ರಾಜ್ಯದಲ್ಲಿ ಭರಪೂರ ಮಳೆ ಬರಗಾಲದ ಸಂಕಷ್ಟಗಳನ್ನು ಬಹುತೇಕ ಅಳಿಸಿ ಹಾಕಿದೆ. ಆದರೆ, ಮಳೆಯ ಅಬ್ಬರದಿಂದ ಮಂಡ್ಯ ಜಿಲ್ಲೆಯ ಕೆಆರ್‌ಎಸ್, ಮೈಸೂರು ಜಿಲ್ಲೆಯ ಕಬಿನಿ ಜಲಾಶಯಗಳು ಸೇರಿದಂತೆ ರಾಜ್ಯದ ಹಲವಾರು ಅಣೆಕಟ್ಟೆಗಳು ಭರ್ತಿಯಾಗಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ವಿಜಯಪುರ ಜಿಲ್ಲೆಯ ಆಲಮಟ್ಟಿ, ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಣೆಕಟ್ಟೆಗಳಲ್ಲೂ ಹೊರಹರಿವು ಹೆಚ್ಚಳವಾಗಿದೆ. ಕೊಡಗು, ಕಾರವಾರ ಮತ್ತಿತರ ಜಿಲ್ಲೆಗಳಲ್ಲಿ ಮಳೆ ಅಪಾಯಕಾರಿಯಾಗಿ ಪರಿಣಮಿಸಿದೆ. ಇಡೀ ರಾಜ್ಯದಲ್ಲಿ ಮಳೆಯಿಂದ ಸಾವು-ನೋವುಗಳು ಸಂಭವಿಸುತ್ತಿವೆ. ಹಲವಾರು ಕುಟುಂಬಗಳು ಮನೆ, ಆಸ್ತಿ, ಬೆಳೆಗಳನ್ನು ಕಳೆದುಕೊಂಡಿವೆ. ಮಳೆ ಸೃಷ್ಟಿಸುತ್ತಿರುವ ಅವಾಂತರಗಳಿಗೆ ಕೊನೆ ಇಲ್ಲ ಎಂಬಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಭಾರೀ ಮಳೆಯಿಂದ ಗುಡ್ಡ ಕುಸಿದು, 10 ಮಂದಿ ಅದರಡಿಯಲ್ಲಿ ಸಿಲುಕಿದ್ದು, ಆ ಪೈಕಿ 7 ಜನರ ಮೃತದೇಹಗಳು ಪತ್ತೆಯಾಗಿವೆ. ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನೂ ಘೋಷಿಸಿದ್ದಾರೆ. ಆದರೆ, ಇಂತಹ ಪ್ರಕರಣಗಳು ಮರುಕಳಿಸದಂತೆ ಜಾಗ್ರತೆ ವಹಿಸಬೇಕಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಗ್ಗುಂಡಿಯಲ್ಲಿ ಬ್ಯಾರನ್ ಗೋಡೆ ಕುಸಿಯುವ ಸಂದರ್ಭದಲ್ಲಿ ಸಮೀಪದಲ್ಲಿದ್ದ ಮಹಿಳೆಯೊಬ್ಬರು ತನ್ನ ಮಗುವನ್ನು ದೂರಕ್ಕೆ ತಳ್ಳುವ ಮೂಲಕ ರಕ್ಷಿಸಿದರೂ, ಅವರು ಬದುಕುಳಿಯಲಿಲ್ಲ. ಇಂತಹ ಕರುಣಾಜನಕ ಘಟನೆಗಳು ಮರುಕಳಿಸದಂತೆ ಜಾಗ್ರತೆ ವಹಿಸುವುದು ಸ್ಥಳೀಯ ಆಡಳಿತ ವ್ಯವಸ್ಥೆಯ ಆದ್ಯತೆ ಯಾಗಬೇಕು. ಇದಕ್ಕೆ ಸರ್ಕಾರ ಸ್ಪಷ್ಟ ಮಾರ್ಗದರ್ಶನ ನೀಡಬೇಕು.
