Mysore
20
overcast clouds
Light
Dark

ನಾಡು ಕಳೆದುಕೊಂಡ ಕನ್ನಡ ಸಾಂಸ್ಕೃತಿಕ ಲೋಕದ ಅನರ್ಥ್ಯ ರತ್ನಗಳು

  • ಬಾ.ನಾ.ಸುಬ್ರಹ್ಮಣ್ಯ

ಜೂನ್ 3, ‘ಗೋ ಗೇಮ್’ ಚಿತ್ರ 25 ದಿನಗಳ ಪ್ರದರ್ಶನ ಕಂಡ ವಿವರ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು. ವಿಜಯ ರಾಘವೇಂದ್ರ ಮುಖ್ಯಭೂಮಿಕೆಯ ಆ ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆದಿದ್ದ ಅಪರ್ಣ ಅಂದು ಬಂದಿರಲಿಲ್ಲ. ಕಾಲು ನೋವಂತೆ ಹಾಗಾಗಿ ಬಂದಿಲ್ಲ ಎನ್ನುವುದಾಗಿತ್ತು ಚಿತ್ರತಂಡದ ಮಾಹಿತಿ.

ಹಿರಿಯ ಪತ್ರಕರ್ತ ಮಿತ್ರ ಕೆ.ಎಸ್.ನಾರಾಯಣ ಸ್ವಾಮಿಯವರ ಮಗಳು ಅಪರ್ಣ. ಸ್ವತಃ ‘ಮುಕ್ತಿ’ ಚಿತ್ರದ ಮೂಲಕ ನಿರ್ಮಾಣಕ್ಕೂ ಕೈಹಾಕಿದ್ದವರು. ನಾರಾಯಣ ಸ್ವಾಮಿ, ಅಪರ್ಣ, ‘ಜಾಗೃತಿ’ ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಮಹತ್ವಾಕಾಂಕ್ಷೆಯ ‘ಮಸಣದ ಹೂವು’ ಮೂಲಕ ನಾಯಕಿಯಾದರು. 1984ರಲ್ಲಿ ಚಿತ್ರೀಕರಣ ಆರಂಭವಾದ ಆ ಚಿತ್ರ ಮುಗಿಯುವ ಮೊದಲೇ ಕಣಗಾಲರು ನಿಧನರಾದರು. ಆ ಚಿತ್ರವನ್ನು ಕೆ.ಎಸ್.ಎಲ್.ಸ್ವಾಮಿ (ರವೀ) ಪೂರ್ಣಗೊಳಿಸುತ್ತಾರೆ. ಈ ಚಿತ್ರದ ನಂತರ ಅವರು ‘ಸಂಗ್ರಾಮ’, ‘ನಮ್ಮೂರ ರಾಜ’, ‘ಚಕ್ರವರ್ತಿ’, ‘ಒಂಟಿ ಸಲಗ’, ‘ಇನ್‌ಸ್ಪೆಕ್ಟರ್ ವಿಕ್ರಂ’, ‘ಸಾಹಸ ವೀರ’ ಹೀಗೆ ಕೆಲವು ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ‘ಗ್ರೇ ಗೇಮ್ಸ್’ ಅವರು ನಟಿಸಿ ತೆರೆಕಂಡ ಕೊನೆಯ ಚಿತ್ರ, ವಿನಯ್ ರಾಜ್‌ಕುಮಾರ್ ಮುಖ್ಯಭೂಮಿಕೆಯ ‘ಗ್ರಾಮಾಯಣ’ ಚಿತ್ರದಲ್ಲಿ ಅವರು ನಟಿಸುತ್ತಿದ್ದರು. ಆ ಚಿತ್ರದ ಚಿತ್ರೀಕರಣದ ನಡುವೆಯೇ ಅದರ ನಿರ್ಮಾಪಕರು ಇನ್ನಿಲ್ಲವಾದರು. ಈಗ ಆ ಚಿತ್ರವನ್ನು ಲಹರಿ ಸಂಸ್ಥೆ ನಿರ್ಮಿಸುತ್ತಿದೆ. ಇನ್ನೂ ಪೂರ್ಣವಾಗಿಲ್ಲ.

