ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಗೆ ಸಡ್ಡು ಹೊಡೆದಿದ್ದಾರೆ.
ವಿಧಾನಮಂಡಲ, ಸಂಸತ್‌ನಲ್ಲಿ ಮಹಿಳೆಯರಿಗೆ ಶೇ.೩೩ ಮೀಸಲಾತಿ ನೀಡುವ ಪ್ರಸ್ತಾಪವೂ ಇದೆ. ಆದರೂ ಸಾಧನೆಗೈದ ಮಹಿಳೆಯರನ್ನು ನಿಂದಿಸುವುದನ್ನು ಪುರುಷ ರಾಜಕಾರಣಿಗಳು ರೂಢಿಸಿಕೊಳ್ಳುತ್ತಿದ್ದಾರೆ. ಇದು ಮಹಿಳಾ ಸಬಲೀಕರಣದ ಆಶಯಕ್ಕೆ ತದ್ವಿರುದ್ಧವಾಗಿದೆ.
ಇತ್ತೀಚೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹೈಕೋರ್ಟ್‌ನಲ್ಲಿ ಜಾಮೀನು ಲಭಿಸಿದ್ದರಿಂದ ಬಂಧನ ಭೀತಿಯಿಂದ ಪಾರಾಗಿದ್ದಾರೆ. ವಿರೋಧ ಪಕ್ಷಗಳು ಯಾವಾಗಲೂ ಆಡಳಿತ ಪಕ್ಷ ಅಥವಾ ಸರ್ಕಾರವನ್ನು ಮಾತ್ರ ಗುರಿಯಾಗಿಸಿ ಕೊಂಡಿರಬೇಕು. ಅದರಾಚೆಗೆ ಸರ್ಕಾರಿ ಅDiಕಾರಿಗಳನ್ನು ಸರ್ಕಾರದ ಅಡಿಯಾಳುಗಳು ಎಂಬರ್ಥದಲ್ಲಿ ವ್ಯಂಗ್ಯವಾಡುವುದು ಅವರ ಬೌದ್ಧಿಕ ಅಸಮರ್ಥತೆಯನ್ನು ಸಾರುತ್ತದೆ.
ಆಡಳಿತ ಪಕ್ಷ ದಾರಿ ತಪ್ಪಿದಾಗ ಎಚ್ಚರಿಸುವುದು ವಿಪಕ್ಷಗಳ ಕಾಯಕವಾಗಿರಬೇಕು. ಆದರೆ, ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳನ್ನು ವೈಯಕ್ತಿಕವಾಗಿ ನಿಂದಿಸವಂತಿರ ಬಾರದು. ರವಿಕುಮಾರ್ ಅವರು ಪ್ರಖರ ಧಾರ್ಮಿಕವಾದಿ. ಅವರು ನಂಬಿರುವ ಧರ್ಮದಲ್ಲಿ ಸ್ತ್ರೀಯರು ಪೂಜಾರ್ಹರು ಎನ್ನಲಾಗಿದೆ. ಅಷ್ಟೊಂದು ದೊಡ್ಡ ಗೌರವವನ್ನು ನೀಡದಿದ್ದರೂ ಪರವಾಗಿಲ್ಲ, ಮಹಿಳೆಯರನ್ನು ನಿಂದಿಸುವುದು ಏಕೆ? ರವಿಕುಮಾರ್ ಅವರ ನಡತೆಯನ್ನು ಅವರದೇ ಪಕ್ಷ ಬಿಜೆಪಿ ಕೂಡ ನಿರ್ಲಕ್ಷಿಸಿರುವುದು ಖಂಡನೀಯ.
ರಾಜ್ಯ ಸರ್ಕಾರದ ವಿರುದ್ಧವಾಗಿ ಅವರಾಡುವ ಮಾತುಗಳು ಕೂಡ ಅಸಂಸದೀಯವಾಗಿದ್ದರೂ ಸಹಿಸಿಕೊಳ್ಳಬಹುದು. ಆದರೆ, ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ಅವಹೇಳನ ಮಾಡಿರುವುದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇರುವ ಯಾರೂ ಒಪ್ಪಲಾಗದು.
