆಗಿದೆ. ಹೀಗಾಗಿಯೇ ರಾಜ್ಯದ 200 ಪುರಸಭೆಗಳು ಮತ್ತು ಮುಂಬೈ, ಪುಣೆ ಸೇರಿದಂತೆ 23 ಮಹಾನಗರ ಪಾಲಿಕೆಗಳಿಗೆ ಚುನಾವಣೆಗಳನ್ನು ಮುಂದೂಡುತ್ತ ಬಂದಿತ್ತು.
ಎನ್.ಸಿ.ಪಿ. ಹೋಳಾಗಿರುವ ವಿದ್ಯಮಾನ ದೇಶದ ಪ್ರತಿಪಕ್ಷಗಳ ಏಕತೆ ಮತ್ತು ವಿಶೇಷವಾಗಿ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿಯ ಪಾಲಿಗೆ ಬಹು ದೊಡ್ಡ ಹಿನ್ನಡೆ. ಈ ವಿದ್ಯಮಾನಕ್ಕೆ ಮುನ್ನ ಲೋಕಸಭಾ ಚುನಾವಣೆಗಳು ನಡೆಯುವ ಪರಿಸ್ಥಿತಿ ಇರುತ್ತಿದ್ದರೆ ೪೮ ಲೋಕಸಭಾ ಸೀಟುಗಳ ಪೈಕಿ ಬಹಳಷ್ಟನ್ನು ಕಾಂಗ್ರೆಸ್- ಎನ್.ಸಿ.ಪಿ.- ಶಿವಸೇನೆಯನ್ನು ಒಳಗೊಂಡ ಮೈತ್ರಿಕೂಟ ಗೆಲ್ಲುವ ದಟ್ಟ ಸಾಧ್ಯತೆಗಳಿದ್ದವು. ಇದೀಗ ಮೋಶಾ ಅವರ ಬಿಜೆಪಿ ಈ ಸಾಧ್ಯತೆಗಳನ್ನು ಮೆಟ್ಟಿ ನಿಂತಿದೆ.
ಅಜಿತ್ ಪವಾರ್ ಬಿಜೆಪಿ ಸೇರುವ ಕುರಿತು ಯಾರಿಗೂ ಸಂಶಯ ಉಳಿದಿರಲಿಲ್ಲ. ಯಾವಾಗ ಎಂಬ ಪ್ರಶ್ನೆಯಷ್ಟೇ ಬಾಕಿ ಇತ್ತು. ಪಕ್ಷದ ಮತ್ತೊಬ್ಬ ತಲೆಂ iiಳು ಪ್ರಫುಲ್ ಪಟೇಲ್ ಜಾರಿ ನಿರ್ದೇಶನಾಲಯದ ದಾಳಿಗಳಲ್ಲಿ ಹಾಗೂ ಛಗನ್ ಭುಜಬಲ್ ಅವ್ಯವಹಾರಗಳ ಆರೋಪಗಳಡಿ ಹಣ್ಣಾಗಿದ್ದವರು. ಬಿಜೆಪಿ ಸೇರಿ ಬಚಾವಾಗಲು ಬಯಸಿದ್ದವರು. ಅಂತಹ ಇರಾದೆಯನ್ನು ಬಹಿರಂಗವಾಗಿ ಪ್ರಕಟಿಸಿದ್ದವರು. ಹೀಗಾಗಿ ರಾಜಕೀಯದ ಸೂಕ್ಷ್ಮ ಕದಲಿಕೆಗಳನ್ನು ಮುಂದಾಗಿಯೇ ಗ್ರಹಿಸಬಲ್ಲ ಪವಾರ್ ಅವರಿಗೆ ಎನ್.ಸಿ.ಪಿ. ಹೋಳಾಗುವ ಸಂಗತಿ ಗೊತ್ತಿರಲಿಲ್ಲ ಎಂದರೆ ಯಾರೂ ನಂಬುವುದಿಲ್ಲ.
