ಕೈಗಾರಿಕೆಗಳಿಗೆ ಹೊಸ ಭಾಷ್ಯ ಬರೆದ ಸರಳ ವ್ಯಕ್ತಿತ್ವ
ಜೀವನವನ್ನೇ ದೇಶ ಸೇವೆಗೆ ಸಮರ್ಪಣೆ ಮಾಡಿದ್ದ ಭಾರತದ ಹೆಮ್ಮೆಯ ಉದ್ಯಮಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ರತನ್ ಟಾಟಾ ಭಾರತದ ಕೈಗಾರಿಕೋದ್ಯಮಕ್ಕೆ ಹೊಸ ಮುನ್ನುಡಿ ಬರೆದವರು.
ಆರು ಖಂಡಗಳ 100ಕ್ಕೂ ಹೆಚ್ಚು ದೇಶಗಳಲ್ಲಿ 30ಕ್ಕೂ ಅಧಿಕ ಕಂಪೆನಿಗಳನ್ನು ನಿಯಂತ್ರಿಸುತ್ತಿದ್ದರೂ, ರತನ್ ಟಾಟಾ ಅವರ ಬಹಳ ಸರಳ ಜೀವನ ಎಲ್ಲರಲ್ಲಿಯೂ ಸೋಜಿಗ ಉಂಟು ಮಾಡುತ್ತಿತ್ತು. ತಮ್ಮ ಅಗಾಧ ಪ್ರಭಾವ ಹಾಗೂ ಯಶಸ್ಸಿನ ನಡುವೆಯೂ ಅವರು ಕೋಟ್ಯಧಿಪತಿ ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಾಗಿ ಅವರು ಜನಮಾನಸದಲ್ಲಿ ಸದಾ ಉಳಿಯುವ ವಿಶಿಷ್ಟ ವ್ಯಕ್ತಿಯಾಗಿ ಉಳಿದುಹೋದರು.
ಜೆಮ್‌ಶೆಡ್ ಜಿ ಟಾಟಾ ಅವರ ಮರಿ ಮೊಮ್ಮಗನಾಗಿ, ದೇಶದ ಅತ್ಯಂತ ಪ್ರತಿಷ್ಠಿತ ಉದ್ಯಮ ಕುಟುಂಬದಲ್ಲಿ 1937ರ ಡಿಸೆಂಬರ್ 28ರಂದು ಜನಿಸಿದ ರತನ್ ಟಾಟಾ ಅವರು ಎಂದೂ ಹಮ್ಮು ಬಿಮ್ಮುಗಳನ್ನು ಪ್ರದರ್ಶಿಸಿದ ವರಲ್ಲ. ರತನ್ ಬಾಲಕರಾಗಿದ್ದಾಗಲೇ ಅವರ ತಂದೆ ಮತ್ತು ತಾಯಿ ಪರಸ್ಪರ ದೂರವಾಗಿದ್ದರು. ಹೀಗಾಗಿ ಅವರು ಅಜ್ಜಿ ನವಾಜ್ ಭಾಯಿ ಟಾಟಾ ಅವರ ಪಾಲನೆಯಲ್ಲಿ ಬೆಳೆದರು. ಸಿರಿವಂತ ಕುಟುಂಬದಲ್ಲಿ ಜನಿಸುವ ಸೌಭಾಗ್ಯ ಅವರದಾಗಿದ್ದರೂ, ಕೌಟುಂಬಿಕ ಜೀವನದ ಪ್ರೀತಿ, ಆನಂದವನ್ನು ಕಾಣಲು ಸಾಧ್ಯವಾಗಲಿಲ್ಲ. ಕೊನೆಯವ ರೆಗೂ ಅವಿವಾಹಿತರಾಗಿಯೇ ಉಳಿದ ಅವರು, ಆ ಕೌಟುಂಬಿಕ ಬದುಕನ್ನು ತಾವೂ ಕಟ್ಟಿಕೊಳ್ಳಲಿಲ್ಲ. ಈ ಕಾರಣದಿಂದ ಸವಲತ್ತು ಮತ್ತು ಕಷ್ಟ ಎರಡೂ ಅವರ ಅರಿವಿಗೆ ಬಂದಿತ್ತು.
