‘ಸಂಜು ವೆಡ್ಸ್ ಗೀತಾ ೨’ ಕಳೆದ ವಾರ ತೆರೆಗೆ ಬರಬೇಕಾಗಿತ್ತು. ಕೊನೆಯ ಕ್ಷಣದಲ್ಲಿ ಕಾನೂನು ತೊಡಕೊಂದು ಎದುರಾಗಿ ಬಿಡುಗಡೆಗೆ ತಡೆ ಯಾಗಿತ್ತು. ಆ ತೊಡಕನ್ನು ಬಿಡಿಸಿ ಈ ವಾರ ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ. ಹೊಸ ಚಿತ್ರವೊಂದು ಬಿಡುಗಡೆ ಆಗುವ ವೇಳೆ ಇಂತಹ ಪ್ರಸಂಗಗಳು ಅಲ್ಲಿ ಇಲ್ಲಿ ಎದುರಾಗುವುದಿದೆ. ನಿರ್ಮಾಪಕರು ತಮ್ಮ ಹಿಂದಿನ ಚಿತ್ರದ ವೇಳೆ ಮಾಡಿದ್ದ ಸಾಲಗಳಿದ್ದರೆ, ಇಲ್ಲವೇ ಕೃತಿಚೌರ್ಯದಂತಹ ಕೆಲಸಗಳಾದಾಗ ಇಂತಹ ಪ್ರಸಂಗಗಳು ನಡೆಯುವುದಿದೆ.
‘ಸಂಜು ವೆಡ್ಸ್ ಗೀತಾ ೨’ ಚಿತ್ರದ ನಿರ್ಮಾಪಕರು ಛಲವಾದಿ ಕುಮಾರ್. ಹೆಸರಲ್ಲಿ ಮಾತ್ರವಲ್ಲ, ತಾವು ಇಲ್ಲೂ ಛಲವಾದಿ ಎನ್ನುವುದನ್ನು ಹೇಳಿದಂತಾಯಿತು. ಈ ವಾರ ಚಿತ್ರ ಬಿಡುಗಡೆಯ ವಿವರ ನೀಡುವ ವೇಳೆ, ತಡೆಯಾಜ್ಞೆ ಯಾಕೆ ಬಂತು ಎನ್ನುವುದನ್ನೂ ಅವರು ಹೇಳಿದರು.
ಕೆಲವು ವರ್ಷಗಳ ಹಿಂದೆ ನಾಗಶೇಖರ್ ನಿರ್ದೇಶಿಸಿದ್ದ ತೆಲುಗು ಚಿತ್ರದ ನಿರ್ಮಾಪಕರು ಹೈದರಾಬಾದ್ ಸಿವಿಲ್ ಕೋರ್ಟಿನಲ್ಲಿ ನಾಗಶೇಖರ್ ಮೇಲೆ ಕೇಸ್ ಹಾಕಿ ಈ ಚಿತ್ರವನ್ನು ಬಿಡುಗಡೆ ಮಾಡದಂತೆ ತಡೆಯಾಜ್ಞೆ ತಂದಿದ್ದರು. ಚಿತ್ರದ ಪ್ರಚಾರದಲ್ಲಿ ನಾಗಶೇಖರ್ ಮೂವೀಸ್ ಹೆಸರು ಕೂಡ ಇದ್ದುದು ಇದಕ್ಕೆ ಕಾರಣವಂತೆ. ಸಂಬಂಧಪಟ್ಟವರಿಗೆ, ತಾವು ಮಾತ್ರ ಇದರ ನಿರ್ಮಾಪಕರು ಎಂದು ಮನವರಿಕೆ ಮಾಡಿ ತಡೆಯಾಜ್ಞೆ ತೆರವು ಮಾಡಿ ಬಿಡುಗಡೆಗೆ ತಡೆ ಇಲ್ಲದ ಹಾಗೆ ನೋಡಿಕೊಂಡರು ನಿರ್ಮಾಪಕರು.
