ರೈತರು ಗುಡುಗಿದರೆ ವಿಧಾನಸೌಧದಲ್ಲಿದ್ದವರು ನಡುಗುತ್ತಿದ್ದರು ಎಂಬ ಮಾತು ರೈತ ಸಂಘಟನೆಯ ಶಕ್ತಿಯನ್ನು ಸಂಕೇತಿಸುತ್ತದೆ. ಅಂತಹ ರೈತ ಸಂಘಟನಾ ಶಕ್ತಿಯ ಪ್ರಖರತೆ ವಿವಿಧ ಕಾರಣಗಳಿಂದಾಗಿ ಮುಸುಕಾಗಿದ್ದು ವಾಸ್ತವ. ರೈತ ಸಂಘಟನೆಯ ಪ್ರಾಬಲ್ಯ ಮುಗಿದೇ ಹೋಗಿದೆಯೇ ಎಂಬ ಆತಂಕದ ಪ್ರಶ್ನೆ ಹಲವರಲ್ಲಿ ಮೂಡಿದ್ದರೆ ಅಚ್ಚರಿಯೇನಿಲ್ಲ. ಇಂತಹ ಹೊತ್ತಿನಲ್ಲಿ ಮೈಸೂರು ದಸರಾ ಉತ್ಸವಕ್ಕೆ ಹೊರಗಿನಿಂದ ಜನರು ಬಾರದಂತೆ ನಾಲ್ಕು ದಿಕ್ಕಿನಿಂದಲೂ ರಸ್ತೆ ತಡೆಮಾಡಿದ ರೈತರು ತಮ್ಮ ಸಂಘಟನೆಗಿನ್ನೂ ಶಕ್ತಿಯಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಆ ಮೂಲಕ ರಾಜ್ಯ ಸರ್ಕಾರಕ್ಕೆ ಕಳವಳವನ್ನೂ ಮೂಡಿಸಿದ್ದಾರೆ.
ರೈತರ ರಸ್ತೆತಡೆಯಿಂದ ಆದ ಅಡಚಣೆಗಳ ಹೊರತಾಗಿಯೂ ರೈತ ಸಂಘಟನೆಯ ಸಾಮರ್ಥ್ಯವನ್ನು ಮತ್ತೆ ಸಾಬೀತು ಮಾಡುವ ನಿಟ್ಟಿನಲ್ಲಿ ಅಂತಹದ್ದೊಂದು ಪ್ರತಿಭಟನಾ ಪ್ರದರ್ಶನದ ಅಗತ್ಯವಂತೂ ಇತ್ತು.
ಬಹಳ ಕಾಲದ ನಂತರ ರೈತಸಂಘ ಬೀದಿಗಿಳಿದು ಸರ್ಕಾರಕ್ಕೆ ಬಿಸಿಮುಟ್ಟಿಸಿದ ಹೋರಾಟ ಇದು ಎನ್ನುವುದಕ್ಕಿಂತ ಬಹುತೇಕರು ಮರೆತುಹೋಗಿದ್ದ ರೈತಸಂಘದ ಹಸಿರು ಟವಲ್ ಈಗ ಮತ್ತೆ ತನ್ನ ಹೋರಾಟಕ್ಕೆ ಪಖರತೆ ದಕ್ಕಿಸಿಕೊಂಡಿದೆ ಎಂಬುದು ಮುಖ್ಯ.
ಪ್ರೊ. ಎಂ.ಡಿ.ನಂಜುಡಸ್ವಾಮಿ, ಎನ್.ಡಿ. ಸುಂದರೇಶ್, ಕೆ.ಎಸ್.ಪುಟ್ಟಣ್ಣಯ್ಯ ಮುಂತಾದ ನಾಯಕರ ಅವಧಿಯಲ್ಲಿದ್ದ ರೈತಸಂಘದ ಪ್ರಭಾವಳಿ ಈಗಿಲ್ಲ. ಹೊಸ ತಲೆಮಾರಿನ ಹೋರಾಟಗಾರರು ಸೇರಿ ಹೊಸ ರಕ್ತ ಸಂಚಾರವಾದಂತೆ ಯುವಶಕ್ತಿ ರೈತಸಂಘದ ಹಸಿರನ್ನು ಉದ್ದೀಪಿಸಲು ಮುಂದಾಗಿದೆ. ರೈತರ ಹಿತಾಸಕ್ತಿ ಕಾಯುವಲ್ಲಿ ಇಂತಹ ಸಂಘಟನೆಯ ಅಗತ್ಯವಿದೆ ಎಂಬುದಕ್ಕೆ ದೆಹಲಿಯಲ್ಲಿ ನಡೆದ ರೈತರ ಸುಧೀರ್ಘ ಹೋರಾಟವೇ ಸಾಕ್ಷಿ.
‘ಹಳೇ ಬೇರು ಹೊಸ ಚಿಗುರು ಸೇರಿರಲು ಮರ ಸೊಬಗು’ ಎಂಬ ಕವಿವಾಣಿಯಂತೆ ಕರ್ನಾಟಕ ರಾಜ್ಯ ರೈತ ಸಂಘ ಇಂದು ಯುವಶಕ್ತಿ ಮತ್ತು ಎಲ್ಲ ವರ್ಗಗಳನ್ನು ಒಳಗೊಂಡ ಹೋರಾಟದ ಹೊಸ ಶಕ್ತಿಯಾಗಿ ಉದಯಿಸುತ್ತಿದೆ. ಇಂದು ಹಳೇ ಮೈಸೂರು ಭಾಗದ ಜಿಲ್ಲೆಗಳ ವ್ಯಾಪ್ತಿಯ ೨೭ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಪ್ರದೇಶದಲ್ಲಿ ರೈತರು, ಕಾರ್ಮಿಕರು, ಶೋಷಿತರು, ಮಹಿಳೆಯರು, ವಿದ್ಯಾರ್ಥಿ ಯುವಜನರು, ನೈಸರ್ಗಿಕ, ಸಾವಯವ ಕೃಷಿಕರು ಎಲ್ಲರೂ ಹೊಸ ಹಸಿರಿನತ್ತ ಧೃವೀಕರಣಗೊಳ್ಳುತ್ತಿರುವ ಪ್ರಕ್ರಿಯೆ ಸದ್ದಿಲ್ಲದೇ ಆರಂಭವಾಗಿದೆ.
ರೈತಸಂಘದ ಫೈರ್‌ಬ್ರ್ಯಾಂಡ್ ಎನ್ನಲಾಗುತ್ತಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರ ಕಾಲಾನಂತರದಲ್ಲಿ ಹಸಿರು ಟವಲ್ ಬಣ್ಣ ಮಾಸಿದಂತಾಗಿ ಸಂಘದಲ್ಲಿನ ಹೋರಾಟದ ಶಕ್ತಿಯೂ ಕಳೆಗುಂದಿತ್ತು, ಕೆಲವೊಮ್ಮೆ ಶೂನ್ಯ ಆವರಿಸಿದಂತಹ ಅನುಭವ ಹೋರಾಟಗಾರರನ್ನು ಕಾಡಿದ್ದು ಸುಳ್ಳಲ್ಲ.
ಬಡಗಲಪುರ ನಾಗೇಂದ್ರ, ಚಾಮರಸ ಮಾಲಿಪಾಟೀಲ, ಹೊಸಕೋಟೆ ಬಸವರಾಜು, ಎ.ಎಲ್.ಕೆಂಪೇಗೌಡ, ಸುನೀತ ಪುಟ್ಟಣ್ಣಯ್ಯ, ರವಿಕಿರಣ್ ಪೂಣಚ್ಚ, ನಂದಿನಿ ಜಯರಾಂ, ದತ್ತಣ್ಣ, ಇತ್ತೀಚೆಗೆ ತೀರಿಕೊಂಡ ಜಿ.ಟಿ.ರಾಮಸ್ವಾಮಿ, ರಾಮಣ್ಣ ಹೀಗೆ ಸಾಲು ಸಾಲು ನಾಯಕರ ಪಟ್ಟಿಗೆ ಇಂದು ದರ್ಶನ್ ಪುಟ್ಟಣ್ಣಯ್ಯ, ಜನಚೇತನ ಟ್ರಸ್ಟ್‌ನ ಪ್ರಸನ್ನ ಎನ್.ಗೌಡ, ಆರ್ಗ್ಯಾನಿಕ್ ಮಂಡ್ಯದ ಮಧುಚಂದನ್…ಹೀಗೆ ಹೊಸ ಯಂಗ್‌ಟರ್ಕ್‌ಗಳು ಸೇರಿಕೊಂಡು ರೈತಸಂಘದಲ್ಲಿ ಹೊಸ ಚೈತನ್ಯ ತುಂಬಿ ನಿಂತಿರುವುದನ್ನು ಕಾಣಬಹುದು.