ಪ್ರಾರಂಭದಲ್ಲಿ ತಮ್ಮ ಉದ್ಯಮದ ಮಳಿಗೆಗಳಲ್ಲಿ ಕಾರ್ಯನಿರ್ವಹಿಸಿದ ರತನ್ ಅವರು, ಟಾಟಾ ಸಮೂ ಹದ ಅನೇಕ ವ್ಯವಹಾರಗಳಲ್ಲಿ ಅನುಭವ ಪಡೆದುಕೊಂಡು 1971ರಲ್ಲಿ ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ ಕಂಪೆನಿ ನೇತೃತ್ವ ವಹಿಸಿಕೊಂಡರು. ಬಳಿಕ 1991 ರಲ್ಲಿ ತಮ್ಮ ದೊಡ್ಡಪ್ಪ, ಅರ್ಧಶತಮಾನಕ್ಕೂ ಹೆಚ್ಚು ಕಾಲ ಟಾಟಾ ಸಮೂಹದ ಅಧ್ಯಕ್ಷರಾಗಿದ್ದ ಜೆಆರ್ ಟಾಟಾ ಅವರಿಂದ ಟಾಟಾ ಸಮೂಹದ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡರು. ಅದು ಭಾರತವು ತನ್ನ ಆರ್ಥಿಕತೆಯನ್ನು ಮುಕ್ತಗೊಳಿಸಿದ ವರ್ಷವಾಗಿತ್ತು. 1868ರಲ್ಲಿ ಚಿಕ್ಕ ಜವಳಿ ಮತ್ತು ವ್ಯಾಪಾರ ಸಂಸ್ಥೆಯಾಗಿ ಆರಂಭಗೊಂಡಿದ್ದ ಟಾಟಾ ಸಮೂಹವನ್ನು ಉಪ್ಪಿನಿಂದ ಉಕ್ಕಿನವರೆಗೆ, ಕಾರುಗಳಿಂದ ಸಾಫ್ಟ್ ವೇವರೆಗೆ, ವಿದ್ಯುತ್ ಘಟಕಗಳಿಂದ ಏರ್ ಲೈನ್ಸ್ ವರೆಗೆ ಹರಡಿಕೊಂಡ ಜಗತ್ತಿನ ಅತ್ಯಂತ ಶಕ್ತಿಶಾಲಿ ಉದ್ಯಮ ಸಮೂಹವನ್ನಾಗಿ ಬೆಳೆಸುವಲ್ಲಿ ರತನ್ ಸಫಲರಾದರು.
ಅವರು ಎರಡು ದಶಕಗಳಿಗೂ ಅಧಿಕ ಕಾಲ ಟಾಟಾ ಸಮೂಹದ ಪ್ರಮುಖ ನಿಯಂತ್ರಕ ಸಂಸ್ಥೆ ಟಾಟಾ ಸನ್ಸ್‌ನ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಅವರು ಅತ್ಯಂತ ಪರಿಣಾಮಕಾರಿಯಾಗಿ ಉದ್ಯಮ ಸಮೂಹವನ್ನು ವಿಸ್ತರಿಸಿದರು.2000ನೇ ಇಸವಿಯಲ್ಲಿ ಲಂಡನ್ ಮೂಲದ ಟೆಲ್ಲ ಟೀ ಕಂಪೆನಿಯನ್ನು 431.1 ದಶಲಕ್ಷ ಅಮೆರಿಕ ಡಾಲರ್‌ಗಳಿಗೆ ,ದಕ್ಷಿಣ ಕೊರಿಯಾದ ಟ್ರಕ್ ತಯಾರಿಕಾ ಸಂಸ್ಥೆ ಡೇವೂ ಮೋಟಾರ್ ಅನ್ನು 2004ರಲ್ಲಿ 102 ದಶಲಕ್ಷ ಡಾಲರ್‌ಗಳಿಗೆ, ಆಂಗ್ಲೋ-ಡಚ್ ಉಕ್ಕು ಉತ್ಪಾದಕ ಕಂಪೆನಿ ಕೋರಸ್ ಗ್ರೂಪ್ ಅನ್ನು 11.3 ಶತಕೋಟಿ ಡಾಲರ್‌ಗಳಿಗೆ, ಉನ್ನತ ಕಾರ್ ಬ್ರಾಂಡ್‌ಗಳಾದ ಜಾಗ್ವಾರ್ ಮತ್ತು ಲ್ಯಾಂಡ್‌ರೋವರ್ ಅನ್ನು ಫೋರ್ಡ್ ಮೋಟಾರ್ ಕಂಪೆನಿಯಿಂದ 2.3 ಶತಕೋಟಿ ಡಾಲರ್ ಪಾವತಿಸಿ ಸ್ವಾಧೀನ ಪಡಿಸಿಕೊಂಡರು. ಟಾಟಾ ಸನ್ಸ್ ಸಂಸ್ಥೆಯಡಿ 29 ಲಿಸ್ಟೆಡ್ ಕಂಪನಿಗಳಿವೆ ಎಂಬ ಅಂಶದಿಂದ ಟಾಟಾ ಗ್ರೂಪ್‌ನ ವೈಶಾಲ್ಯತೆಯನ್ನು ಅಂದಾಜು ಮಾಡಬಹುದು. ಈ ಎಲ್ಲಾ 29 ಕಂಪೆನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಆಗಸ್ಟ್ 20, 2024 ರ ವೇಳೆಗೆ ಸುಮಾರು 403 ಬಿಲಿಯನ್ ಡಾಲರ್ (ಸುಮಾರು 33.7 ಲಕ್ಷ ಕೋಟಿ ರೂ.) ಎಂದು ಹೇಳಲಾಗುತ್ತದೆ. ಹೀಗಿದ್ದರೂ ರತನ್ ಟಾಟಾ ಮಾತ್ರ ಸಾಧಾರಣ ಪ್ರಮಾಣದ ಆಸ್ತಿಯ ಮಾಲೀಕರಾಗಿದ್ದಾರೆ. MMDI ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ ಪ್ರಕಾರ, ಅವರ ಒಟ್ಟು ಸಂಪತ್ತಿನ ಮೌಲ್ಯ ಕೇವಲ 3,800 ಕೋಟಿ ರೂ. ಎಂದು ಹೇಳಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಒಟ್ಟು ಆಸ್ತಿ ಕಂಪೆನಿಯ ಒಟ್ಟು ಆಸ್ತಿಯ ಶೇ.50 ರಷ್ಟೂ ಇಲ್ಲ.
ಭಾರತದ ಅತ್ಯಂತ ಯಶಸ್ವಿ ಉದ್ಯಮ ನಾಯಕರಷ್ಟೇ ಅಲ್ಲದೇ ರತನ್ ಟಾಟಾ ಅವರು ತಮ್ಮ ದಾನ ಧರ್ಮಗಳ ಚಟುವಟಿಕೆಗಳಿಗೂ ಹೆಸರುವಾಸಿಯಾದವರು. ದಾನ, ಧರ್ಮಗಳಲ್ಲಿ ಅವರ ವೈಯಕ್ತಿಕ ಪಾಲ್ಗೊಳ್ಳುವಿಕೆ ಮುಂಚಿನಿಂದಲೇ ಆರಂಭವಾಯಿತು. ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್‌ನಂತಹ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಪ್ರಮುಖ ಸಾಮಾಜಿಕ ಅಗತ್ಯತೆಗಳನ್ನು ಪೂರೈಸಿದರು ಮತ್ತು ಭಾರತದಾದ್ಯಂತ ಶೈಕ್ಷಣಿಕ ಚಟುವಟಿಕೆಗಳಿಗೆ ದೇಣಿಗೆ ನೀಡಿದರು.
