Mysore
27
overcast clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

`ಉಗಾದಿ’ಯಲ್ಲಿ ಕಾಡುಗೊಲ್ಲರ ನಾಲ್ಗೆ ಮ್ಯಾಲೆ ನಲಿದಾಡುವ ನುಡಿಯ ಮೋಡಿ

ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಮನಗರ ಸೇರಿದಂತೆ ಸುಮಾರು ೧೨ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಕಾಡುಗೊಲ್ಲ ಬುಡಕಟ್ಟು ಸಮುದಾಯವು ಸಾಂಸ್ಕತಿಕ ವೀರರ ಆದರ್ಶಗಳನ್ನು ಅಳವಡಿಸಿಕೊಂಡು ಶ್ರೀಮಂತ ಸಂಸ್ಕ ತಿ ಹೊಂದುವ ಮೂಲಕ ತನ್ನದೇ ಆದ ಅಸ್ಮಿತೆಯನ್ನು ಉಳಿಸಿಕೊಂಡು ಸಾಗಿದೆ. ಈ ಸಮುದಾಯದ ನುಡಿಗಡಣವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಮೈಸೂರಿನ ಪ್ರತಿಷ್ಠಿತ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಕೆ. ತಿಮ್ಮಯ್ಯ ಅವರು ಆ ಪರಿಸರ ನುಡಿಯಲ್ಲಿ ನೇಯ್ದಿರುವ ‘ಉಗಾದಿ’ ಸಂಕಲನದಿಂದ ‘ತೋಳ ಬಂತು ತೋಳ’ ಕತೆಯ ಆಯ್ದ ಭಾಗವೊಂದನ್ನು ಇಲ್ಲಿ ಪ್ರಕಟಿಸಲಾಗಿದೆ.

‘ಅಯ್ಯೋ ಸಿವ್ನೆ. . . ಬೈಗಾಗಿ ಕಣ್ಕತ್ಲಾ ದ್ರೂನೂ. . . ಯೀ ಮಿಂಚಿ ಯೇನ್ಮಾಡ್ತಿದ್ದಾ ನಪ್ಪ ದ್ಯೇವ್ರೇ. . . ? ! ವೋಗ್ಲಿ. . . ಯಿವ್ನೇನೋ ಅರೀದುಡ್ಗ. . . ಯೀ ಮನುಸ್ಗಾದ್ರು ಪ್ರ್ಯೆಗ್ಗುನ್ಬಾಡ್ವ. . . ? ವೊತ್ತಿದ್ದಂಗೆ ಕಳ್ಸಾಕೇನಾಗೈತಾತು. . . ? ಎನ್ನುತ್ತಾ ಸಾಕಮ್ಮ ಕುರಿಹಟ್ಟಿಗೂ ಮನೆಗೂ ತಾಡುಯ್ಯುತ್ತಿದ್ದಳು. ಹಟ್ಟಿಯೊಳಗೆ ಮರಿಗಳು ಒಂದೇ ಸಮನೆ ಬ್ಯಾ. . . ಬ್ಯಾ. . . ಬ್ಯಾ. . . ಎಂದು ಅರಚುತ್ತಿದ್ದವು. ಮಾತೃ ಹೃದಯದ ಸಾಕಮ್ಮ ತಡೀಲಾರದೆ ತಡಿಕೆ ಬಿಚ್ಚಿ ಒಳಗೆ ಹೋದಳು. ಜಾಲಿ ಕೊನೆಗಳನ್ನು ತಿರುವಿಹಾಕಿ. ನೀರಿನ ತಪ್ಪಲೆಯನ್ನು ಹತ್ತಿರಕ್ಕಿಟ್ಟು ‘ಬತ್ತಾನ್ತಡೀರಮ್ಮಾ. . . ನಿಮ್ಮಮ್ಗುಳಾತಕೆ ಕರ್ಕೊಂಡೋಗ್ತನೇ. . . ಅಲ್ಲಿತಂಕ ಮೇಯ್ತಾಯಿರ್ರಿ’ ಎನ್ನುತ್ತಾ ಕುರಿಮರಿ ಗಳೊಡನೆ ಮಾತಾಡತೊಡಗಿದಳು. ಆಗಲೇ ಆರು ಗಂಟೆಯಾಯಿತು. ಕಾಡು ಹಕ್ಕಿಗಳು ಸೂರ್ಯನಿಗೆ ವಿದಾಯ ಗೀತೆಯನ್ನು ಹಾಡತೊಡಗಿದವು. ಸಾಕಮ್ಮ ಹಟ್ಟಿಯಿಂದ ಮನೆ ಕಡೆ ನಡೆದಳು. ಮನೆಯ ಅಂಗಳದಲ್ಲಿ ಮಿಂಚ ಬಲೆ, ಗೂಟ, ಕಂಬಳಿಗಳ ಕಟ್ಟನ್ನು ಇಳಿಸುತ್ತಿದ್ದ. ‘ಯಿದ್ಯಾಕಲ. . . ಮಿಂಚಿ. . . ಯಿವತ್ಮಂದೆಯಿರಲ್ವ? ’ ಸಾಕಮ್ಮ ಕುತೂಹಲದಿಂದ ಕೇಳ ತೊಡಗಿದಳು. ಆಗ ತಾನೇ ಬಲೆಗ ಗೂಟ ಹೊತ್ತು ತಂದ ಚಿತ್ತಣ್ಣ ‘ಯಿವತ್ಮಂದೆಯಿರಲ್ಲ ಕಣತ್ತೇ. . . ನಿನ್ಮನೆ ಅಂಗುಳ್ದಲ್ಲೆ ತಡೀತೀವಿ. ದಿನಾ. . . ಕತ್ಲಾಗೆ ಕರೇ ಗುಂಡ್ತಿಂದೂ. . . ತಿಂದೂ ಸಾಕಾಗೈತೆ. ಅದ್ಕೇ ಯಿವತ್ನಮ್ಮತ್ತ್ಯಮ್ಮ, ಅಬ್ದಡ್ಗೆ ಮಾಡ್ತಾಳೆ. . . ಮಾಡುಸ್ಕಂಡುಮ್ಮನಾ. . . ಆಮ್ತ ಯಿಲ್ಲೇ ಮಂದೆ ತಡೀತಿವಿ. . . ನೀನೋಗಿ ರಪ್ರಪ್ನಡ್ಗೆ ಮಾಡು. . . ’ ಎನ್ನುತ್ತಾ ಬಲೆಗೂಟ ಇಳಿಸಿದ.

