Mysore
17
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಆಡಳಿತಗಾರರ ನಿರ್ಧಾರಗಳು ಜನಮುಖಿಯಾಗಿರಲಿ

ರಾಜ್ಯ ಸರ್ಕಾರವು ೯ ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚಲು ನಿರ್ಧರಿಸಿರುವುದು ವ್ಯಾಪಕ ಚರ್ಚೆಗೆ ಒಳಪಟ್ಟಿದೆ. ಅದರಲ್ಲಿಯೂ ಮಂಡ್ಯ, ಚಾಮರಾಜನಗರ ವಿವಿಗಳನ್ನು ಮೈಸೂರು ವಿಶ್ವವಿದ್ಯಾನಿಲಯ ತೆಕ್ಕೆಗೆ ಸೇರಿಸುವುದಕ್ಕೆ ಸರ್ಕಾರತೀರ್ಮಾನ ಕೈಗೊಂಡಿದೆ. ೯ ವಿವಿಗಳ ಪೈಕಿ ಮೂರನ್ನು ಕಾಂಗ್ರೆಸ್ ಸರ್ಕಾರವೇ ಸ್ಥಾಪನೆ ಮಾಡಿತ್ತು. ಉಳಿದವುಗಳನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಆರಂಭಿಸಿತ್ತು. ಹೊಸ ವಿವಿಗಳ ಸ್ಥಾಪನೆಯಿಂದ ಮೈಸೂರು ವಿವಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣವಾಗಿತ್ತು.

ಆದರೆ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಿಂದ ಮೈಸೂರಿಗೆ ಪದವಿ ವ್ಯಾಸಂಗಕ್ಕೆ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಒಂದು ರೀತಿಯಲ್ಲಿ ಅನುಕೂಲವೇ ಆಗಿದೆ. ಏಕೆಂದರೆ ಪ್ರತಿದಿನ ತರಗತಿಗಳಿಗೆ ಬಸ್‌ನಲ್ಲಿ ಬರುವುದು ಅವರನ್ನು ಹೈರಾಣ ಆಗಿಸುತ್ತಿತ್ತು. ಅಲ್ಲದೆ, ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ವಿದ್ಯಾರ್ಥಿವೇತನ… ಇತ್ಯಾದಿ ಮಾಹಿತಿಗೆ ಅವರೆಲ್ಲ ಕ್ರಾಫರ್ಡ್ ಹಾಲ್ ಅಂದರೆ ಮೈಸೂರು ವಿವಿಯ ಕಾರ್ಯಸೌಧಕ್ಕೆ ಧಾವಿಸುವುದು ಅನಿವಾರ್ಯವಾಗಿತ್ತು. ಅಂತಹ ಧಾವಂತದಿಂದ ಅವರೆಲ್ಲ ಪಾರಾಗಿದ್ದರು ಎನ್ನಬಹುದು. ಆದರೆ, ಹೊಸ ವಿವಿಗಳ ನಿರ್ವಹಣೆಯೇ ಸರ್ಕಾರಕ್ಕೆ ದೊಡ್ಡ ಹೊರೆಯಾದಂತಾಗಿತ್ತು.

ಖಾಸಗಿ ಕಾಲೇಜುಗಳು, ವಿವಿಗಳ ಪೈಪೋಟಿಯಲ್ಲಿ ವಿದ್ಯಾರ್ಥಿಗಳನ್ನು ಸರ್ಕಾರಿ ವಿವಿಗಳತ್ತ ಸೆಳೆಯುವುದು ಸವಾಲಿನ ಕೆಲಸವಾಗಿತ್ತು. ಬಹುಶಃ ನಿರೀಕ್ಷಿತ ಸಂಖ್ಯೆಯ ವಿದ್ಯಾರ್ಥಿಗಳು ಹೊಸ ವಿವಿಗಳ ಕಡೆಗೆ ಚಿತ್ತೈಸಲಿಲ್ಲ ಅನಿಸುತ್ತದೆ. ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿದ್ದರೂ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಕೊರತೆ ಉಂಟು ಮಾಡುವಂತಿರಲಿಲ್ಲ. ಅಲ್ಲದೆ, ಹೊಸದಾಗಿ ಬೋಧಕರು, ಬೋಧಕೇತರ ಸಿಬ್ಬಂದಿ ನೇಮಕ, ಸ್ವಂತ ಕಟ್ಟಡಗಳ ನಿರ್ಮಾಣ, ಕ್ಯಾಂಪಸ್ ಕಟ್ಟುವುದು ಇತ್ಯಾದಿ ಕಾರ್ಯಗಳು ಬಹುಶಃ ಸರ್ಕಾರವನ್ನು ಕಂಗಾಲು ಮಾಡಿರಬಹುದು.

