ಸಾಂಸ್ಕೃತಿಕ ನಗರಿಯಲ್ಲಿ ಬಹುತ್ವ ಭಾರತದ ಮೂರ್ತ ರೂಪಕ್ಕೆ ಅವಕಾಶ
ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಸ್ಥಳೀಯರಲ್ಲಿ ಈಗಾಗಲೇ ಸಂಭ್ರಮ ಮನೆಮಾಡಿದೆ. ದೇಶ, ವಿದೇಶಗಳ ಬಹುತೇಕ ಪ್ರವಾಸಿಗರು ಕೂಡ ದಸರಾ ಹಬ್ಬದಲ್ಲಿ ಪಾಲ್ಗೊಳ್ಳುವ ಉತ್ಸಾಹದಲ್ಲಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ದಸರಾದ ಕೇಂದ್ರ ತಾಣವಾದ ಸಾಂಸ್ಕೃತಿಕ ನಗರಿ ಮೈಸೂರು ದಸರಾ ವೈಭವಕ್ಕೆ ತೆರೆದುಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಈ ಬಾರಿ ರಾಜ್ಯ ಸರ್ಕಾರ ದಸರಾವನ್ನು ಅದ್ಧೂರಿಯಾಗಿ ಆಚರಿಸುವ ನಿರ್ಧಾರಕ್ಕೆ ಬಂದಿದೆ. ಅದಕ್ಕೆ ತಕ್ಕಂತೆ ಅರಮನೆ ವೇದಿಕೆಯ ಸಂಗೀತ ಕಾರ್ಯಕ್ರಮ, ಯುವ ದಸರಾ, ಆಹಾರ ಮೇಳ, ವಸ್ತು ಪ್ರದರ್ಶನ, ಕವಿಗೋಷ್ಠಿ, ಚಿತ್ರಕಲಾ ಪ್ರದರ್ಶನ ಇತ್ಯಾದಿಗಳೆಲ್ಲವೂ ಭರ್ಜರಿಯಾಗಿ ಮೇಳೈಸುವ ಸಾಧ್ಯತೆ ಇದೆ. ಇದಕ್ಕೆ ಯುವ ಸಂಭ್ರಮ ಇತ್ತೀಚೆಗೆ ಮುನ್ನುಡಿ ಬರೆದಿದೆ.
ವಿಜಯದಶಮಿ ದಿನದಂದು ನಡೆಯಲಿರುವ, ದಸರಾ ಮಹೋತ್ಸವದ ಅತ್ಯಂತ ಪ್ರಮುಖ ಭಾಗವಾದ ಜಂಬೂಸವಾರಿಗೆ ಗಜಪಡೆಯ ತಾಲೀಮು ಅವ್ಯಾಹತವಾಗಿ ಸಾಗಿದೆ. ಇಷ್ಟೆಲ್ಲದರ ನಡುವೆ ದಸರಾದಲ್ಲಿ ಜನರ ಸಹಭಾಗಿತ್ವಕ್ಕೆ ಆದ್ಯತೆ ನೀಡುವುದು ಅಗತ್ಯ. ಸಾರ್ವಜನಿಕರು ತಮ್ಮ ಮನೆಯ ಹಬ್ಬ ಎಂಬಂತೆ ಭಾಗವಹಿಸಲು ಅಡಚಣೆ ಇಲ್ಲದಂತೆ ದಸರಾ ಆಚರಣೆಯಾಗುವುದು ಅಗತ್ಯ. ಅದೇ ವೇಳೆ ದಸರಾ ಕೇವಲ ಅಧಿಕಾರಿಗಳ ದರ್ಬಾರ್ ಆಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು.
ಯುವಜನರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಕ್ರೀಡಾಕೂಟ, ಯುವ ದಸರಾದಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಮಂಜಸವಾಗಿದೆ. ಅದು ಎಲ್ಲ ವರ್ಗಗಳ ಯುವಜನರನ್ನೂ ತಲುಪುವಂತಾಗಬೇಕು.
