Mysore
27
few clouds

Social Media

ಭಾನುವಾರ, 10 ನವೆಂಬರ್ 2024
Light
Dark

‘ಉತ್ತೇಜಕಗಳು’ ಹಂಚುವ ಮಿಠಾಯಿಗಳೆ?

ಚುನಾವಣೆಗಳಲ್ಲಿ ಮಾತ್ರ ವೈರಿಗಳು. ಅವುಗಳು ಮುಗಿದ ಮೇಲೆ ಗೆದ್ದವರು ಮತ್ತು ಸೋತವರು ಎಲ್ಲರೂ ಜನ ಕಲ್ಯಾಣಕ್ಕಾಗಿ ದುಡಿಯುವವರೇ!

ಪ್ರೊ.ಆರ್.ಎಂ.ಚಿಂತಾಮಣಿ  
೨೦೧೭ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಪುರಸ್ಕೃತ ರಿಚರ್ಡ್ ಥ್ಯಾಲರ್ ತಮ್ಮ ಮೂರು ದಶಕಗಳ ಆರ್ಥಿಕ ಮನೋ ವಿಜ್ಞಾನದ ತಿರುಳನ್ನು ಒಳಗೊಂಡ ‘ನಡ್ಜ್’ ಶೀರ್ಷಿಕೆಯ ಬೃಹತ್ ಗ್ರಂಥವನ್ನು ಇನ್ನೊಬ್ಬ ಸಂಶೋಧಕರೊಡಗೂಡಿ ೨೦೧೮ರಲ್ಲೆ ರಚಿಸಿದರು. ಈ ನಡ್ಜ್ ಇಂಗ್ಲಿಷ್ ಪದಕ್ಕೆ ಶಬ್ದಕೋಶದಲ್ಲಿ ‘ಗಮನ ಸೆಳೆಯಲು ಮೃದುವಾಗಿ ಮೊಣ ಕೈ ಮುಟ್ಟು’. ‘ಮೃದುವಾಗಿ ಮುಂದಕ್ಕೆ ತಳ್ಳು’, ‘ಉತ್ತೇಜಿಸು’ ಹೀಗೆ ಹಲವು ಅರ್ಥಗಳಿವೆ. ಆ ಪುಸ್ತಕದುದ್ದಕ್ಕೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಉತ್ತೇಜನ   ಕೊಡುವ ಅವಶ್ಯಕತೆ ಬಗ್ಗೆ ಉದಾಹರಣೆ ಸಹಿತ ವಿವರಗಳಿವೆೆ.

ಇಲ್ಲಿ ಇದನ್ನು ಪ್ರಸ್ತಾಪಿಸಲು ಕಾರಣವಿದೆ. ನಮ್ಮ ಪ್ರಧಾನಿಗಳು ‘ನಮ್ಮ ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಮಿಠಾಯಿ (ರೇವಡಿ) ಹಂಚುವ ಆಶ್ವಾಸನೆಗಳನ್ನು ಕೈ ಬಿಡಬೇಕು’ ಎಂದು ಹೇಳಿದರು. ಅಂದರೆ ವೋಟಿಗಾಗಿ ಅಥವಾ ಬೇರೆ ಪಕ್ಷಕ್ಕಿಂತ ಮುಂದೆ ಹೋಗಲು ಸರ್ಕಾರದಿಂದ ಪುಕ್ಕಟೆ ಅಥವಾ ರಿಯಾಯಿತಿ ದರದಲ್ಲಿ ಏನನ್ನಾದರೂ ಕೊಡುವ ಆಶ್ವಾಸನೆಗಳನ್ನು ಕೊಡಬಾರದು ಎಂದರ್ಥ. ಇದು ಒಂದು ವರ್ಗದ ಮತದಾರರನ್ನು ಓಲೈಸಿದಂತೆ (ತುಷ್ಟೀಕರಣ) ಆಗುತ್ತದೆ ಎನ್ನುವುದು ಅವರ ವಾದ. ಈ ಹೇಳಿಕೆ ದೇಶಾದ್ಯಂತ ಎಲ್ಲ ವಲಯಗಳಲ್ಲಿ ಚರ್ಚೆಯ ವಿಷಯವಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಪ್ರವೇಶವಾಗಿ ಅಲ್ಲಿಯೂ ಮುಖ್ಯ ನ್ಯಾಯಾಧೀಶರ ಮುಂದೆ ವಾದ ವಿವಾದಗಳು ನಡೆಯುತ್ತಿವೆ. ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಮಣರವರು ಇದು ಸದ್ಯಕ್ಕೆ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಅಭಿಪ್ರಾಯ ವ್ಯಕ್ತಪಡಿಸಬಹುದಷ್ಟೇ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೇ ಮುಂದೆ ಒಂದು ದಿನ ಸರ್ಕಾರಗಳು ಇಂಥ ಕಾಯ್ದೆ ಅಂಗೀಕರಿಸಿದರೆ ಮತ್ತು ಅದನ್ನು ಯಾರಾದರೂ ಪ್ರಶ್ನಿಸಿದರೆ ಆಗ ನ್ಯಾಯಾಂಗ ಮಧ್ಯ ಪ್ರವೇಶಿಸಬೇಕಾಗುತ್ತದೆ ಎಂದೂ ಹೇಳಿದ್ದಾರೆ. ಆದರೂ ೨೦೧೩ರಲ್ಲಿ ಇಂಥ ಪುಕ್ಕಟೆ ಹಂಚುವ ವಿಷಯಗಳು ಸಂವಿಧಾನದಲ್ಲಿಯ ಸರ್ಕಾರದ ‘ನೀತಿಯ ನಿರ್ದೇಶಕ ತತ್ವಗಳು’ ಅಡಿಯಲ್ಲಿ ಬರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಮರು ಪರಿಶೀಲಿಸುವುದಕ್ಕಾಗಿ ಪ್ರಕರಣವನ್ನು ಮೂವರು ನ್ಯಾಯಾಧೀಶರಿರುವ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿದೆ.

ಉತ್ತೇಜಕಗಳು ಮತ್ತು ಪುಕ್ಕಟೆ ಹಂಚುವುದು ಇವೆರಡರ ನಡುವಿನ ಅಂತರವನ್ನು ನಿಖರವಾಗಿ ಗುರುತಿಸುವುದು ಕಷ್ಟದ ಕೆಲಸ. ಎರಡನ್ನೂ ಸ್ಪಷ್ಟವಾಗಿ ವ್ಯಾಖ್ಯಾನಿಸುವುದೂ ಸಮಸ್ಯೆಯೇ. ಈ ವಿಷಯ ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ೨೦೦೫ರಿಂದಲೂ ನಡೆಯುತ್ತಿದೆ. ಪುಕ್ಕಟೆ ಕೊಟ್ಟಿದ್ದು ಸಮರ್ಪಕವಾಗಿ ಉಪಯೋಗವಾಗಿ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮ ಬೀರಿ ಮಧ್ಯಮಾವಧಿ ಮತ್ತು ದೀರ್ಘಾವಧಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಭಾರವಾಗದೇ ಹೆಚ್ಚು ಆದಾಯ ತರುವಂತಾದರೆ ಅದು ಉತ್ತೇಜಕವಾಗುತ್ತದೆ. ಹಾಗೆ ಮಾಡಿದಿದ್ದರೆ ಅದು ‘ಫ್ರೀಬಿ’ ಆಗಿ ಸರ್ಕಾರದ ಹಣಕಾಸು ಲೆಕ್ಕಾಚಾರ ತಪ್ಪುವಂತಾಗುತ್ತದೆ. ಹಾಗೆಯೇ ಉತ್ತೇಜಕವೆಂದು ಕೊಟ್ಟಿದ್ದು ಸರಿಯಾಗಿ ಉಪಯೋಗವಾಗದೆ ಪರಿಣಾಮ ಬೀರದೆ ವ್ಯರ್ಥವಾಗಿ ಸರ್ಕಾರದ ಮೇಲೆ ಭಾರವಾಗಬಹುದು. ಆಗ ಪ್ರಜೆಗಳ ತೆರಿಗೆ ಹಣವನ್ನು ಪೋಲು ಮಾಡಿದಂತಾಗುತ್ತದೆ.

೧೯೬೦ರಲ್ಲೇ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಕೆ.ಕಾಮರಾಜ್ ಅವರು ಶಾಲೆಗಳಲ್ಲಿ ಮಧ್ಯಾಹ್ನದ ಫ್ರೀ ಊಟ ಯೋಜನೆ ಆರಂಭಿಸಿದರು. ಅದು ಈಗ ಬಹುತೇಕ ಎಲ್ಲ ರಾಜ್ಯಗಳಲ್ಲೂ ಚಾಲ್ತಿಯಲ್ಲಿದೆ. ಅದರಿಂದ ಶಾಲೆಗೆ ಬರುವ ಮತ್ತು ಓದು ಮುಂದುವರಿಸುವ ಮಕ್ಕಳ ಸಂಖ್ಯೆ ಹೆಚ್ಚಾಗಿ ಜ್ಞಾನ ಮತ್ತು ಕೌಶಲಗಳು ಹೆಚ್ಚಾಗಿರುವ ಮಾನವ ಸಂಪನ್ಮೂಲ ನಿರ್ಮಾಣವಾಗುತ್ತಿರುವುದನ್ನು ಕಾಣಬಹುದು. ಅದೇ ರೀತಿ ಹಳ್ಳಿಗಳಲ್ಲಿ ಫ್ರೀ ಆರೋಗ್ಯ ಸೇವೆ ಮತ್ತು ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶಗಳನ್ನು ಒದಗಿಸುವುದೂ ಸಕಾರಾತ್ಮಕ ಪರಿಣಾಮ ಬೀರಿವೆ. ಆದ್ದರಿಂದ ಆರೋಗ್ಯ ಮತ್ತು ಶಿಕ್ಷಣಗಳಿಗಾಗಿ ಒದಗಿಸುವ ಉತ್ತೇಜಕಗಳು ಫ್ರೀಬೀಗಳಲ್ಲ ಎನ್ನುವ ಖಚಿತ ಅಭಿಪ್ರಾಯ ಮೂಡುತ್ತಿದೆ.