ಮೈಸೂರು ವಿವಿಯಲ್ಲಿ ಗ್ರಂಥಾಲಯ, ಸ್ವಂತ ಕಟ್ಟಡಗಳು, ಪರಿಣತ ಬೋಧಕರು ಹಾಗೂ ಮೂಲ ಸೌಲಭ್ಯ ಸೇರಿ ಬಹುತೇಕ ಎಲ್ಲವೂ ಅಚ್ಚುಕಟ್ಟಾಗಿವೆ. ಆದರೆ, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಸಂಖ್ಯೆ ಇಲ್ಲ. ಏಕೆಂದರೆ ಹೊಸ ವಿವಿಗಳ ಸ್ಥಾಪನೆ. ಸಾಮಾನ್ಯವಾಗಿ ಪದವಿ ವಿದ್ಯಾರ್ಥಿಗಳು ಸ್ಥಳೀಯವಾಗಿ ಆರಂಭ ವಾದ ನೂತನ ವಿವಿಗಳತ್ತಲೇ ಹೆಜ್ಜೆ ಇಟ್ಟಿದ್ದಾರೆ. ಹಾಗಾಗಿ ಅವರಿಗೆ ಬಸ್ ಪಾಸ್, ಮಧ್ಯಾಹ್ನದ ಊಟ ಇತ್ಯಾದಿಗೆ ಖರ್ಚು ಮಾಡುವುದು ತಪ್ಪಿದಂತಾಗಿದೆ. ಆದರೆ, ಅವರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರಕ್ಕೆ ಕಷ್ಟಸಾಧ್ಯ ವಾಗಿರ ಬಹುದು. ಅದರಿಂದ ಅನಿವಾರ್ಯವಾಗಿ ಹೊಸ ವಿವಿಗಳನ್ನು ಮುಚ್ಚಲು ನಿರ್ಧರಿಸಿರಬಹುದು.

ರಾಜ್ಯ ಸರ್ಕಾರ ಇಂತಹ ನಿರ್ಧಾರಗಳನ್ನು ಕೈಗೊಳ್ಳುವಾಗ ಜನಸ್ನೇಹಿಯಾಗಿ ವರ್ತಿಸುವುದು ಸೂಕ್ತ. ಏಕಪಕ್ಷೀಯವಾಗಿ ತೀರ್ಮಾನಿಸುವ ಬದಲಿಗೆ ಸಂಬಂಧಪಟ್ಟ ವಿವಿಗಳ ಆಡಳಿತ ವಿಭಾಗ, ವಿದ್ಯಾರ್ಥಿಗಳು, ಪೋಷಕರೊಂದಿಗೆ ಚರ್ಚೆ ಮಾಡುವುದು ಅಗತ್ಯ. ವಿವಿಗಳನ್ನು ಮುಚ್ಚಲು ಹೊರಟಿರುವುದಕ್ಕೆ ಕಾರಣಗಳನ್ನು ಮನದಟ್ಟು ಮಾಡಬೇಕಾಗಿತ್ತು. ಆಡಳಿತಾಂಗ ಯಾವುದೇ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೊಳಿಸುವಾಗ ಸರ್ಕಾರಗಳು ತಮ್ಮನ್ನು ಸಮರ್ಥನೆ ಮಾಡಿಕೊಳ್ಳಬಹುದು. ಅದಕ್ಕೆ ಜನಸಾಮಾನ್ಯರಿಂದ ಅಡ್ಡಿ ಇರುವುದಿಲ್ಲ. ಒಂದು ವೇಳೆ ಹಾಗೆ ಜಾರಿಗೊಳಿಸಿದ ಯೋಜನೆಗಳನ್ನು ಹಿಂಪಡೆಯಬೇಕಾದರೆ, ಜನರಿಗೆ ಸಕಾರಣಗಳನ್ನು ತಿಳಿಸುವುದು ಅಗತ್ಯ. ಇಂತಹ ಮಾರ್ಗವನ್ನು ೯ ವಿವಿಗಳ ಬಾಗಿಲು ಮುಚ್ಚುವ ನಿರ್ಧಾರ ಕೈಗೊಳ್ಳುವಾಗಲೂ ಅನುಸರಿಸಬೇಕಾಗಿತ್ತು.

ಈಗಲೂ ರಾಜ್ಯ ಸರ್ಕಾರದ ಮುಂದೆ ಸಾಕಷ್ಟು ಅವಕಾಶಗಳಿವೆ. ಜನಸಾಮಾನ್ಯರನ್ನು ಒಳಗೊಳ್ಳುವ ಮೂಲಕ ೯ ವಿವಿಗಳನ್ನು ಮುಚ್ಚುವ ಬಗ್ಗೆ ಸೂಕ್ತ ನಿರ್ಧಾರ ಮಾಡಬಹುದು. ಜನರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಕ್ಕೆ ಇದು ಅನಿವಾರ್ಯ ಕೂಡ. ಇಂತಹ ನಡೆಯು ವಿರೋಧ ಪಕ್ಷಗಳ ಟೀಕಾ ಪ್ರಹಾರವನ್ನು ಸಮರ್ಥವಾಗಿ ಎದುರಿಸಲು ಸರ್ಕಾರಕ್ಕೆ ಅಸ್ತ್ರ ಸಿಕ್ಕಂತಾಗುತ್ತದೆ. ಈಗಾಗಲೇ ಇರುವ ಹಲವು ಸಂಕಷ್ಟಗಳ ಸಾಲಿಗೆ ಇದು ಸೇರ್ಪಡೆಯಾಗುವ ಸಾಧ್ಯತೆ ಇದೆ. ಆದರೆ, ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಚಿಂತಿಸಿ, ತಜ್ಞರ ಸಲಹೆ ಪಡೆದು ೯ ವಿವಿಗಳ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳುವುದು ಒಳ್ಳೆಯದು ಅನಿಸುತ್ತದೆ.

” ರಾಜ್ಯ ಸರ್ಕಾರ ಇಂತಹ ನಿರ್ಧಾರಗಳನ್ನು ಕೈಗೊಳ್ಳುವಾಗ ಜನಸ್ನೇಹಿಯಾಗಿ ವರ್ತಿಸುವುದು ಸೂಕ್ತ. ಏಕಪಕ್ಷೀಯವಾಗಿ ತೀರ್ಮಾನಿಸುವ ಬದಲಿಗೆ ಸಂಬಂಧಪಟ್ಟ ವಿವಿಗಳ ಆಡಳಿತ ವಿಭಾಗ, ವಿದ್ಯಾರ್ಥಿಗಳು, ಪೋಷಕರೊಂದಿಗೆ ಚರ್ಚೆ ಮಾಡುವುದು ಅಗತ್ಯ. ವಿವಿಗಳನ್ನು ಮುಚ್ಚಲು ಹೊರಟಿರುವುದಕ್ಕೆ ಕಾರಣಗಳನ್ನು ಮನದಟ್ಟು ಮಾಡಬೇಕಾಗಿತ್ತು. ಆಡಳಿತಾಂಗ ಯಾವುದೇ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೊಳಿಸುವಾಗ ಸರ್ಕಾರಗಳು ತಮ್ಮನ್ನು ಸಮರ್ಥನೆ ಮಾಡಿಕೊಳ್ಳಬಹುದು. ಅದಕ್ಕೆ ಜನಸಾಮಾನ್ಯರಿಂದ ಅಡ್ಡಿ ಇರುವುದಿಲ್ಲ. ಒಂದು ವೇಳೆ ಹಾಗೆ ಜಾರಿಗೊಳಿಸಿದ ಯೋಜನೆಗಳನ್ನು ಹಿಂಪಡೆಯಬೇಕಾದರೆ, ಜನರಿಗೆ ಸಕಾರಣಗಳನ್ನು ತಿಳಿಸುವುದು ಅಗತ್ಯ. ಇಂತಹ ಮಾರ್ಗವನ್ನು ೯ ವಿವಿಗಳ ಬಾಗಿಲು ಮುಚ್ಚುವ ನಿರ್ಧಾರ ಕೈಗೊಳ್ಳುವಾಗಲೂ ಅನುಸರಿಸಬೇಕಾಗಿತ್ತು”

Tags:
error: Content is protected !!