ಅಪರ್ಣ ಅವರ ಕಾಲೇಜು ದಿನಗಳಿಂದಲೇ ಆಕೆಯ ಪರಿಚಯ. ಶಾಲಾ ದಿನಗಳಿಂದಲೇ ಸಾಹಿತ್ಯ ಮತ್ತಿತರೆ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ಆಕೆ ಕೆಲವೊಮ್ಮೆ ತಂದೆಯ ಜೊತೆ ಚಿತ್ರೀಕರಣ ತಾಣಗಳಿಗೆ, ಸಮಾರಂಭಗಳಿಗೆ ಬರುತ್ತಿದ್ದರು. ಆಕಾಶವಾಣಿ, ದೂರದರ್ಶನಗಳ ಕಾರ್ಯಕ್ರಮಗಳನ್ನು ನಡೆಸಿಕೊಡುವ ಕೆಲಸದಲ್ಲಿ ಮುಂದೆ ತೊಡಗಿಸಿಕೊಂಡರು. ಮುಂದೆ ನಿರೂಪಕಿಯಾಗಿ, ಕಾರ್ಯಕ್ರಮಗಳ ನಿರ್ವಾಹಕಿಯಾಗಿ ಬಹುದೊಡ್ಡ ಹೆಸರಾದ ಆಕೆ ಆ ದಿನಗಳ ಪತ್ರಕರ್ತರೆಲ್ಲರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು.

ಗ್ರೇ ಗೇಮ್ಸ್ ಕಾರ್ಯಕ್ರಮಕ್ಕೆ ಗೈರಾದ ಕುರಿತಂತೆ ಕೇಳುವ ನೆಪದಲ್ಲಿ ಕರೆ ದಾಗ ಆಕೆ ನೀಡಿದ ಉತ್ತರ ಆಘಾತಕಾರಿಯಾಗಿತ್ತು. ‘ಎಲ್ಲರಿಗೂ ಕಾಲು ನೋವು ಅಂತ ಹೇಳಿದ್ದೇನೆ. ನನಗೆ ಕ್ಯಾನ್ಸರ್ ಸುಬ್ಬಣ್ಣ. ಎರಡು ವರ್ಷ ಆಯಿತು. ಶ್ವಾಸಕೋಶದ ಕ್ಯಾನ್ಸರ್. ಅದು ತಿಳಿಯುವ ಹೊತ್ತಿಗೆ ನಾಲ್ಕನೇ ಹಂತ. ಚಿಕಿತ್ಸೆ ನಡೆದಿದೆ. ವಾಸಿಯಾಗುತ್ತಾ ಬಂದಿತ್ತು. ಮತ್ತೆ ಯಾಕೋ ಹೆಚ್ಚುವ ಸೂಚನೆ… ಈ ವಿಷಯ ಯಾರಿಗೂ ಹೇಳಿಲ್ಲ’ ಎಂದರಾಕೆ.

