ದೇಶದ ಜನರ ಹೊಟ್ಟೆ ತುಂಬಿಸಲು ಮಳೆ-ಬಿಸಿಲು ಎನ್ನದೇ ಆಹಾರ ಪದಾರ್ಥಗಳನ್ನು ಬೆಳೆಯುವ ರೈತಾಪಿ ವರ್ಗಕ್ಕೆ ವೈಜ್ಞಾನಿಕ ಬೆಲೆ ಸಿಗದೆ ಕಂಗೆಟ್ಟಿದ್ದರೆ, ಬೆವರು ಸುರಿಸಿ ದುಡಿಯುವ ವರ್ಗಕ್ಕೆ ಸಿಗಬೇಕಾದ ಭದ್ರತೆ, ಸೌಲಭ್ಯಗಳನ್ನು ಒದಗಿಸಲು ಆಡಳಿತಾರೂಢ ಸರ್ಕಾರಗಳು ಮನಸ್ಸು ಮಾಡುತ್ತಲೇ ಇಲ್ಲ. ದುಡಿಯುವ ಕೈಗಳ ರಕ್ಷಣೆಗಿಂತ ಮಾಲೀಕರ ಪರವಾಗಿ ನಿಂತಿರುವ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಎಚ್ಚರಿಕೆ ಕೊಡುತ್ತಲೇ ಬಂದಿರುವ ಕಾರ್ಮಿಕರ ಅಸಹನೆಯ ಕಟ್ಟೆ ಒಡೆಯುವ ಮುನ್ನ ರಕ್ಷಣೆಗೆ ನಿಲ್ಲಬೇಕು. ಇದು ಪ್ರಜಾಪ್ರಭುತ್ವ ಮತ್ತು ಜನತಂತ್ರದ ವ್ಯವಸ್ಥೆಯಲ್ಲಿ ಅಧಿಕಾರಕ್ಕೆ ಬಂದಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ.
ಬ್ರಿಟಿಷರಿಂದ ಮುಕ್ತಿ ಪಡೆದ ಭಾರತವನ್ನು ವರ್ಷದಿಂದ ವರ್ಷಕ್ಕೆ ಬಂಡವಾಳಶಾಹಿಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಕೆಲವೇ ಕೆಲವು ವ್ಯಕ್ತಿಗಳು ಶ್ರೀಮಂತರಾಗುತ್ತಿದ್ದರೆ, ದುಡಿಯುವ ಕಾರ್ಮಿಕ ವರ್ಗದ ಜನರು ಶೋಚನೀಯ ಸ್ಥಿತಿಗೆ ಸಿಲುಕುತ್ತಿದ್ದಾರೆ. ಪಿ.ವಿ.ನರಸಿಂಹರಾವ್ ಪ್ರಧಾನಿ ಆಗಿದ್ದ ಕಾಲದಲ್ಲಿ ಜಾರಿಗೆ ಬಂದ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ನೀತಿಗಳಿಂದ ಸಾಕಷ್ಟು ಬದಲಾವಣೆಗಳಾದರೂ ಅಷ್ಟೇ ಪರಿಣಾಮಗಳನ್ನುಂಟು ಮಾಡಿದೆ. ಕಾಲಕ್ರಮೇಣ ಸರ್ಕಾರಿ ಸ್ವಾಮ್ಯದ ಕಂಪೆನಿಗಳನ್ನು ಖಾಸಗೀಕರಣ ಮಾಡುತ್ತಿರುವ ಕಾರಣ ಖಾಯಂ ಉದ್ಯೋಗಿಗಳು ಅಭದ್ರತೆಗೆ ಸಿಲುಕಿದ್ದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಕಾರ್ಮಿಕರ ಕಾಯ್ದೆಗಳನ್ನು ಮಾಲೀಕರ ಪರವಾಗಿ ತಿದ್ದುಪಡಿ ಮಾಡಿ ನಾಲ್ಕು ಲೇಬರ್ ಕೋರ್ಡ್ ಗಳನ್ನು ರೂಪಿಸಿದೆ. ಈ ಎಲ್ಲಾ ಕಾಯ್ದೆಗಳು ಕಾರ್ಮಿಕರ ಹಿತವನ್ನು ಬಲಿಕೊಟ್ಟು ಬಂಡವಾಳಶಾಹಿಗಳ ಲಾಭವನ್ನು ನೂರಾರು ಪಟ್ಟು ಹೆಚ್ಚಿಸುವಂತಹ ನೀತಿಗಳಾಗಿವೆ. ಇದರ ನಡುವೆ ರಾಜ್ಯದಲ್ಲಿ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಗಳ ಗುತ್ತಿಗೆ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು, ಕಟ್ಟಡ,ಗಿಗ್ ಪ್ಲಾಟ್ ಫಾರ್ಮ್ ಮೊದಲಾದ ಅಸಂಘಟಿತ ಕಾರ್ಮಿಕರು ಬದುಕು ಈಗ ಸಂಕಷ್ಟಮಯವಾಗಿದೆ.