ಬೇಸಿಗೆಯ ಅಂತ್ಯದಲ್ಲೇ ಪೂರ್ವ ಮುಂಗಾರು ಆರಂಭವಾಗುತ್ತದೆ. ಅಂದರೆ ಮುಂಗಾರು ಬರುತ್ತಿದೆ ಎಂಬುದರ ಸೂಚನೆ ಅದು. ನದಿಪಾತ್ರದ ಗ್ರಾಮಗಳ ಜನರಿಗೆ ಮುನ್ನೆಚ್ಚರಿಕೆಯನ್ನು ನೀಡಬೇಕು. ಆದರೆ, ಸಾಮಾನ್ಯವಾಗಿ ಜಲಾಶಯಗಳಿಂದ ಹೊರಹರಿವು ಹೆಚ್ಚಳವಾಗಿ ಅಪಾಯದ ಹಂತಕ್ಕೆ ತಲುಪಿದಾಗ ಸ್ಥಳೀಯ ಆಡಳಿತಗಳು ಜನರ ರಕ್ಷಣೆಗೆ ಧಾವಿಸುವುದನ್ನು ವಾಡಿಕೆ ಎಂಬಂತೆ ಪರಿಗಣಿಸಿವೆ. ನಿಜವಾಗಿ ಮಾಡಬೇಕಿರುವುದು, ನದಿತಟದಹಳ್ಳಿಗಳಲ್ಲಿರುವ ಜನರಿಗೆ ದಿಢೀರ್ ಪ್ರವಾಹ ಬಂದರೂ ಆತ್ಮಸ್ಥೆರ್ಯದಿಂದ ಎದುರಿಸುವುದು, ರಕ್ಷಣೆಯ ವಿಧಾನಗಳನ್ನು ಕಲಿಸಬೇಕು. ಇಂತಹ ತರಬೇತಿಯನ್ನು ಪ್ರತಿವರ್ಷ ಬೇಸಿಗೆ ಕಾಲದಲ್ಲೇ ಹಮ್ಮಿಕೊಳ್ಳುವುದು ಸೂಕ್ತ.
ಮಳೆ ಬರಲಿ, ಬೆಳೆಗೆ ಅನುಕೂಲವಾಗುವುದು ಎಂಬುದಾಗಿ ಪ್ರತಿಕ್ಷಣವೂ ಹಂಬಲಿ ಸುವ ಅನ್ನದಾತರ ಆಶಯ ಇದ್ದಕ್ಕಿದ್ದಂತೆ ಬುಡಮೇಲಾಗುತ್ತಿದೆ. ಮಳೆ ಹುಯ್ಯು ಇದೆ. ರೈತರು ಖುಷಿಯಿಂದ ಕೃಷಿ ಚಟು ವಟಿಕೆ ಆರಂಭಿಸುತ್ತಾರೆ. ಬೆಳೆ ಕೈಗೆ ಬರುವ ಸಮಯದಲ್ಲಿ ಸಾಧಾರಣವಾಗಿ ಸುರಿಯ ಬೇಕಾದ ಮಳೆ ಕೂಡ ಅಬ್ಬರಿಸಿಬಿಡುತ್ತದೆ. ಬೆಳೆಗಳು ನಾಶವಾಗುತ್ತವೆ. ರೈತರ ಅಳಲು ಕೇಳಲು ಆಡಳಿತ ವ್ಯವಸ್ಥೆ ಮನಸ್ಸು ಮಾಡು ವುದು ಕಷ್ಟಕರ. ಬೆಳೆ ಪರಿಹಾರ ನೀಡಿದರೂ ಅದು ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗುತ್ತದೆ. ನದಿಗಳ ಪ್ರವಾಹ ರೈತರ ಬದುಕನ್ನು ಅತಂತ್ರಗೊಳಿಸುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಅಥವಾ ರೈತರು ಮಳೆಗಾಲದಲ್ಲಿ ಬೆಳೆಯಬಹುದಾದ ಬೆಳೆಗಳು, ಅವುಗಳ ಸಂರಕ್ಷಣೆಯ ಬಗ್ಗೆ ಸರಿಯಾದ ಕ್ರಮಗಳನ್ನು ಅನುಸರಿಸಲು ಕೃಷಿ ಇಲಾಖೆ ತರಬೇತಿ ನೀಡಬೇಕು. ಅದಕ್ಕೆ ರಾಜ್ಯ ಸರ್ಕಾರ ಅಗತ್ಯ ಬೆಂಬಲ ನೀಡು ವುದು ಅವಶ್ಯ.
