Mysore
25
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಗುದ್ದಾಡಿದ್ದವರೀಗ ದೋಸ್ತಿಗಳು

ದಸರಾ ಗಜಪಡೆಯ ಎರಡು ಆನೆಗಳ ಸಾಮರಸ್ಯದ ಕತೆ

ಮೈಸೂರು: ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಯಲ್ಲಿರುವ ಆನೆಗಳ ಪೈಕಿ ಎರಡು ಆನೆಗಳು ಇತ್ತೀಚೆಗೆ ಜಗಳ ಆಡಿಕೊಂಡಿದ್ದನ್ನು ಜನತೆಯೇ ಗಮನಿಸಿದ್ದಾರೆ. ಇದೀಗ ಆ ಎರಡೂ ಗಜಗಳು ಮತ್ತೆ ಸ್ನೇಹಿತರಾಗಿ ಒಡನಾಟ ಮುಂದುವರಿಸಿದ್ದು, ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಕ್ಷಣಗಳಿಗಾಗಿ ಎದುರು ನೋಡುತ್ತಿರುವುದು ವಿಶೇಷವೇ ಆಗಿದೆ. ಕಂಜನ್ ಪಟ್ಟದ ಆನೆಯಾಗಿದ್ದು, ಅದಕ್ಕೆ ಧನಂಜಯಗಿಂತ ಹೆಚ್ಚು ಜವಾಬ್ದಾರಿ ಇರುತ್ತದೆ.

ದ್ವೇಷ, ಅಸೂಯೆಗಳಿಂದ ದೂರಾಗುವ ಮನುಷ್ಯರು ಮತ್ತೆ ಒಂದು ಗೂಡುವುದು ಬಹಳ ಅಪರೂಪ. ಆದರೆ, ಈ ವನ್ಯಜೀವಿಗಳು ಮತ್ತರ ಮರೆತು ಒಂದಾಗಿರುವುದು ಒಂದು ರೀತಿಯಲ್ಲಿ ಮನುಷ್ಯರಿಗೂ ಮಾದರಿ ಎನ್ನಬಹುದು.

ಹೌದು, ದಸರಾ ಗಜಪಡೆಯಲ್ಲಿರುವ ಕಂಜನ್ ಮತ್ತು ಧನಂಜಯ ಆನೆಗಳ ನಡುವೆ ಇತ್ತೀಚೆಗೆ ಜಯಮಾರ್ತಾಂಡ ವಿಶೇಷ ದ್ವಾರದ ಬಳಿ ರಸ್ತೆಯಲ್ಲೇ ಕಾಳಗ ನಡೆದಿತ್ತು. ಮಾವುತರ ಸಮಯಪ್ರಜ್ಞೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ಆದರೆ ಈ ಘಟನೆಯಿಂದ ಸಾರ್ವಜನಿಕರಲ್ಲಿ ಭೀತಿ ಉಂಟಾಗಿತ್ತು. ಈ ಆಘಾತಕಾರಿ ಘರ್ಷಣೆಯ ಕೆಲವೇ ದಿನಗಳಲ್ಲಿ, ಕಂಜನ್ ಮತ್ತು ಧನಂಜಯ ಆನೆಗಳು ಆಶ್ಚರ್ಯಕರ ರೀತಿಯಲ್ಲಿ ತಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ಸೌಹಾರ್ದತೆಯಿಂದ ಅರಮನೆ ಅಂಗಳದಲ್ಲಿ ಸೌಮ್ಯವಾಗಿ ಸೊಂಡಿಲನ್ನು ಆಡಿಸುತ್ತಾ, ‘ಕಚ್ಚಾಡುವವರನು ಕೂಡಿಸಿ ಒಲಿಸು’ ಎಂಬ ಕುವೆಂಪು ಅವರ ಕವಿತೆಯ ಸಾಲನ್ನು ನೆನಪು ಮಾಡುವಂತೆ ತಾಲೀಮು, ಜಳಕವನ್ನು ಆಸ್ವಾದಿಸುತ್ತಾ, ಸುಗ್ರಾಸ ಭೋಜನವನ್ನು ಸವಿಯುತ್ತಾ ದಿನ ಕಳೆಯುತ್ತಿವೆ. ಇದರಿಂದ ಅರಣ್ಯಾಧಿಕಾರಿಗಳು, ಜನಸಾಮಾನ್ಯರು ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಆನೆಗಳು ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸುವುದು ಅಸಹಜವೇನಲ್ಲ. ವಿಶೇಷವಾಗಿ ಮಿಥುನ ಸಮಯದಲ್ಲಿ ಅಥವಾ ಪ್ರಾಬಲ್ಯಕ್ಕಾಗಿ ಸ್ಪರ್ಧಿಸುವಾಗ ಕೆರಳುವುದು, ಮೊಂಡಾಟಕ್ಕೆ ಇಳಿಯುವುದು ನಿರೀಕ್ಷಿತವಾಗಿದೆ. ಆದರೆ, ಅವುಗಳನ್ನು ಸೂಕ್ತ ಕಾಳಜಿಯಿಂದ ಆರೈಕೆ ಮಾಡಬೇಕು. ಆಗ ಎಲ್ಲ ರೊಚ್ಚು ಕೆಚ್ಚುಗಳನ್ನು ತೊರೆದು, ಹೇಳಿದ್ದನ್ನು ಮಾತ್ರ ಮಾಡುವ ‘ಕೋಲೆ ಬಸವ’ನಂತೆ ಆಗುತ್ತವೆ. ಆದರೆ, ಇದು ಮಾತಿನಲ್ಲಿ ಹೇಳಿದಷ್ಟು ಸುಲಭ ಅಲ್ಲ. ಇದರಲ್ಲಿ ಮಾವುತರು, ಕಾವಾಡಿಗಳು, ಅರಣ್ಯ ಇಲಾಖೆ ಅಧಿಕಾರಿಗಳ ಶ್ರಮ ಅಪಾರವಾಗಿರುತ್ತದೆ. ಕಂಜನ್ ಮತ್ತು ಧನಂಜಯ ಆನೆಗಳ ಹೊಂದಾಣಿಕೆಯು ಸಾಮರಸ್ಯ ಮತ್ತು ಕ್ಷಮಾಗುಣವನ್ನು ಸಂಕೇತಿಸುತ್ತದೆ. ಕಡು ವೈರಿಗಳೂ ಸ್ನೇಹಿತರಾಗಬಹುದು ಎಂಬುದಕ್ಕೆ ಕಂಜನ್ ಹಾಗೂ ಧನಂಜಯ ಸ್ನೇಹ ಸಾಕ್ಷಿಯಾಗಿದೆ.

