Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಆರೋಪ- ಪ್ರತ್ಯಾರೋಪದ ನಡುವೆ ಅಭಿವೃದ್ಧಿ ಮರೆಯಬಾರದು

ನಾಡಹಬ್ಬ ದಸರಾ ಮಹೋತ್ಸವ ಮಳೆಯ ನಡುವೆಯೂ ಅದ್ದೂರಿಯಾಗಿ ನಡೆಯುತ್ತಿದೆ. ಏತನ್ಮಧ್ಯೆ ರಾಜಕೀಯ ಪಕ್ಷಗಳ ನಡುವೆ ಭ್ರಷ್ಟಾಚಾರ ಪ್ರಕರಣಗಳನ್ನು ಕುರಿತು ಪರಸ್ಪರ ಕೆಸರೆರಚಾಟ ನಡೆಯುತ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ವಿಪಕ್ಷಗಳ ನಾಯಕರು ಗದಾಪ್ರಹಾರ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಕೂಡ ಚಾಟಿ ಬೀಸುತ್ತಿದ್ದಾರೆ. ಅಲ್ಲದೆ, ಇವರಿಗೆ ಕಾಂಗ್ರೆಸ್ ಹೈಕಮಾಂಡ್ ಕೂಡ ಬೆಂಬಲ ನೀಡಿದೆ. ಏತನ್ಮಧ್ಯೆ, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದತಮಗೆ ಹಂಚಿಕೆ ಮಾಡಲಾಗಿದ್ದ14 ನಿವೇಶನಗಳನ್ನೂ ಹಿಂದಿರುಗಿಸಿದ್ದಾರೆ. ಅಲ್ಲದೆ, ರಾಜಕೀಯ ಅಧಿಕಾರ ಅಥವಾ ಅಸ್ತಿತ್ವಕ್ಕಾಗಿ ರಾಜಕೀಯ ಸಂಬಂಧವೇ ಇಲ್ಲದೆ ಮನೆಯಲ್ಲಿ ಇರುವ ಮಹಿಳೆಯರನ್ನು ಹಗರಣಗಳಿಗೆ ಎಳೆದು ತರಬೇಡಿ ಎಂದು ಭಾವನಾತ್ಮಕವಾಗಿ ಪತ್ರ ಬರೆದಿದ್ದರು. ಅಂತಹ ದೊಂದು ಮನವಿಗೆ ರಾಜಕೀಯ ಪಕ್ಷಗಳ ನಾಯಕರು ಸ್ಪಂದಿಸಲೇ ಇಲ್ಲ.

ಇಡಿ, ಸಿಬಿಐ ಯಾವುದೇ ಭ್ರಷ್ಟಾಚಾರದ ಪ್ರಕರಣಗಳ ಬೆನ್ನು ಬೀಳಲು ಸದಾ ಸಿದ್ಧವಾಗಿವೆ. ಆಡಳಿತ ಪಕದ ಹಲವು ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದ್ದಂತೆ, ವಿಪಕ್ಷಗಳ ಕೆಲವು ನಾಯಕರ ವಿರುದ್ಧವೂ ಅಂತಹ ಆಪಾದನೆಗಳ ಪಟ್ಟಿ ಹೊರಬೀಳುತ್ತಿವೆ. ಒಟ್ಟಾರೆ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ಪೈಪೋಟಿಗೆ ಇಳಿದಿದ್ದಾರೆ. “ಅಪ್ಪ- ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಗಾದೆ ಮಾತಿನಂತೆ, ಆರೋಪ- ಪ್ರತ್ಯಾರೋಪಗಳಲ್ಲಿ ಮುಳುಗಿರುವ ರಾಜಕೀಯ ಪಕ್ಷಗಳಿಂದಾಗಿ ರಾಜ್ಯದ ಆಡಳಿತ ಯಂತ್ರ ಸ್ತಬ್ಧಗೊಳ್ಳುವ ಲಕ್ಷಣಗಳು ಗೋಚರಿಸಿವೆ.