ಅದಾಗಿ ಐದೇ ವಾರ, ಕಳೆದ ಗುರುವಾರ ರಾತ್ರಿ ಗಿರಿಜಾ ಲೋಕೇಶ್ ಅಪರ್ಣ ಇನ್ನಿಲ್ಲ ಎಂದರು. ಸಾಮಾನ್ಯವಾಗಿ, ಯಾವುದೇ ಸಾವು, ನೋವುಗಳ ಸುದ್ದಿ ಸಿಕ್ಕಾಗ ನಾವು ಜೊತೆಯಾಗಿ ಹೋಗುತ್ತೇವೆ. ‘ಈಗ ಬೇಡ ಬೆಳಿಗ್ಗೆ ಹೋಗೋಣ’ ಎಂದರು. ಬೆಳಿಗ್ಗೆ ಹೋದೆವು. ಸಾಮಾನ್ಯವಾಗಿ ಈ ದಿನಗಳಲ್ಲಿ ಜನಪ್ರಿಯ ವ್ಯಕ್ತಿಗಳ ಸಾವು, ಅಂತಿಮ ದರ್ಶನದ ವೇಳೆ ಸುದ್ದಿ ವಾಹಿನಿಗಳ ಮುಂದೆ ಕಾಣಿಸಿಕೊಂಡು ತಮಗೆ ತಿಳಿದ, ತಿಳಿಯದ ವಿಷಯಗಳನ್ನು ಹೇಳುವವರ ಸಂಖ್ಯೆಯೇ ಅಧಿಕ. ಆದರೆ ಅಲ್ಲಿ ಹಾಗಿರಲಿಲ್ಲ. ರಂಗಭೂಮಿ, ಸಾಹಿತ್ಯ, ಸಂಗೀತ, ಸಿನಿಮಾ ಕ್ಷೇತ್ರಗಳ ಗಣ್ಯವರೇಣ್ಯರು ಅಲ್ಲಿದ್ದರು. ಅವರಲ್ಲಿ ಯಾರಿಗೂ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವ ಧಾವಂತ ಇರಲಿಲ್ಲ. ಅವರೆಲ್ಲರಲ್ಲೂ ಅಪರ್ಣ ಸಾವಿನ ದುಃಖ ಮಡುಗಟ್ಟಿತ್ತು.

ನಟ, ಕಂಠದಾನ ಕಲಾವಿದ ರವೀಂದ್ರನಾಥ್ ಅಪರ್ಣ ಜೊತೆಗಿನ ನೆನಪನ್ನು ಹೇಳಿದರು. ‘ನಾವಿಬ್ಬರೂ ಬಾಲಕಲಾವಿದರಾಗಿ ಆಕಾಶವಾಣಿಯಲ್ಲಿ ಜೊತೆಗೆ ಇದ್ದೆವು. ನಂತರ ಆಡಿಶನ್ ಮೂಲಕ ಕಾರ್ಯಕ್ರಮಗಳಿಗೆ ಬಂದೆವು. ದೂರದರ್ಶನಕ್ಕೂ ಆ ಮೂಲಕವೇ ಅವಕಾಶ ಆಯಿತು’ ಎಂದರು.

ಕನ್ನಡದಲ್ಲಿ ನಿರೂಪಣೆಗೆ ಅದರದ್ದೇ ಆದ ಘನತೆ ಮತ್ತು ವೃತ್ತಿಪರತೆ ತಂದಿತ್ತವರು ಅಪರ್ಣ, ಅದೆಂತಹದೇ ಕಾರ್ಯಕ್ರಮವಿರಲಿ, ಅದರ ಔಚಿತ್ಯ, ಗಾಂಭೀರ್ಯ ಅರಿತು ನಿರೂಪಣೆ ಮಾಡಬಲ್ಲ ಕೌಶಲವನ್ನು ಕರಗತ ಮಾಡಿಕೊಂಡಿದ್ದರು ಅಪರ್ಣ, ಅದು ಸಿನಿಮಾ ಒಂದರ ಕ್ಯಾಸೆಟ್ ಬಿಡುಗಡೆ ಇರಲಿ, ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಇರಲಿ, ಅಂತಾರಾಷ್ಟ್ರೀಯ ಚಿತ್ರೋತ್ಸವ ಇರಲಿ, ಸಮರ್ಥವಾಗಿ, ಅಚ್ಚ, ಸ್ವಚ್ಛ ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದವರೆಂದರೆ ಅಪರ್ಣ.

