Mysore
19
overcast clouds
Light
Dark

ಕೇರಳ ಚಿತ್ರರಂಗದಲ್ಲಿ ಹೇಮಾ ಸಮಿತಿಯ ವರದಿಯ ಆಚೆ ಈಚೆ

ನೀಲಾಕಾಶವು ರಹಸ್ಯಗಳ ಆಗರ: ಅಲ್ಲಿ ಮಿನುಗುವ ನಕ್ಷತ್ರಗಳು, ಸುಂದರ ಚಂದಿರ. ಆದರೆ, ವೈಜ್ಞಾನಿಕ ಶೋಧಗಳು ನಕ್ಷತ್ರಗಳು ಮಿನುಗುವುದಿಲ್ಲ ಮತ್ತು ಚಂದ್ರನು ಸುಂದರವಾಗಿ ಕಾಣುವುದಿಲ್ಲ ಎಂದು ಹೇಳಿವೆ. ನೀವು ನೋಡಿದ್ದನ್ನು ನಂಬಬೇಡಿ, ಉಪ್ಪು ಕೂಡ ಸಕ್ಕರೆಯಂತೆ ಕಾಣುತ್ತದೆ’ ಎಂದು ಈ ಅಧ್ಯಯನ ಎಚ್ಚರಿಕೆ ನೀಡುತ್ತದೆ.

ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನವು ಮುಂದುವರಿದಂತೆ, ಉದ್ಯಮದ ಗ್ಲಾಮರ್ ಕೇವಲ ಬಾಹ್ಯ ಹೊಳಪು ಎಂದು ಬಹಿರಂಗವಾಗುತ್ತ ಬಂತು. ಒಳಹೊಕ್ಕಂತೆ, ಅಲ್ಲಿ, ಬಾಹ್ಯ ಪ್ರಪಂಚಕ್ಕೆ ತಿಳಿಯದ, ಸಂಕಟದ ಕರಾಳ ಮೋಡಗಳು, ಹತಾಶೆಯ ವಿವಿಧ ದುಃಖದ ಕಥೆಗಳನ್ನು ನಾವು ಕೇಳಬಹುದು. ಮಹಿಳೆಯರು ಮಾತ್ರವಲ್ಲ, ಪುರುಷರೂ ಈ ವರ್ತುಲದಲ್ಲಿದ್ದಾರೆ. ಆದರೆ ಅವರು ಉದ್ಯಮದಲ್ಲಿ ಮೌನವಾಗಿದ್ದಾರೆ. ಅವರ ಸಮಸ್ಯೆಗಳು ಸಾವಿರಾರು ಆದರೂ ಪರಿಹಾರ ಗಳನ್ನು ಹುಡುಕಲುಯಾವುದೇವೇದಿಕೆಯಿಲ್ಲ, ಅವರ ಸಂಕಟ, ದುಮ್ಮಾನಗಳು ಅಲ್ಲೇ ಸಾಯುತ್ತವೆ.

ಕೇರಳ ಸರ್ಕಾರವು ಸಿನಿಮಾರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಅಧ್ಯಯನ ಮಾಡಲು ಮತ್ತು ಅವುಗಳಿಗೆ ಪರಿಹಾರ ಸೂಚಿಸಲು ಈ ಸಮಿತಿಯನ್ನು ನೇಮಿಸಿದೆ. ಈ ದೇಶದಲ್ಲಿ ಮೊದಲ ಬಾರಿಗೆ ಸರ್ಕಾರವು ಇಂತಹ ವಿನೂತನ ಕಾರ್ಯಕ್ಕೆ ಮುಂದಾಗಿದೆ ಮತ್ತು ಈ ಪ್ರಯಾಣದ ಭಾಗವಾಗಿರಲು ನಾವು ಸಂತೋಷಪಡುತ್ತೇವೆ.

ಇವು ಮಲಯಾಳ ಚಿತ್ರರಂಗದಲ್ಲಿ ಹೆಣ್ಣುಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಕುರಿತಂತೆ ಕೇರಳ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಕೆ.ಹೇಮಾ ಸಮಿತಿಯ ವರದಿಯ ಆರಂಭದ ಸಾಲುಗಳು.

2017ರ ಫೆಬ್ರವರಿ 17ರಂದು ನಟಿಯೊಬ್ಬರ ಮೇಲೆ ನಡೆದ ದಾಳಿಯ ನಂತರದ ಬೆಳವಣಿಗೆ ಇದು. ಆಕೆ ದೂರು ನೀಡಿದರೂ ಅಲ್ಲಿನ ಕಲಾವಿದರ ಸಂಘ ‘ಅಮ್ಮ’ದ ಮಹಿಳಾ ಸದಸ್ಯರು ಮತ್ತು ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಹೆಣ್ಣುಮಕ್ಕಳು ಜೊತೆಯಾಗಿ ‘ವಿಮೆನ್ ಇನ್ ಸಿನಿಮಾ ಕಂಬೈನ್’ ಹೆಸರಲ್ಲಿ ಜೊತೆಯಾದರು. ತಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅದನ್ನು ಪರಿಹರಿಸಲು ಕೋರುತ್ತಾರೆ.

ಆ ವರ್ಷ ಸರ್ಕಾರ, ಹೇಮಾ ಅವರ ನೇತೃತ್ವದಲ್ಲಿ ಹಿರಿಯ ತಾರೆ ಶಾರದಾ ಮತ್ತು ಕೇರಳ ಸರ್ಕಾರದ ನಿವೃತ್ತ ಕಾರ್ಯದರ್ಶಿ ವತ್ಸಲ ಕುಮಾರಿ ಸದಸ್ಯರಾಗಿರುವ ಸಮಿತಿ ರಚಿಸಿ, ಶಿಫಾರಸುಗಳನ್ನು ಮಾಡುವಂತೆ ಕೋರುತ್ತದೆ. ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ವಿಶೇಷವಾಗಿ, ಆಡಲೂ ಆಗದೆ, ಅನುಭವಿಸಲೂ ಆಗದೆ ಇರುವ ‘ಹೊಂದಾಣಿಕೆ’, ‘ಸಹಕಾರ’ಗಳ ಬೇಡಿಕೆಗಳ ಕುರಿತಂತೆ ಅಧ್ಯಯನ ನಡೆಸುವುದು ಸುಲಭ ಸಾಧ್ಯವಾಗಿರಲಿಲ್ಲ. ಪ್ರತಿಷ್ಠೆ, ಸಮಾಜದಲ್ಲಿ ತಮ್ಮ ಬಗ್ಗೆ ಮೂಡಬಹುದಾದ ಅಭಿಪ್ರಾಯಗಳ ಕಾರಣದಿಂದ ಸಾಕಷ್ಟು ಮಂದಿ ಶೋಷಿತರು ಮುಂದೆ ಬರಲೇ ಇಲ್ಲ ಎನ್ನುತ್ತಾರೆ ಹೇಮಾ ಅವರು. 2019ರ ಡಿಸೆಂಬರ್ ಕೊನೆಯ ದಿನ ಈ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿತ್ತಾದರೂ, ಅದು ಸಾರ್ವಜನಿಕವಾದದ್ದು ಮೊನ್ನೆ ಆ.19ರಂದು.

ಕಾನೂನು ತೊಡಕು, ನ್ಯಾಯಾಲಯದ ತಡೆ ಮತ್ತಿತರ ಕಾರಣಗಳಿಂದ ವರದಿ ಗೌಪ್ಯವಾಗಿಯೇ ಇತ್ತು. 235 ಪುಟಗಳ ವರದಿಯನ್ನು ಮಾಹಿತಿ ಹಕ್ಕಿನ ಮೂಲಕ ಮಾಧ್ಯಮಗಳು ಪಡೆದುಕೊಂಡಿವೆ. ಮಲಯಾಳ ಚಿತ್ರೋದ್ಯಮದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಎಲ್ಲ ಶೋಷಣೆಗಳ ಕುರಿತಂತೆಯೂ ಅದು ಹೇಳಿದೆ. ಈ ಕುರಿತಂತೆ ಸಾಕ್ಷ್ಯ ಹೇಳಿದವರ, ನೊಂದವರ, ಶೋಷಣೆಗೆ ಒಳಗಾದವರ ವಿವರಗಳ ಪುಟಗಳನ್ನು ವರದಿಯಿಂದ ತೆಗೆದುಹಾಕಲಾಗಿದೆ.

