ರಾಜಕಾರಣದಲ್ಲಿ ಪಟ್ಟು,ಪ್ರತಿಪಟ್ಟುಗಳ ಆಟ ದೊಡ್ಡ ಮಟ್ಟದಲ್ಲೇ ಶುರುವಾಗಿದೆ. ಮತ್ತು ಈ ಪಟ್ಟು, ಪ್ರತಿಪಟ್ಟುಗಳ ವಿಷಯ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಂದೇಹವಾಗಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಅಂದ ಹಾಗೆ ರಾಜಕಾರಣದಲ್ಲಿ ಪಟ್ಟು, ಪ್ರತಿಪಟ್ಟುಗಳ ಪರಂಪರೆ ಹೊಸತೇನಲ್ಲ. ಸ್ವಾತಂತ್ರ್ಯ ಬಂದ ನಂತರ ಕೆ. ಸಿ. ರೆಡ್ಡಿ ಅವರ ನೇತೃತ್ವದಲ್ಲಿ ಜವಾಬ್ದಾರಿ ಸರ್ಕಾರದ ರಚನೆಯಾಯಿತಲ್ಲ ಆಗ ಸಿಕ್ಕ ಕಾಲಾವಧಿಯಲ್ಲಿ ಗಮನಾರ್ಹ ಆಡಳಿತ ನೀಡಿದ್ದ ಕೆ. ಸಿ. ರೆಡ್ಡಿ ಅವರು ೧೯೫೨ರ ವಿಧಾನಸಭಾ ಚುನಾವಣೆಯ ನಂತರ ಪುನಃ ಮುಖ್ಯಮಂತ್ರಿಯಾಗಲು ಬಯಸಿದ್ದರು.
ಗಮನ ಸೆಳೆಯುವ ಆಡಳಿತದ ಮೂಲಕವೇ ತಮ್ಮ ಕನಸಿಗೆ ಪೂರಕವಾಗಿದ್ದ ಪಟ್ಟನ್ನು ಹಾಕಿದ್ದ ಕೆ. ಸಿ. ರೆಡ್ಡಿ ಅವರನ್ನು ಯಾವ ಕಾರಣಕ್ಕೂ ನಾಯಕತ್ವದ ರೇಸಿನಿಂದ ಪಕ್ಕ ಸರಿಸಲು ಸಾಧ್ಯವೇ ಇರಲಿಲ್ಲ.
ಆದರೆ ಮೊದಲ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗುವ ಕಾಲದಲ್ಲಿ ಕಾಂಗ್ರೆಸ್ ನೇತಾರ ಜವಾಹರಲಾಲ್ ನೆಹರೂ ಅವರು ಇದ್ದಕ್ಕಿದ್ದಂತೆ ಕೆ. ಸಿ. ರೆಡ್ಡಿಯವರಿಗೆ ಒಂದು ಸೂಚನೆ ಕೊಟ್ಟರು. ಅದೆಂದರೆ, ನೀವು ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದೀರಿ. ನಿಮ್ಮಂತಹ ನಾಯಕರ ಸೇವೆ ರಾಷ್ಟ್ರಕ್ಕೆ ಬೇಕು. ಹೀಗಾಗಿ ನೀವು ರಾಷ್ಟ್ರ ರಾಜಕಾರಣದ ಮೇಲೆ ಗಮನ ಕೇಂದ್ರೀಕರಿಸಿ ಎಂದರು.
ನೆಹರೂ ಅವರ ಈ ಮಾತು ಕೆ. ಸಿ. ರೆಡ್ಡಿಯವರಿಗೆ ಇಷ್ಟವಿರಲಿಲ್ಲ. ಆದರೆ ಅವರ ಮಾತನ್ನು ಕೇಳದೆ ಅವರಿಗೆ ಬೇರೆ ದಾರಿ ಇರಲಿಲ್ಲ. ಕೆಲ ಮೂಲಗಳ ಪ್ರಕಾರ, ಕೆ. ಸಿ. ರೆಡ್ಡಿ ಅವರ ದಾರಿಯನ್ನು ನೆಹರೂ ಬದಲಿಸಲು ರಾಜ್ಯದ ಕೆಲ ನಾಯಕರು ಕಾರಣ.