ಹತ್ತು, ಹಲವು ಕಾರ್ಯಕ್ರಮಗಳನ್ನು ಸಂಘಟಿಸಿದ ಅನುಭವಿ ಕಪ್ಪಣ್ಣನವರ ನೆನಪು, ಹಂಪಿ ಉತ್ಸವದ ಆರಂಭದ ದಿನಗಳತ್ತ ಓಡುತ್ತಿತ್ತು. ಎಂ.ಪಿ.ಪ್ರಕಾಶ್ ಅವರ ಕಲ್ಪನೆಯ ಕೂಸು ಅದು. ಅಲ್ಲಿ ಅಪರ್ಣ ಅವರು ಇದ್ದೇ ಇರುತ್ತಿದ್ದರು. ಮಂಡ್ಯದಲ್ಲಿ ಈ ಬಾರಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭರ್ಜರಿಯಾಗಿ ಮಿಂಚಬೇಕು ಎಂದಿದ್ದರಂತೆ ಅಪರ್ಣ.

ಕಿರುತೆರೆಯ ಆಗಮನ ನಿರೂಪಕರಿಗೆ, ಕಾರ್ಯಕ್ರಮ ನಿರ್ವಾಹಕರಿಗೆ ಇನ್ನಷ್ಟು ಅವಕಾಶಗಳನ್ನು ತಂದು ಕೊಟ್ಟಿದೆ. ಸಾಕಷ್ಟು ಮಂದಿ ಇತ್ತ ಬರುತ್ತಿದ್ದಾರೆ. ಆದರೆ ಅವರಲ್ಲಿ ಅಚ್ಚ ಕನ್ನಡದಲ್ಲಿ ಅಪರ್ಣ ಅವರಂತೆ ಕಾರ್ಯಕ್ರಮ ನಡೆಸಿಕೊಡಬಲ್ಲವರು ಅಪರೂಪ. ಬಹುತೇಕ ಕಂಗ್ಲಿಷ್ ಮಾತು… ಅದೇ ಸರಿ ಎನ್ನುವ ವಾದ. ಇತ್ತೀಚೆಗಂತೂ ‘ಚಪ್ಪಾಳೆ ತಟ್ಟಿಸದಿದ್ದರೆ, ತಮ್ಮ ಕೆಲಸ ಅಪೂರ್ಣ ಎನ್ನುವಂತಹ ಪರಿಸ್ಥಿತಿ. ಕಾರ್ಯಕ್ರಮ ನಡೆಸುವವರೂ, ಈ ‘ಚಪ್ಪಾಳೆ’ ಸರಿಯಾಗಿ ಆಗದಿದ್ದರೆ ಸಂಭಾವನೆ ಖೋತಾ ಮಾಡುತ್ತಾರೆ ಎನ್ನುವುದೂ ಇದೆ. ನಿರೂಪಕರಲ್ಲಿ ಕೆಲವು ಮಂದಿ, ನಮಗೆ ಅಪರ್ಣ ಸ್ಫೂರ್ತಿ ಎನ್ನುವವರಿದ್ದಾರೆ. ಆದರೆ ಅವರಂತೆ ಅಧ್ಯಯನ, ಶಿಸ್ತು, ಕಾರ್ಯಕ್ರಮಗಳ ಔಚಿತ್ಯದ ಕಡೆಗೆ ಗಮನ ನೀಡುವವರು ಕಡಿಮೆ. ನಿರೂಪಣೆ ಮಾತ್ರವಲ್ಲ, ಅಭಿನಯದಲ್ಲೂ ತಾವು ಎಲ್ಲ ರೀತಿಯ ಪಾತ್ರಗಳಿಗೂ ಸೈ ಎನ್ನುವಂತೆ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್‌ನ ವರಲಕ್ಷ್ಮೀ ಆಗಿ ಮಿಂಚಿದ್ದರು.

ಸಾಮಾನ್ಯವಾಗಿ ಅಂತಿಮ ಸಂಸ್ಕಾರದ ವೇಳೆ ಪೊಲೀಸ್ ಗೌರವ ನೀಡುವುದು ರಾಜ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಿಗೆ ಮಾತ್ರ. ಆದರೆ ಅಪರ್ಣ ಅವರಿಗೆ ಈ ಗೌರವವನ್ನು ಸಲ್ಲಿಸುವ ಮೂಲಕ ಕನ್ನಡನಾಡಿಗೆ ಅವರು ನೀಡಿದ ಕೊಡುಗೆಯನ್ನು ಸರ್ಕಾರ ಸ್ಮರಿಸಿಕೊಂಡಿತು.