ಈ ವರದಿ ಪ್ರಕಟವಾಗುತ್ತಿದ್ದಂತೆ ಹಲವು ಮಂದಿ ನಟಿಯರು ತಮಗೆ ಆದ ಲೈಂಗಿಕ ಶೋಷಣೆಯ ಕುರಿತಂತೆ ಬಹಿರಂಗವಾಗಿ ಹೇಳಿಕೆ ನೀಡಲಾರಂಭಿಸಿದ್ದಾರೆ. ಅವುಗಳಲ್ಲಿ ಕೆಲವು ತೊಂಬತ್ತರ ದಶಕದವು. ಶೋಷಣೆ ಮಾಡಿದ ವ್ಯಕ್ತಿಯೇ ಇಲ್ಲದ ಪ್ರಸಂಗವೂ ಇತ್ತು. ಮಲಯಾಳ ಕಲಾವಿದರ ಸಂಘದ ಕಾರ್ಯದರ್ಶಿ ಸಿದ್ದಿಕ್ ಮೇಲೆ, ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಂಜಿತ್ ಮೇಲೆ ಆರೋಪ ಬಂದ ಕಾರಣ ಅವರಿಬ್ಬರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಅಕಾಡೆಮಿ ಅಧ್ಯಕ್ಷರ ರಾಜೀನಾಮೆಯನ್ನು ಅಲ್ಲಿನ ಚಿತ್ರೋತ್ಸವದ ಸಂದರ್ಭದಲ್ಲೇ ಒಂದು ವರ್ಗದ ಮಂದಿ ಕೋರಿದ್ದರು. ಈಗ ಅನಿವಾರ್ಯವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.

ಅದಕ್ಕಿಂತ ಮುಖ್ಯ ಬೆಳವಣಿಗೆ ಎಂದರೆ, ಕಲಾವಿದರ ಸಂಘದ ಆಡಳಿತ ಸಮಿತಿಯ ಎಲ್ಲ ಸದಸ್ಯರೂ ರಾಜೀನಾಮೆ ಸಲ್ಲಿಸಿದ್ದರು.

ಕಲಾವಿದರ ಸಂಘದ ಕೆಲವರು ಸೇರಿದಂತೆ, ಮಲಯಾಳ ಚಿತ್ರರಂಗವನ್ನು ನಿಯಂತ್ರಿಸುವ ‘ಮಾಫಿಯಾ’ ಒಂದು ಇದೆ. ಅದು ಎಲ್ಲವನ್ನೂ ನಿಯಂತ್ರಿಸುತ್ತದೆ ಎಂದು ವರದಿ ಹೇಳಿದೆ.

ಸಮಿತಿಯ ಮುಂದೆ ಸಾಕ್ಷಿ ಹೇಳಿದವರ ಹೆಸರನ್ನು ಪ್ರಕಟಿಸುವಂತೆ ಅಲ್ಲಿನ ಇನ್ನೊಂದು ಸಿನಿಮಾ ಸಂಘಟನೆ ಒತ್ತಾಯಿಸಿದೆ. ನ್ಯಾಯಾಲಯ ಇದಕ್ಕೆ ಅನುಮತಿ ನೀಡಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ಮಲಯಾಳ ಚಿತ್ರದಲ್ಲಿ ನಟಿಸಲು ಬಂದ ಇತರ ಭಾಷಾ ನಟಿಯರು ಒಬ್ಬೊಬ್ಬರಾಗಿ ಇಂತಹ ಅನುಭವಗಳನ್ನು ತಮ್ಮ ಇನ್‌ಸ್ಟಾಗ್ರಾಂಗಳಲ್ಲಿ ಹೇಳತೊಡಗಿದ್ದಾರೆ. ಜೊತೆಗೆ ಮಲಯಾಳದ ನಟಿಯರು ಕೂಡ.

ಕೇರಳದ ಈ ಬೆಳವಣಿಗೆ ಆಗುತ್ತಲೇ, ಬಂಗಾಲಿ ನಟಿಯೊಬ್ಬರು, ಇಂತಹ ಬೆಳವಣಿಗೆ ಮಲಯಾಳ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ, ಬಂಗಾಲಿ ಚಿತ್ರರಂಗದಲ್ಲೂ ಇದೆ ಎಂದು ಹೇಳಿದ್ದಾರೆ. ಈ ವರದಿ ಪ್ರಕಟವಾಗುತ್ತಲೇ, ಕನ್ನಡ ಚಿತ್ರರಂಗದಲ್ಲೂ ಈ ಕುರಿತಂತೆ ಮಾತುಗಳು ಕೇಳಿಬಂದವಾದರೂ ಅದು ಪಡಸಾಲೆಯಾಚೆ ಬರಲೇ ಇಲ್ಲ. ಕಾರಣವಿಷ್ಟೇ ಅಂತೆ. ಯಾರು ತಾನೇ ಇಂತಹ ವಿಷಯಗಳನ್ನು ಹೇಳಿ ತಮ್ಮ ಮಾನವನ್ನು ಹರಾಜು ಹಾಕುತ್ತಾರೆ ಹೇಳಿ. ಇದೇನೂ ಹೊಸದಲ್ಲ ಎನ್ನುವುದು ಒಟ್ಟಭಿಪ್ರಾಯ.

ಇದಕ್ಕೆ ಪೂರಕವಾಗಿ, ಸಮಿತಿಯ ಸದಸ್ಯರಲ್ಲಿ ಒಬ್ಬರಾದ ನಟ ಶಾರದಾ ಅವರು, ‘ಕಾಸ್ಟಿಂಗ್ ಕೌಚ್’ ಮೊದಲಿನಿಂದಲೂ ಇತ್ತು, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಅದನ್ನು ಮುಕ್ತವಾಗಿ ಮಾತನಾಡತೊಡಗಿದ್ದಾರೆ. ಹಿಂದಿನ ದಿನಗಳಲ್ಲಿ ನಾಯಕ-ನಾಯಕಿಯರು ಪರಸ್ಪರ ಒಪ್ಪಿಗೆಯೊಂದಿಗೆ

ಸಂಬಂಧಗಳನ್ನು ಇರಿಸಿಕೊಂಡಿದ್ದರು ಎಂದಿದ್ದಾರಲ್ಲದೆ, ‘ಲೈಂಗಿಕ ಶೋಷಣೆ’ ಹಿಂದಿನ ದಿನಗಳಲ್ಲಿ ಕೂಡ ಇತ್ತು ಎಂದು ತಮ್ಮ ವರದಿಯಲ್ಲಿ ಹೇಳಿದ್ದಾರೆ.
ಅದರ ಮೂಲಕ, ಚಿತ್ರೋದ್ಯಮದಲ್ಲಿ, ಅದು ಮಲಯಾಳಕ್ಕೆ ಮಾತ್ರ ಸೀಮಿತವಾದದ್ದಲ್ಲ, ಎಲ್ಲ ಭಾಷೆಗಳ ಚಿತ್ರರಂಗಗಳಿಗೂ ಅನ್ವಯ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಹೆಣ್ಣುಮಕ್ಕಳು ಕೆಲಸ ಮಾಡುವ ಜಾಗಗಳಲ್ಲಿ ಇದೇನೂ ಹೊಸದಲ್ಲ, ಎಲ್ಲ ಕ್ಷೇತ್ರಗಳಲ್ಲೂ ಇದು ನಡೆಯುತ್ತದೆ ಎನ್ನುವ ಮಾತಿದೆ. ಆದರೆ ಚಿತ್ರರಂಗದಲ್ಲಿ ಇದು ತೀರಾ ಭಿನ್ನ, ಚಿತ್ರಗಳಲ್ಲಿ ಅವಕಾಶ ಸಿಗಬೇಕಾದರೆ, ಆಕೆ ಎಲ್ಲದಕ್ಕೂ ಸಹಕಾರ, ಹೊಂದಾಣಿಕೆ ಮಾಡಬೇಕಾಗುತ್ತದೆ; ಅದು ಬಹಳಷ್ಟು ಸಂದರ್ಭಗಳಲ್ಲಿ ನಿರ್ಮಾಪಕ, ನಿರ್ದೇಶಕ, ನಟ ಮೊದಲ್ಗೊಂಡು ಪ್ರೊಡಕ್ಷನ್ ಮ್ಯಾನೇಜರ್‌ವರೆಗೂ ಇದೆ ಎನ್ನುವುದನ್ನು ಹೇಮಾ ವರದಿ ಹೇಳಿದೆ.

ಎಲ್ಲ ಭಾಷಾ ಚಿತ್ರರಂಗಗಳಲ್ಲೂ ಇದು ಇದೆ ಎನ್ನುವುದು ಬಹಿರಂಗ ಗುಟ್ಟು ಎನ್ನುತ್ತಾರೆ ಹಿರಿಯರು. ಇದು ಬೆಳ್ಳಿತೆರೆಯಿಂದ ಕಿರುತೆರೆಗೂ ವ್ಯಾಪಿಸಿದೆ ಎನ್ನಲಾಗಿದೆ. ವಾಹಿನಿಯವರ ಇಷ್ಟದಂತೆ, ಟಿಆರ್‌ಪಿ ಹೆಸರಿನಲ್ಲಿ ಕಲಾವಿದರ ಬದಲಾವಣೆಗಳಾಗುತ್ತವೆ. ಅದೇ ನಿಜ ಕಾರಣಗಳಾಗಿರುವುದಿಲ್ಲ ಎಂದೂ ಹೇಳಲಾಗುತ್ತಿದೆ. ಹಾಲಿವುಡ್‌ನಿಂದ ಆರಂಭವಾದ ಮೀಟೂ ಪ್ರಸ್ತಾಪ ಕರ್ನಾಟಕದಲ್ಲೂ ಆಗಿತ್ತು. ಆದರೆ ಚೋದ್ಯವೆಂದರೆ, ಅಂತಹದೊಂದು ಘಟನೆ ಸಾಧ್ಯವೇ ಇಲ್ಲ ಎನ್ನುವಂತೆ ಎಲ್ಲ ನಟಿಯರೂ ಮಾತನಾಡತೊಡಗಿದ್ದು, ಹೇಮಾಸಮಿತಿಯವರದಿಯಲ್ಲೇಉಲ್ಲೇಖವಾದನಟರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರಲ್ಲಿ ಎಲ್ಲರೂ ಹೀಗೆ ವರ್ತಿಸುವುದಿಲ್ಲ. ಕೆಲವರು ಇದಕ್ಕೆ ಅಪವಾದ ಎನ್ನುವ ಸಾಲುಗಳು ಎಲ್ಲ ಭಾಷೆಗಳ ಚಿತ್ರರಂಗಗಳಿಗೂ ಅನ್ವಯವಾಗುತ್ತದೆ.

ಹೇಮಾ ವರದಿಯಲ್ಲಿ ಪ್ರತಿ ಚಿತ್ರೀಕರಣ ತಂಡದಲ್ಲಿ ಆಂತರಿಕ ದೂರು ಘಟಕವೊಂದು ಬೇಕು. ಜೊತೆಗೆ ‘ಕೇರಳ ಸಿನಿ ಉದ್ಯೋಗದಾತರು ಮತ್ತು ಉದ್ಯೋಗಿಗಳು (ನಿಯಂತ್ರಣ) ಕಾಯಿದೆ 2020’ನ್ನು ತರಬೇಕು ಎಂದು ಹೇಳಿದ್ದರು. ಅದಕ್ಕೆ ಕಾನೂನು ರೀತ್ಯ ಇಂತಹ ದೂರುಗಳನ್ನು ಸ್ವೀಕರಿಸಿ, ವಿಚಾರಣೆ ನಡೆಸಿ ಅಪರಾಧಗಳಿಗೆ ತಕ್ಕ ಶಿಕ್ಷೆಯಾಗಬೇಕು ಎನ್ನುವುದು ಅವರ ಶಿಫಾರಸು.