ಪಕ್ಷಕ್ಕೆ ನಿಷ್ಠೆ ತೋರುವ ಭರದಲ್ಲಿ ಬಾಯಿಗೆ ಬಂದಂತೆ ಮಾತನಾಡುವುದನ್ನು ಇತ್ತೀಚೆಗೆ ಹಲವು ರಾಜಕಾರಣಿಗಳು ರೂಢಿಸಿಕೊಂಡಿದ್ದಾರೆ. ಆಶ್ಚರ್ಯವೆಂದರೆ ಬಿಜೆಪಿಯಲ್ಲಿರುವ ಮಹಿಳೆಯರು ಕೂಡ ಮಹಿಳಾ ಅಧಿಕಾರಿಯನ್ನು ನಿಂದಿಸಿರುವುದರ ಬಗ್ಗೆ ಚಕಾರ ಎತ್ತದಿರುವುದು ವಿಪರ್ಯಾಸ. ಬಿಜೆಪಿ ಹೈಕಮಾಂಡ್‌ನಲ್ಲಿ ಕೂಡ ಈ ಬಗ್ಗೆ ಚರ್ಚೆ ನಡೆದಿಲ್ಲ. ರವಿಕುಮಾರ್ ಅವರಿಗೆ ಜಾಮೀನು ಸಿಕ್ಕಿದ್ದರಿಂದ ಬಹುಶಃ ಅದು ತಣ್ಣಗಾಗಿದೆ. ಕಾಂಗ್ರೆಸ್ಸಿಗರು ಕೂಡ ನಿರೀಕ್ಷಿತ ಮಟ್ಟದಲ್ಲಿ ನಿಕಷಕ್ಕೆ ಒಳಪಡಿಸಲಿಲ್ಲ. ಮಹಿಳೆಯೊಬ್ಬರು ಸರ್ಕಾರದ ಉನ್ನತ ಹುದ್ದೆಗೇರಲು ಅದೆಷ್ಟು ಶ್ರಮವಹಿಸಿರಬೇಕು ಎಂಬುದನ್ನು ಒಂದು ಕ್ಷಣ ಆಲೋಚಿಸಿದರೂ, ಅವರ ವಿರುದ್ಧ ಒಂದು ಮಾತು ಹೇಳುವುದಕ್ಕೂ ಮನಸ್ಸು ಒಪ್ಪದು. ಅಂತಹದರಲ್ಲಿ ಆಡಳಿತ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನೇರವಾಗಿ ಹೇಳು ವುದಕ್ಕೆ ಹಿಂಜರಿದು, ಪರೋಕ್ಷವಾಗಿ ಟೀಕಿಸಲು ಯತ್ನಿಸಿ ಅಧಿಕಾರಿಯನ್ನು ಅವಹೇಳನ ಮಾಡಿದ್ದಾರೆ.
ಸಂಸ್ಕೃತಿ, ಸಂಸ್ಕಾರದ ಬಗ್ಗೆ ಮಾತನಾಡಿದರೆ ಸಾಕಾಗದು. ನಡೆ- ನುಡಿಯಲ್ಲಿ ಅಳವಡಿಸಿಕೊಳ್ಳಬೇಕು. ರವಿಕುಮಾರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಅವರನ್ನು ಕುರಿತು ಅಸಹ್ಯವಾಗಿ ವ್ಯಂಗ್ಯವಾಡಿರುವುದು, ಅವರ ವಿಧಾನ ಪರಿಷತ್ ಸದಸ್ಯತ್ವಕ್ಕೆ ಔಚಿತ್ಯಪೂರ್ಣವಲ್ಲ. ಕಳೆದ ವರ್ಷ ಬಿಜೆಪಿಯ ಮತ್ತೊಬ್ಬ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಪರಿಷತ್‌ನಲ್ಲೇ ಅವಾಚ್ಯ ಪದ ಪ್ರಯೋಗ ಮಾಡಿದ್ದರು. ಈಗ ರವಿಕುಮಾರ್ ಸರದಿ. ಇವರ ನಡವಳಿಕೆಗಳು ಒಂದು ರೀತಿಯಲ್ಲಿ ಮಹಿಳೆಯರನ್ನು ಮನಸ್ಸಿಗೆ ಬಂದಂತೆ ನಿಂದಿಸಲು ಪರವಾನಗಿ ಪಡೆದಂತೆ ಇದೆ. ಸರ್ಕಾರ ಬದಲಾದರೂ ಸಾಮಾನ್ಯವಾಗಿ ಅಧಿಕಾರಿಗಳು ಇದ್ದೇ ಇರುತ್ತಾರೆ. ಅಂದರೆ ಬಿಜೆಪಿ ಸರ್ಕಾರ ಬಂದಾಗ ಬೇರೆ ಅಧಿಕಾರಿ ಇರಬಹುದು. ಆಗ ಅವರನ್ನು ವಿಪಕ್ಷಗಳು ನಿಂದಿಸಿದರೆ, ಒಪ್ಪಿಕೊಳ್ಳುವುದು ಕಾರ್ಯಸಾಧು ಆಗುವುದಿಲ್ಲ. ಇಂತಹ ಸಣ್ಣ ಆಲೋಚನೆಗಳೂ ಇರದಿದ್ದರೆ, ತಮ್ಮ ಜವಾಬ್ದಾರಿಯುತ ಸ್ಥಾನಗಳನ್ನು ಸಮರ್ಥವಾಗಿ ನಿರ್ವಹಿಸುವುದು ಸಾಧ್ಯವೇ? ಸಿ.ಟಿ.ರವಿ, ಎನ್. ರವಿಕುಮಾರ್ ಅವರ ಪ್ರಕರಣಗಳು ಮಹಿಳೆಯರ ಪರವಾದ ನಿಲುವಿನ ಬಗ್ಗೆ ಬಿಜೆಪಿಗರನ್ನು ಆತ್ಮಾವಲೋಕನಕ್ಕೆ ಒತ್ತಾಯಪಡಿಸುತ್ತವೆ. ಈ ಬಗ್ಗೆ ಅವರ ಹೈಕಮಾಂಡ್ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಾಗಿದೆ. ಸಾಮಾನ್ಯವಾಗಿ ಶಿಸ್ತು, ಸಂಸ್ಕಾರ, ಸಂಸ್ಕೃತಿ, ಧರ್ಮದ ಪ್ರತಿಪಾದನೆ ಕುರಿತು ಆಗಾಗ್ಗೆ ತರಬೇತಿ ನೀಡುವ ಬಿಜೆಪಿಯು, ಪಕ್ಷದೊಳಗಿನವರೂ ಸೇರಿದಂತೆ ಎಲ್ಲ ಮಹಿಳೆಯರ ಬಗ್ಗೆ ವರ್ತನೆ, ಮಾತುಕತೆ, ದೃಷ್ಟಿಕೋನ ಹೇಗೆ ಸಕಾರಾತ್ಮಕವಾಗಿ ಇರಬೇಕು ಎಂಬುದರ ಪಾಠವನ್ನೂ ಹೇಳಿಕೊಡುವ ಅಗತ್ಯ ಇದೆ.
” ಸಂಸ್ಕೃತಿ, ಸಂಸ್ಕಾರದ ಬಗ್ಗೆ ಮಾತನಾಡಿದರೆ ಸಾಕಾಗದು. ನಡೆ- ನುಡಿಯಲ್ಲಿಅಳವಡಿಸಿಕೊಳ್ಳಬೇಕು. ರವಿಕುಮಾರ್ ಅವರು ಮುಖ್ಯ ಕಾರ್ಯದರ್ಶಿ ಅವರನ್ನು ಕುರಿತು ಅಸಹ್ಯವಾಗಿ ವ್ಯಂಗ್ಯವಾಡಿರುವುದು, ಅವರ ವಿಧಾನ ಪರಿಷತ್ ಸದಸ್ಯತ್ವಕ್ಕೆ ಔಚಿತ್ಯಪೂರ್ಣವಲ್ಲ.”