ಕೆ. ಸಿ. ರೆಡ್ಡಿ ಅವರು ಇಲ್ಲೇ ಮುಂದುವರಿದರೆ ತಮ್ಮ ದಾರಿ ಸುಗಮವಾಗಿರುವುದಿಲ್ಲ ಎಂಬ ಕಾರಣಕ್ಕಾಗಿ ಅವರು ದಿಲ್ಲಿ ಮಟ್ಟದಲ್ಲಿ ಆಟವಾಡಿದ್ದರು. ಹೀಗಾಗಿ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಕೆ. ಸಿ. ರೆಡ್ಡಿಯವರು ಹಾಕಿದ ಪಟ್ಟು, ಕೆಲ ನಾಯಕರು ಹಾಕಿದ ಪ್ರತಿಪಟ್ಟಿನ ಮೂಲಕ ವಿಫಲವಾಯಿತು.
ಮುಂದೆ ಕರ್ನಾಟಕದ ಮುಖ್ಯಮಂತ್ರಿಯಾದ ಕೆಂಗಲ್ ಹನುಮಂತಯ್ಯ ಅವರು ನಾಡು ಕಂಡ ದಕ್ಷ ಮುಖ್ಯಮಂತ್ರಿಗಳಲ್ಲೊಬ್ಬರು ಎಂದು ಹೆಸರು ಮಾಡಿದರು. ಇವತ್ತು ನಾಡಿನ ಆಡಳಿತ ಕೇಂದ್ರವಾದ ವಿದಾನಸೌಧದ ನಿರ್ಮಾಣವಾಗಿದ್ದು ಕೆಂಗಲ್ ಹನುಮಂತಯ್ಯ ಅವರ ಕಾಲದಲ್ಲಿ.
ಆದರೆ ಎಷ್ಟೇ ದಕ್ಷ ಅಡಳಿತ ನೀಡಿದರೂ ಕೆಂಗಲ್ ಹನುಮಂತಯ್ಯ ಅವರ ವಿರೋಽಗಳು ಪಟ್ಟು ಹಾಕಿದರು. ಮೊದಲನೆಯದಾಗಿ ವಿಧಾನಸೌಧ ನಿರ್ಮಿಸಲು ಅಗತ್ಯಕ್ಕಿಂತ ಹೆಚ್ಚು ಹಣ ಬಳಕೆ ಮಾಡಲಾಗಿದೆ ಎಂದು ಪ್ರಧಾನಿ ಜವಾಹರಲಾಲ್ ನೆಹರೂ ಅವರ ಮನಸ್ಸು ಕೆಡಿಸಿದರು. ಇದಾದ ನಂತರದ ದಿನಗಳಲ್ಲಿ ಒಂದರ ಹಿಂದೊಂದರಂತೆ ಪಟ್ಟುಗಳನ್ನು ಹಾಕುತ್ತಾ ಹೋದ ವಿರೋಧಿಗಳು ನೆಹರೂ ಮತ್ತು ಕೆಂಗಲ್ ಹನುಮಂತಯ್ಯನವರ ನಡುವೆ ಸಮರಸವೇ ಮೂಡದಂತೆ ನೋಡಿಕೊಂಡರು.
ಪರಿಣಾಮ? ದಿಲ್ಲಿಯ ಕಟಾಕ್ಷದೊಂದಿಗೆ ಇಲ್ಲಿ ಕೆಂಗಲ್ ಹನುಮಂತಯ್ಯನವರ ವಿರುದ್ಧ ಸ್ವಪಕ್ಷೀಯರ ಬಂಡಾಯ ಶುರುವಾಯಿತು. ಇಂತಹ ಬಂಡಾಯವನ್ನು ತಮ್ಮ ದಕ್ಷತೆಯೇ ಮಣ್ಣು ಪಾಲಾಗಿಸಲಿದೆ ಎಂದು ಕೆಂಗಲ್ ಹನುಮಂತಯ್ಯ ನಂಬಿದ್ದರಾದರೂ ಅದು ಸಫಲವಾಗಲಿಲ್ಲ.
ಹೀಗಾಗಿ ಕೆಂಗಲ್ ಹನುಮಂತಯ್ಯನವರು ಕೆಳಗಿಳಿದು ಅವರ ಜಾಗಕ್ಕೆ ಕಡಿದಾಳ್ ಮಂಜಪ್ಪ ಬಂದು ಕೂರುವಂತಾಯಿತು.
ಮುಂದೆ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾದರಲ್ಲ ಅವರು ಪ್ರಧಾನಿ ನೆಹರೂ ಅವರ ಶಕ್ತಿ ತಮ್ಮ ಜತೆಗಿದೆ ಮತ್ತು ಶಾಸಕರ ಬಲ ತಮ್ಮ ಜತೆಗಿದೆ ಎಂದು ನಂಬಿದ್ದರಾದರೂ ಭಿನ್ನಮತೀಯ ನಾಯಕ ಬಿ. ಡಿ. ಜತ್ತಿಯವರು ಹಾಕಿದ ಪಟ್ಟಿಗೆ ಎದುರಾಡಲಾಗದೆ ಸೋಲಬೇಕಾಯಿತು.