ಸಮಸ್ಯೆಗೆ ಎರಡು ಮುಖಗಳಿವೆ. ಒಂದು: ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ‘ಅಧಿಕಾರಕ್ಕೆ ಬಂದರೆ ಇಂತಹ ವರ್ಗಗಳಿಗೆ ಇಂತಿಂಥ ಅನುಕೂಲಗಳನ್ನು ಮುಫತ್ತಾಗಿ ಅಥವಾ ರಿಯಾಯಿತಿಯಲ್ಲಿ ಒದಗಿಸುತ್ತೇವೆ’ ಎಂದು ಆಶ್ವಾಸನೆ ಕೊಡುವುದು. ಅವುಗಳಿಗೆ ತಗಲುವ ಖರ್ಚು ವೆಚ್ಚಗಳನ್ನು ಯಾವ ರೀತಿ ಹೊಂದಿಸಲಾಗುವುದು ಎಂದು ಇಲ್ಲಿಯವರೆಗೆ ಯಾವ ಪಕ್ಷವೂ ವಿವರಿಸಿಲ್ಲ.

೧೯೬೭ರಲ್ಲಿ ತಮಿಳುನಾಡಿನಲ್ಲಿ ಡಿಎಂಕೆಯ ಅಣ್ಣಾದೊರೆ ಒಂದು ರೂ.ಗೆ ‘ಮೂರು ಪಡಿ’ ಅಕ್ಕಿ ಕೊಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದರು. ಅಧಿಕಾರಕ್ಕೂ ಬಂದರು. ಆದರೆ, ಸಂಪನ್ಮೂಲ ಸಾಕಾಗದೇ ಪರದಾಡುವಂತಾಯಿತು. ನಂತರ ಈಗ ‘ಒಂದು ಪಡಿ’, ‘ನಂತರ ನೋಡೋಣ’ ಎನ್ನುವಂತಾಯಿತು.
ಇನ್ನೊಂದು ಸರ್ಕಾರಗಳೇ ಕಲ್ಯಾಣ ಯೋಜನೆಗಳನ್ನು ಉತ್ತೇಜಕಗಳೆಂದು ‘ಫ್ರೀಬೀ’ಗಳು ಪ್ರಕಟಿಸಿ ಜಾರಿಗೊಳಿಸುವುದು. ಇದಕ್ಕಾಗಿ ಬಜೆಟ್‌ನಲ್ಲಿ  ಅವಕಾಶವಿಲ್ಲದಿದ್ದರೆ ಸಾಲ ಎತ್ತಲಾಗುವುದು. ಇದೂ ಒಂದು ರೀತಿ ಸರ್ಕಾರದ ಮೇಲೆ ಭಾರವಾಗುವುದಲ್ಲದೆ ಆಳುವ ಪಕ್ಷಕ್ಕೆ ಅನುಕೂಲವಾಗುವುದೆಂಬ ಆಪಾದನೆಯೂ ಇತರ ಪಕ್ಷಗಳಿಂದ ಬರುತ್ತದೆ. ಇವೆಲ್ಲ ಗೊಂದಲಗಳನ್ನು ಸರಿಡಿಪಡಿಸಲು ಎಲ್ಲ ಆಸಕ್ತರು ಮತ್ತು ತಜ್ಞರನ್ನೊಳಗೊಂಡ ಉನ್ನತಾಧಿಕಾರದ ಸಮಿತಿ ರಚಿಸಲ್ಪಟ್ಟು ಅದು ಎಲ್ಲ ಆಯಾಮಗಳನ್ನು ಅಭ್ಯಸಿಸಿ ವಿಸ್ತೃತ   ಮಾರ್ಗಸೂಚಿ ರಚಿಸಬೇಕೆಂಬ ಅಭಿಪ್ರಾಯವೂ ಇದೆ. ಅದನ್ನು ಎಲ್ಲರೂ ಒಪ್ಪಬೇಕಲ್ಲ.

ರಾಜಕೀಯ ಪಕ್ಷಗಳ ಒಮ್ಮತ ಅವಶ್ಯ
ಏನೇ ಚರ್ಚೆಗಳಾದರೂ ವಿಷಯ ರಾಜಕೀಯ ಪಕ್ಷಗಳು ಮತದಾರರು ಚುನಾವಣಾ ಆಯೋಗ ಮತ್ತು ಆಡಳಿತಕ್ಕೆ ಸಂಬಂಧ ಹೊಂದಿರುವುದರಿಂದ ಇವೆಲ್ಲ ಅಭಿಪ್ರಾಯಗಳಾಗುತ್ತವೆಯೇ ಹೊರತು ಕಾರ್ಯಯೋಗ್ಯವಾಗಲಿಕ್ಕಿಲ್ಲ. ಹಾಗೇ ನೋಡಿದರೆ ಅಮೆರಿಕ ಜರ್ಮನಿ, ಚೀನ ಮತ್ತು ಫ್ರಾನ್ಸ್‌ಗೆ  ಹೋಲಿಸಿದರೆ ನಮ್ಮ ದೇಶದಲ್ಲಿ ಸಬ್ಸಿಡಿಗಳು ಮತ್ತು ಉತ್ತೇಜಕಗಳು ಕಡಿಮೆಯೆ. ಆದರೆ ‘ಫ್ರೀ ಬಿ’ಗಳನ್ನು ಕೊಡುವ ಪ್ರವೃತ್ತಿ ನಮ್ಮ ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದೆ.
ಆದ್ದರಿಂದ ನಮ್ಮ ಎಲ್ಲ ರಾಜಕೀಯ ಪಕ್ಷಗಳೂ ಒಂದೆಡೆ ಸೇರಿ ಕೂಲಂಕಷವಾಗಿ ಚರ್ಚಿಸಿ ಯಾವುದು ಕಲ್ಯಾಣ ಯೋಜನೆ ಯಾವುದು ಉತ್ತೇಜಕ ಮತ್ತು ಯಾವುದು ಮಿಠಾಯಿ (ರೇವಡಿ) ಎಂಬುದನ್ನು ಸಂಶಯಾತೀತವಾಗಿ ನಿರ್ಣಯಿಸಿ ತಮಗೆ ತಾವೇ ಎಲ್ಲ ಪಕ್ಷಗಳೂ ಒಪ್ಪಿ ಅನುಷ್ಠಾನಗೊಳಿಸುವಂತಹ ನೀತಿ ಸಂಹಿತೆ ತಯಾರಿಸಿಕೊಳ್ಳಬೇಕು. ಅದಕ್ಕೆ ಎಲ್ಲ ಪಕ್ಷಗಳು ಬದ್ಧರಾಗಿರಬೇಕು. ಆಡಳಿತ ಪಕ್ಷದ ಮೇಲೆ ಇಂಥದೊಂದು ಸಭೆ ಕರೆದು ಎಲ್ಲಾ ಪಕ್ಷಗಳನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ಹೆಚ್ಚಾಗಿದೆ. ನಮ್ಮ ಎಲ್ಲ ರಾಜಕೀಯ ಮುಖಂಡರೂ (ಆಡಳಿತ ಪಕ್ಷದವರೂ ಸೇರಿ) ಇಂದು ರಾಜಕಾರಣಿಗಳಾಗಬೇಕಾಗಿದೆ. ಮುತ್ಸದ್ದಿಗಳಾಗಬೇಕಾಗಿದೆ.

ಚುನಾವಣೆಗಳಲ್ಲಿ ಮಾತ್ರ ಸೈದ್ಧಾಂತಿಕವಾಗಿ ಬದ್ಧ ವೈರಿಗಳು. ಅವುಗಳು ಮುಗಿದ ಮೇಲೆ ಗೆದ್ದವರು ಮತ್ತು ಸೋತವರು ಎಲ್ಲರೂ ಜನ ಕಲ್ಯಾಣಕ್ಕಾಗಿ ದುಡಿಯುವವರೇ. ಪಕ್ಷಗಳಲ್ಲಿ ಮುಚ್ಚುಮರೆ ಸಲ್ಲದು. ಯಾವ ಪಕ್ಷದ ಆಡಳಿತವೂ ಶಾಶ್ವತವಲ್ಲ. ಎಲ್ಲ ಪಕ್ಷಗಳ ಗುರಿಯೂ ದೇಶದ ಪ್ರಗತಿಯೇ. ಸರ್ವಜನಾಂಗದ ಶಾಂತಿಯ ತೋಟ ನಿರ್ಮಿಸುವುದೇ. ಈಗ ಒಂದು ಒಮ್ಮತದ ನೀತಿ ಸಂಹಿತೆಯ ಅವಶ್ಯಕತೆ ಇದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