ಅಪರ್ಣ ನಿಧನರಾದ ಐದನೇ ದಿನಕ್ಕೆ ಮತ್ತೊಂದು ಸಾವಿನ ಸುದ್ದಿ. ಹೆಸರಾಂತ ರಂಗಕರ್ಮಿ, ಸಿನಿಮಾ ನಿರ್ಮಾಪಕ, ನಿರ್ದೇಶಕ ಸದಾನಂದ ಸುವರ್ಣ ಅವರ ನಿಧನ. ಭಾರತೀಯ ಚಿತ್ರರಂಗದ ಅತಿಶ್ರೇಷ್ಠ ಚಿತ್ರಗಳಲ್ಲಿ ಒಂದು ಎಂದು ಗುರುತಿಸಲಾದ, ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಘಟಶ್ರಾದ್ಧ’ ಚಿತ್ರದ ನಿರ್ಮಾಪಕರು ಸದಾನಂದ ಸುವರ್ಣ. ಈ ಬಾರಿ ವೆನಿಸ್ ಚಿತ್ರೋತ್ಸವದ ಪುನರೂಪಿತ ಮಹಾನ್ ಚಿತ್ರಗಳ ವಿಭಾಗದಲ್ಲಿ ‘ಘಟಶ್ರಾದ್ಧ ಚಿತ್ರ ಪ್ರದರ್ಶನ ಕಾಣಲಿದೆ.

ಮೂಲತಃ ಮುಲ್ಕಿಯವರಾಗಿದ್ದ ಸದಾನಂದ ಸುವರ್ಣ ಅವರು ತೊಡಗಿಸಿಕೊಂಡದ್ದು ಮುಂಬೈ ರಂಗಭೂಮಿಯಲ್ಲಿ. ಬಹುಮುಖ ಪ್ರತಿಭೆಯ ಅವರು, ನಂತರ ತೇಜಸ್ವಿ ಅವರ ಕಥೆಯನ್ನು ಆಧರಿಸಿ, ‘ಕುಬಿ ಮತ್ತು ಇಯಾಲ’ ಚಿತ್ರವನ್ನು ನಿರ್ದೇಶಿಸಿದರು. ಅದಕ್ಕೆ ಗಿರೀಶ್ ಕಾಸರವಳ್ಳಿ ಅವರ ಚಿತ್ರಕಥೆ ಇತ್ತು. ಕಾಸರವಳ್ಳಿಯವರು ನಿರ್ದೇಶಿಸಿದ ‘ತಬರನ ಕಥೆ’, ‘ಮನೆ’ ಮುಂತಾದ ಚಿತ್ರಗಳ ನಿರ್ವಾಹಕ ನಿರ್ಮಾಪಕರಾಗಿ ಕೆಲಸ ಮಾಡಿದ ಸುವರ್ಣ ಅವರು ದೂರದರ್ಶನಕ್ಕಾಗಿ ‘ಗುಡ್ಡದ ಭೂತ’ ಸರಣಿಯನ್ನು ನಿರ್ದೇಶಿಸಿದರು. ಅದರ ಶೀರ್ಷಿಕಾ ಗೀತೆ ‘ಡೆನ್ನಾನ ಡೆನ್ನಾನ’ ಅತ್ಯಂತ ಜನಪ್ರಿಯ. ಹೆಸರಾಂತ ನಟ ಪ್ರಕಾಶ ರೈ ಅವರಿಗೆ ಹೆಸರು, ಅವಕಾಶಗಳನ್ನು ತಂದುಕೊಟ್ಟ ಸರಣಿ ಅದು. ಶಿವರಾಮ ಕಾರಂತರ ಕುರಿತಂತೆ ಅವರು ನಿರ್ದೇಶಿಸಿದ ಸಾಕ್ಷ್ಯಚಿತ್ರ ಅವರ ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು ವೀಕ್ಷಕರಿಗೆ ಪರಿಚಯಿಸಿತ್ತು.