ಈ ಚಿತ್ರದ ಹಣಕಾಸಿಗೂ ನನಗೂ ಸಂಬಂಧವಿಲ್ಲ ಎನ್ನುವುದು ನಾಗಶೇಖರ್ ಮಾತು. ಹಿಂದೆ ತೆಲುಗು ಚಿತ್ರ ನಿರ್ದೇಶನದ ವೇಳೆ ಅವರಿಗೂ ನಿರ್ಮಾ ಪಕರಿಗೂ ಇದ್ದ ವ್ಯವಹಾರದ ಕುರಿತಂತೆ ಅವರು ಪ್ರಸ್ತಾಪಿಸಲಿಲ್ಲ. ಅದು ಅನಗತ್ಯ ಎನ್ನಿ. ನಿರ್ಮಾಪಕರು, ತಡೆಯಾಜ್ಞೆ ತೆರವುಗೊಳಿಸುವ ವೇಳೆ ನಾಲ್ಕೂವರೆ ಕೋಟಿ ರೂ. ಮೊತ್ತದ ಜಮೀನಿನ ಪತ್ರವನ್ನು ನೀಡಬೇಕಾದ್ದನ್ನೂ ಹೇಳಿದರು.
ಒಂದಂತೂ ಇಲ್ಲಿ ಸ್ಪಷ್ಟವಾದಂತಾಯಿತು. ವ್ಯವಹಾರದ ಏರುಪೇರು, ಚಿತ್ರಗಳ ಸೋಲು-ಗೆಲುವು, ಇರುವ ಸುದ್ದಿ, ಗಾಳಿಸುದ್ದಿ ಇತ್ಯಾದಿಗೆ ಇಲ್ಲಿ ಬರವಿಲ್ಲ. ಕನ್ನಡ ಚಿತ್ರರಂಗದ ಆರ್ಥಿಕ ಶಿಸ್ತಿನ ಕೊರತೆಯ ಬಗೆಗೂ ಸಾಕಷ್ಟು ಜಿಜ್ಞಾಸೆ ಇದೆ. ಹಿಂದೆಲ್ಲ ಯಾವುದೇ ಕಾಗದ ಪತ್ರಗಳಿಲ್ಲದೆ, ಕೇವಲ ಮಾತಿನ ಮೇಲೆ ವ್ಯವಹಾರಗಳು ನಡೆಯುತ್ತಿದ್ದುದೂ ಇದೆ. ಕೊಟ್ಟ ಮಾತು ತಪ್ಪದ ಆರ್ಥಿಕ ಶಿಸ್ತು ಇತ್ತು. ಬಹುಶಃ ಬಹಳ ಮಂದಿಗೆ ನಿರ್ದೇಶಕ, ನಿರ್ಮಾಪಕ, ನಟ ಬಿ. ಆರ್. ಪಂತುಲು ಅವರ ಈ ಶಿಸ್ತಿನ ಬಗ್ಗೆ ತಿಳಿದಿರಲಾರದು. ಅವರ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಪ್ರತಿ ತಿಂಗಳ ೭ನೇ ತಾರೀಕಿನಂದು ಸಂಬಳ ನೀಡುವುದು ವಾಡಿಕೆ. ಏನೇ ತೊಂದರೆಯಾದರೂ ಸಂಬಳದ ದಿನ ವ್ಯತ್ಯಾಸ ಆಗುತ್ತಿರಲಿಲ್ಲವಂತೆ.
೧೯೭೪ ಅಕ್ಟೋಬರ್ ೭. ತಮ್ಮ ಮುಂದಿನ ಚಿತ್ರದ ಪೂರ್ವಸಿದ್ಧತೆಗಾಗಿ ಅವರು ಬೆಂಗಳೂರಿಗೆ ಬಂದಿದ್ದರು. ಸಂಬಳ ಕೊಡಲು ಹಣದ ವ್ಯವಸ್ಥೆ ಮಾಡಿದ್ದರು.