ಮರಾಠವಾಡ ಮತ್ತು ಪಶ್ಚಿಮ ಮಹಾರಾಷ್ಟ್ರದ ಸೀಮೆಗಳಿಗೆ ಸೀಮಿತ ಪವಾರ್ ಪ್ರಭಾವ. 1999ರಲ್ಲಿ ಎನ್.ಸಿ.ಪಿ. ಸ್ಥಾಪನೆಯ ನಂತರ ಈವರೆಗೆ ಅವರು ಗೆದ್ದಿರುವ ಗರಿಷ್ಠ ಲೋಕಸಭಾ ಸ್ಥಾನಗಳು ಒಂಬತ್ತು ಮತ್ತು ವಿಧಾನಸಭಾ ಸೀಟುಗಳು 71.
ಒಡಕಿನಿಂದ ರಾಜಕೀಯವಾಗಿ ಶಕ್ತಿಗುಂದಿರುವ ಹಳೆಯ ಹುಲಿ ಶರದ್ ಪವಾರ್ ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ.
ಇಳಿವಯಸ್ಸಿನಲ್ಲಿ ಪಕ್ಷವನ್ನು ಪುನಃ ಓಡಾಡಿ ತಳ ಮಟ್ಟದಿಂದ ಕಟ್ಟಲು ಸಾಧ್ಯವೇ? ಮುಂದಿನ ವರ್ಷ ಎರಡು ನಿರ್ಣಾಯಕ ಕದನಗಳು ಅವರನ್ನು ಮುಖಾಮುಖಿ ಆಗಲಿವೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ 2019ರಲ್ಲಿ ಸಾಧಿಸಿದ್ದನ್ನು ಹೊಸ ಪರಿಸ್ಥಿತಿಯಲ್ಲಿ ಪುನಃ ಸಾಧಿಸಬಲ್ಲರೇ?
ಬಿಜೆಪಿಯ ಮುಂದಿನ ಬೇಟೆ ಅಥವಾ ಬಲಿಪಶು ಬಿಹಾರದ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಪಕ್ಷ ಸಂಯುಕ್ತ ಜನತಾದಳ. ಶಿವಸೇನೆಯಂತೆಯೇ ಬಿಜೆಪಿಯ ಮಾಜಿ ಮಿತ್ರಪಕ್ಷ. ಶಿವಸೇನೆ ಮತ್ತು ಎನ್.ಸಿ.ಪಿ.ಯನ್ನು ಒಡೆದಂತೆಯೇ ಸಂಯುಕ್ತ ಜನತಾದಳವನ್ನೂ ಒಡೆದು ದುರ್ಬಲಗೊಳಿಸುವುದು ಬಿಜೆಪಿಯ ತಕ್ಷಣದ ಮತ್ತೊಂದು ಕಾರ್ಯತಂತ್ರ. ತೇಜಸ್ವಿ ಯಾದವ್ ಮುಂದಿನ ಮುಖ್ಯಮಂತ್ರಿ ಎಂಬ ನಿತೀಶ್ ಕುಮಾರ್ ಘೋಷಣೆ ಸಂಯುಕ್ತ ಜನತಾದಳದಲ್ಲಿ ಈಗಾಗಲೇ ಅಸಮಾಧಾನವನ್ನು ಹುಟ್ಟಿಸಿದೆ.
ಪ್ರತಿಪಕ್ಷಗಳ ನಾಯಕರ ಮೇಲೆ ಹಣಕಾಸು ಅವ್ಯವಹಾರದ ಆಪಾದನೆಗಳನ್ನು ಹೊರಿಸಿ ಹಣಿದು ಹಣ್ಣುಗಾಯಿ ನೀರುಗಾಯಿ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಬಿಜೆಪಿಯ ಅನೂಚಾನ ಕಾರ್ಯವೈಖರಿಯೇ ಆಗಿ ಹೋಗಿದೆ.