ಸಮಿತಿಯು ಸಿನಿಮಾದಲ್ಲಿ ನಟಿಸಲು ಬರುವ ಮತ್ತು ಅದಾಗಲೇ ಕೆಲಸ ಮಾಡುತ್ತಿರುವವರಿಗೆ ಲೈಂಗಿಕ ಬೇಡಿಕೆ, ಕೆಲಸದ ಸ್ಥಳ, ಸಾರಿಗೆ, ವಸತಿ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ನಿಂದನೆ ಮತ್ತು ಆಕ್ರಮಣ, ಲೈಂಗಿಕ ಬೇಡಿಕೆಗಳನ್ನು ವಿರೋಧಿಸುವ ಮಹಿಳೆಯರಿಗೆ ನೀಡುವ ಕಿರುಕುಳ ಮತ್ತು ಅವಕಾಶ ವಂಚನೆ, ಸಿನಿಮಾ ಸೆಟ್‌ನಲ್ಲಿ ಶೌಚಾಲಯ, ಬಟ್ಟೆ ಬದಲಾಯಿಸುವ ಕೊಠಡಿಯಂತಹ ಮೂಲ ಸೌಕರ್ಯಗಳನ್ನು ಒದಗಿಸದೇ ಮಹಿಳೆಯರ ಮಾನವ ಹಕ್ಕುಗಳ ಉಲ್ಲಂಘನೆ, ಸುರಕ್ಷತೆಯ ಕೊರತೆ, ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಅನಧಿಕೃತ ಮತ್ತು ಕಾನೂನುಬಾಹಿರ ನಿಷೇಧ ನಿಷೇಧದ ಬೆದರಿಕೆ, ಅಲ್ಲಿನ ಪುರುಷ ಪ್ರಾಬಲ್ಯ, ಲಿಂಗ ಪಕ್ಷಪಾತ, ಲಿಂಗ ತಾರತಮ್ಯ, ಸಿನಿಮಾದಲ್ಲಿನ ಸಂಪೂರ್ಣ ಅಶಿಸ್ತು, ಕೆಲಸದ ಸ್ಥಳದಲ್ಲಿ ಮದ್ಯಪಾನ, ಮಾದಕ ದ್ರವ್ಯಗಳ ಬಳಕೆ, ಅಸಭ್ಯ ವರ್ತನೆ, ಉದ್ಯೋಗದಾತರು ಮತ್ತು ಉದ್ಯೋಗಿಗಳ ನಡುವೆ ಲಿಖಿತ ಒಪ್ಪಂದವನ್ನು ಕಾರ್ಯಗತಗೊಳಿಸದಿರುವುದು, ಒಪ್ಪಂದದಂತೆ ಸಂಭಾವನೆ ನೀಡ ದಿರುವುದು, ಪುರುಷ ಮತ್ತು ಮಹಿಳೆಯ ನಡುವಿನ ಸಂಭಾವನೆಯ ವ್ಯತ್ಯಾಸ ಮತ್ತು ಸಂಭಾವನೆಯಲ್ಲಿ ಲಿಂಗ ತಾರತಮ್ಯ, ಮಹಿಳೆಯರು ಚಿತ್ರರಂಗದಲ್ಲಿ ವಿಶೇಷವಾಗಿ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಲು ಪ್ರತಿರೋಧ, ಆನ್‌ಲೈನ್ ಕಿರುಕುಳ (ಸೈಬರ್ ದಾಳಿ) ಇವುಗಳ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿ ಶಿಫಾರಸು ಮಾಡಿದೆ. ಅದರನ್ವಯ ಈಗ ಸರ್ಕಾರ ತನಿಖೆಗಾಗಿ ತಂಡವನ್ನು ರಚಿಸಿದ್ದು, ದೂರುಗಳ ಸಂಖ್ಯೆ ಏರತೊಡಗಿದೆ. ಕನ್ನಡ ಮನರಂಜನೋ ದ್ಯಮದಲ್ಲೂ ಇಂತಹದೊಂದು ಅಧ್ಯಯನ ಅಗತ್ಯ ಎನ್ನುತ್ತಾರೆ ಸಂಬಂಧಪಟ್ಟವರು.