ರಾತ್ರಿ ತಡವಾಗಿ ಬೆಂಗಳೂರಿನಲ್ಲಿ ತಾವು ಉಳಿದುಕೊಂಡಿದ್ದ ಹೋಟೆಲಿಗೆ ಬಂದ ಪಂತುಲು, ಮಾರನೇ ದಿನ ಮುಂಜಾನೆ ಮ್ಯಾನೇಜರ್‌ಗೆ ಫೋನ್ ಮಾಡಿ ಸಂಬಳ ಬಟವಾಡೆ ಆಯಿತೇ ಎಂದು ಕೇಳಿದಾಗ ಆ ಕಡೆಯಿಂದ ಬಂದ ಉತ್ತರ ಅವರನ್ನು ಘಾಸಿಗೊಳಿಸಿತ್ತು; ಹೃದಯಾಘಾತವಾಗಿ ಇನ್ನಿಲ್ಲವಾದರು! ಅವರು ವ್ಯವಸ್ಥೆ ಮಾಡಿ ಬಂದಿದ್ದ ವ್ಯಕ್ತಿ ಹಣ ಕೊಡದೆ ಇದ್ದುದರಿಂದ ಸಂಬಳ ಕೊಟ್ಟಿಲ್ಲ ಎನ್ನುವುದು ನಂತರ ತಿಳಿಯಿತು. ಐದು ದಶಕಗಳ ಹಿಂದಿನ ಮಾತಿದು.
ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ, ವಿತರಕ, ಪ್ರದರ್ಶಕ ಈ ಮಂದಿ ಒಬ್ಬರಿಗೊಬ್ಬರು ಪರಸ್ಪರ ಅರಿತು ಮುನ್ನಡೆಯುತ್ತಿದ್ದ ದಿನಗಳಿದ್ದವು. ಚಿತ್ರ ನಿರ್ಮಾಣಕ್ಕೆ ವಿತರಕ ನೆರವಾದರೆ, ಪ್ರದರ್ಶಕರು ಆ ಚಿತ್ರ ತಮ್ಮ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲು ಮುಂಗಡ ನೀಡುತ್ತಿದ್ದರು. ಆಗೆಲ್ಲ ‘ಬರುತ್ತದೆ’ ಎನ್ನುವ ಸ್ಲೆ ಡ್‌ಗಳನ್ನು ಚಿತ್ರ ಪ್ರದರ್ಶನದ ಮಧ್ಯಂತರದ ವೇಳೆ ನೋಡಬಹುದಾಗಿತ್ತು. ಚಿತ್ರ ಬಿಡುಗಡೆಯ ವೇಳೆ ಅದರ ಪ್ರಚಾರ, ಜಾಹೀರಾತುಗಳ ವೆಚ್ಚವನ್ನೂ ಪ್ರದರ್ಶಕರೇ ವಹಿಸುತ್ತಿದ್ದರು.
ದಿನಕಳೆದಂತೆ, ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಲು ಲೇವಾದೇವಿದಾರರು ಪ್ರವೇಶ ಮಾಡಿದರು. ಬಂಡವಾಳ ಜೊತೆ ಬಡ್ಡಿ. ನಿರ್ಮಾಪಕರು ಚಿತ್ರಕ್ಕೆ ಹೂಡುವ ಬಂಡವಾಳಕ್ಕಿಂತ ಹೆಚ್ಚು ಬಡ್ಡಿ ಕೊಟ್ಟ ಪ್ರಸಂಗಗಳು ಸಾಕಷ್ಟಿವೆ. ದೂರದರ್ಶನದ ಆಗಮನ, ಅಲ್ಲಿ ಚಿತ್ರಗಳ ಪ್ರಸಾರಕ್ಕೆ ಸಿಗುವ ರಾಯಧನ ಚಿತ್ರದ ನಿರ್ಮಾಣದ ಜೊತೆಜೊತೆಗೆ ತಾರೆಯರ ಸಂಭಾವನೆಯನ್ನು ಏರಿಸತೊಡಗಿತ್ತು. ಜಿಲ್ಲಾವಾರು ಹಂಚಿಕಾ ವ್ಯವಸ್ಥೆ ಇದಕ್ಕೆ ಪೂರಕವಾದ ಇನ್ನೊಂದು ಬೆಳವಣಿಗೆ.