ಶ್ರೇಷ್ಠತೆ ಮತ್ತು ಔನ್ನತ್ಯಕ್ಕೆ ಮಾದರಿಯಾಗಿದ್ದ ಟಾಟಾ ಅವರು ವಿವಾದಗಳಿಗೂ ಹೊರತಾಗಿರಲಿಲ್ಲ. 2008 ರಲ್ಲಿ 2 ಜಿ ಟೆಲಿಕಾಂ ಪರವಾನಗಿ ಹಗರಣದಲ್ಲಿ ಅವರ ಸಂಸ್ಥೆ ನೇರವಾಗಿ ಭಾಗಿಯಾಗಿರದಿದ್ದರೂ, ಪಾಲುದಾರರಾದ ನೀರಾ ರಾಡಿಯಾ ಅವರೊಂದಿಗಿನ ದೂರವಾಣಿ ಸಂಭಾಷಣೆ ಪ್ರಕರಣದಲ್ಲಿ ಅವರನ್ನು ವಿವಾದಕ್ಕೆಳೆಯಲಾಯಿತು. ಬಳಿಕ ಅವರು ನಿರ್ದೋಷಿ ಎಂಬದು ಸಾಬೀತಾಯಿತು.
2012 ರಲ್ಲಿ ಟಾಟಾ ಅವರು ಸೈರಸ್ ಮಿಸ್ತ್ರಿ ಅವರಿಗೆ ಟಾಟಾ ಸನ್ಸ್ ನಿಯಂತ್ರಣದ ಅಧಿಕಾರ ವಹಿಸಿಕೊಟ್ಟರು. ಆದರೆ ಟಾಟಾ ಕುಟುಂಬದವರಲ್ಲದ ಮೊದಲ ಅಧ್ಯಕ್ಷರೊಂದಿಗೆ ಕಾರ್ಯನಿರ್ವಹಿಸಲು ಮಾಲೀಕರಿಗೆ ತೊಡಕಾಗಿ 2016ರಲ್ಲಿ ಮಿಸ್ತ್ರಿ ಪದಚ್ಯುತಗೊಂಡರು. ನಷ್ಟದ ಕಾರಣ ನೀಡಿ ಚಿಕ್ಕ ಕಾರು ನ್ಯಾನೋ ತಯಾರಿಕೆಯನ್ನು ಸ್ಥಗಿತಗೊಳಿಸಲು ಮಿಸ್ತ್ರಿ ತೆಗೆದು ಕೊಂಡ ನಿರ್ಧಾರವೂ ಅವರ ಪದಚ್ಯುತಿಗೆ ಕಾರಣವಾಗಿತ್ತು.
ಮಿಸ್ತ್ರಿ ಅವರ ಪದಚ್ಯುತಿಯ ಬಳಿಕ ರತನ್ ಟಾಟಾ 2016ರ ಅಕ್ಟೋಬರ್‌ನಲ್ಲಿ ಸಂಕ್ಷಿಪ್ತ ಅವಧಿಗೆ ಮಧ್ಯಂತರ ಅಧ್ಯಕ್ಷರಾಗಿ ಸೇವೆಸಲ್ಲಿಸಿದರು. ಬಳಿಕ2017ರ ಜನವರಿಯಲ್ಲಿ ನಟರಾಜನ್ ಚಂದ್ರಶೇಖರನ್ ಅವರು ಟಾಟಾ ಸಮೂಹದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಪುನಃ ನಿವೃತ್ತಿಯಾದರು. ಅಲ್ಲಿಂದೀಚೆಗೆ ರತನ್ ಟಾಟಾ ಅವರು ಟಾಟಾ ಸನ್ಸ್‌ನ ಗೌರವ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಅವರು ಹೊಸ ಕ್ಯಾಪ್ ಧರಿಸಿ 21 ನೇ ಶತಮಾನದ ಯುವ ಉದ್ಯಮಿಗಳಿಗೆ ನೆರವು ನೀಡತೊಡಗಿದರು.
ತಮ್ಮ ವ್ಯಕ್ತಿಗತ ಬಂಡವಾಳ ಹೂಡಿಕೆ ಕಂಪೆನಿ ಆರ್ ಎನ್ ಕ್ಯಾಪಿಟಲ್ ಅಡೈಸರ್ಸ್ ಜೊತೆಗೆ ಟಾಟಾ ಅವರು ಓಲಾ ಎಲೆಕ್ನಿಕ್, ಪೇಟಿಎಂ, ಸ್ನಾಪ್‌ಡೀಲ್, ಲೆನ್ಸ್‌ಕಾರ್ಟ್ ಮತ್ತು ಝೀತೀಮ್ ಸೇರಿದಂತೆ 30ಕ್ಕೂ ಅಧಿಕ ಸ್ಟಾರ್ಟ್-ಅಪ್ ಗಳಲ್ಲಿ ಬಂಡವಾಳ ಹೂಡಿದರು.