ಅಂದ ಹಾಗೆ ನಿಜಲಿಂಗಪ್ಪನವರಿಗೆ ಪಟ್ಟು ಹಾಕಿದ ಬಿ. ಡಿ. ಜತ್ತಿ ಅವರು ನೆಹರೂ ಸಂಪುಟದಲ್ಲಿ ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಅವರ ಆಪ್ತರು. ಮುಂದೆ ೧೯೬೨ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗುವ ನಿಜಲಿಂಗಪ್ಪನವರ ಕನಸನ್ನು ಜತ್ತಿ ಹಾಕಿದ ಪಟ್ಟು ಮತ್ತೊಮ್ಮೆ ವಿಫಲಗೊಳಿಸಿತು.
ಯಾಕೆಂದರೆ ಆ ಚುನಾವಣೆಯಲ್ಲಿ ನಿಜಲಿಂಗಪ್ಪ ಲಿಂಗಾಯತ ಒಳಪಂಗಡಗಳ ಕಚ್ಚಾಟದ ಮೂಲಕ ಸೋಲು ಅನುಭವಿಸಬೇಕಾಯಿತು. ಆದರೆ ಗಮನಿಸಬೇಕಾದ ಸಂಗತಿಯೆಂದರೆ ಎರಡು ಬಾರಿ ಜತ್ತಿಯವರ ಪಟ್ಟಿಗೆ ಉತ್ತರ ಹೇಳಲಾಗದೆ ಚಿತ್ ಆಗಿದ್ದ ನಿಜಲಿಂಗಪ್ಪನವರು ೧೯೬೨ರಲ್ಲಿ ಪ್ರತಿಪಟ್ಟು ಹಾಕಿ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿದ್ದ ಜತ್ತಿಯವರು ಸೋಲುವಂತೆ, ತಮ್ಮ ಆಪ್ತರಾದ ಕಂಠಿ ಅವರು ಗೆಲ್ಲುವಂತೆ ನೋಡಿಕೊಂಡರು.
ಮುಂದೆ ರಾಷ್ಟ್ರ ರಾಜಕಾರಣದಲ್ಲಿ ಹಲವು ಬೆಳವಣಿಗೆಗಳಾದವು. ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ವಿಭಜನೆಯಾಯಿತು. ಈ ಸಂದರ್ಭ ದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರ ಜತೆ ನಿಂತ ದೇವರಾಜ ಅರಸರು ಕಾಂಗ್ರೆಸ್‌ನ ಒಂದು ಬಣಕ್ಕೆ ಮುಖಂಡರಾದರೆ, ನಿಜಲಿಂಗಪ್ಪ ನೇತೃತ್ವದ ಮತ್ತೊಂದು ಬಣಕ್ಕೆ ಸಿಎಂ ವೀರೇಂದ್ರಪಾಟೀಲರು ಮುಖಂಡರಾಗಿದ್ದರು.
ಆದರೆ ಇಂದಿರಾ ಗಾಂಧಿ ಅವರ ಜತೆ ನಿಂತ ದೇವರಾಜ ಅರಸರ ಪಟ್ಟಿಗೆ ನಿಜಲಿಂಗಪ್ಪ ನಾಯಕತ್ವದ ಕಾಂಗ್ರೆಸ್ ಪ್ರತಿಪಟ್ಟು ಹಾಕಲು ವಿಫಲವಾಯಿತು. ಆದರೆ ಮುಂದೆ ಇದೇ ಕಾಂಗ್ರೆಸ್ ಜನತಾ ಪಕ್ಷದ ಬಾವುಟದಡಿ ಬಂದು ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಿತು.
ಹೀಗೆ ೧೯೮೩ರಲ್ಲಿ ಅಧಿಕಾರಕ್ಕೆ ಬಂದ ಜನತಾ ರಂಗ ಸರ್ಕಾರ ಮುಂದೆ ಜನತಾ ಸರ್ಕಾರವಾಗಿ, ಜನತಾದಳ ಸರ್ಕಾರವಾಗಿ ಮುನ್ನಡೆಯಿತು. ಈ ಅವಧಿಯಲ್ಲಿ ರಾಮಕೃಷ್ಣ ಹೆಗಡೆ ಮತ್ತು ಹೆಚ್. ಡಿ. ದೇವೇಗೌಡರ ನಡುವೆ ಶುರುವಾದ ಕುಸ್ತಿ ಮತ್ತು ಈ ಕುಸ್ತಿಯಲ್ಲಿ ಬಳಕೆಯಾದ ಪಟ್ಟು, ಪ್ರತಿಪಟ್ಟುಗಳು ಇಡೀ ದೇಶವನ್ನೇ ನಿಬ್ಬೆರಗುಗೊಳಿಸಿದವು.
ಗಮನಿಸಬೇಕಾದ ಸಂಗತಿ ಎಂದರೆ ೧೯೯೪ರಲ್ಲಿ ಜನತಾದಳ ಮರಳಿ ಅಧಿಕಾರ ಹಿಡಿದ ನಂತರವೂ ಹೆಗಡೆ, ದೇವೇಗೌಡರ ನಡುವೆ ಪಟ್ಟು, ಪ್ರತಿಪಟ್ಟುಗಳು ದೇಶದ ತೃತೀಯ ಶಕ್ತಿಯೇ ತಲ್ಲಣಗೊಳ್ಳುವಂತೆ ಮಾಡಿತು. ಇದರ ಮುಂದುವರಿದ ಭಾಗವಾಗಿ ದೇವೇಗೌಡ- ಸಿದ್ದರಾಮಯ್ಯ ಮತ್ತು ಪಟೇಲರ ನಡುವೆ ಈ ಪಟ್ಟು-ಪ್ರತಿಪಟ್ಟುಗಳು ಕಾಣಿಸಿಕೊಂಡವು.
ಮುಂದೆ ಎಸ್. ಎಂ. ಕೃಷ್ಣ ಅವರ ಆಡಳಿತದಲ್ಲಿ, ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಪಟ್ಟು, ಪ್ರತಿಪಟ್ಟುಗಳು ಹೆಚ್ಚಾಗಿ ಕಾಣಿಸಲಿಲ್ಲವಾದರೂ ಅದಕ್ಕೆ ಕಾರಣವಿತ್ತು. ಅದೆಂದರೆ, ತಮ್ಮ ತಮ್ಮ ಅಽಕಾರಾವಧಿಯಲ್ಲಿ ಕೃಷ್ಣ ಮತ್ತು ಸಿದ್ದರಾಮಯ್ಯ ಸಮರ್ಥ ಎದುರಾಳಿಗಳೇ ಇಲ್ಲದಂತೆ ನೋಡಿಕೊಂಡಿದ್ದರು.
ಆದರೆ ಇಪ್ಪತ್ತೊಂದು ತಿಂಗಳ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಽಕಾರಕ್ಕೆ ಬಂತಲ್ಲ ಇದಾದ ನಂತರ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಎಂಬ ಷಾಗಿರ್ದುಗಳ ನಡುವೆ ಪಟ್ಟು, ಪ್ರತಿಪಟ್ಟುಗಳು ಶುರುವಾದವು.
ಅಧಿಕಾರ ಹಂಚಿಕೆಯನ್ನು ಕೇಂದ್ರವಾಗಿಟ್ಟುಕೊಂಡ ಈ ಕುಸ್ತಿಯಲ್ಲಿ ಕೆಲವು ಸಲ ಡಿ. ಕೆ. ಶಿವಕುಮಾರ್ ಹಾಕಿದ ಪಟ್ಟುಗಳು ಗಮನ ಸೆಳೆದರೆ, ಇನ್ನೂ ಕೆಲವು ಸಲ ಸಿದ್ದರಾಮಯ್ಯ ಹಾಕಿದ ಪಟ್ಟು, ಪ್ರತಿಪಟ್ಟುಗಳು ಗಮನ ಸೆಳೆದವು. ಆದರೆ ಇತ್ತೀಚೆಗೆ ಎಲ್ಲರ ಗಮನ ಸೆಳೆದ ವಿವಾದದ ನಂತರ ಅಽಕಾರ ಹಂಚಿಕೆಯ ಧ್ವನಿಯೇ ಕ್ಷೀಣವಾಗಿದೆ.
ಹಾಗದು ಕ್ಷೀಣವಾಗಿದೆ ಎಂದರೆ ಪರಿಸ್ಥಿತಿ ಸಿದ್ದರಾಮಯ್ಯ ಅವರ ಪರ ವಾಲಿದೆ ಎಂದೇ ಅರ್ಥ. ಪರಿಸ್ಥಿತಿ ಅವರ ಪರ ವಾಲಿದೆ ಎಂದರೆ ಯಾರಿಗೂ ಕಾಣದ ರೀತಿ ಅವರು ಹಾಕಿದ ಪಟ್ಟುಗಳು ಕೆಲಸ ಮಾಡಿವೆ ಅಂತಲ್ಲವೇ?