ಸೆಲ್ಯಲಾಡಿನಿಂದ ಡಿಜಿಟಲ್ ಕಡೆಗೆ ಸಿನಿಮಾ ಹೊರಳುತ್ತಲೇ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗತೊಡಗಿತು. ಮುಕ್ತ ವ್ಯಾಪಾರ ಒಪ್ಪಂದ ಇನ್ನೊಂದೆಡೆ. ಕಾರ್ಪೊರೇಟ್ ವ್ಯವಸ್ಥೆಗೆ ಒಗ್ಗಿಕೊಳ್ಳುವಲ್ಲಿ ಹಳಬರಿಗೆ ಕಷ್ಟ ಆಯಿತು. ಹೊಸಬರು ಒಗ್ಗಿಕೊಳ್ಳತೊಡಗಿದರು. ಈ ನಡುವೆ ಇತರ ಉದ್ಯಮಗಳಂತೆ ಸಿನಿಮಾ ನಿರ್ಮಾಣಕ್ಕೂ ಬ್ಯಾಂಕ್‌ಗಳಿಂದ ಸಾಲ ಪಡೆಯುವ ವ್ಯವಸ್ಥೆ ಇತ್ತು. ನಿರ್ಮಾಪಕರು ಈ ಅನುಕೂಲವನ್ನು ಸರಿಯಾಗಿ ಬಳಸಿಕೊಂಡಿದ್ದರೆ ಉದ್ಯ ಮಕ್ಕೆ ಅನುಕೂಲ ಆಗುತ್ತಿತ್ತೋ ಏನೋ. ಆದರೆ ಅದರ ಉಪಯೋಗ ಸರಿಯಾಗಿ ಆಗಲಿಲ್ಲ, ಅದರಿಂದಾಗಿ ಸಿನಿಮಾ ನಿರ್ಮಾಣಕ್ಕೆ ಸಾಲ ಕೊಡುತ್ತಿದ್ದ ಬ್ಯಾಂಕ್ ಆ ಯೋಜನೆಯಿಂದ ಹಿಂದಕ್ಕೆ ಬಂತು ಎನ್ನಲಾಗಿದೆ.
ಕಳೆದ ವರ್ಷ ಎರಡು ಪ್ರಸಂಗಗಳು ನಿರ್ಮಾಣ ವೆಚ್ಚದ ಮೇಲೆ ಹಿಡಿತ ಇಲ್ಲದೆ ಇರುವುದನ್ನು, ಸರಿಯಾದ ಯೋಜನೆ ಇಲ್ಲದೆ ಚಿತ್ರ ನಿರ್ಮಾಣಕ್ಕೆ ಇಳಿಯುವುದನ್ನು ಹೇಳಿದೆ. ನಿರ್ದೇಶಕರಾದ ವಿನೋದ್ ಮತ್ತು ಗುರುಪ್ರಸಾದ್ ಅವರ ಸ್ವಯಂ ಹತ್ಯೆ ಇದಕ್ಕೆ ಜ್ವಲಂತ ಸಾಕ್ಷಿ. ಕೋಟಿ ರೂ. ವೆಚ್ಚದಲ್ಲಿ ಮುಗಿಯುವ ಚಿತ್ರದ ಶೇ. ೮೦ ರಷ್ಟು ಕೆಲಸ ಮುಗಿಯುವ ವೇಳೆ, ಅದಾಗಲೇ ಏಳು ಪಟ್ಟು ಆಗಿರುವುದನ್ನು ವಿನೋದ್ ಆತ್ಮೀಯರ ಬಳಿ ಹೇಳಿ ಕೊಂಡಿದ್ದರಂತೆ. ಅತಿಯಾದ ಆತ್ಮವಿಶ್ವಾಸದ ನಿಗೂಢ ಗುರುಪ್ರಸಾದ್ ಸಾವಂತೂ ಉದ್ಯಮಕ್ಕೆ ಆಘಾತ ತಂದಿತ್ತು.
