Mysore
25
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

ದಿಲ್ಲಿಯಲ್ಲಿ ಆಪ್ಗೆ ಸೋಲಿನ ಆಘಾತ; ಸ್ವಯಂಕೃತ ಅಪರಾಧ

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ವಿಧಾನಸಭೆ ಚುನಾವಣೆಯಲ್ಲಿ ಸತತ ಹ್ಯಾಟ್ರಿಕ್ ಸಾಧಿಸುವ ಆಪ್ ಆದ್ಮಿ ಪಕ್ಷದ ಕನಸು ನುಚ್ಚುನೂರಾಗಿದೆ. ೨೦೨೦ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರ ಮಾತಿಗೆ ಮನ್ನಣೆ ನೀಡದ ಮತದಾರರು ಸತತ ಎರಡನೇ ಬಾರಿಗೆ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್‌ಗೆ ಅಧಿಕಾರ ನೀಡಿದ್ದರು. ಆಗ ಮುಖಭಂಗಕ್ಕೆ ಒಳಗಾಗಿದ್ದ ಬಿಜೆಪಿ ಈ ಬಾರಿ ನಿಚ್ಚಳ ಬಹುಮತ ಗಳಿಸುವ ಮೂಲಕ ಅಂದಿನ ರಾಜಕೀಯ ಸೇಡನ್ನು ತೀರಿಸಿಕೊಂಡಿದೆ. ಇಲ್ಲಿ ಒಂದೂ ಸ್ಥಾನ ಗೆಲ್ಲಲಾಗದ ಕಾಂಗ್ರೆಸ್‌ಗೆ ಕೂಡ ತೀವ್ರ ಮುಖಭಂಗವಾಗಿದೆ.

೨೦೧೨ರಲ್ಲಿ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನೇತೃತ್ವದಲ್ಲಿ ಹೋರಾಟ ನಡೆಯಿತು. ಈ ಚಳವಳಿಯ ಗರ್ಭದಿಂದಲೇ ಹುಟ್ಟಿಕೊಂಡದ್ದು ಆಪ್. ಅರವಿಂದ ಕೇಜ್ರಿವಾಲ್ ಸರ್ಕಾರ ಅಬಕಾರಿ ನೀತಿ ಬದಲಾವಣೆಯಲ್ಲಿ ಅಕ್ರಮ ಎಸಗಿದೆ ಎಂಬ ಆರೋಪ ಬಹುಶಃ ಆಪ್‌ಗೆ ಮುಳುವಾಗಿದೆ. ಅದಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಕಟುವಾಗಿ ಟೀಕಿಸಿದ್ದ ಬಿಜೆಪಿಯು ಹೊಸದಿಲ್ಲಿಯಲ್ಲಿ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆ ಮೂಲಕವೇ ಗದ್ದಿಗೆ ಹಿಡಿಯಲು ಮುಂದಾಗಿರುವುದು ಎಲ್ಲ ರಾಜಕೀಯ ಪಕ್ಷಗಳಿಗೂ ಪಾಠ ಎನ್ನಬಹುದು.

೨೭ ವರ್ಷಗಳಿಂದ ದಿಲ್ಲಿಯಲ್ಲಿ ಅಧಿಕಾರದ ಬರ ಎದುರಿಸಿದ್ದ ಬಿಜೆಪಿಗೆ ಈ ಬಾರಿ ಮತದಾರರು ಅವಕಾಶ ನೀಡಿದ್ದಾರೆ. ಇಲ್ಲಿ ಜಾತಿ, ಮತ, ಧರ್ಮಗಳಿಗಿಂತ ಹೆಚ್ಚಾಗಿ ಬಡವರ ಪರವಾಗಿ ಬಿಜೆಪಿ  ಘೋಷಿಸಿದ ಯೋಜನೆಗಳು ಮತ ಗಳಿಸಿಕೊಡುವಲ್ಲಿ ಯಶಸ್ವಿಯಾಗಿವೆ. ಇಂಡಿಯಾ ಒಕ್ಕೂಟದಿಂದ ಆಪ್ ಹೊರಗೆ ಬಂದಿದ್ದು ನಿರೀಕ್ಷೆ ಮಟ್ಟದಲ್ಲಿ ಪಕ್ಷಕ್ಕೆ ಲಾಭವಾಗಿಲ್ಲ. ಆದರೆ, ೧೦ ವರ್ಷಗಳ ಹಿಂದೆ ಜನಸಾಮಾನ್ಯರ ಆಶಾಕಿರಣವಾಗಿ ದಿಲ್ಲಿ ಗದ್ದಿಗೆ ಏರಿದ ಕೇಜ್ರಿವಾಲ್ ನೇತೃತ್ವದ ಆಪ್, ಹಲವು ಉಚಿತ ಯೋಜನೆಗಳ ಅನುಷ್ಠಾನದ ಮೂಲಕ ಜನಪ್ರಿಯತೆಯನ್ನು ಗಳಿಸಿತ್ತು. ಬಿಜೆಪಿಯ ಪಟ್ಟುಗಳಿಗೆ ಪ್ರತಿಪಟ್ಟುಗಳನ್ನು ಹಾಕುತ್ತಲೇ ಅಧಿಕಾರ ಉಳಿಸಿಕೊಂಡು ಸಾಗಿತ್ತು. ಆದರೆ, ಎರಡನೇ ಅವಧಿಯಲ್ಲಿ ಅಬಕಾರಿ ನಿಯಮಾವಳಿ ಜಾರಿಯಲ್ಲಿ ಅಕ್ರಮ ಎಸಲಾಗಿದೆ ಎಂಬ ಆರೋಪದಡಿ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಜೈಲುಪಾಲಾಗಿದ್ದು ಪಕ್ಷದ ಹಿನ್ನಡೆಗೆ ಕಾರಣವಾಗಿರಬಹುದು.