ಅಧಿಕಾರ ಹಿಡಿಯಲು, ಎದುರಾಳಿಗಳನ್ನು ಮಟ್ಟ ಹಾಕಲು ಯಾವ ಅಡ್ಡದಾರಿಯನ್ನು ಹಿಡಿಯಲೂ ತಯಾರು, ಎಷ್ಟು ಕೆಳಗೆ ಬೇಕಾದರೂ ಕುಸಿಯಲು ತಯಾರೆಂದು ಎಂದು ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಬಾರಿ ಬಾರಿಗೆ ರುಜುವಾತು ಮಾಡಿ ತೋರಿಸಿದೆ. ತಾನು ಪ್ರತಿಪಾದಿಸುವುದಾಗಿ ಸಾರಿದ್ದ ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿದೆ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಅಸ್ತ್ರಗಳನ್ನು ಝಳಪಿಸಿ ವಿರೋಧಿಗಳನ್ನು ಮಣಿಸುತ್ತಿದೆ. ಇವು ಮೂರೂ ಕೆಲಸ ಮಾಡದೆ ಹೋದರೆ ಭಾರೀ ಹಣದ ಥೈಲಿಗಳ ಆಮಿಷ ಒಡ್ಡುತ್ತಿದೆ. ಚುನಾವಣೆಗಳನ್ನು ಗೆಲ್ಲಲು ಭ್ರಷ್ಟರು, ಕೊಲೆ ಆಪಾದಿತರನ್ನು, ಹಸಿ ಹಸಿ ಕೋಮುವಾದಿಗಳನ್ನು ಸೇರಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಿಲ್ಲ.
ಡಬ್ಬದಿಂದ ತುಪ್ಪವನ್ನು ಹೊರತೆಗೆಯಲು ಹಲವು ವಿಧಾನಗಳಿವೆ. ಚಮಚೆಯಿಂದ ಬರದಿದ್ದರೆ ಬೆರಳನ್ನು ಸೊಟ್ಟಗೆ ಮಾಡಿ ತೆಗೆಯಲುಬೇಕು. ಅದರಿಂದಲೂ ಸಿಗದೆ ಹೋದರೆ ತಳಕ್ಕೆ ಬಿಸಿ ಮುಟ್ಟಿಸಬೇಕು. ಅದೂ ಪ್ರಯೋಜನ ಆಗದಿದ್ದರೆ ತಳದಲ್ಲಿ ರಂಧ್ರ ಕೊರೆಯಲೇಬೇಕು ಎಂಬುದು ಬಿಜೆಪಿಯ ಅಂಬೋಣ.
ಮಹಾರಾಷ್ಟ್ರದೊಂದಿಗೆ ಚುನಾವಣೆ ಎದುರಿಸಿದ ಹರಿಯಾಣದಲ್ಲಿ ಬಹುಮತ ಸಿಗದೆ, ರಾಜಕೀಯ ಎದುರಾಳಿಯಾಗಿದ್ದ ದುಷ್ಯಂತ್ ಚೌಟಾಲಾ ಅವರ ಜನನಾಯಕ ಜನತಾ ಪಾರ್ಟಿಯ ಜೊತೆ ಕೈ ಕಲೆಸಿತು. ದುಷ್ಯಂತ್ ಚೌಟಾಲಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಜೊತೆಗೆ, ಭ್ರಷ್ಟಾಚಾರ ಹಗರಣದಲ್ಲಿ ಜೈಲಿನಲ್ಲಿದ್ದ ಆತನ ತಂದೆ ಅಜಯ್ ಚೌಟಾಲಾ ಅವರನ್ನು ‘ಫರ್ಲೋ’ ಮೇರೆಗೆ ಬಿಡುಗಡೆ ಮಾಡಿಸಲಾಯಿತು. ಚೌಟಾಲಾ ವಾಪಸು ಜೈಲಿಗೆ ಮರಳಿರುವ ವರದಿಗಳಿಲ್ಲ.
‘ಪಾರ್ಟಿ ವಿತ್ ಎ ಡಿಫರೆನ್ಸ್’ ಎಂದು ಬಿಜೆಪಿ ಎದೆ ಬಡಿದುಕೊಂಡು ಹೇಳುತ್ತದೆ. ಈ ಮಾತುಗಳನ್ನು ‘ವಿದೌಟ್ ಎ ಡಿಫರೆನ್ಸ್’ ಎಂದು ಅಂಗ ರಚನೆಗೆ ತುರ್ತು ತಿದ್ದುಪಡಿ ಮಾಡಿಕೊಳ್ಳುವುದು ಒಳಿತು.