ಕೆಲವು ತಿಂಗಳ ಹಿಂದೆ, ಮುಂಗಾರಿನ ಒಂದು ಸಂಜೆ ಟಾಟಾ ಅವರು ಮುಂಬೈ ನಗರದ ತಮ್ಮ ಕೇಂದ್ರ ಕಚೇರಿಯ ಹೊರಗೆ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಬೇಕೆಂದು ಆದೇಶಿಸಿದ್ದರು. ಹಲವಾರು ಮಂದಿ ಈ ಸೂರಿನಡಿ ಆಶ್ರಯ ಪಡೆದಿರುವುದು ಗಮನಾರ್ಹ.
ರತನ್ ಟಾಟಾಗೆ ದೊರೆತ ಪ್ರಶಸ್ತಿಗಳು…
ಪದ್ಮಭೂಷಣ (ಭಾರತ ಸರ್ಕಾರದ 3ನೇ ಅತ್ಯುನ್ನತ ನಾಗರಿಕ ಗೌರವ, 2000)
ಓರಿಯಂಟಲ್ ರಿಪಬ್ಲಿಕ್ ಆಫ್ ಉರುಗೈಯ ಪದಕ (ಉರುಗೈ ಸರ್ಕಾರ, 2004)
ಇಂಟರ್‌ನ್ಯಾಷನಲ್ ಡಿಸ್ಟಿಂಗ್ವಿಶ್ ಅಚೀವೆಂಟ್ ಅವಾರ್ಡ್ (2005)
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್ ಗೌರವ ಫೆಲೋಶಿಪ್ (2007) ಪದ್ಮವಿಭೂಷಣ (ಭಾರತ ಸರ್ಕಾರದ 2ನೇ ಅತ್ಯುನ್ನತ ನಾಗರಿಕ ಗೌರವ (2008)
ಇಟಾಲಿಯನ್ ರಿಪಬ್ಲಿಕ್ ಆರ್ಡರ್ ಆಫ್ ಮೆರಿಟ್ಟ ‘ಗ್ಯಾಂಡ್ ಆಫೀಸರ್’ ಪ್ರಶಸ್ತಿ (ಇಟಲಿ ಸರ್ಕಾರ -2009)
ಗೌರವ ನೈಟ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್, ಯುಕೆ (2009)
ಓಸ್ಟೋ ಬಿಸಿನೆಸ್ ಫಾರ್ ಪೀಸ್ ಅವಾರ್ಡ್ (ಬಿಸಿನೆಸ್ ಫಾರ್ ಪೀಸ್ ಫೌಂಡೇಶನ್, 2010)
ವೈದ್ಯಕೀಯ ಕಾಲೇಜು ಯೋಜನೆ ಆರಂಭಿಸಿದ ಉದ್ಯಮಿ:
ರತನ್ ಟಾಟಾ ಅವರು 1970ರ ದಶಕದಲ್ಲಿ ಆಗಾಖಾನ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಯೋಜನೆಯನ್ನು ಆರಂಭಿಸಿದರು. ಆ ಮೂಲಕ ಭಾರತದ ಪ್ರಮುಖ ಆರೋಗ್ಯ ಸಂಸ್ಥೆಗಳಲ್ಲಿ ಒಂದಕ್ಕೆ ಅಸ್ತಿಭಾರ ಹಾಕಿದರು. 1991ರಲ್ಲಿ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ರತನ್ ಟಾಟಾ ರವರ ದಾನ, ಧರ್ಮ ಕಾರ್ಯಗಳಿಗೆ ಹೊಸ ವೇಗ ದೊರಕಿತು. ಅವರು ತಮ ಮುತ್ತಾತ ಜೆಮ್ ಶೆಡ್ ಜೀ ಅವರು ಸ್ಥಾಪಿಸಿದ್ದ ಟಾಟಾ ಟ್ರಸ್ಟ್ ಅನ್ನು ಕ್ರಿಯಾಶೀಲವಾಗಿ ಮುನ್ನಡೆಸಿದರು.
~