Mysore
20
overcast clouds
Light
Dark

ಕಲಾವಿದರ ಸಂಘಕ್ಕೆ ಕಟ್ಟಡವಿದೆ, ಅದೀಗ ಸಕ್ರಿಯವಾಗಬೇಕು

 ‘ಸಮಸ್ತ ಕರ್ನಾಟಕ ಜನತೆಗೆ, ನನ್ನ ಸೆಲೆಬ್ರಿಟಿಗಳಿಗೆ ಹಾಗೂ ಹಿರಿಯ ಪತ್ರಕರ್ತರಿಗೆ, ಮಾಧ್ಯಮ ಮಿತ್ರರಿಗೆ ವರಮಹಾಲಕ್ಷಿ ಹಬ್ಬದ ಹಾರ್ದಿಕ ಶುಭಾಶಯಗಳು.

ಕಳೆದ ಸುಮಾರು ಎರಡು ವರ್ಷಗಳಿಂದ ನನ್ನ ಮತ್ತು ಕನ್ನಡ ಮಾಧ್ಯಮ ಮಿತ್ರರ ನಡುವೆ ಒಂದು ಕಂದಕ ಉಂಟಾಗಿತ್ತು. ಈ ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನ ಮಿತ್ರ ರಾಕ್‌ಲೈನ್ ವೆಂಕಟೇಶ್ ನೇತೃತ್ವದಲ್ಲಿ ನನ್ನ ಮತ್ತು ಕನ್ನಡದ ಪ್ರಮುಖ ಮಾಧ್ಯಮಗಳ ಸಂಪಾದಕರ ನಡುವೆ ಮಾತುಕತೆ ನಡೆದು ಇಡೀ ಪ್ರಕರಣ ಸುಖಾಂತ್ಯಗೊಂಡಿದೆ.

ಕೆಲ ವರ್ಷಗಳ ಹಿಂದಿನ ನನ್ನ ಆಡಿಯೋ ಒಂದು ದುರುದ್ದೇಶಪೂರ್ವಕವಾಗಿ ವೈರಲ್ ಆಗಿ ಇಡೀ ವಿವಾದಕ್ಕೆ ಕಾರಣವಾಗಿತ್ತು. ಅದು ಯಾವುದೋ ವಿಷಮ ಗಳಿಗೆಯಲ್ಲಿ ಒಬ್ಬ ವ್ಯಕ್ತಿಯ ಮಾತಿಗೆ ಪ್ರತಿಕ್ರಿಯೆಯಾಗಿತ್ತು. ಅದು ಮಾಧ್ಯಮದ ಇತರ ವ್ಯಕ್ತಿಗಳನ್ನು ಕುರಿತು ಆಡಿದ ಮಾತಾಗಿರಲಿಲ್ಲ. ಆ ವ್ಯಕ್ತಿ ಯಾವ ದುರುದ್ದೇಶದಿಂದ ಮಾಡಿದರೋ ಗೊತ್ತಿಲ್ಲ. ಆದರೂ ಆ ವ್ಯಕ್ತಿಗೆ ಒಳ್ಳೆಯದಾಗಲಿ. ಮುಂದೆ ಆ ವ್ಯಕ್ತಿ ಈ ರೀತಿಯ ದುರುದ್ದೇಶವನ್ನು ಮರುಕಳಿಸದಿರಲಿ.

ಆದರೂ ಅಂತಹ ಮಾತಿನಿಂದ ನೋವುಂಟಾಗಿದ್ದರೆ ಮಾಧ್ಯಮದ ಹಿರಿಯರಿಗೆ ಕ್ಷಮೆ ಕೋರುವುದರಲ್ಲಿ ತಪ್ಪಿಲ್ಲ. ಈ ಅಯಾಚಿತ ಘಟನೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ರಂಗದ ಕ್ಷಮೆ ಇರಲಿ. ಒಂದು ಉತ್ತಮ ಸಮಾಜಕ್ಕಾಗಿ ಮಾಧ್ಯಮಗಳ ಅಗತ್ಯವಿದೆ. ನನಗೂ ಮಾಧ್ಯಮಗಳ ಬಗ್ಗೆ ಗೌರವವಿದೆ. ಚಿತ್ರರಂಗದ ನನ್ನ ಬೆಳವಣಿಗೆಯಲ್ಲಿ ಮಾಧ್ಯಮಗಳು ಪ್ರೀತಿಯಿಂದ ನೀಡಿದ ಪ್ರಚಾರದ ಪಾಲೂ ಸಾಕಷ್ಟಿದೆ. ಈ ಹಿಂದೆ ಆಗಿರುವ ಕಹಿಘಟನೆಗಳನ್ನು ಮರೆತು ನಾವೆಲ್ಲ ಮುಂದೆ ಸಾಗೋಣ. ಕನ್ನಡ, ಕನ್ನಡಿಗರು, ಕನ್ನಡ ನೆಲ ಹೀಗೆ ಕನ್ನಡ ಚಿತ್ರರಂಗದ ಪ್ರಗತಿಗೆ ಜೊತೆಯಾಗಿ ಕೆಲಸ ಮಾಡೋಣ. ಪ್ರೀತಿಯಿರಲಿ. ನನ್ನ ಪ್ರೀತಿಯ ಸೆಲೆಬ್ರಿಟಿಗಳು ನನ್ನ ಭಾವನೆಯನ್ನು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ.

-ಪ್ರೀತಿಯಿಂದ ದರ್ಶನ್ ತೂಗುದೀಪ,

ಇದು ನಟ ದರ್ಶನ್ ತೂಗುದೀಪ ಅವರು ತಮ್ಮ ಡಿಜಿಟಲ್ ಗೋಡೆಯಲ್ಲಿ ಹೇಳಿರುವ ಹೇಳಿಕೆ. ನಟ, ನಿರ್ಮಾಪಕ, ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್ ಅವರ ಮಧ್ಯಸ್ಥಿಕೆಯಲ್ಲಿ ದರ್ಶನ್ ಮತ್ತು ಕರ್ನಾಟಕ ಮಾಧ್ಯಮ ಸಂಪಾದಕರ ಸಂಘದ ನಡುವೆ ನಡೆದ ಮಾತುಕತೆಯ ನಂತರ ನಟ ದರ್ಶನ್ ಅವರ ಕ್ಷಮಾಪಣೆ ಪತ್ರ ಇದು.

ಕನ್ನಡ ಚಿತ್ರರಂಗ ಕಷ್ಟದಲ್ಲಿದೆ. ಹೊಸದಾಗಿ ಬರುತ್ತಿರುವ ನಿರ್ಮಾಪಕರ ಬೆಂಬಲಕ್ಕೆ ನಾವೆಲ್ಲ ನಿಲ್ಲಬೇಕಿದೆ. ಪರಭಾಷೆಯ ಚಿತ್ರಗಳ ಎದುರು ಕನ್ನಡ ಸಿನಿಮಾಗಳು ಗೆಲ್ಲಬೇಕಿದ್ದರೆ ಮಾಧ್ಯಮಗಳ ನೆರವೂ ಬೇಕು. ಹಲವು ದಶಕಗಳಿಂದ ಮಾಧ್ಯಮ ಮತ್ತು ಚಿತ್ರರಂಗ ಒಂದೇ ಕುಟುಂಬದಂತಿವೆ. ಇನ್ನು ಮುಂದೆಯೂ ಅದೇ ಭಾವನೆಯಲ್ಲಿ ಮುಂದುವರಿಯೋಣ ಎಂದು ಈ ಸಂದರ್ಭದಲ್ಲಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾಗಿಯೂ ವರದಿಯಾಗಿದೆ.

‘ಸಾರ್ವಜನಿಕ ಜೀವನದಲ್ಲಿರುವ ಗಣ್ಯ ಹಾಗೂ ಜನಪ್ರಿಯ ವ್ಯಕ್ತಿಗಳು ನಡೆ ನುಡಿಯಲ್ಲಿ ಸಮಾಜಕ್ಕೆ ಮಾದರಿಯಾಗಿರಬೇಕು. ಮಾಧ್ಯಮ ಯಾರನ್ನೂ ದ್ವೇಷಿಸುವುದಿಲ್ಲ. ಅದು ಸೂಕ್ತವಾಗಿ ಪ್ರತಿಕ್ರಿಯಿಸುತ್ತಾ ಇರುತ್ತದೆ, ವಿಮರ್ಶಾತ್ಮಕ ನಿಲುವು ಹೊಂದಿರುತ್ತದೆ. ದರ್ಶನ್ ಕನ್ನಡದ ಹೆಮ್ಮೆಯ ನಟ ಎಂದು ಮಾಧ್ಯಮ ಯಾವತ್ತೂ ಭಾವಿಸಿದೆ. ಎಲ್ಲರೂ ಜತೆಯಾಗಿ ನಡೆಯೋಣ. ಪರಸ್ಪರರ ಬಗ್ಗೆ ಗೌರವ ಇಟ್ಟುಕೊಳ್ಳೋಣ’ ಎಂದು ಸಂಪಾದಕರ ಸಂಘವೂ ಹೇಳಿದೆ.

ಪತ್ರಿಕೋದ್ಯಮ ಯಾವತ್ತೂ ಯಾರ ಕುರಿತೂ ವೈಯಕ್ತಿಕ ದ್ವೇಷಗಳನ್ನು ಇಟ್ಟುಕೊಳ್ಳುವುದಿಲ್ಲ. ದರ್ಶನ್ ಪ್ರಸಂಗದಂತಹದೇ ಒಂದು ಪ್ರಸಂಗ ಅರ ವತ್ತರ ದಶಕದಲ್ಲಿ ಆಗಿತ್ತು. ಆಗ ಅತ್ಯಂತ ಜನಪ್ರಿಯರಾಗಿದ್ದ ತಾರೆ ಸರೋಜಾ ದೇವಿ ಅವರ ಯಾವುದೋ ಹೇಳಿಕೆ, ಪತ್ರಿಕೆಗಳು ಅವರ ಸಿನಿಮಾಗಳ ಸುದ್ದಿ ಯನ್ನು ಪ್ರಕಟಿಸದಿರುವಂತೆ ಮಾಡಿತ್ತು. ಈ ಕಂದಕವನ್ನು ಮುಚ್ಚಲು ಮಧ್ಯಸ್ಥಿಕೆ ವಹಿಸಿದವರು ಹೆಸರಾಂತ ನಿರ್ಮಾಪಕ, ನಿರ್ದೇಶಕ ನಟರಾಗಿದ್ದ ಬಿ.ಆರ್. ಪಂತುಲು. ಅವರ ‘ಕಿತ್ತೂರು ಚೆನ್ನಮ್ಮ’ ಚಿತ್ರದ ಚಿತ್ರೀಕರಣ ಆರಂಭಕ್ಕೆ ಮೊದಲು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಸರೋಜಾದೇವಿ ಅವರಿಂದ ಪತ್ರಕರ್ತರಿಗೆ ಕ್ಷಮೆ ಕೇಳಿಸಿದರು. ಆಗ ದೃಶ್ಯ ಮಾಧ್ಯಮಗಳಿರಲಿಲ್ಲ; ಸಾಮಾಜಿಕ ಜಾಲತಾಣಗಳಿರಲಿಲ್ಲವೆನ್ನಿ.

ದರ್ಶನ್ ವಿಷಯದಲ್ಲಿ, ಅವರೇ ಹೇಳಿದಂತೆ, ಮಾಧ್ಯಮಗಳ ಕುರಿತಂತೆ ಅವರು ಆಡಿದ ಮಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಅವರನ್ನು ಮಾಧ್ಯಮಗಳು, ವಿಶೇಷವಾಗಿ ದೃಶ್ಯ ಮಾಧ್ಯಮಗಳು ದೂರ ವಿಟ್ಟಿದ್ದವು. ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂದು ಸಂಬೋಧಿಸುತ್ತಾರೆ ದರ್ಶನ್. ಇತ್ತೀಚೆಗೆ ತೆರೆಕಂಡ ಅವರ ಚಿತ್ರ ‘ಕ್ರಾಂತಿ’ಯ ವೇಳೆ ಬಹುತೇಕ ಈ ಸೆಲೆಬ್ರಿಟಿಗಳೇ ಆ ಚಿತ್ರದ ಪ್ರಚಾರಕ್ಕೆ ಒತ್ತಾಸೆಯಾಗಿದ್ದರು. ಜೊತೆಗೆ ಯುಟ್ಯೂಬ್ ವಾಹಿನಿಗಳು. ಆ ಚಿತ್ರದ ಬಿಡುಗಡೆಗೂ ಮುನ್ನ ಇಂತಹದೊಂದು ಬೆಳವಣಿಗೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಹಾಗಾಗಲಿಲ್ಲ.

ಇದೀಗ ರಾಕ್‌ಲೈನ್ ವೆಂಕಟೇಶ್ ಅವರು ಮುಂದೆ ನಿಂತು ದರ್ಶನ್ ಮತ್ತು ಮಾಧ್ಯಮಗಳ ನಡುವಿನ ಕಂದಕವನ್ನು ಮುಚ್ಚುವ ಕೆಲಸ ಮಾಡಿದ್ದಾರೆ. ಚಿತ್ರೋದ್ಯಮದ ದೃಷ್ಟಿಯಿಂದ ಮಾತ್ರವಲ್ಲ, ಬಿಡುಗಡೆಯಾಗಲಿರುವ ಅವರ ಮುಂದಿನ ಚಿತ್ರದ ಕಾರಣಕ್ಕೂ ಇದು ಸಕಾರಾತ್ಮಕ ಬೆಳವಣಿಗೆ. ದರ್ಶನ್ ಮುಖ್ಯಭೂಮಿಕೆಯ ‘ಕಾಟೇರ’ ತೆರೆಗೆ ಸಿದ್ಧವಾಗುತ್ತಿದೆ.

ಕಳೆದ ವಾರ ಇನ್ನೂ ಒಂದು ಬೆಳವಣಿಗೆ ಆಯಿತು. ಸಂಸದೆ, ತಾರೆ ಸುಮಲತಾ ಅಂಬರೀಶ್ ಏರ್ಪಡಿಸಿದ್ದ ಅಂಬರೀಶ್ ಅವರ ಹುಟ್ಟುಹಬ್ಬ ಆಚರಣೆಯ ವೇಳೆ ದರ್ಶನ್ ಮತ್ತು ಸುದೀಪ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಇದನ್ನು ಅವರಿಬ್ಬರೂ ಮತ್ತೆ ವೈಮನಸ್ಯ ಮರೆತು ಒಂದಾಗುವ ಸೂಚನೆ ಎಂದ ಮಾತುಗಳೂ ಇದ್ದವು. ಅವೆಲ್ಲಾ ಜಾಲತಾಣಗಳಲ್ಲಿ ಕಂಡು ಬಂದವು. ಈ ಸಮಾರಂಭದಲ್ಲೂ ರಾಕ್‌ಲೈನ್ ಅವರದೇ ಮುಖ್ಯಪಾತ್ರ ಎಂದರೆ ತಪ್ಪಿಲ್ಲ.

ಸುದೀಪ್ ಹಾಗೂ ದರ್ಶನ್ ನಡುವೆ ವೈಯಕ್ತಿಕ ವೈಮನಸ್ಯ ಇದೆಯೋ ಇಲ್ಲವೋ, ಆದರೆ ಅಂತಹದೊಂದು ವಾತಾವರಣ ಸಾಮಾಜಿಕ ಮಾಧ್ಯಮ ಗಳಲ್ಲಿ ಕೊಂಚ ಹೆಚ್ಚೇ ಇದೆ. ಅಲ್ಲಿ ಯಾರು ಏನು ಬೇಕಾದರೂ ಬರೆಯಬಹುದು, ಯಾವುದೇ ನಿಯಂತ್ರಣ ಇಲ್ಲ. ಹಾಗಾಗಿ ಅಸಭ್ಯ ಮಾತುಗಳಿಗೆ ಅಲ್ಲಿ ಬರವಿಲ್ಲ. ಇಬ್ಬರ ಅಭಿಮಾನಿಗಳೇ ಇಂತಹ ಬರವಣಿಗೆಗಳನ್ನು ಬರೆಯುತ್ತಾರೋ, ಇಲ್ಲವೇ ಅವರ ಹೆಸರಲ್ಲಿ ಇನ್ಯಾರಾದರೂ ಕಿಡಿಗೇಡಿಗಳ ಕೆಲಸವೋ ಎನ್ನುವುದನ್ನು ಸಂಬಂಧಪಟ್ಟವರು ನೋಡಿ ಸೂಕ್ತ ಕ್ರಮ ಕೈಗೊಳ್ಳುವ ಕೆಲಸ ಆಗಬೇಕು.

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಾರ್ಯದರ್ಶಿ. ಅಂಬರೀಶ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಲಾವಿದರ ಸಂಘಕ್ಕೆ ಸ್ವಂತ ಕಟ್ಟಡವನ್ನು ಕಟ್ಟಲು, ಅವರಿಗೆ ಹೆಗಲು ಕೊಟ್ಟು ನಿಂತವರು ವೆಂಕಟೇಶ್. ಅಂಬರೀಶ್ ನಿಧನಾನಂತರ ಸಂಘದ ಅಧ್ಯಕ್ಷರ ಆಯ್ಕೆ ಆಗಿಲ್ಲ.

ಕನ್ನಡ ಚಿತ್ರರಂಗ ಇದೀಗ ಹೊರಳು ಹಾದಿಯಲ್ಲಿದೆ. ಸ್ವತಃ ನಿರ್ಮಾಪಕ ರಾಗಿರುವ ವೆಂಕಟೇಶ್ ಅವರಿಗೆ ಇದರ ಪೂರ್ಣ ಅನುಭವವೂ ಆಗಿದೆ. ಈ ಸಂದರ್ಭದಲ್ಲಿ ಕಲಾವಿದರ ಸಂಘಕ್ಕೂ ಅದರದೇ ಆದ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಅಗತ್ಯವಿದೆ. ಹೊಸ ಕಲಾವಿದರು ಸಾಕಷ್ಟು ಮಂದಿ ಬಂದಿದ್ದಾರೆ, ಬರುತ್ತಿದ್ದಾರೆ. ಅವರನ್ನೆಲ್ಲ ಜೊತೆ ಸೇರಿಸಿಕೊಂಡು ಕಲಾವಿದರ ಸಂಘಕ್ಕೆ ನಿಜಚಾಲನೆ ಕೊಡಬೇಕಾದ ಅಗತ್ಯವಿದೆ.

ನಿರ್ಮಾಪಕರನ್ನು ರಾಜಕುಮಾರ್ ಅವರು ‘ಅನ್ನದಾತ’ ಎಂದು ಕರೆದರು. ಆದರೆ ಈ ಅನ್ನದಾತರ ಬಂಡವಾಳ, ಮುಖ್ಯವಾಹಿನಿ ಚಿತ್ರಗಳ ಸಂದರ್ಭದಲ್ಲಿ, ಅವುಗಳ ಸೆಲೆಬ್ರಿಟಿ ನಟರ ಸಹಕಾರದ ಮೇಲೆ ನಿಂತಿರುತ್ತದೆ. ಕನ್ನಡ ಚಿತ್ರರಂಗವೂ ಕಾರ್ಪೊರೇಟ್ ಜಗತ್ತಿಗೆ ತನ್ನನ್ನು ಒಡ್ಡಿಕೊಳ್ಳತೊಡಗಿದೆ. ಹಿಂದಿನಂತೆ ಕೇವಲ ಮಾತಿನ ಮೇಲೆ ವ್ಯವಹಾರ ನಡೆಯುವ ದಿನಗಳು ಮರೆಯಾಗತೊಡಗಿವೆ. ಇಂತಹ ಸಂದರ್ಭದಲ್ಲಿ ಕಲಾವಿದರ ಸಂಘದ ಜವಾಬ್ದಾರಿಯೂ ಹೆಚ್ಚು. ಕಲಾವಿದರ ಸಂಘ ಸಕ್ರಿಯವಾಗಿರುತ್ತಿದ್ದರೆ, ಇತ್ತೀಚೆಗೆ ನಟ ಸುದೀಪ್ ಮತ್ತು ನಿರ್ಮಾಪಕ ಕುಮಾರ್ ನಡುವೆ ಎದ್ದ ವಿವಾದವನ್ನು ಬೇರೆಯದೇ ರೀತಿಯಲ್ಲಿ ಪರಿಹರಿಸಲು ಸಾಧ್ಯವಿತ್ತೇನೋ. ಈಗ ಅದು ನ್ಯಾಯಾಲಯದ ಮೆಟ್ಟಲೇರಿದೆ.

ಕಲಾವಿದರ ಸಂಘ ಸಕ್ರಿಯವಾಗಿ ಕೇರಳದಲ್ಲಿರುವಂತೆ ಕೆಲಸ ಮಾಡಿದ್ದೇ ಆದರೆ ಉದ್ಯಮದಲ್ಲಿನ ಹಲವು ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗಬಹುದು. ವೆಂಕಟೇಶ್ ಅವರೇ ಹೇಳಿದಂತೆ, ಕನ್ನಡ ಚಿತ್ರರಂಗ ಕಷ್ಟದಲ್ಲಿದೆ. ಕಳೆದ ವರ್ಷ ತೆರೆಕಂಡ ಎರಡು ಚಿತ್ರಗಳ ದಾಖಲೆಯನ್ನು ನೋಡಿ ಸಂಭ್ರಮಿಸುವ ಚಿತ್ರರಂಗದಲ್ಲಿ ಈ ಬಾರಿ ಕಾಣುತ್ತಿರುವ ಸಾಲುಸಾಲು ಸೋಲು ಏಕೆ ಎನ್ನುವ ಕುರಿತಂತೆ ಮಾತುಗಳಿಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರ ಸಂಘ, ಒಕ್ಕೂಟ ಹೀಗೆ ಚಿತ್ರರಂಗದ ಪ್ರಾತಿನಿಽಕ ಸಂಘಟನೆಗಳೆಲ್ಲ ಜೊತೆಯಾಗಿ ಚರ್ಚಿಸುವ ವಾತಾವರಣ ಬೇಕು.

ರಾಕ್‌ಲೈನ್ ವೆಂಕಟೇಶ್ ಕಲಾವಿದರ ಸಂಘವನ್ನು ಸಕ್ರಿಯಗೊಳಿಸಿ, ಹೊಸದಾಗಿ ಬರುತ್ತಿರುವ ನಿರ್ಮಾಪಕರಿಗಷ್ಟೇ ಅಲ್ಲದೆ, ಕಲಾವಿದರಿಗೂ ನೆರವಾಗುವಂತೆ ಮಾಡಬೇಕು. ಇದು ಕಾರ್ಯದರ್ಶಿಯಾಗಿರುವ ಅವರ ಜವಾಬ್ದಾರಿ ಕೂಡ.

ಪತ್ರಿಕೋದ್ಯಮ ಕನ್ನಡ ಚಿತ್ರರಂಗದ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಿದೆ. ಅದು ಪ್ರವಾಹ ಪರಿಹಾರ ನಿಧಿ ಸಂಗ್ರಹಕ್ಕೆ ಅರವತ್ತರ ದಶಕದಲ್ಲಿ ಸಂಘಟಿಸಿದ ಕಲಾವಿದರ ಯಾತ್ರೆ ಆಗಿರಬಹುದು, ಕನ್ನಡ ಚಿತ್ರೋದ್ಯಮಕ್ಕೆ ಆಗ ಮಾರಕವಾಗಿದ್ದ ಡಬ್ಬಿಂಗ್ ವಿರುದ್ಧದ ನಿಲುವಾಗಿರಬಹುದು, ಸರ್ಕಾರದಿಂದ ಸಹಾಯಧನ, ಪ್ರಶಸ್ತಿ, ತೆರಿಗೆ ವಿನಾಯಿತಿಗಳನ್ನು ಕೊಡಿಸುವಲ್ಲಿನ ಪಾತ್ರವಾಗಿರಬಹುದು… ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಅದು ಸದಾ ಚಿತ್ರೋದ್ಯಮದ ಹೆಜ್ಜೆಗಳನ್ನು ದಾಖಲಿಸುತ್ತಾ ಒತ್ತಾಸೆಯಾಗುತ್ತಾ, ದಾರಿ ತಪ್ಪಿದಾಗ ಎಚ್ಚರಿಸುತ್ತಾ ಇರುತ್ತದೆ, ಇರಬೇಕು. 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