‘ವೊಂಕಣೋ. . . ರಪ್ಪನ್ತಳ್ಕಂಬಾರಪ್ಪ. . . ಎನ್ನುತ್ತಾ ಇಬ್ಬರಿಗೂ ಕುಡಿಯಲು ನೀರು ಕೊಟ್ಟಳು ಸಾಕಮ್ಮ. ‘ನೀವೂ. . . ನಾಯ್ಕೊಯ್ಯನೆಂಟ್ರೇ. . . ತತ್ತ. . . ತತ್ತಾರತ್ತೇ. . . ಬಲೆಗೂಟ ವೊತ್ಕಂಬಂದು ನಾಲ್ಗೆಲ್ಲಾ ಒಣ್ಗೋಗೈತೆ’ ಎಂದು ತಂಬಿಗೆ ನೀರನ್ನು ಗಳಗಳ. . . ಕುಡಿದು ಬರಿದು ಮಾಡಿದನು. ‘ಲೇಯ್. . . ಸಿತ್ತ ನಾನ್ನೀರ್ಕುಡಿಯಾ ವೊತ್ಗೆ ನೀನೋಗಿ ಮರಿ ಬಿಟ್ಕಂಬಾರಲೇ ಎನ್ನುತ್ತಾ ಮಿಂಚ ಬಾಯಿ ಮುಕ್ಕಳಿಸತೊಡಗಿದನು. ‘ವೋಗೋಗ್ರೋ. . . ಪಾಪ. . . ಬೈನಿಂದ ವೊಂದೇ ಸಮ್ಕರಿಸ್ಕೈಮ್ತೈದವೆ’ ಎಂದು ಹೇಳಿ ಸಾಕಮ್ಮ ಒಳಗೆ ಹೋದಳು. ಚಿತ್ತಣ್ಣ ಮರಿ ಬಿಟ್ಟುಕೊಂಡು ಬರುವಷ್ಟರಲ್ಲಿ ಮೂಡ್ಲಪ್ಪ ಕುರಿ ಕರೆದುಕೊಂಡು ಅಲ್ಲಿಗೆ ಬಂದನು. ಕುರಿಗಳನ್ನು ಕಂಡ ಮರಿಗಳು ಬ್ಯಾ. . . ಬ್ಯಾ. . . ಎನ್ನುತ್ತಾ ಜಿಂಕೆ ಮರಿಗಳಂತೆ ನೆಗೆಯುತ್ತಾ ಧೂಳೆಬ್ಬಿಸಿಕೊಂಡು ಓಡಿದವು. ಆ ಕಡೆಯಿಂದ ಕುರಿಗಳೂ ಬಾಲವೆತ್ತಿಕೊಂಡು ಮರಿಗಳಿಗಾಗಿ ಓಡೋಡಿ ಬಂದವು. ತಾಯಿ ಮಕ್ಕಳು ಒಂದಾಗುವ ಆ ಸಮಯದ ಸಡಗರವನ್ನು ಮನಸಾರೆ ಸವಿಯುತ್ತಾ ಮೂಡ್ಲಪ್ಪ ಠೆಕ್. . . ಠೆಕ್. . . ಕ್ಕೊ. . . ಆಹಾ . . . ಹಾ. . . ಹಾ. . . ಠೆಕ್ಕೋ. . . ಎಂದು ಕೂಗತೊಡಗಿದನು. ಬೈಗುಗೆಂಪಿನ ಜೊತೆಗೆ ಕೆಂದೂಳೆದ್ದು ಗೊಲ್ಲರಹಳ್ಳಿಯ ಮುಖ ಕೆಂಪೇರಿದಂತೆ ಕಾಣುತ್ತಿತ್ತು. ತಮ್ಮ ತಾಯಿ ಕುರಿಗಳ ಸೇರಿದ ಮರಿಗಳು ಕೆಚ್ಚಲನ್ನು ಗುದ್ದಿ ಗುದ್ದಿ ಕಟವಾಯಿಯಲ್ಲಿ ನೊರೆಯುಕ್ಕಿ ಸುತ್ತಾ ಮನದಣಿಯೆ ಕುಡಿಯುತ್ತಿದ್ದವು. ತಾಯಿಕುರಿಗಳು ಅಕ್ಕರೆಯಿಂದ ಮರಿಗಳ ಬಾಲ ಮೂಸುತ್ತಾ. . . ನೆಕ್ಕುತ್ತಾ ನಿಂತಿದ್ದವು. ಮೂಡ್ಲಪ್ಪನಿಗೆ ದಿನವಿಡೀ ಕುರೀ ಕಾದು ಆಗಿದ್ದ ಆಯಾಸವೆಲ್ಲಾ ಆಗ ಮರೆತುಹೋಗಿ ಆ ಸಡಗರದ ನೋಟವನ್ನು ಕಣ್ತುಂಬಿಕೊಂಡನು. ನಾಲ್ಕು ಮೂಲೆಗೂ ನಾಲ್ಕು ನಾಲ್ಕು ಗೂಟಗಳನ್ನು ನೆಟ್ಟ ಚಿತ್ತಣ್ಣ ‘ಲೋ. . . ಮಿಂಚಿ ಯಿವತ್ತು ಅಟ್ಟಿ ಪಕ್ಕದಾಗೆ ಮಂದೆ ಬಿಟ್ಟದಿವಿ. . . ಅಟ್ಟಿ ತುಂಬಾ ನಾಯೈದಾವೆ. ನಮ್ಕುರಿನಾಯ್ಗುಳೂ ಯಿರ್ತವೆ. ಇವತ್ತೇನು ಬಯ್ವಿಲ್ಲ. . . ಯಿವತ್ಕಣ್ತುಂಬ ನಿದ್ದೆ ಮಾಡ್ಬವ್ದು’ ಎನ್ನುತ್ತಾ ಧಾವಣಿ ಮೊಳೆಗಳನ್ನು ಬಲೆಯ ಮಧ್ಯಭಾಗದಲ್ಲಿ ನೆಲಕ್ಕೆ ಹೊಡಯ ತೊಡಗಿದನು. ‘ವೂ. . . ಕನುಸ್ಕಾಣ್ಬ್ಯಾಡ ಕಣ್ಲ. . . ನೀನೇಳ್ದಂಗೆ. . . ಅಟ್ಟಿ ತುಂಬಾ ನಾಯೇನೋ ಐದಾವೆ. ಆದ್ರೆ ನಮ್ಕುರಿ ನಾಯ್ಗುಳು ಯೆಣ್ಣಾಯ್ಬಾಲ ಮೂಸೋಡ್ಕಂಡು ಅಟ್ಟೀಸೇರ್ಕಂಬುಟ್ರೆ. . . ನಾವ್ನಿದ್ದೆ ಮಾಡ್ದಂಗೆ ಐತೆ’ ಎನ್ನುತ್ತಾ ಮಿಂಚ ಬಗ್ಗರಿ ಬಿಗಿದು ಬಲೆ ಸರಿಸತೊಡಗಿದನು.

‘ಅಯ್ಯೋ ಅವ್ನೆತ್ತೋಳ್ನೆತ್ತಿಕ್ಕ. . . ಯೆಲ್ಲೇ ಮಂದೆ ಬಿಟ್ರೂ ಸರ್ತಿ ಕಾಯೋದು ಮಾತ್ರ ತಪ್ಪದಿಲ್ಲ ಕಣ್ಲಾ; ಥೂ. . . ಯೀ ಗೊಲ್ರಾಗಿ ಮಾತ್ರ ಉಟ್ಬಡ್ದು ಕಣ್ಲೇ. . . ಯದ್ದಾಗ ಬೈನಾಗ ರಾತ್ರೆ ಮಲುಗ್ದಾಗ ಕೂಡನು ಆಡ್ವಾ ಗೆ ಯಿರ್ಬೇಕ್ನೋಡು’ ಎನ್ನುತ್ತಾ ಕತ್ತೆ ಕಟ್ಟುವ ಕೊಳೆಗಳನ್ನು ಬಲೆಯ ಹೊರಭಾಗದಲ್ಲಿ ದೊಡ್ಡ ಕಲ್ಲಿಂದ ನೆಲಕ್ಕೆ ಹೊಡಯತೊಡಗಿದನು ಚಿತ್ತಣ್ಣ. ಇವರಿಬ್ಬರೂ ಬಲೆ ಕಟ್ಟುವುದರೊಳಗೆ ಮಿಂಚಿನ ಅತ್ತೆಯ ಮಗಳು ಬೋರಿ ಮುಸುರೆ ಹಾಗೂ ನೀರನ್ನು ತೆಗೆದುಕೊಂಡು ಬಂದಳು. ಬೋರಿಯನ್ನು ನೋಡಿದ ಚಿತ್ತಣ್ಣ ‘ಯೀಗ ಬಂದವರದಾರು ತಾಯೇ ದಾರು’ ಎಂದು ನಟಭಯಂಕರನಂತೆ ಪೋಸು ಕೊಟ್ಟುನಿಂತ. ಕೈಯಲ್ಲಿದ್ದ ಚೊಂಬು ಹಾಗೂ ಮುಸುರೆ ಪಡಿಯನ್ನು ಕೆಳಗಿಟ್ಟ ಬೋರಿ ‘ದೇವಿ ಭುವ ಮನ ಮೋಹಿನಿ. . . ಈರಯ್ಯನ್ಮಗಳು ಬೋರಿ ಬಂದಳು ಎಂದು ನುಲಿಯತೊಡಗಿದಳು’. ನಾನೇನು ಕಡಿಮೆಯೆಂಬಂತೆ ಚಿತ್ತಣ್ಣ ‘ಆಹಾ. . . ರಂಬೇ. . . ಬಾರೇ. . . ಗಜನಿಂಬೇ’ ಎನ್ನುತ್ತಾ ಸ್ವಾಗತಿಸಲು ಸಿದ್ಧನಾದನು. ‘ಲೋ. . . ಸಿತ್ತ. . . . ಗಜನಿಂಬ್ಯಲ್ಲ ಎಳೆನಿಂಬೆ ಕಣೋ. . . ! ಯೀವಯಸ್ಗೆ ಯಿಂಗಾಡ್ತಳೆ ಯಿನ್ವಯಸ್ಸಗ್ವಂದ್ರೆ. . . ಯಾವಾನ್ನಾದ್ರು ವತ್ಕಂಡೋಗಳೆಯಿವ್ಳು! ಅವ್ಳಿಗ್ಸರ್ಯಾಗ್ನೀನೂ ಆಡ್ತೀಯಾ’ ಎಂದು ಸಿಡುಕುತ್ತಾ ಬೋರಿಯನ್ನು ಗದ್ದರಿಸಿ ಬಲೆಸುತ್ತಾ ಮುಸುರೆ ಹಾಕಲು ಹೇಳಿದನು ಮಿಂಚು.

 

Tags:
error: Content is protected !!