ಪ್ರಮುಖವಾಗಿ ವಿದ್ಯಾವಂತ ಯುವಕರಿಗೆ ಉದ್ಯೋಗ ಅಗತ್ಯವಿದೆ ಅಥವಾಸ್ವಯಂ ಉದ್ಯೋಗ ಕೈಗೊಳ್ಳುವುದಕ್ಕಾದರೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಯೋಜನೆಗಳನ್ನು ಚುರುಕುಗೊಳಿಸಬೇಕಾಗಿದೆ. ಇದು ಕೇವಲ ರಾಜ್ಯ ಸರ್ಕಾರಕ್ಕೆ ಸೀಮಿತವಲ್ಲ. ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವವರಿಗೂ ಅನ್ವಯಿಸುತ್ತದೆ. ಸಾಮಾಜಿಕ ಭದ್ರತಾ ಯೋಜನೆಗಳಡಿ ಬರುವ ಪಿಂಚಣಿಗಳು, ರೈತರಿಗೆ ಬೆಳೆ ಪರಿಹಾರ ಇತ್ಯಾದಿ ಸಮಯಕ್ಕೆ ಸರಿಯಾಗಿ ಲಭ್ಯವಾಗುವಂತೆ ಕ್ರಮವಹಿಸುವ ಅಗತ್ಯ ಇದೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಪ್ರಗತಿಯಲ್ಲಿದೆ. ಅದರ ಪಾಡಿಗೆ ಅದು ನಡೆಯುತ್ತದೆ. ಹಾಗಾಗಿ ರಾಜಕೀಯ ಪಕ್ಷಗಳ ನಾಯಕರು ಜನಪರವಾದ ಮರೆತು ಹಗರಣಗಳನ್ನೇ ಕೆಲಸ ಕಾರ್ಯಗಳನ್ನು ಮುಂದಿಟ್ಟುಕೊಂಡು ಹೋರಾಟಗಳನ್ನು ಮಾಡುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಆಡಳಿತ ಪಕ್ಷದವರು ಅವಮಾನ ಮಾಡಿದರು ಅಂತ ವಿರೋಧ ಪಕದವರು ಕೂಗಾಡುವುದು; ವಿಪಕ್ಷದವರು ಹೀಯಾಳಿಸಿದರು ಅಂತ
ಆಡಳಿತ ಪಕ್ಷದವರು ಕಿರುಚಾಡುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅಣಕವಾಡಿದಂತೆ.

ಮಾಧ್ಯಮಗಳು ಕೂಡ ರಾಜಕೀಯ ಮೇಲಾಟಗಳನ್ನು ವರ್ಣರಂಜಿತಗೊಳಿಸದೆ, ಸಾಮಾನ್ಯ ಜನರ ಬದುಕು, ಬವಣೆ ಬಿಂಬಿಸುವ ಮೂಲಕ ಆಡಳಿತ ಯಂತ್ರವನ್ನು ಚುರುಕುಗೊಳಿಸುವಂತಹಸಲಹೆಗಳನ್ನು ರಾಜಕೀಯ ನಾಯಕರ ಗಮನಕ್ಕೆ ತರುವಂತಹ ಸುದ್ದಿಗಳಿಗೆ ಆದ್ಯತೆ ನೀಡಬೇಕು. ವಿಪರ್ಯಾಸವೆಂದರೆ ಎದುರಾಳಿ ಪಕ್ಷಗಳಿಗಿಂತ ಮೊದಲೇ ಮಾಧ್ಯಮಗಳು ಊಹಾಪೋಹಗಳ ಸರಮಾಲೆಯನ್ನು ಕಟ್ಟುತ್ತವೆ. ಹೌದು. ಅವುಗಳಲ್ಲಿ ಕೆಲವು ನಿಜವಾಗುತ್ತವೆ. ಏಕೆಂದರೆ ಇವರ ಊಹಾತ್ಮಕ ವರದಿಯನ್ನು ಆಧರಿಸಿ ರಾಜಕಾರಣಿಗಳು ಹೋರಾಟ ನಡೆಸಲು, ರಾಜಕೀಯ ದಾಳ ಉರುಳಿಸಲು ಮುಂದಾಗುತ್ತಾರೆ. ಆದರೆ, ಬಹುತೇಕ ಊಹಾತ್ಮಕ ಸುದ್ದಿಗಳು ಸದ್ದಿಲ್ಲದೇ ಹಿಂದಕ್ಕೆ ಸರಿಯುತ್ತವೆ.

ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುತ್ತಾರೆ ಎಂಬ ಸುದ್ದಿ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಸಭೆಗಳು, ದಿಲ್ಲಿ ದೌಡು ಚಟುವಟಿಕೆಗಳು ನಡೆಯುತ್ತಿದ್ದರೆ, ವಿಪಕ್ಷಗಳವರು ಅವಕ್ಕೆಲ್ಲ ಬಣ್ಣ ಬಳಿದು ಹರಿಯಬಿಡುತ್ತಾರೆ. ಇದಕ್ಕೆ ಆಡಳಿತ ಪಕ್ಷಗಳವರು ತಿರುಗೇಟು ನೀಡುವುದಕ್ಕೆ ಸಮಯ ವ್ಯರ್ಥ ಮಾಡುತ್ತಾರೆ. ಆದರೆ, ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ. ಆದರೆ, ಅಭಿವೃದ್ಧಿ ಕಾರ್ಯಗಳು ಕುಂಠಿತವಾದರೆ ಸಾಮಾನ್ಯರ ಬದುಕು ಏರುಪೇರಾಗುತ್ತದೆ. ಹಾಗಾಗಿ ರಾಜಕೀಯ ಪಕ್ಷಗಳ ನಾಯಕರು ವಾಗ್ಯುದ್ಧಕ್ಕೆ ವಿರಾಮ ಹಾಕಿ, ನಾಡಿನ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸುವುದು ಸೂಕ್ತ.

Tags: