Mysore
16
broken clouds

Social Media

ಶನಿವಾರ, 10 ಜನವರಿ 2026
Light
Dark

ವಯೋವೃದ್ಧರಿಗೆ ಮರೆಗುಳಿತನವೆಂಬ ಶಾಪ

ಪಿಂಚಣಿಗರ ಸ್ವರ್ಗ ಎಂಬ ಅನ್ವರ್ಥನಾಮಹೊಂದಿರುವ ಮೈಸೂರು ನಗರದಲ್ಲಿ ತೀರಾ ಇತ್ತೀಚೆಗೆ ನಡೆದ ಘಟನೆ ಇದು. ಸುಮಾರು ೭೦ ವರ್ಷ ಮೀರಿದ ವಯೋ ವೃದ್ಧರೊಬ್ಬರು ಬೆಂಗಳೂರಿನಿಂದ ತಡರಾತ್ರಿ ಮೈಸೂರಿಗೆ ವಾಪಸ್ಸಾಗಿದ್ದಾರೆ. ಆದರೆ, ನಗರದ ಪ್ರತಿಷ್ಠಿತ ಬಡಾವಣೆಯಲ್ಲಿರುವ ತಮ್ಮ ಮನೆಯ ವಿಳಾಸ ಹೇಳಲು ನೆನಪಾಗುತ್ತಿಲ್ಲ. ತಡರಾತ್ರಿ ಕಾರಣಕ್ಕೆ ಜನ ಸಂಚಾರ ವಿರಳವಾಗಿದ್ದರಿಂದ ನೆರವಿಗೆ ಬರಲು ದಾರಿಹೋಕರು ಇಲ್ಲ. ಇಂತಹ ಸ್ಥಿತಿಯಲ್ಲಿ ಪರಿತಪಿಸುತ್ತಾ ನಿಂತಿದ್ದಾಗ ಪತ್ರಿಕಾ ಕಚೇರಿಯಲ್ಲಿ ರಾತ್ರಿಪಾಳಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರೊಬ್ಬರು ಇಷ್ಟು ತಡರಾತ್ರಿ ವೈದ್ಧರೊಬ್ಬರು ಒಬ್ಬಂಟಿಯಾಗಿ ನಿಂತಿರುವುದನ್ನು ಕಂಡು ಹತ್ತಿರ ಹೋಗಿ ಮಾತನಾಡಿಸಿದಾಗ ಅವರ ಮರೆಗುಳಿತನದ ಸಮಸ್ಯೆ ಗೊತ್ತಾಗಿದೆ. ತಮ್ಮ ಬೈಕ್‌ನಲ್ಲಿ ವಯೋವೃದ್ಧರನ್ನು ಕೂರಿಸಿಕೊಂಡು ಅವರು ಹೇಳಿದ ಬಡಾವಣೆಯನ್ನು ನಾಲ್ಕಾರು ಬಾರಿ ಸುತ್ತಿದ್ದರೂ ಅವರ ಮನೆ ಇರುವ ರಸ್ತೆ ಅವರಿಗೆ ನೆನಪಾಗುತ್ತಿಲ್ಲ. ಸುಮಾರು ಅರ್ಧಗಂಟೆ ಸುತ್ತಾಡಿದ ನಂತರ ಹೇಗೋ ಮನೆ ಪತ್ತೆ ಹಚ್ಚಿ, ಬೈಕ್ ನಿಲ್ಲಿಸಿದವರಿಗೆ ಅಚ್ಚರಿ! ಮನೆಯ ಕಾಂಪೌಂಡ್ ಒಳಗೆ ಎರಡು ಐಷಾರಾಮಿ ಕಾರುಗಳು ನಿಂತಿವೆ. ಮನೆಯ ಹಿರಿಯ ಜೀವವೊಂದು ಮನೆಗೆ ವಾಪಸ್ಸಾಗಿಲ್ಲ ಎಂಬ ಯಾವ ಅಳುಕೂ ಇಲ್ಲದೇ ಮನೆಯವರೆಲ್ಲ ನಿದ್ರೆಗೆ ಜಾರಿದ್ದಾರೆ. ಕಾಂಪೌಂಡ್ ಗೇಟು ತೆರೆದು ಒಳ ಹೋಗಿ ನಾಲ್ಕಾರು ಸಲ ಕಾಲಿಂಗ್ ಬೆಲ್ ಅದುಮಿದ ಬಳಿಕ ಬಾಗಿಲು ತೆರೆದು ಇಣುಕಿದ ವ್ಯಕ್ತಿ ಗೊಣಗುತ್ತಲೇ ಆ ವೃದ್ಧರನ್ನು ಒಳಗೆ ಕರೆದು ಕೊಂಡು ದಡಾರ್ ಎಂದು ಬಾಗಿಲು ಹಾಕಿ ಕೊಂಡು, ಲೈಟ್ ಆಫ್ ಮಾಡಿದರೆ ವಿನಾ ಅಷ್ಟು ತಡರಾತ್ರಿಯಲ್ಲಿ ತಮ್ಮ ಕುಟುಂಬದ ಹಿರಿಯ ಜೀವವನ್ನು ಮನೆಗೆ ಸುರಕ್ಷಿತವಾಗಿ ಕರೆತಂದು ಬಿಟ್ಟಿದ್ದಕ್ಕೆ ಕನಿಷ್ಠ ಧನ್ಯವಾದ ಕೂಡ ಹೇಳುವ ಸೌಜನ್ಯ ತೋರಲಿಲ್ಲ.

ಮನುಷ್ಯನಿಗೆ ವಯಸ್ಸಾದಂತೆಲ್ಲ ಆರೋಗ್ಯ ಸಮಸ್ಯೆಗಳು ದೇಹವನ್ನು ಬಾಽಸುತ್ತವೆ. ಮಧುಮೇಹ, ರಕ್ತದೊತ್ತಡ, ಮಂಡಿ ನೋವು ಸೇರಿದಂತೆ ಇಡೀ ದೇಹ ಅನಾರೋಗ್ಯಗಳ ಆಗರ  ಆಗುತ್ತದೆ. ಅದರಲ್ಲಿ ಮರೆಗುಳಿತನವೂ ಒಂದು. ವಯೋವೃದ್ಧರಲ್ಲಿ ಈ ಮರೆವಿನ ಸಮಸ್ಯೆ ಸಾಮಾನ್ಯ. ನೆನಪಿನ ಶಕ್ತಿ ಕುಂದುತ್ತಾ ಬರುವುದನ್ನೇ ಮರೆಗುಳಿತನ (ಅಲ್ಜೈಮರ್) ಎಂದು ಕರೆಯಲಾಗುತ್ತದೆ. ವಯಸ್ಸಾದಂತೆ ಬದುಕಿನ ಕಹಿ ಘಟನೆಗಳನ್ನು ನೆನಪು ಮಾಡಿಕೊಂಡು ಕೊರಗುವ ಬದಲು, ಮರೆಯುವುದು ಸೂಕ್ತ ಅನ್ನಿಸಬಹುದು. ಆದರೆ, ಈ ಮರೆವು ಕಾಯಿಲೆಯಾಗಿ ಪರಿಣಮಿಸಿದರೆ ಶಾಪವೂ ಆಗಲಿದೆ. ಆಗ ಬದುಕಿನ ಕಹಿ ಘಟನೆಗಳಿರಲಿ, ನಿತ್ಯ ಜೀವನದ ಆಗುಹೋಗುಗಳೂ ನೆನಪಿನಲ್ಲಿ ಉಳಿಯದೆ, ನೆನಪಿಗೆ ಬಾರದೇ ಪರಿತಪಿಸಬೇಕಾಗುತ್ತದೆ. ನಾನು ಎಲ್ಲಿದ್ದೇನೆ? ಏನು ಮಾಡುತ್ತಿದ್ದೇನೆ ಎನ್ನುವು ದರ ಪರಿವೇ ಇರುವುದಿಲ್ಲ. ಇಡೀ ಪ್ರಪಂಚದಲ್ಲಿ ಗಂಭೀರ ಕಾಯಿಲೆಯಾಗಿ ಪರಿಣಮಿಸಿರುವ ಈ ಕಾಯಿಲೇಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ಒಂದು ದಿನವನ್ನು ಮೀಸಲಿಡಲಾಗಿದ್ದು, ಪ್ರತಿ ವರ್ಷ ಸೆಪ್ಟೆಂಬರ್ ೨೧ರಂದು ವಿಶ್ವ ಅಲ್ಜೈಮರ‍್ಸ್ ದಿನವನ್ನು ಆಚರಿಸಲಾಗುತ್ತಿದೆ.

ಅಲ್ಜೈಮರ್ ಕಾಯಿಲೆಯ ಲಕ್ಷಣಗಳು: ನೆನಪಿನ ಶಕ್ತಿ ಕುಂದುವಿಕೆ, ನಿತ್ಯದ ಕೆಲಸ ಮಾಡುವಾಗ ತೊಡಕುಗಳು, ವರ್ತನೆಯಲ್ಲಿ ಬದಲಾವಣೆ, ಸಂವಹನ ಕೌಶಲದಲ್ಲಿ ತೊಂದರೆಗಳು ಎದುರಾಗುತ್ತವೆ.

ವಿಶ್ವ ಅಲ್ಜೈಮರ‍್ಸ್ ದಿನದ ಇತಿಹಾಸ:  ಅಲ್ಜೈಮರ‍್ಸ್ ದಿನದ ಇತಿಹಾಸ ಶತಮಾನಗಳಷ್ಟು ಹಳೆಯದು. ಜರ್ಮನ್‌ನ ಮನೋವೈದ್ಯ ಅಲೋಯಿಸ್ ಅಲ್ಜೈಮರ್ ಅವರು ಈ ಕಾಯಿಲೆಯನ್ನು ಮೊಟ್ಟ ಮೊದಲ ಬಾರಿಗೆ ಗುರುತಿಸಿದರು. ಐವತ್ತು ವರ್ಷ ವಯಸ್ಸಿನ ಮಹಿಳೆಯೊಬ್ಬರಲ್ಲಿ ಈ ಕಾಯಿಲೆ ಕಾಣಿಸಿಕೊಂಡು ಮೃತಪಟ್ಟಳು. ಆ ಘಟನೆ ಬಳಿಕ ಜನರಿಗೆ ಈ ಕಾಯಿಲೆಯ ಬಗ್ಗೆ ಅರಿವು ಮೂಡಿಸುವ ಕೆಲಸಗಳು ನಡೆದವು. ಆ ನಂತರ ಹಲವು ಪ್ರಕರಣಗಳು ಬೆಳಕಿಗೆ ಬಂದವು. ಮೊಟ್ಟ ಮೊದಲ ಬಾರಿಗೆ ಈ ಕಾಯಿಲೆಯನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಈ ಕಾಯಿಲೆಗೆ ಆ ವೈದ್ಯರ ಹೆಸರನ್ನೇ ಇಡಲಾಗಿದೆ. ೧೯೦೬ರಿಂದ ಪ್ರತಿ ವರ್ಷ ಸೆಪ್ಟೆಂಬರ್ ೨೧ರಂದು ವಿಶ್ವ ಅಲ್ಜೈಮರ‍್ಸ್ ದಿನವನ್ನು ಆಚರಿಸುತ್ತಾ ಬರಲಾಗಿದೆ. ವಯಸ್ಸಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಅಲ್ಜೈಮರ್ ಲಕ್ಷಣಗಳನ್ನು ಗುರುತಿಸಿ, ಚಿಕಿತ್ಸೆ ಕೊಡಿಸಬೇಕು. ಈ ಕಾಯಿಲೆಯಿಂದ ಬಳಲುತ್ತಿರುವವರನ್ನು ಸಮಾಜ ನೋಡುವ ದೃಷ್ಟಿಕೋನವನ್ನು ಬದಲಾಯಿಸುವ ಉದ್ದೇಶ ದಿಂದ ಈ ದಿನದ ಆಚರಣೆ ಮುಖ್ಯವಾಗಿದೆ.

Tags:
error: Content is protected !!