ಜಾಮೀನು ಪಡೆದು ಜೈಲಿನಿಂದ ಹೊರಬಂದರೂ ಮತದಾರರ ಮನಸ್ಸು ಗೆಲ್ಲುವುದಕ್ಕೆ ಸೂಕ್ತ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಬಹುಶಃ ಮುಖ್ಯಮಂತ್ರಿಯಾಗಿ ಅತಿಶಿ ಅವರನ್ನು ಆಯ್ಕೆ ಮಾಡಿದ್ದು ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದ್ದು ಚುನಾವಣೆಯಲ್ಲಿ ಈ ಫಲಿತಾಂಶಕ್ಕೆ ಕಾರಣವಾಗಿರಬಹುದು. ಅಲ್ಲದೆ, ಕೇಜ್ರಿವಾಲ್ ಅವರ ಅತಿಯಾದ ಆತ್ಮವಿಶ್ವಾಸವೂ ಈ ಪರಿಸ್ಥಿತಿಯನ್ನು ತಂದಿದೆ ಎನ್ನಬಹುದು. ಅಲ್ಲದೆ, ಟಿಕೆಟ್ ಹಂಚಿಕೆಯಲ್ಲೂ ಕೇಜ್ರಿವಾಲ್ ಎಡವಿದರು. ೨೦ ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿತು. ಅವರೆಲ್ಲರೂ ಅಸಮಾಧಾನಿತರಾಗಿದ್ದರು. ಈ ಎಲ್ಲ ಅಂಶಗಳೂ ಕೇಜ್ರಿವಾಲ್ ಆಡಳಿತ ಕೊನೆಯಾಗಲು ಕಾರಣವಾದವು. ಬಿಜೆಪಿ ಎರಡೂವರೆ ದಶಕಗಳ ನಂತರ ರಾಜಧಾನಿಯಲ್ಲಿ ರಾಜ್ಯಭಾರ ಮಾಡಲು ಹೊರಟಿದೆ. ಆದರೆ, ಇಷ್ಟು ವರ್ಷಗಳು ಅಧಿಕಾರ ಕೊಡದ ಮತದಾರರ ಮನದೊಳಗಿನ ತುಮುಲಗಳನ್ನು ಅರ್ಥ ಮಾಡಿಕೊಂಡು ಅಧಿಕಾರ ನಡೆಸಿದರೆ ಬಿಜೆಪಿಗೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ಲಭಿಸಬಹುದು. ಅದರ ಹೊರತಾಗಿ ತನ್ನ ಚಾಳಿ ಮುಂದುವರಿಸಿದರೆ, ಆಪ್‌ಗಿಂತ ಹೀನಾಯ ಪರಿಸ್ಥಿತಿ ಎದುರಿಸಿದರೂ ಅಚ್ಚರಿ ಇಲ್ಲ.

ಇನ್ನು ಒಂದು ಕಾಲದಲ್ಲಿ ದಿಲ್ಲಿಯ ಸಾರ್ವಭೌಮ ಎಂಬಂತಿದ್ದ, ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್‌ನ್ನು ಈ ಫಲಿತಾಂಶ ಅವನತಿಯ ಅಂಚಿಗೆ ತಂದು ನಿಲ್ಲಿಸಿದೆ. ಒಂದೇ ಒಂದು ಸ್ಥಾನವನ್ನೂ ಗೆಲ್ಲದ ಕಾಂಗ್ರೆಸ್ ಪಕ್ಷವೂ ರಾಜಕೀಯನೀತಿಜ್ಞ, ಪ್ರಬಲ ನಾಯಕರ ಕೊರತೆಯಿಂದ ಬಳಲುತ್ತಿದೆ. ಈ ಬಗ್ಗೆ ಪಕ್ಷದ ನಾಯಕರೆಲ್ಲರೂ ಗಂಭೀರ ಆಲೋಚನೆ ಮಾಡಬೇಕಾಗಿದೆ.

” ಜಾಮೀನು ಪಡೆದು ಜೈಲಿನಿಂದ ಹೊರಬಂದರೂ ಮತದಾರರ ಮನಸ್ಸು ಗೆಲ್ಲುವುದುಕ್ಕೆ ಸೂಕ್ತ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಬಹುಶಃ ಮುಖ್ಯಮಂತ್ರಿಯಾಗಿ ಅತಿಶಿ ಅವರನ್ನು ಆಯ್ಕೆ ಮಾಡಿದ್ದು ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದ್ದು ಚುನಾವಣೆಯಲ್ಲಿ ಈ ಫಲಿತಾಂಶಕ್ಕೆ ಕಾರಣವಾಗಿರಬಹುದು. ಅಲ್ಲದೆ, ಕೇಜ್ರಿವಾಲ್ ಅವರ ಅತಿಯಾದ ಆತ್ಮವಿಶ್ವಾಸವೂ ಈ ಪರಿಸ್ಥಿತಿ ತಂದಿದೆ ಎನ್ನಬಹುದು. ಅಲ್ಲದೆ, ಟಿಕೆಟ್ ಹಂಚಿಕೆಯಲ್ಲೂ ಕೇಜ್ರಿವಾಲ್ ಎಡವಿದರು. ೨೦ ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿತು. ಅವರೆಲ್ಲರೂ ಅಸಮಾಧಾ ನಿತರಾಗಿದ್ದರು. ಈ ಎಲ್ಲ ಅಂಶಗಳೂ ಕೇಜ್ರಿವಾಲ್ ಆಡಳಿತ ಕೊನೆಯಾಗಲು ಕಾರಣವಾದವು”

Tags:
error: Content is protected !!