ಇತ್ತೀಚೆಗೆ ರೈತಸಂಘದ ಚಿನ್ಹೆಯನ್ನು ನವೀಕರಣಗೊಳಿಸಿದ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ತಾವು ಪ್ರತಿಪಾದಿಸಿಕೊಂಡು ಬಂದಂತೆಯೇ ರೈತಸಂಘಕ್ಕೊಂದು ಸಂವಿಧಾನ ರಚನೆ ಮಾಡಿದ್ದಾರೆ. ೫೫ ಪರಿಚ್ಛೇದಗಳನ್ನೊಳಗೊಂಡ ಸಂವಿಧಾನದಲ್ಲಿ ಜಾತಿ ಸಂಘರ್ಷಕ್ಕೆ ಅವಕಾಶ ಇಲ್ಲ, ಪದಾಧಿಕಾರಿಗಳೆಲ್ಲರೂ ಪ್ರತಿವರ್ಷ ಕಡ್ಡಾಯವಾಗಿ ಆಸ್ತಿ ಘೋಷಿಸಿಕೊಳ್ಳುವುದು, ಯಾರೂ ವೈಯಕ್ತಿಕವಾಗಿ ಭ್ರಷ್ಟರಾಗಬಾರದು, ಆ ಮೂಲಕ ಸಂಘದ ಘನತೆಗೆ ಚ್ಯುತಿ ತರಬಾರದು, ಕೆರೆ ಕಟ್ಟೆ ಒತ್ತುವರಿ ಮಾಡಿಕೊಳ್ಳಬಾರದು ಎಂಬುದೂ ಸೇರಿದಂತೆ ಹಲವು ಪ್ರಗತಿಪಥದ ಅಂಶಗಳನ್ನು ಅಳವಡಿಸಿದ್ದಾರೆ.
ರೈತಸಂಘ ಎಂದರೆ ಬರೀ ರಸ್ತೆ ತಡೆ, ಪ್ರತಿಭಟನೆ ಎಂದುಕೊಂಡಿದ್ದ ಹಲವರು ಅಚ್ಚರಿಗೊಳ್ಳುವಂತೆ ಇಂದು ಸಂಘಟನೆ ಹೋರಾಟದ ನೆಲೆಗಟ್ಟಿಗೆ ಹೊಸ ವ್ಯಾಖ್ಯಾನ ಬರೆದಂತಿದೆ. ಅದರಲ್ಲಿ ಪ್ರಮುಖವಾದುದೆಂದರೆ ಯುವ ರೈತರಿಗೆ ಮಾರುಕಟ್ಟೆ ಕೌಶಲ್ಯ, ತಾಂತ್ರಿಕತೆ, ಆರ್ಥಿಕ ಪುನಶ್ಚೇತನಕ್ಕೆ ಆದ್ಯತೆ ನೀಡಿರುವುದು ಮತ್ತು ಸಾವಯವ, ನೈಸರ್ಗಿಕ ಕೃಷಿಗೆ ಹೆಚ್ಚಿನ ಪ್ರೋತ್ಸಾಹ, ಅಂತರ್ಜಲ ವೃದ್ಧಿಸುವ ಕೆರೆ ಕಟ್ಟೆಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕೆ ಒತ್ತು ನೀಡುತ್ತಿದೆ.
ಸಮಾಜ ಸುಧಾರಣೆಯ ಹೆಜ್ಜೆಯಾಗಿ ಮಂತ್ರಮಾಂಗಲ್ಯವನ್ನು ಜಾರಿಗೊಳಿಸಿದ ರೈತಸಂಘಟನೆ ಇಂದು ಸುಸ್ಥಿರ ಕೃಷಿಯ ಹೊಸ ಆಯಾಮದತ್ತ ದೃಷ್ಠಿ ಬೀರಿದೆ. ಹಾಗಾಗಿ ರೈತ ಸಂಘಟನೆ ಇಂದು ಹೊಸ ಹುರುಪಿನಲ್ಲಿದೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಸ್ತುತ ರಾಜಕೀಯ ಪಕ್ಷಗಳ ಆರ್ಭಟದ ನಡುವೆ ಚಳುವಳಿ, ಹೋರಾಟದಲ್ಲೇ ಬೆಳೆದ ರೈತ ಸಂಘಟನೆ ಮುನ್ನೆಲೆಗೆ ಬರುತ್ತದೆಯೇ ಎಂಬ ನಿರೀಕ್ಷೆ ಮತ್ತು ಕುತೂಹಲ ರೈತರಲ್ಲಿ ಮೂಡಿದೆ.