ರಾಜ್ಯ ಸರ್ಕಾರ ಈ ಬಾರಿ ದಸರಾಗೆ ೪೦ ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. ನಾಡಹಬ್ಬವು ವೈಭವಯುತವಾಗಬೇಕು ಎಂಬ ಕಾರಣಕ್ಕೆ ಸರ್ಕಾರ ದೊಡ್ಡ ಮೊತ್ತದ ಅನುದಾನ ಕೊಡುವ ಭರವಸೆ ನೀಡಿದೆ. ಆದರೆ, ಖಾಸಗಿ ಪ್ರಾಯೋಜತ್ವದಿಂದ ಬರುವ ಆದಾಯವನ್ನು ೪೦ ಕೋಟಿ ರೂ. ಗಳಲ್ಲಿ ಕಳೆದು, ಉಳಿದ ಅನುದಾನವನ್ನು ಮಾತ್ರ ಬಿಡುಗಡೆ ಮಾಡಬೇಕು. ಇಲ್ಲವಾದರೆ ದಸರಾ ವೆಚ್ಚ ನಿರೀಕ್ಷಿತ ಮಿತಿಯನ್ನು ದಾಟಿ ಮುನ್ನುಗ್ಗುತ್ತದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಆಗುತ್ತದೆ. ಅಲ್ಲದೆ, ದಸರಾ ಉತ್ಸವ ‘ಯಾರ‍್ದೋ ದುಡ್ಡು ಎಲ್ಲಮ್ಮನ ಜಾತ್ರೆ’ ಎಂಬಂತೆ ಆಗಬಾರದು. ಅಂದರೆ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು.
ದಸರಾ ಉಪ ಸಮಿತಿಗಳು ಉತ್ಸವ ಮುಗಿದ ಒಂದು ವಾರದೊಳಗೆ ಖರ್ಚು ವೆಚ್ಚದ ವರದಿಯನ್ನು ಮಂಡಿಸುವ ನೈತಿಕತೆಯನ್ನು ಬೆಳೆಸಿಕೊಳ್ಳಬೇಕು. ಇಷ್ಟು ವರ್ಷಗಳಲ್ಲಿ ಅಲ್ಲೊಂದು ಇಲ್ಲೊಂದು ಸಮಿತಿ ಮಾತ್ರ ಲೆಕ್ಕ ಕೊಟ್ಟಿದ್ದು, ಈ ಬಾರಿ ಎಲ್ಲ ಸಮಿತಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಲೆಕ್ಕಪತ್ರವನ್ನು ಪಾರದರ್ಶಕವಾಗಿ ನೀಡುವ ಬದ್ಧತೆ ತೋರಿಸಬೇಕು. ಕಳೆದ ವರ್ಷ ಕಲಾವಿದರ ಸಂಭಾವನೆ ನಿಗದಿ ಸಂಬಂಧ ಅಪಸ್ವರ ಕೇಳಿಬಂದಿತ್ತು. ಈ ಬಗ್ಗೆ ಕೂಡ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕು.
ಪ್ರತಿವರ್ಷ ಸ್ಥಳೀಯ ಕಲಾವಿದರು ಅವಕಾಶಕ್ಕಾಗಿ ಅಧಿಕಾರಿಗಳ ಮುಂದೆ ಅಲವತ್ತುಕೊಳ್ಳುವುದು ವಾಡಿಕೆ ಎಂಬಂತಾಗಿದೆ. ಇಂತಹ ಬೆಳವಣಿಗೆ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಆದ್ಯತೆ ಮೇರೆಗೆ ಸ್ಥಳೀಯರಿಗೆ ಸೂಕ್ತ ಸ್ಥಾನಮಾನ ಒದಗಿಸುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತರಾಗಿ ಕೆಲಸ ನಿರ್ವಹಿಸಬೇಕು.
ದಸರಾದ ಜಂಬೂಸವಾರಿ ಎಂದರೆ ಇಡೀ ಜಗತ್ತೇ ಕುತೂಹಲದಿಂದ ನೋಡುತ್ತದೆ. ಜಂಬೂಸವಾರಿ ನಡೆಯಲಿರುವ (ಅ. ೧೨) ದಿನ ಪ್ರವಾಸಿಗರು, ಸ್ಥಳೀಯ ಪ್ರೇಕ್ಷಕರಿಗೆ ಕಿರಿಕಿರಿಯಾಗದಂತೆ ಜಾಗ್ರತೆ ವಹಿಸುವುದು ಅಗತ್ಯ. ‘ಅತಿಥಿ ದೇವೋಭವ’ ಎಂಬ ನಾಣ್ಣುಡಿಗೆ ಧಕ್ಕೆಯಾಗದಂತೆ ವಿದೇಶಗಳಿಂದ ಬರುವ ಪ್ರವಾಸಿಗರು, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಆಗಮಿಸುವ ಪ್ರೇಕ್ಷಕರಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಆದ್ಯತೆ ಮೇರೆಗೆ ಎಲ್ಲಿಯೂ ಲೋಪವಾಗದಂತೆ ಹೆಜ್ಜೆ ಇಡಬೇಕಾಗಿದೆ.
ದಸರಾ ಕಾರ್ಯಕ್ರಮಗಳನ್ನು ಕೆಲ ಬಡಾವಣೆಗಳಲ್ಲಿ ಕೂಡ ನಡೆಸಲಾಗುತ್ತದೆ. ಆದರೆ, ಪ್ರೇಕ್ಷಕರ ಕೊರತೆ ಎದುರಾಗುತ್ತದೆ. ಹಾಗಾಗಿ ಬಡಾವಣೆಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳ ಔಚಿತ್ಯವನ್ನು ಸಂಬಂಧಪಟ್ಟ ಎಲ್ಲ ಉಪ ಸಮಿತಿಗಳವರೂ ಪರಿಗಣಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
ಜಂಬೂಸವಾರಿ ದಿನ ಅರಮನೆ ಅಂಗಳದಿಂದ ಹೊರಡುವ ದಸರಾ ಗಜಪಡೆ ಮೆರವಣಿಗೆಯು ಚಾಮುಂಡೇಶ್ವರಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿರುವ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯುವಿನ ನೇತೃತ್ವದಲ್ಲಿ ಸಾಗುತ್ತದೆ. ಇದಲ್ಲದೆ, ಕಲಾತಂಡಗಳು, ಸ್ತಬ್ಧಚಿತ್ರಗಳ ಜೊತೆಯಲ್ಲಿ ರಾಜಮಾರ್ಗದಲ್ಲಿ ಸಾಗುವ ಮೆರವಣಿಗೆ ಬನ್ನಿಮಂಟದಲ್ಲಿರುವ ಪಂಜಿನ ಕವಾಯತು ಮೈದಾನಕ್ಕೆ ತಲುಪುವುದು ವಾಡಿಕೆ. ಈ ಕಲಾವೈಭವವನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತು ನೋಡುವುದಕ್ಕಾಗಿ ಮುಗಿಬೀಳುವ ಸಾಮಾನ್ಯರಿಗೂ ಯಾವುದೇ ತೊಂದರೆಯಾಗದಂತೆ ಕ್ರಮವಹಿಸುವುದು ಅತ್ಯಗತ್ಯ.
ವೈವಿಧ್ಯಮಯ ಸಂಸ್ಕೃತಿ, ಸಂಪ್ರದಾಯ, ಕಲೆ, ನೃತ್ಯ ಪ್ರದರ್ಶನಗಳು ಒಂದೇ ಊರಿನಲ್ಲಿ ಒಟ್ಟಾಗಿ ನಡೆಯುವ ಮೂಲಕ ಬಹುತ್ವ ಭಾರತದ ಪರಿಕಲ್ಪನೆಯು ದಸರಾ ನೆಪದಲ್ಲಿ ಮೈಸೂರಿನಲ್ಲಿ ಮೂರ್ತರೂಪ ಪಡೆಯುತ್ತದೆ.