ರಂಗತಪಸ್ವಿ ಎಂದೇ ಹೆಸರಾದ ಸುವರ್ಣರು ಆರಂಭಿಕ ಶಿಕ್ಷಣವನ್ನು ಮುಲ್ಕಿಯಲ್ಲಿ ಮುಗಿಸಿ ಮುಂಬೈ ಸೇರುತ್ತಾರೆ. ಅಲ್ಲಿ ರಾತ್ರಿಶಾಲೆಯಲ್ಲಿ ಓದನ್ನು ಮುಂದುವರಿಸುತ್ತಾರೆ. ಗುಜರಾತಿ, ಮರಾಠಿ, ಇಂಗ್ಲಿಷ್ ರಂಗಭೂಮಿಗಳ ಅಧ್ಯಯನ ನಡೆಸಿ, ಅಲ್ಲಿನ ಹೊಸತನಗಳನ್ನು ಕನ್ನಡ ರಂಗಭೂಮಿಗೆ ಅಳವಡಿಸುವ ಪ್ರಯತ್ನ ಮಾಡುತ್ತಾರೆ. ರಂಗಭೂಮಿ ತರಬೇತಿ ಡಿಪ್ಲೊಮೊ, ಫೋಟೊಗ್ರಫಿ ತರಬೇತಿ ಪಡೆದು ಮುಂಬಯಿಯಲ್ಲಿ ಹಲವಾರು ಕನ್ನಡ ಮತ್ತು ತುಳು ನಾಟಕಗಳನ್ನು ರಚಿಸಿ ನಿರ್ದೇಶಿಸಿದವರು ಸುವರ್ಣ.

ನಿರ್ಮಿಸಿದ ಮೊದಲ ಚಿತ್ರಕ್ಕೆ ಸ್ವರ್ಣಕಮಲ ಪಡೆದಿದ್ದ ಸುವರ್ಣ ಅವರಿಗೆ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ತುಳು ಚಿತ್ರವೊಂದನ್ನು ನಿರ್ಮಿಸಬೇಕು ಎನ್ನುವ ಹಂಬಲವಿತ್ತು. ಅದು ಈಡೇರಲಿಲ್ಲ. ಮುಂಬೈಯಿಂದ ಮಂಗಳೂರಿಗೆ ಬಂದು, ಅಲ್ಲಿನ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಸುವರ್ಣ ಅವರು ವಯೋಸಹಜ ಕಾರಣ ಆಶ್ರಯಧಾಮದಲ್ಲಿದ್ದರು. ಅವರ ಆಶಯದಂತೆ ಅವರ ದೇಹವನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ನೀಡಲಾಯಿತು. ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ತಾವು ನಿರ್ಮಿಸಿದ, ನಿರ್ದೇಶಿಸಿದ ಚಿತ್ರಗಳಿಗೆ ಪಡೆದಿದ್ದ ಸುವರ್ಣ ಅವರಿಗೆ ರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ಬಿ.ವಿ.ಕಾರಂತ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ರಂಗಸಾಧನೆಯ ಕುರಿತ ಸಂಶೋಧನಾ ಪ್ರಬಂಧಕ್ಕೆ ಲೇಖಕಿ ದಿ.ಸೀತಾಲಕ್ಷ್ಮೀ ಕರ್ಕಿಕೋಡಿಯವರಿಗೆ ಮುಂಬಯಿ ವಿಶ್ವವಿದ್ಯಾಲ ಯದ ಡಾಕ್ಟರೇಟ್ ಸಂದಿತ್ತು.

ಒಂದೇ ವಾರದಲ್ಲಿ ನಾಡು ಕನ್ನಡ ಸಾಂಸ್ಕೃತಿಕ ಲೋಕದ ಎರಡು ಅನರ್ಥ್ಯ ರತ್ನಗಳನ್ನು ಕಳೆದುಕೊಂಡಿದೆ.