ಈ ಎಲ್ಲಾ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒಂದು ದಶಕದಿಂದ ಹೋರಾಟ ಮಾಡಿಕೊಂಡು ಬಂದಿರುವ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ ಹೋರಾಟಕ್ಕೆ ಮುನ್ನುಡಿ ಬರೆದಿದೆ. ಕಾರ್ಮಿಕ ಸಂಘಟನೆಗಳು ವಿಭಜನೆಯಾಗದಂತೆ ತಡೆದು ಏಕೀಕೃತ ಸಂಘಟನೆಯಡಿ ಕಾರ್ಮಿಕರನ್ನು ಒಂದುಗೂಡಿಸಿ ಸರ್ಕಾರಕ್ಕೆ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಅಂತಿಮ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಕೇಂದ್ರ ಸರ್ಕಾರವು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದು ಕಾರ್ಮಿಕರ ಹಿತ ಕಾಪಾಡಬೇಕು.ಇಲ್ಲದಿದ್ದರೆ ರೈತರು ದಂಗೆ ಎದ್ದಂತೆ ಕಾರ್ಮಿಕರು ಸಿಡಿದೇಳುವುದಕ್ಕೆ ಅವಕಾಶ ಕೊಡಬಾರದೆಂದು ಸೂಕ್ಷ್ಮವಾಗಿ ಹೇಳಿದೆ. ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡು ವೇತನ ಹೆಚ್ಚಿಸುವ ಜೊತೆಗೆ ಸೇವಾ ಭದ್ರತೆ
ಒದಗಿಸಬೇಕು. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಗುತ್ತಿಗೆ ಪದ್ಧತಿಯನ್ನು ರದ್ದು ಗೊಳಿಸಬೇಕು. ಹಾಲಿ ಇರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಸ್ಕೀಂ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ದುಡಿಯುವ ಅವಽಯನ್ನು ಹೆಚ್ಚಳ ಮಾಡುವ ಸರ್ಕಾರದ ಪ್ರಸ್ತಾಪವನ್ನು ಹಿಂದಕ್ಕೆ ಪಡೆದು ಹಾಗೂ ರಾತ್ರಿ ಪಾಳಿಯಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳಲು ಅನುಮೋದಿಸಿರುವ ನಿರ್ಧಾರವನ್ನು ಕೈಬಿಟ್ಟು ಇಎಸ್‌ಐ ಆರ್ಹತೆಗೆ ಇರುವ ವೇತನದ ಮಿತಿಯನ್ನು ಹೆಚ್ಚಳ ಮಾಡುವುದಕ್ಕೆ ಸರ್ಕಾರ ತೀರ್ಮಾನ ಮಾಡಬೇಕು. ಪಿಎಫ್ ಆರ್ಹತೆಗೆ ಇರುವ ವೇತನದ ಮಿತಿಯನ್ನು ಹೆಚ್ಚಳ ಮಾಡುವುದು ಹಾಗೂ ಕನಿಷ್ಠ ಪಿಂಚಣಿಯನ್ನು ೧೦,೦೦೦ ಸಾವಿರ ರೂ.ಗೆ ನಿಗದಿಗೊಳಿಸಬೇಕು. ಗಿಗ್ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣಿಸಲು ಮತ್ತು ಸೇವಾ ಭದ್ರತೆಯನ್ನು ಒದಗಿಸುವ ಬಗ್ಗೆ ಕಾರ್ಮಿಕ ಇಲಾಖೆ ಬೇಕಾದ ಯೋಜನೆಗಳನ್ನು ರೂಪಿಸುವಂತೆ ಒತ್ತಾಯಿಸಿದೆ.
ಹೊರಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಅವಕಾಶ ಮಾಡಿ ಕಾರ್ಮಿಕರಿಗೆ ವಂಚಿಸುತ್ತಿರುವ ಮಾಲೀಕರ ಮೇಲೆ ಕ್ರಮ ಜರುಗಿಸಬೇಕು. ಖಾಲಿ ಇರುವ ಖಾಯಂ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗದೆ ಹಾಗೆಯೇ ಬಿಟ್ಟಿರುವುದು ಸಾಮಾಜಿಕ ನ್ಯಾಯದ ವಿರುದ್ಧದ ನಡೆಯಾಗುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಪ್ರತಿಭಾವಂತರಿಗೆ ಸಿಗಬೇಕಾದ ಹುದ್ದೆಗಳು ಖಾಸಗಿಯ ನೆಪದಲ್ಲಿ ಹೊರ ಗುತ್ತಿಗೆಯವರ ಕಪಿಮುಷ್ಟಿಗೆ ಸಿಲುಕಿರುವು ದರಿಂದ ಸರ್ಕಾರ ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ಕೈಬಿಡಬೇಕು. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರಿದಲ್ಲಿ ಕಾರ್ಮಿಕರು ತಾಳ್ಮೆ ಕಳೆದುಕೊಂಡು ಸಿಡಿದೇಳುವ ಸ್ಥಿತಿ ಎದುರಾದೀತು. ಅದು ಆಗದಂತೆ ನೋಡಿಕೊಳ್ಳುವುದಕ್ಕೆ ಆಳುವ ವರ್ಗ ಮುಂದಾಗಲಿ.