ಇನ್ನು ಮೊದಲೇ ವಿದ್ಯಾರ್ಥಿಗಳ ಕೊರತೆ, ಶಿಕ್ಷಕರ ಅಭಾವ, ಮೂಲಸೌಕರ್ಯಗಳ ಅಲಭ್ಯತೆ ಇತ್ಯಾದಿ ಸಮಸ್ಯೆಗಳಿಂದ ನರಳುತ್ತಿರುವ ಬಹುತೇಕ ಸರ್ಕಾರಿ ಶಾಲೆಗಳು ಮಳೆಯಿಂದ ಆತಂಕ ಎದುರಿಸುತ್ತಿವೆ. ಕೆಲವು ಶಾಲೆಗಳಲ್ಲಿ ಕೊಠಡಿಗಳು ಶಿಥಿಲವಾಗಿದ್ದು, ಕುಸಿದು ಬೀಳುವ ಹಂತದಲ್ಲಿವೆ. ಮಳೆ ಅದಕ್ಕೆ ನೆಪವಾಗಬಹುದು. ಒಂದು ವೇಳೆ ತರಗತಿಗಳು ನಡೆಯುವ ಸಂದರ್ಭದಲ್ಲಿ ಗೋಡೆ ಕುಸಿದರೆ, ಉಂಟಾಗಬಹುದಾದ ಉಂಟಾಗಬಹುದಾದ ಅಪಾಯಗಳನ್ನು ಊಹಿಸುವುದೂ ಕಷ್ಟ. ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕೊಯನಾಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂಭಾಗದ ಗುಡ್ಡ ಕುಸಿದಿದೆ. ಅದರ ಮಣ್ಣು ಶಾಲೆಯ ಕೊಠಡಿಗೂ ಚಾಚಿಕೊಂಡಿದೆ. ಇಂತಹ ಅವಾಂತರಗಳಿಗೆ ಕಡಿವಾಣ ಹಾಕದಿದ್ದರೆ, ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂಜರಿಯುವುದು ಸಹಜ. ಈಗಾಗಲೇ ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ಹೈರಾಣಾಗಿರುವ ಸರ್ಕಾರ ಶಾಲೆಗಳಿಗೆ ಇಂತಹ ಅಪಾಯಗಳಿಂದ ಶಾಶ್ವತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯು ರಾಜ್ಯ ಸರ್ಕಾರದ ಗಮನ ಸೆಳೆದು, ಕಾರ್ಯ ನಿರ್ವಹಿಸಬೇಕಿದೆ.
ಅಲ್ಲದೆ, ಮಳೆಯಿಂದ ಅನಾಹುತ ನಡೆದ ಸ್ಥಳಗಳಲ್ಲಿ ಪರಿಹಾರ ಕಾರ್ಯ ತ್ವರಿತವಾಗಿ ನಡೆಯಬೇಕು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಪ್ರವಾಹದ ಸ್ಥಳಗಳಲ್ಲಿ ಈಗಾಗಲೇ ಸಾಕಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದೆ. ಈ ಪಡೆಗೂ ಇನ್ನಷ್ಟು ಬಲ ತುಂಬುವ ಅಗತ್ಯ ಇದೆ. ಉನ್ನತೀಕರಿಸಿದ ತಂತ್ರಜ್ಞಾನದ ಸವಲತ್ತುಗಳನ್ನು ಒದಗಿಸುವುದು ಕೂಡ ಅತ್ಯಗತ್ಯ, ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಗಂಭೀರ ಚಿಂತನೆ
ನಡೆಸಬೇಕು.