Mysore
20
overcast clouds
Light
Dark

ಹೆಚ್ಚಿದ ಟ್ರಂಪ್ ಗೆಲುವಿನ ಸಾಧ್ಯತೆ, ಎಲ್ಲ ಕಡೆ ಕಳವಳ

ಇದೇ ವರ್ಷದ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಕಾವು ದಿನೇ ದಿನೇ ಏರುತ್ತಿದೆ. ವಿಸ್ಕಾನ್ಸಿನ್ ರಾಜ್ಯದ ಮಿಲ್ವಕೀ ನಗರದಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ವಿಫಲ ಯತ್ನ ನಡೆದ ಮೇಲಂತೂ ಪರಿಸ್ಥಿತಿ ಬದಲಾದಂತೆ ಕಾಣುತ್ತಿದೆ. ಡೊನಾಲ್ಡ್ ಟ್ರಂಪ್ ಗೆಲ್ಲುವ ಸಾಧ್ಯತೆಗಳು ಕಾಣಿಸುತ್ತಿವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಅಂದರೆ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಜೋ ಬೈಡನ್ ಗೆಲ್ಲುವ ಸಾಧ್ಯತೆಗಳು ಇದೀಗ ಕಡಿಮೆ ಎಂದು ಸಮೀಕ್ಷೆಗಳು ತಿಳಿಸಿವೆ.

ಜೋ ಬೈಡನ್ ಚುನಾವಣೆ ಕಣದಲ್ಲಿ ಮುಂದುವರಿಯುವ ಬಗ್ಗೆಯೇ ಈಗ ಅನುಮಾನಗಳು ಉಂಟಾಗಿವೆ. ಬೈಡನ್ ಚುನಾವಣಾ ಕಣದಲ್ಲಿ ಉಳಿದರೂ ಗೆಲ್ಲುವ ಸಾಧ್ಯತೆ ಕಡಿಮೆ, ಹಾಗೆಯೇ ಅವರ ಬದಲಿಗೆ ಹೊಸಬರು ನಿಂತರೂ ಫಲಿತಾಂಶ ಭಿನ್ನವಾಗಿರಲಾರದು ಎನ್ನಲಾಗಿದೆ.

ಚುನಾವಣೆಯಿಂದ ಜೋ ಬೈಡನ್ ಹಿಂದೆ ಸರಿಯಬೇಕೆಂಬ ಒತ್ತಡ ಈಗ ಪಕ್ಷದ ವಲಯದಲ್ಲಿ ಹೆಚ್ಚುತ್ತಿದೆ. ಬೈಡನ್ ಗೆಲುವಿನ ಸಾಧ್ಯತೆ ಕಡಿಮೆಯಾಗುತ್ತಿದೆ ಎಂದು ಅವರ ಕಟ್ಟಾ ಬೆಂಬಲಿಗರಾಗಿದ್ದ ಮಾಜಿ ಸ್ಪೀಕರ್ ನಾನ್ಸಿ ಪೆಲೋಸಿಯಿಂದ ಹಿಡಿದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾವರೆಗೆ ಹಿರಿಯ ನಾಯಕರು ಹೇಳುತ್ತಿದ್ದಾರೆ. ಡೆಮಾಕ್ರಟಿಕ್ ಪಕ್ಷ ಈ ಮೊದಲೇ ಜೋ ಬೈಡನ್ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದೆ. ಹೀಗಾಗಿ ಬೈಡನ್ ಅವರೇ ಸ್ಪರ್ಧೆಯಿಂದ ಹಿಂದೆ ಸರಿಯದ ಹೊರತು ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅವಕಾಶ ಪಕ್ಷದ ಕಾನೂನಿನಲ್ಲಿ ಇಲ್ಲ. ಆದ್ದರಿಂದಲೇ ಸ್ಪರ್ಧೆಯಿಂದ ಹಿಂದೆ ಸರಿಯ ಬೇಕೆಂದು ಅವರ ಮೇಲೆ ನಾಯಕರು ಒತ್ತಡ ಹೇರುತ್ತಿದ್ದಾರೆ. ಬೈಡನ್ ಚುನಾವಣೆ ಪ್ರಚಾರಕ್ಕೆ ಹಣಕಾಸು ನೆರವು ನೀಡುವ ಅನೇಕರು ಈಗ ಹಿಂದೆ ಸರಿದಿದ್ದಾರೆ. ಆದರೂ ಬೈಡನ್ ಹಿಂದೆ ಸರಿಯಲು ಸಿದ್ದರಿಲ್ಲ. ದೇವರು ತಮಗೆ ಸೂಚಿಸದ ಹೊರತು ಮತ್ತು ವೈಧ್ಯಕೀಯವಾಗಿ ತಾವು ಅಸಮರ್ಥರು ಎಂದು ಖಚಿತವಾಗದ ಹೊರತು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಜೋ ಬೈಡನ್‌ ಹಠ ಹಿಡಿದಿದ್ದಾರೆ. ತಾವು ಹಿಂದೆ ಸರಿದರೆ ಉಪಾಧ್ಯಕ್ಷೆ ಯಾಗಿರುವ ಕಮಲಾ ಹ್ಯಾರೀಸ್ ಅವರನ್ನು ಪಕ್ಷ ಸ್ಪರ್ಧೆಗಿಳಿಸಬಹುದು. ಆದರೆ ಟ್ರಂಪ್ ಅವರನ್ನು ಸೋಲಿಸುವ ಸಾಮರ್ಥ್ಯ ಅವರಲ್ಲಿಲ್ಲ ಎಂದು ಬೈಡನ್ ಅವರೇ ಹೇಳುತ್ತಿದ್ದಾರೆ. ಪರ್ಯಾಯ ಸ್ಪರ್ಧಿ ಯಾರು ಎನ್ನುವ ಪ್ರಶ್ನೆಯನ್ನು ಆಮೇಲೆ ಪರಿಹರಿಸೋಣ ಮೊದಲು ಸ್ಪರ್ಧೆಯಿಂದ ನೀವು ಹಿಂದೆ ಸರಿಯಿರಿ ಎಂದು ಪಕ್ಷದ ಹಿರಿಯ ನಾಯಕರು ಹೇಳುತ್ತಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಕೆಲವು ತಿಂಗಳ ಹಿಂದೆಯವರೆಗೆ ಡೆಮಾಕ್ರಟಿಕ್ ಪಕ್ಷಕ್ಕೆ ಬೈಡನ್ ಗೆಲುವಿನ ಅಭ್ಯರ್ಥಿಯಾಗಿದ್ದರು. ಅವರಿಗೆ ಪಕ್ಷದ ಸಂಪೂರ್ಣ ಬೆಂಬಲ ಇತ್ತು. ಎಲ್ಲವೂ ಬದಲಾದದ್ದು ಕಳೆದ ತಿಂಗಳು ಸಿಎನ್‌ಎನ್ ಸುದ್ದಿ ಸಂಸ್ಥೆ ಆಯೋಜಿಸಿದ್ದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ನಡುವಣ ಬಹಿರಂಗ ಚರ್ಚೆಯ ನಂತರ, ಆ ಚರ್ಚೆಯಲ್ಲಿ ಟ್ರಂಪ್ ಮೇಲುಗೈ ಸಾಧಿಸಿದರು. ಬೈಡನ್ ಹಲವು ಬಾರಿ ತಡವರಿಸಿದರು. ಹೆಸರುಗಳನ್ನು ಮರೆತರು. ಏನೋ ಹೇಳಲು ಹೋಗಿ ಏನೋ ಹೇಳಿದರು. ಒಂದೆರಡು ಬಾರಿ ಅವರು ಹೇಳಿದ್ದು ಯಾರಿಗೂ ಕೇಳಿಸಲೇ ಇಲ್ಲ. ಟ್ರಂಪ್ ಮುಂದೆ ಬೈಡನ್ ದುರ್ಬಲ ಎನ್ನುವ ಅಭಿಪ್ರಾಯ ಬರುವಂತಾಯಿತು. ಇಂಥವರು ಅಮೆರಿಕದ ನಾಯಕತ್ವ ವಹಿಸಿಕೊಂಡರೆ ಹೇಗೆ ಎನ್ನುವ ಪ್ರಶ್ನೆ ಚರ್ಚೆಯನ್ನು ಗಮನಿಸಿದವರೆಲ್ಲರಲ್ಲೂ ಬಂತು.

ಬೈಡನ್ ಅವರ ದೌರ್ಬಲ್ಯ ಟ್ರಂಪ್‌ಗೆ ಅನುಕೂಲ ಮಾಡಿತು. ಬೈಡನ್ ಅವರಿಗೆ ತೀವ್ರ ಶೀತದಿಂದ ನೆಗಡಿಯಾಗಿತ್ತು ಮತ್ತು ಗಂಟಲು ಕೆಟ್ಟಿತ್ತು ಎಂದು ನಂತರ ಅವರ ಆಪ್ತರು ಸಮಜಾಯಿಷಿ ನೀಡಿದರಾದರೂ ಅವರ ಸಾಮರ್ಥ್ಯದ ಬಗೆಗಿನ ಜನಾಭಿಪ್ರಾಯ ಬದಲಾಗಲಿಲ್ಲ. ಬೈಡನ್ ವೃದ್ಧರಾಗಿದ್ದು (81) ಆರೋಗ್ಯ ಸರಿಯಿಲ್ಲ ಎನ್ನುವುದು ಜನಾಭಿಪ್ರಾಯವಾಗಿತ್ತು. ಹಾಗೆ ನೋಡಿದರೆ ಟ್ರಂಪ್ ಕೂಡ ವೃದ್ಧರು. ಅವರ ವಯಸ್ಸು 78. ವಾಸ್ತವವಾಗಿ ಟ್ರಂಪ್ ಅವರ ನೀತಿಗಳು ಜಾಗತಿಕವಾಗಿ ಮನ್ನಣೆ ಗಳಿಸಿರಲಿಲ್ಲ. ಅಷ್ಟೇ ಅಲ್ಲ ದೇಶದ ವಿದ್ಯಾವಂತರಲ್ಲೂ ಅವರ ಬಗ್ಗೆ ಒಲವಿರಲಿಲ್ಲ. ಸಂಪ್ರದಾಯಸ್ಥರು, ಮೂಲನಿವಾಸಿಗಳು, ಬಲಪಂಥೀಯರು, ರಾಷ್ಟ್ರೀಯವಾದಿಗಳು ಅವರ ಬೆಂಬಲಿಗರು. ಅವರ ಮೇಲೆ 30ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ. ನಾಲ್ಕು ಕ್ರಿಮಿನಲ್ ಮೊಕದ್ದಮೆಗಳು ಅವರ ಮೇಲಿವೆ. ಪೋರ್ನ್ ತಾರೆಯೊಬ್ಬಳಿಗೆ ಲಂಚ ನೀಡಿದ ಪ್ರಕರಣದಲ್ಲಿ ಟ್ರಂಪ್ ಅಪರಾಧಿಯೆಂದು ನ್ಯಾಯಾಲಯ ಘೋಷಿಸಿದೆ. ಶಿಕ್ಷೆ ಘೋಷಿಸಬೇಕಿದೆಯಷ್ಟೆ. ಇಂಥವರನ್ನು ಅಧ್ಯಕ್ಷರನ್ನಾಗಿ ಜನರು ಆಯ್ಕೆ ಮಾಡುವ ಸಾಧ್ಯತೆ ಇರಲಿಲ್ಲ. ಆದರೆ ಬೈಡನ್ ದೌರ್ಬಲ್ಯಗಳು ಟ್ರಂಪ್ ಅವರ ಆಯ್ಕೆ ಸಾಧ್ಯತೆಗಳನ್ನು ಹೆಚ್ಚಿಸಿವೆ.

ಟ್ರಂಪ್ ಅವರು ಈ ಹಿಂದೆ ಅಧ್ಯಕ್ಷರಾಗಿದ್ದಾಗಲೂ ವಿವಾದದ ವ್ಯಕ್ತಿಯಾಗಿದ್ದರು. ಅಮೆರಿಕ ಫಸ್ಟ್, ಐ ವಿಲ್ ಮೇಕ್ ಅಮೆರಿಕ ಗ್ರೇಟ್ ಎಂಬುದು ಅವರ ಆಡಳಿತದ ಮುಖ್ಯ ಘೋಷಣೆಗಳು. ಒಬಾಮಾ ಆಡಳಿತ ಕಾಲದಲ್ಲಿ ಜಾರಿಗೆ ತಂದ ಅನೇಕ ಯೋಜನೆಗಳನ್ನು ಅವರು ಬದಲಾಯಿಸಲು ಯತ್ನಿಸಿದರು. ಹವಾಮಾನ ಕುರಿತ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದರು. ಈ ಒಪ್ಪಂದದಿಂದ ಚೀನಾ ಮತ್ತು ಭಾರತಕ್ಕೆ ಹೆಚ್ಚು ಅನುಕೂಲವಾಯಿತು, ಅಮೆರಿಕಕ್ಕೆ ನಷ್ಟವೇ ಆಯಿತು ಎನ್ನುವುದು ಅವರ ವಾದವಾಗಿತ್ತು. ಕ್ಯೂಬಾ ಜೊತೆಗಿನ ಬಾಂಧವ್ಯಕ್ಕೆ ಕತ್ತರಿ ಹಾಕಿದರು. ಇರಾನ್ ಜೊತೆಗಿನ ಬಾಂಧವ್ಯ ವೃದ್ಧಿ ಯತ್ನಗಳಿಗೆ ಕೊನೆ ಹಾಡಿ ನಿರ್ಬಂಧಗಳನ್ನು ಮುಂದುವರಿಸಿದರು. ಯೂರೋಪಿನರಕ್ಷಣೆ ಅಮೆರಿಕದ ಹೊಣೆಗಾರಿಕೆ ಅಲ್ಲ. ಅದಕ್ಕಾಗಿ ಯೂರೋಪ್ ದೇಶಗಳು ಅಗತ್ಯವಾದಷ್ಟು ಹಣ ಹೂಡುತ್ತಿಲ್ಲ. ಆದ್ದರಿಂದ ನ್ಯಾಟೋದಲ್ಲಿನ ತನ್ನ ಪಾಲನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಉತ್ತರ ಕೊರಿಯಾ, ರಷ್ಯಾ ಜೊತೆ ಮೈತ್ರಿಗೆ ಮುಂದಾಗಿದ್ದರು. ಚೀನಾ ಜೊತೆ ವಾಣಿಜ್ಯ ಯುದ್ಧಕ್ಕೆ ಮುಂದಾಗಿದ್ದರು. ದೇಸೀಯವಾಗಿ ಅವರ ನೀತಿಗಳು ಸಂಪ್ರದಾಯ
ಹಾರ ಬದ್ಧವಾಗಿದ್ದವು. ಗರ್ಭಪಾತ ನಿಷೇಧ ಅವರ ನೀತಿಗಳಲ್ಲಿ ಒಂದಾಗಿತ್ತು. ಒತ್ತಡದಿಂದಾಗಿ ಆ ಅಧಿಕಾರವನ್ನು ರಾಜ್ಯಗಳಿಗೇ ಬಿಡಬೇಕು. ಫೆಡರಲ್ ಸರ್ಕಾರ ಆ ವಿಚಾರದಲ್ಲಿ ಮಧ್ಯ ಪ್ರವೇಶಿಸಬಾರದು ಎನ್ನುವ ನಿಲುವು ಅವರದಾಗಿತ್ತು. ತುರ್ತು ಸಂದರ್ಭಗಳಲ್ಲಿ ಅಂದರೆ ತಾಯಿಯ ಜೀವ ಅಪಾಯದಲ್ಲಿದ್ದಾಗ ಮಾತ್ರ ಗರ್ಭಪಾತಕ್ಕೆ ಅವಕಾಶ ಇರಬೇಕೆಂಬುದು ಅವರ ನಿಲುವಾಗಿತ್ತು. ಈಗಲೂ ಅವರದು ಅದೇ ನಿಲುವು. ಗರ್ಭಪಾತವನ್ನು ಕಾನೂನುಬದ್ಧಗೊಳಿಸಿದ್ದ ಕೋರ್ಟ್ ತೀರ್ಪನ್ನು ಅವರು ನೇಮಿಸಿದ ಸುಪ್ರೀಕೋರ್ಟ್‌ ನ್ಯಾಯಾಧೀಶರು ರದ್ದುಮಾಡಿದ್ದರು. ವಲಸೆಯನ್ನು ಸಂಪೂರ್ಣವಾಗಿ ತಡೆಯುವ ಪ್ರಯತ್ನ ಅವರದಾಗಿತ್ತು. ಹೀಗೆ ಅವರ ನೀತಿಗಳು ವಿವಾದವನ್ನು ಎಬ್ಬಿಸಿದ್ದವು.

ಟ್ರಂಪ್ ಮತ್ತೆ ಅಮೆರಿಕ ಅಧ್ಯಕ್ಷರಾಗುವ ಸಾಧ್ಯತೆ ಈಗಾಗಲೇ ವಿಶ್ವದಾದ್ಯಂತ ಚರ್ಚೆಗೆ ಕಾರಣವಾಗಿದೆ. ಮುಖ್ಯವಾಗಿ ಯೂರೋಪ್‌ನಲ್ಲಿ ಅಲ್ಲೋಲ ಕಲ್ಲೋಲ ಕಾಣುತ್ತಿದೆ. ಅಮೆರಿಕ ನ್ಯಾಟೋದಿಂದ ಹೊರಬರುವ ಅಥವಾ ತನ್ನ ಬೆಂಬಲವನ್ನು ಕಡಿಮೆ ಮಾಡುವ ಸಾಧ್ಯತೆ ಇರುವುದರಿಂದ ಯೂರೋಪ್ ರಕ್ಷಣಾ ಮಂಡಳಿ ರಚನೆಯತ್ತ ಹೆಜ್ಜೆ ಇಡಲಾಗಿದೆ. ನ್ಯಾಟೋಗೆ ಈಗ ಬನೀಡುತ್ತಿದ್ದ ತಮ್ಮ ಪಾಲನ್ನು ಹೆಚ್ಚಿಸಲು ರಕ್ಷಣಾ ವೆಚ್ಚವನ್ನು ದ್ವಿಗುಣ ಗೊಳಿಸಲಾಗುತ್ತಿದೆ. ಟ್ರಂಪ್ ಅಧಿಕಾರಕ್ಕೆ ಬಂದರೆ ಗಾಜಾ ಮತ್ತು ಉಕ್ರೇನ್ ಪ್ರಕರಣಗಳು ಭಿನ್ನ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಉಕ್ರೇನ್‌ಗೆ ತಮ್ಮ ದೇಶ ಏಕೆ ರಕ್ಷಣಾ ಬೆಂಬಲ ನೀಡಬೇಕು ಎನ್ನುವ ಪ್ರಶ್ನೆಯನ್ನು ಟ್ರಂಪ್ ಈಗಾಗಲೇ ತಮ್ಮ ಅನೇಕ ಭಾಷಣಗಳಲ್ಲಿ ಎತ್ತಿದ್ದಾರೆ. ಸಮಸ್ಯೆಯಿದ್ದರೆ ರಷ್ಯಾ ಮತ್ತು ಉಕ್ರೇನ್ ಬಗೆಹರಿಸಿಕೊಳ್ಳಬೇಕು ಎನ್ನುವುದು ಅವರ ನಿಲುವು. ತಾವು ಮತ್ತೆ ಅಧ್ಯಕ್ಷರಾದರೆ 24 ಗಂಟೆಯೊಳಗೆ ಉಕ್ರೇನ್ ಸಮಸ್ಯೆ ಬಗೆಹರಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಶಾಂತಿ ನೆಲೆಸಬೇಕಾದರೆ ಆಕ್ರಮಿಸಿಕೊಂಡಿರುವ ಉಕ್ರೇನ್ ಭಾಗವನ್ನು ರಷ್ಯಾಕ್ಕೆ ಬಿಟ್ಟುಕೊಡಬೇಕು ಅಥವಾ ರಾಜಿಸೂತ್ರ ರೂಪಿಸಿ ಅದರನ್ವಯ ನಡೆದುಕೊಳ್ಳಬೇಕು ಎನ್ನುವುದು ಟ್ರಂಪ್ ನಿಲುವು, ಉಕ್ರೇನ್‌ ಗೆ ರಕ್ಷಣಾ ನೆರವು ನಿಲ್ಲಿಸಿದರೆ ಅದಕ್ಕದೇ ಸಮಸ್ಯೆ ಬಗೆಹರಿಯುವುದು ಎಂಬುದು ಅವರ ಲೆಕ್ಕಾಚಾರ. ಗಾಜಾ ಮೇಲೆ ಇಸ್ರೇಲ್ ದಾಳಿ ವಿಚಾರದಲ್ಲಿ ಟ್ರಂಪ್ ಅವರದು ನಿಖರ ನಿಲುವು. ಇಸ್ರೇಲ್‌ಗೆ ಎಲ್ಲ ಬೆಂಬಲ ನೀಡಿ ಹಮಾಸ್ ಹೋರಾಟಗಾರರನ್ನು ಮುಗಿಸಬೇಕು ಎಂಬುದು ಟ್ರಂಪ್ ನಿಲುವು. ಈ ಯುದ್ಧ ಒತ್ತಟ್ಟಿಗೆ ಮುಗಿಯುವಷ್ಟು ಪ್ರಮಾಣದಲ್ಲಿ ರಕ್ಷಣಾ ಬೆಂಬಲ ನೀಡಲು ಟ್ರಂಪ್ ಸಿದ್ಧ. ಚೀನಾ ವಿಚಾರದಲ್ಲಿ ಟ್ರಂಪ್ ಕಟುವಾದ ನಿಲುವು ತೆಗೆದುಕೊಳ್ಳಲು ಸಿದ್ಧರಿದ್ದಾರೆ. ಎಲ್ಲ ಆಮದು ಮೇಲೆ ಶೇ.10ರಷ್ಟು ತೆರಿಗೆ ಹಾಕಿ ಚೀನಾದ ಆಮದಿಗೆ ಶೇ.60ರಷ್ಟು ತೆರಿಗೆ ಹಾಕಲು ಅವರು ಯೋಚಿಸುತ್ತಿದ್ದಾರೆ. ವಲಸೆಗೆ ಸಂಬಂಧಿಸಿದಂತೆ ಅವರ ನಿಲುವು ಕಠೋರವಾದುದು. ಯಾವುದೇ ಅಕ್ರಮ ವಲಸೆಗೆ ಅವಕಾಶ ಇಲ್ಲ. ಎಲ್ಲ ಅಕ್ರಮ ವಲಸಿಗರನ್ನು ದೇಶದಿಂದ ಹೊರಗಟ್ಟಲಾಗುವುದು. ಮೆಕ್ಸಿಕೋ ಗಡಿಯಲ್ಲಿ ತಡೆಗೋಡೆ ನಿರ್ಮಾಣ ಮತ್ತು ವಲಸೆಯ ಮಾರ್ಗಗಳ ಸಂಪೂರ್ಣ ಬಂದ್ ಅವರ ನೀತಿ. ವಲಸೆ ಕೂಡ ದೇಶದ ಅಗತ್ಯಕ್ಕೆ ತಕ್ಕಂತೆ ಇರಬೇಕೆಂಬುದು ಅವರ ನಿಲುವು. ದೇಶೀಯವಾಗಿ ಅವರು ಕಾರ್ಪೊರೇಟ್ ತೆರಿಗೆಯನ್ನು ಇಳಿಸಿ, ಒಬಾಮಾ ಕಾಲದ ಆರೋಗ್ಯ ನೀತಿಯಲ್ಲಿ ಬದಲಾವಣೆ ತರಲು ಉದ್ದೇಶಿಸಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದಾಗ ಟ್ರಂಪ್ ಅವರು ಮೋದಿ ಅವರ ಜೊತೆ ಉತ್ತಮ ಸ್ನೇಹದಿಂದಿದ್ದರು. ಆದರೆ ಭಾರತಕ್ಕೆ ಅದರಿಂದ ವಿಶೇಷ ಉಪಯೋಗ ಏನೂ ಆಗಲಿಲ್ಲ. ಮುಂದೆ ಟ್ರಂಪ್ ಮತ್ತೆ ಅಧಿಕಾರಕ್ಕೆ ಬಂದರೆ ಅದೇ ಪರಿಸ್ಥಿತಿ ಮುಂದುವರಿಯಬಹುದು. ಬೈಡನ್ ಅಧಿಕಾರಾವಧಿಯಲ್ಲಿ ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್ ಭಾರತ ಮೂಲದವರು. ಅವರ ತಂದೆ-ತಾಯಿ ತಮಿಳುನಾಡು ಮೂಲದವರು. ಟ್ರಂಪ್ ಅವರು ತಮ್ಮ ಉಪಾಧ್ಯಕ್ಷರಾಗಿ ಜೆಡಿ ವ್ಯಾನ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ. ವಿಚಿತ್ರ ಎಂದರೆ ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ತಂದೆ-ತಾಯಿ ಭಾರತದ ಆಂಧ್ರ ಪ್ರದೇಶದವರು. ಅಮೆರಿಕದ ರಾಜಕೀಯ, ತಾಂತ್ರಿಕ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಭಾರತೀಯರು ಅವಿಭಾಜ್ಯ ಅಂಗವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.