ಜಂಬೂಸವಾರಿ ಮೆರವಣಿಗೆಯಲ್ಲಿ ಧನಂಜಯ ಮತ್ತು ಕಂಜನ್ 750 ಕೆಜಿ ತೂಕದ ಅಂಬಾರಿಯನ್ನು ಹೊರಲಿರುವ ಅಭಿಮನ್ಯುವಿನ ನೇತೃತ್ವ ದಲ್ಲಿ ಹೆಜ್ಜೆ ಹಾಕಲಿರುವ ಇತರ ಆನೆಗಳೊಂದಿಗೆ ಭಾಗವಹಿಸಲಿವೆ. ಹಾಗಾಗಿ ಧನಂಜಯ್ ಮತ್ತು ಕಂಜನ್ ಆನೆಗಳ ನಡುವಿನ ಕಚ್ಚಾಟ ಎಲ್ಲರನ್ನೂ ಆತಂಕಕ್ಕೆ ಎಡೆಮಾಡಿತ್ತು. ಆದರೆ, ಅನುಭವಿ ಮಾವುತ ದೇವರಾಜ್ ಆನೆಗಳ ನಡುವೆ ಸಾಮರಸ್ಯವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅವರು ಮೊದಲು ಆನೆಗಳನ್ನು ತಾತ್ಕಾಲಿಕವಾಗಿ ಪ್ರತ್ಯೇಕಿಸಿದರು. ಅವುಗಳ ತರಬೇತಿ ಅವಧಿಯನ್ನು ಕಡಿಮೆ ಮಾಡಲಾಯಿತು. ದೇವರಾಜ್ ಅವರ ಪರಿಣತಿಯ ಕಾರಣದಿಂದಾಗಿ ಈ ಎರಡೂ ಆನೆಗಳ ಯೋಗಕ್ಷೇಮವನ್ನು ಖಾತ್ರಿಗೊಳಿಸಲಾಯಿತು. ‘ಈಗ ಎರಡೂ ಆನೆಗಳು ತಮ್ಮ ಹಿಂದಿನ ಭಿನ್ನಾಭಿಪ್ರಾಯಗಳನ್ನು ಮರೆತಿವೆ’ ಎನ್ನುತ್ತಾರೆ ವರ್ಷಗಳಿಂದ ಆನೆಗಳ ಆರೈಕೆ ಮಾಡುತ್ತಿರುವ ದೇವರಾಜ್.

Tags: