Light
Dark

ಅಧಿಕಾರ ರಾಜಕಾರಣದಿಂದ ಸಾಮಾಜಿಕ ಜವಾಬ್ದಾರಿ ವಿಫಲ

 

 

ನಾ.ದಿವಾಕರ

(ಮುಂದುವರಿದ ಭಾಗ)

ಆಡಳಿತ ವಲಯದ ಪ್ರಾಮಾಣಿಕತೆ:

ಪ್ರಾಮಾಣಿಕತೆ, ಸತ್ಯಸಂಧತೆ, ಸಂವಿಧಾನ ನಿಷ್ಠೆ, ಸಾಮಾಜಿಕ ಬದ್ಧತೆ ಮತ್ತು ವ್ಯಕ್ತಿ ಸಚ್ಚಾರಿತ್ರ್ಯಗಳೇ ರಾಜಕೀಯ ಪ್ರವೇಶದ ಪ್ರಧಾನ ಮಾನದಂಡಗಳು ಎಂದು ಎದೆತಟ್ಟಿ ಹೇಳುವ ನಾಯಕತ್ವವೇ ಇಲ್ಲದಿರುವುದನ್ನು ವಿಷಾದದೊಂದಿಗೇ ಒಪ್ಪಿಕೊಳ್ಳಬೇಕಿದೆ. ರಾಜಕೀಯ ನಾಯಕರ ಜನಪ್ರಿಯತೆಗೂ, ಆ ನಾಯಕರು ಸಮಾಜದ ದೃಷ್ಟಿಯಿಂದ ಮಾರ್ಗದರ್ಶಕರಾಗಿ ರೂಪುಗೊಳ್ಳುವುದಕ್ಕೂ ಅಪಾರ ಅಂತರವಿದೆ ಎನ್ನುವುದನ್ನು ಮನಗಾಣಬೇಕಿದೆ. ಕಣ್ಣೆದುರೇ ನಡೆಯುತ್ತಿರುವ ದೌರ್ಜನ್ಯ, ತಾರತಮ್ಯ, ಅತ್ಯಾಚಾರ ಮತ್ತು ಭ್ರಷ್ಟಾಚಾರಗಳನ್ನು ನಿಯಂತ್ರಿಸಬೇಕಾದ್ದು ಆಡಳಿತ ವ್ಯವಸ್ಥೆಯ ಕರ್ತವ್ಯ. ಇವುಗಳನ್ನು ಸರಿಪಡಿಸಬೇಕಾದ್ದು ನಮ್ಮ ನಡುವಿನ ಬೌದ್ಧಿಕ ವಲಯದ ಕರ್ತವ್ಯ. ಅಧಿಕಾರ ರಾಜಕಾರಣದ ಫಲಾನುಭವಿಗಳು ಇಂತಹ ದುರ್ನಡತೆಗಳನ್ನು ಖಂಡಿಸುವಷ್ಟಾದರೂ ವ್ಯವಧಾನ ರೂಢಿಸಿಕೊಳ್ಳಬೇಕಲ್ಲವೇ? ದುರಂತ ಎಂದರೆ ಭಾರತದ ಪ್ರಸ್ತುತ ರಾಜಕಾರಣದಲ್ಲಿ ಇಂತಹ ದುರಂತಗಳನ್ನು ಕೆಲವೊಮ್ಮೆ ನೇರವಾಗಿ ಸಮರ್ಥಿಸಲಾಗುತ್ತಿದ್ದರೆ, ಕೆಲವೊಮ್ಮೆ ಮೌನವಹಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ.

ದೌರ್ಜನ್ಯಗಳಿಗೆ ಕುರುಡಾಗುವುದಕ್ಕೂ, ದೌರ್ಜನ್ಯಗಳನ್ನು ಸಮರ್ಥಿಸುವುದಕ್ಕೂ ಹೆಚ್ಚಿನ ಅಂತರವೇನೂ ಇರುವುದಿಲ್ಲ. ಡಿಜಿಟಲ್ ಯುಗದಲ್ಲಿ ನೈಜ ಇತಿಹಾಸದ ಅರಿವೇ ಇಲ್ಲದೆ ಬೆಳೆಯುತ್ತಿರುವ ಒಂದು ಬೃಹತ್ ಸಂಖ್ಯೆಯ ಯುವಸಮೂಹ ಭವಿಷ್ಯ ಭಾರತದ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.  ೪    ಅಂಗುಲ ಉದ್ದದ ಆಂಡ್ರ್ಯಾಯ್ಡ್ ಚರವಾಣಿಯ ಪರದೆಯ ಮೇಲೆ ಮೂಡುವುದನ್ನೇ ಪರಮಸತ್ಯ ಎಂದು ನಂಬುವ ಒಂದು ಪೀಳಿಗೆ ಇದ್ದರೆ, ಹೀಗೆ ನಂಬಿಸಲೆಂದೇ ಸೃಷ್ಟಿಸಲಾದ ಬೌದ್ಧಿಕ ಸರಕುಗಳೂ ಹೇರಳವಾಗಿವೆ. ಭವಿಷ್ಯದ ಪೀಳಿಗೆಗೆ ಇದನ್ನೂ ಮೀರಿದ ಒಂದು ಸಮಾಜವಿದೆ ಎಂಬ ಅರಿವು ಮೂಡಿಸುವ ಅನಿವಾರ್ಯತೆ ಇದೆ. ಇಲ್ಲಿ ಅಧಿಕಾರ ರಾಜಕಾರಣದ ಸಾಮಾಜಿಕ ಜವಾಬ್ದಾರಿ ಮುನ್ನೆಲೆಗೆ ಬರುತ್ತದೆ.

“ನಾನು ನನ್ನ ಬಳಿ ಇರುವ ಸಂಪತ್ತನ್ನು, ಆಸ್ತಿಯನ್ನು ಪ್ರಾಮಾಣಿಕ ಮಾರ್ಗದಲ್ಲೇ ಸಂಪಾದಿಸಿದ್ದೇನೆ, ಯಾವುದೇ ವಾಮ ಮಾರ್ಗ ಅನುಸರಿಸಿಲ್ಲ, ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕವಾಗುವ ಚಟುವಟಿಕೆಯಲ್ಲಿ ನಾನು ಭಾಗಿಯಾಗಿಲ್ಲ, ಸಮಾಜದ ಸ್ವಾಸ್ಥ್ಯ ಕೆಡಿಸುವ ಅಸಾಂವಿಧಾನಿಕ ಮಾತುಗಳನ್ನು ಎಲ್ಲಿಯೂ ಆಡಿಲ್ಲ, ಸಂವಿಧಾನದ ಆಶಯಗಳಿಗೆ ಬದ್ಧನಾಗಿ, ಪ್ರಾಮಾಣಿಕವಾಗಿ ಶಾಸನಸಭೆಯ ಒಳಗೆ ಮತ್ತು ಹೊರಗೆ ನಡೆದುಕೊಂಡಿದ್ದೇನೆ, ಅಧಿಕಾರ ಗಳಿಸುವ ಸಲುವಾಗಿ ಸತ್ಯಾಂಶಗಳನ್ನು ಮರೆಮಾಚಿ ಅಪದ್ಧಗಳನ್ನು ಅವಲಂಬಿಸಿಲ್ಲ, ಸಮಾಜದಲ್ಲಿ ಸೋದರತ್ವ ಮತ್ತು ಸೌಹಾರ್ದತೆಯನ್ನು ಕದಡುವ ಮಾತು ಅಥವಾ ಅಪರಾಧಿಕ ಕೃತ್ಯದಲ್ಲಿ ತೊಡಗಿಲ್ಲ”

ಈ ರೀತಿಯ ಪ್ರಮಾಣವಚನ ಸ್ವೀಕರಿಸುವ ರಾಜಕೀಯ ನಾಯಕರನ್ನು ಇಂದು ಕಾಣಲು ಸಾಧ್ಯವೇ? ಇದ್ದರೂ ಬೆರಳೆಣಿಕೆಯಷ್ಟಿರಬಹುದು. ತಮ್ಮ ವಿದ್ಯಾರ್ಜನೆಯನ್ನು ಪೂರೈಸಿ ಹೊರಬರುವ ಯುವ ಸಮೂಹ ಬಾಹ್ಯ ಸಮಾಜಕ್ಕೆ ತೆರೆದುಕೊಂಡ ಕೂಡಲೇ ಕಾಣುತ್ತಿರುವುದಾದರೂ ಏನನ್ನು? ಅದೇ ದೌರ್ಜನ್ಯ, ಅಸ್ಪೃಶ್ಯತೆ, ಅತ್ಯಾಚಾರ ಮತ್ತು ಸಾಮಾಜಿಕ ಅಸಮಾನತೆ. ಯುವ ಸಮೂಹಕ್ಕೆ ದೇಶದ ಭವಿಷ್ಯದ ಬಗ್ಗೆ ವಿಶ್ವಾಸ ಮೂಡಿಸಬೇಕಾದರೆ, ಅಧಿಕಾರ ರಾಜಕಾರಣವನ್ನು ಪ್ರತಿನಿಧಿಸುವ ನಾಯಕರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕಾಗುತ್ತದೆ.

ಇತಿಹಾಸದ ಪುಟಗಳಲ್ಲಿ, ಸಮಕಾಲೀನ ಚರಿತ್ರೆಯಲ್ಲಿ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಲು ನೆರವಾಗುವ ಅನುಕರಣೀಯ ಮಾರ್ಗದರ್ಶಕ ವ್ಯಕ್ತಿಗಳು ಹೇರಳವಾಗಿದ್ದಾರೆ. ಈ ಸೂಕ್ಷ್ಮಗಳನ್ನು ಗಮನದಲ್ಲಿಟ್ಟುಕೊಂಡೇ ತಮ್ಮ ನಡೆನುಡಿಗಳನ್ನು ತಿದ್ದಿಕೊಳ್ಳುವುದು ಅಧಿಕಾರ ರಾಜಕಾರಣದ ಪ್ರಾತಿನಿಧ್ಯ ಹೊತ್ತಿರುವವರ ಆದ್ಯತೆಯಾಗಬೇಕಿದೆ. ಇದು ಜನಪ್ರತಿನಿಧಿಗಳ, ಸಾರ್ವಜನಿಕ ಅಧಿಕಾರಿಗಳ, ಸಾಂಸ್ಕ್ರ ತಿಕ ಸಂಸ್ಥೆ ಮತ್ತು ವ್ಯಕ್ತಿಗಳ ಸಾಮಾಜಿಕ ಜವಾಬ್ದಾರಿಯೂ ಆಗಿದೆ.

(ಮುಗಿಯಿತು)

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