ಇಬ್ಬರು ನಿರ್ಮಾಪಕರ ಆರ್ಥಿಕ ಅಶಿಸ್ತು, ದುರುಪಯೋಗಗಳ ಕುರಿತ ವರ್ತಮಾನ. ಇವುಗಳಲ್ಲಿ ಒಂದು ‘ಸಂಗೊಳ್ಳಿ ರಾಯಣ್ಣ’ ಚಿತ್ರದ ನಿರ್ಮಾಪಕರಿಗೆ ಸಂಬಂಧಿಸಿದ್ದು. ಐದಾರು ವರ್ಷಗಳ ಹಿಂದೆ ಅವರನ್ನು ಬೇರೊಂದು ಆರೋಪದಲ್ಲಿ ಬಂಧಿಸಲಾಗಿತ್ತು. ಕಾಕತಾಳೀಯ ಎಂದರೆ, ‘ಸಂಗೊಳ್ಳಿ ರಾಯಣ್ಣ’ ಚಿತ್ರದ ಮರುಬಿಡುಗಡೆಯ ಸುದ್ದಿಯ ವೇಳೆ, ಅವರ ಬಿಡುಗಡೆಯ ಸುದ್ದಿಯೂ ಬಂದಿತ್ತು.
ಇನ್ನೊಂದು ಹೆಸರಾಂತ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ (ಬಾಬು) ಅವರು ನಿರ್ದೇಶಿಸುತ್ತಿರುವ ‘ವೀರಕಂಬಳ’ ಚಿತ್ರದ ನಿರ್ಮಾಪಕರ ಕುರಿತದ್ದು. ತಾವು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರ ನಿರ್ದೇಶನದಲ್ಲಿ ಚಿತ್ರ ನಿರ್ಮಿಸುವ ವಿಷಯ ಹೇಳಿ, ಕೊರೊನಾ ಸಂದರ್ಭದಲ್ಲಿ ತಮ್ಮ ವ್ಯಾಪಾರದಲ್ಲಿ ನಷ್ಟವಾಗಿ, ತೊಂದರೆಗೆ ಸಿಲುಕಿದ್ದ ವ್ಯಕ್ತಿಯಿಂದ ಕೆಲವು ಕೋಟಿ ರೂ. ಗಳನ್ನು ಪಡೆದದ್ದು, ನಂತರ ತಮ್ಮ ಕೈಗೆ ಸಿಗದೆ ಇರುವುದರ ಕುರಿತಂತೆ ದೂರು ನೀಡಿದ ಸುದ್ದಿಯಾಗಿತ್ತು.
ಇಂತಹ ಸುದ್ದಿಗಳಲ್ಲಿ ಕೆಲವು ಅಧಿಕೃತವಾದರೆ, ಕೆಲವು ಗಾಳಿ ಸುದ್ದಿಗಳಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಈ ಗಾಳಿಸುದ್ದಿಗಳ ಪ್ರಯೋಜನ ಪಡೆಯುವ ಮಂದಿಯೂ ಸಾಕಷ್ಟಿದ್ದಾರೆ ಎನ್ನುವುದು ಗಾಂಧಿನಗರದ ಅನು ಭವಿಗಳ ಮಾತು. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರು ತಮ್ಮ ಚಿತ್ರ ನಿರ್ದೇಶಿ ಸುತ್ತಾರೆ, ತಮ್ಮ ಜೊತೆಗಿದ್ದಾರೆ ಎಂದಾಗ ಸಹಜವಾಗಿಯೇ ವ್ಯವಹಾರ ಸುಲಭ. ಬಹಳಷ್ಟು ಸಂದರ್ಭಗಳಲ್ಲಿ ಈ ಮಂದಿಗೆ, ಸೃಜನಶೀಲರಿಗೆ ಇಂತಹ ಬೆಳ ವಣಿಗೆಗಳ ಮಾಹಿತಿಯೂ ಇರುವುದಿಲ್ಲ. ತಿಳಿಯುವ ಹೊತ್ತಿಗೆ ಅವರ ಹೆಸರು ಬೇರೆ ಯಾರದೋ ಕಾರಣಕ್ಕೆ, ಬೇರೆ ಯಾವುದೋ ಕಾರಣಕ್ಕೆ, ಅವರಿಗೆ ಸಲ್ಲದ ರೀತಿಯಲ್ಲಿ ಪ್ರಚಾರವಾಗಿರುತ್ತದೆ.
ಹಿಂದಿನ ದಿನಗಳು ರಾಮ-ಕೃಷ್ಣ ಲೆಕ್ಕದವು; ಈಗ ಹಾಗಲ್ಲ ಎನ್ನುವುದು ಹೆಚ್ಚಿನವರು ತಿಳಿದ ವಿಷಯ. ಕೋಟಿಗಟ್ಟಲೆ ವ್ಯವಹಾರ, ಲೆಕ್ಕದ ವಿಷಯ ಬಂದಾಗ, ತೆರಿಗೆ ಇಲಾಖೆಯ ಮುಂದೆ ಬಂದಾಗ ಲಕ್ಷಗಳಿಗೆ ಇಳಿದುಬಿಡುತ್ತದೆ ಎನ್ನುತ್ತಾರೆ, ಈ ಲೆಕ್ಕದ ಹಿಂದೆ ಬೀಳುವ ಮಂದಿ. ಮೂಕಿ ದಿನಗಳಲ್ಲೇ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ ಡಾ. ಶಿವರಾಮ ಕಾರಂತರು, ೧೯೯೪ರಲ್ಲಿ ೨೪ ಗಂಟೆಗಳಲ್ಲಿ ಚಿತ್ರೀಕರಣ ಆದ ‘ಸೆಪ್ಟೆಂಬರ್ ೮’ ಚಿತ್ರದ ಮುಹೂರ್ತ ಚಿತ್ರಿಕೆಗೆ ಆರಂಭ ಫಲಕ ತೋರಿಸಿ ನಟಿಸಿದ್ದರು. ಆಗ ಲೋಕಾಭಿರಾಮವಾಗಿ ಮಾತನಾಡುತ್ತಾ, ಭಾರತೀಯ ಚಿತ್ರರಂಗದಲ್ಲಿ ಎಲ್ಲಿಯ ವರೆಗೆ ಕಪ್ಪುಹಣ ಬಳಕೆ ಆಗುತ್ತದೋ ಅಲ್ಲಿಯ ವರೆಗೆ ಈ ಮಾಧ್ಯಮ ಸೃಜನಶೀಲರಿಂದ ದೂರ ಉಳಿಯುತ್ತದೆ ಎಂದಿದ್ದರು! ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಬೇಕು?
ಕಮಿಶನ್ ಈ ದಿನಗಳ ಇನ್ನೊಂದು ಬೆಳವಣಿಗೆ. ನಟನಟಿಯರ ಕಾಲ್ ಶೀಟ್, ಹೊರಾಂಗಣ ಘಟಕ, ಚಿತ್ರೀಕರಣ ತಾಣಗಳು, ಹೀಗೆ ಸಿನಿಮಾ ಸಂಬಂಽಸಿದ ಎಲ್ಲೆಡೆ ಕಮಿಶನ್ ದಂಧೆಯೂ ಹೆಚ್ಚಿರುವುದು ನಿರ್ಮಾಪಕರ ಗಮನಕ್ಕೆ ಬಂದಿದೆ. ಆದರೆ ಅವರು ಅದರ ಕುರಿತಂತೆ ಏನೂ ಮಾಡುವ ಸ್ಥಿತಿಯಲ್ಲಿಲ್ಲ ಎನ್ನುವುದೇ ಚೋದ್ಯದ ವಿಷಯ. ಚಿತ್ರ ನಿರ್ಮಾಣ ರಂಗದಲ್ಲಿ ಆರ್ಥಿಕ ಶಿಸ್ತಿನ ಕುರಿತಂತೆ ಉದ್ಯಮದ ಮಂದಿ ಗಂಭೀರವಾಗಿ ಯೋಚಿಸಬೇಕಿದೆ.