Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕೇಂದ್ರ, ರಾಜ್ಯ ಸರ್ಕಾರಗಳು ಒಮ್ಮತದಿಂದ ಮುನ್ನಡೆಯಲಿ

ಒಕ್ಕೂಟ ವ್ಯವಸ್ಥೆ ದೇಶದಲ್ಲಿ ಪ್ರಜಾಪ್ರಭುತ್ತಕ್ಕೆ ಧಕ್ಕೆಯಾಗಬಾರದು ಎಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯತೆ ಇರಲೇಬೇಕು. ಇದು ಸಂವಿಧಾನದ ಆಶಯ ಕೂಡ. ಆದರೆ, ಇತ್ತೀಚೆಗೆ ಒಕ್ಕೂಟ ಸರ್ಕಾರ ಮತ್ತು ಹಲವು ರಾಜ್ಯಗಳ ನಡುವೆ ಸಾಮರಸ್ಯ ಮರೀಚಿಕೆಯಾಗಿದೆ. ಒಂದೆಡೆ ಕೇಂದ್ರ ಸರ್ಕಾರವು ವಿಪಕ್ಷಗಳ ಆಡಳಿತ ಇರುವ ರಾಜ್ಯಗಳ ಮೇಲೆ ಸವಾರಿ ಮಾಡುವ ಪ್ರಯತ್ನಗಳನ್ನು ಪ್ರಬಲವಾಗಿ ಮಾಡುತ್ತಿದೆ. ಇದು ರಾಜ್ಯಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತದೆ ಅನಿಸಿದರೆ, ಸಾಂವಿಧಾನಿಕವಾಗಿ ವಿರೋಧಿಸುವುದು ಸೂಕ್ತ. ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಇಡೀ ದೇಶದಲ್ಲಿ ಒಂದೇ ಪ್ರವೇಶ ಪರೀಕ್ಷೆ ನೀಟ್ ಜಾರಿಯಾದಾಗಿನಿಂದಲೂ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ. ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಅನ್ಯಾಯವಾಗುತ್ತದೆ ಎಂಬುದು ಅವುಗಳ ಕಳವಳ, ಇನ್ನು ಒಂದು ರಾಷ್ಟ್ರ; ಒಂದು ಚುನಾವಣೆ ಪ್ರಸ್ತಾವನೆಗೂ ಹಲವು ರಾಜ್ಯಗಳ ವಿಧಾನಸಭೆಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ, ನೀಟ್ ಮತ್ತು ಒಂದು ರಾಷ್ಟ್ರ; ಒಂದು ಚುನಾವಣೆ ಪ್ರಸ್ತಾವನೆ ವಿರುದ್ಧ ನಿರ್ಣಯ ಅಂಗೀಕಾರ ಮಾಡಿದೆ.

ಕರ್ನಾಟಕದ ನಡೆಗೆ ಪೂರಕ ಎಂಬಂತೆ ತಮಿಳುನಾಡು, ಕೇರಳ ರಾಜ್ಯಗಳು ಕೂಡ ಕೇಂದ್ರ ಸರ್ಕಾರ ಹೇರಲು ಉದ್ದೇಶಿಸಿರುವ ಹಲವು ಪ್ರಸ್ತಾವನೆಗಳನ್ನು ವಿರೋಧಿಸಿ ನಿರ್ಣಯಗಳನ್ನು ಕೈಗೊಂಡಿವೆ. ತಮಿಳುನಾಡು ಸರ್ಕಾರ ನೀಟ್‌ನ್ನು ಈಗಾಗಲೇ ಬಹಿಷ್ಕರಿಸಿದ್ದರೆ, ಕೇರಳ ರಾಜ್ಯವು ವಿದೇಶಾಂಗ ವ್ಯವಹಾರಗಳ ಮೇಲೆಯೇ ದಾಳಿ ನಡೆಸುವಂತೆ, ರಾಜ್ಯ ಮಟ್ಟದಲ್ಲೇ ವಿದೇಶಾಂಗ ಅಧಿಕಾರಿಯನ್ನು ನೇಮಕ ಮಾಡಿದೆ. ಇದು ನಿಜಕ್ಕೂ ಅನೂಹ್ಯ ಬೆಳ ವಣಿಗೆ. ಇದರ ಪರಿಣಾಮಗಳು ಏನಾಗ ಬಹುದು ಎಂಬುದು ಆಲೋಚಿಸಬೇಕಾದ ಸಂಗತಿಯಾಗಿದೆ. ಸದ್ಯಕ್ಕೆ ವಿದೇಶಾಂಗ ವ್ಯವ ಹಾರಗಳ ವಕ್ತಾರರು, ಕೇರಳ ರಾಜ್ಯದ ಈ ಕ್ರಮವನ್ನು ವಿರೋಧಿಸಿದ್ದಾರೆ. ಇದರ ಬದಲು ಕೇರಳ ತನ್ನ ಸಾಂವಿಧಾನಿಕ ಹಕ್ಕುಗಳನ್ನು ಮಂಡಿಸಬೇಕು. ಕೇಂದ್ರ ಸರ್ಕಾರದ ನಿರ್ಣಯಗಳು, ಶಾಸನಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು.

ಪಶ್ಚಿಮ ಬಂಗಾಳ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಅವರು ನೀಡಿರುವ ಹೇಳಿಕೆಯೊಂದು ಪಜಾ ಪ್ರಭುತ್ವ ವ್ಯವಸ್ಥೆಯೇ ಬೆಚ್ಚಿಬೀಳುವಂತಿದೆ. ಪಕ್ಕದ ಬಾಂಗ್ಲಾದೇಶದ ಜನರು ದೌರ್ಜನ್ಯಕೀಡಾಗಿ ಭಾರತಕ್ಕೆ ವಲಸೆ ಬಂದರೆ, ಅವರಿಗೆ ಆಶ್ರಯ ನೀಡಲು ಸಿದ್ದ ಎಂಬುದಾಗಿ ಮಮತಾ ಬ್ಯಾನರ್ಜಿ ಹೇಳಿರುವುದು, ವಿವಿಧ ಭಾಷೆಗಳು, ಹಲವು ಧರ್ಮಗಳು, ಅನೇಕ ಬಗೆಯ ಸಂಸ್ಕೃತಿ, ಜೀವನ ಶೈಲಿಯನ್ನು ಒಳಗೊಂಡಿರುವ ಭಾರತದ ಒಕ್ಕೂಟ ವ್ಯವಸ್ಥೆಯ ಘನತೆಗೆ ಭಾರೀ ಪೆಟ್ಟು ನೀಡಿದಂತಾಗಿದೆ.

ಪ್ರತಿಯೊಂದು ರಾಜ್ಯಕ್ಕೂ ಅದರದ್ದೇ ಆದ ಸ್ವಾತಂತ್ರ್ಯ, ಶಾಸನಬದ್ಧ ಹಕ್ಕುಗಳಿವೆ. ಆ ಇತಿಮಿತಿಯೊಳಗೆ ಸರ್ಕಾರಗಳು ಆಡಳಿತ ಮಾಡಿದರೆ ಮಾತ್ರ ಒಕ್ಕೂಟ ವ್ಯವಸ್ಥೆಯ ಬುನಾದಿ ಭದ್ರವಾಗುತ್ತದೆ. ಕೇಂದ್ರ ಸರ್ಕಾರವು ರಾಜ್ಯಗಳ ಬಗ್ಗೆ ಮಾತೃ ಸ್ಥಾನದಲ್ಲಿ ನಿಂತು ಆಲೋಚಿಸ ಬೇಕು. ತಾಯಿ ಹೃದಯದ ಮಮತೆ, ಕಕ್ಕುಲತೆ, ಪ್ರೀತಿಯಿಂದ ರಾಜ್ಯಗಳ ಸಮಸ್ಯೆಗಳಿಗೆ ಕಿವಿಯಾಗಬೇಕು. ಬಲವಂತದಿಂದ ಕಾನೂನುಗಳನ್ನು ಹೇರುವ ಪ್ರಯತ್ನ ಮಾಡಬಾರದು. ಹಾಗೆಯೇ ರಾಜ್ಯಗಳು ಕೂಡ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ಅಡಿಯಲ್ಲೇ ಆಡಳಿತ, ನಿರ್ಣಯಗಳನ್ನು ಕೈಗೊಳ್ಳುವುದು ಪ್ರಜಾತಂತ್ರ ವ್ಯವಸ್ಥೆಯ ಮಹತ್ವವನ್ನು ಎತ್ತಿಹಿಡಿಯುತ್ತದೆ. ಅಧಿಕಾರ ಶಾಶ್ವತ ಅಲ್ಲ; ಅಧಿಕಾರದಲ್ಲಿದ್ದಾಗ ಕೈಗೊಳ್ಳುವ ತೀರ್ಮಾನಗಳು ಮಾದರಿಯಾಗಿರಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಬದುಕು, ಯುವಜನರ ಏಳಿಗೆ, ದೇಶದ ಪ್ರಗತಿ ಸೇರಿದಂತೆ ದೇಶದ ಒಟ್ಟಾರೆ ಪ್ರಗತಿಗಾಗಿ ದ್ವೇಷ ಮರೆತು ದೇಶ ಕಟ್ಟಲು ಮುಂದಾಗಬೇಕು.

Tags: