Mysore
24
haze

Social Media

ಗುರುವಾರ, 25 ಡಿಸೆಂಬರ್ 2025
Light
Dark

ಬನ್ನಿಮಂಟಪದಲ್ಲಿ ನೂತನ ಬಸ್‌ ನಿಲ್ದಾಣವಾಗಲಿ; ಹಳೆಯ ಬಸ್‌ ನಿಲ್ದಾಣವೂ ಬಳಕೆಯಲ್ಲಿರಲಿ

ಮೈಸೂರು ಕೇಂದ್ರೀಯ ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ೧೨೦ ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಬಸ್ ನಿಲ್ದಾಣ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಮೂಲಕ ಹಲವು ವರ್ಷಗಳಿಂದ ಪರ- ವಿರೋಧಕ್ಕೆ ಗುರಿಯಾಗಿದ್ದ ಬಸ್ ನಿಲ್ದಾಣ ಸ್ಥಳಾಂತರದ ವಿಚಾರ ತಾರ್ಕಿಕ ಅಂತ್ಯಕ್ಕೆ ಬರುವ ಲಕ್ಷಣಗಳು ಗೋಚರಿಸಿವೆ. ಪ್ರಸ್ತುತ ಮೈಸೂರು ಕೇಂದ್ರೀಯ ಬಸ್ ನಿಲ್ದಾಣ ಕಿಷ್ಕಿಂಧೆಯಾಗಿದ್ದು, ಬಸ್‌ಗಳ ನಿಲುಗಡೆಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಆದರೆ, ಇದು ನಗರದ ಹೃದಯಭಾಗದಲ್ಲಿದೆ ಎಂಬ ಕಾರಣಕ್ಕೆ ಸ್ಥಳಾಂತರಕ್ಕೆ ವಿರೋಧ ವ್ಯಕ್ತವಾಗಿತ್ತು.

ನಗರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕೆ. ಆರ್. ಆಸ್ಪತ್ರೆ, ದೇವರಾಜ ಮಾರುಕಟ್ಟೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ದಸರಾ ವಸ್ತು ಪ್ರದರ್ಶನ. . . ಹೀಗೆ ಹಲವು ಪ್ರಮುಖ ತಾಣಗಳಿಗೆ ಈಗಿರುವ ಬಸ್ ನಿಲ್ದಾಣ ಸಮೀಪದಲ್ಲಿದೆ ಎಂಬುದು ಸ್ಥಳಾಂತರದ ವಿರೋಧಕ್ಕೆ ಕಾರಣವಾಗಿತ್ತು.

ಸ್ಥಳಾಂತರದ ಬದಲು ಬಸ್ ನಿಲ್ದಾಣವನ್ನು ವಿಸ್ತರಿಸುವ ಸಲಹೆಗಳೂ ಕೇಳಿಬಂದಿದ್ದವು. ಸಮೀಪದ ಪೀಪಲ್ಸ್ ಪಾರ್ಕ್‌ನ ಅಲ್ಪ ಭಾಗವನ್ನು ಸ್ವಾಧಿನಕ್ಕೆ ಪಡೆದು ನಿಲ್ದಾಣದ ಹರಹನ್ನು ಹೆಚ್ಚಿಸುವುದರಿಂದ ಬಸ್‌ಗಳ ನಿಲುಗಡೆ ಅಥವಾ ತಂಗುವಿಕೆಗೆ ಅನುಕೂಲವಾಗುತ್ತದೆ ಅಥವಾ ನಿಲ್ದಾಣಕ್ಕೆ ಹತ್ತಿರದಲ್ಲಿಯೇ ಇರುವ ಪ್ರವಾಸಿ ಟ್ಯಾಕ್ಸಿಗಳ ನಿಲ್ದಾಣದ ಜಾಗವನ್ನಾದರೂ ಸಾರಿಗೆ ನಿಗಮ ವಶಕ್ಕೆ ಪಡೆದು, ಬಸ್ ನಿಲ್ದಾಣವನ್ನು ವಿಸ್ತರಿಸಬಹುದು. ಅದರಿಂದ ಪ್ರಯಾಣಿಕರ ಸ್ನೇಹಿ ನಿಲ್ದಾಣವನ್ನು ರೂಪಿಸಬಹುದು ಎಂಬ ಸಲಹೆಗಳು ವ್ಯಕ್ತವಾಗಿದ್ದವು.

ಆದರೆ, ರಾಜ್ಯ ಸರ್ಕಾರ ಇದೀಗ ಬನ್ನಿಮಂಟಪಕ್ಕೆ ಬಸ್ ನಿಲ್ದಾಣವನ್ನು ಸ್ಥಾನಪಲ್ಲಟಗೊಳಿಸಲು ತೀರ್ಮಾನ ಕೈಗೊಂಡಿದೆ. ಬನ್ನಿಮಂಟಪದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್ ಟಿಸಿ)ದ ಅಂದಾಜು ೬೧ ಎಕರೆ ಪ್ರದೇಶದ ೧೪ ಎಕರೆಯಲ್ಲಿ ಹೊಸದಾಗಿ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಅಲ್ಲಿ ಏಕಕಾಲಕ್ಕೆ ೧೦೦ ಬಸ್ ಗಳ ನಿಲುಗಡೆ, ಸುಮಾರು ೩೦ ಇವಿ ಬಸ್‌ಗಳ ಚಾರ್ಜಿಂಗ್‌ಗೆ ಅವಕಾಶ, ಅಲ್ಲದೆ, ನಗರ ಸಾರಿಗೆ ಬಸ್‌ಗಳ ನಿಲುಗಡೆಗೂ ವ್ಯವಸ್ಥೆ ಕಲ್ಪಿಸುವ ಬಗ್ಗೆ ರಾಜ್ಯ ಸರ್ಕಾರ ಭರವಸೆ ನೀಡಿದೆ.

ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಮೂಲಸೌಕರ್ಯಗಳಿಗೂ ಆದ್ಯತೆ ನೀಡಲಾಗುವುದು. ಅಲ್ಲದೆ, ನಿಲ್ದಾಣದ ಪಕ್ಕದಲ್ಲೇ ಉದ್ಯಾನವನವನ್ನೂ ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ನಿಲ್ದಾಣದಲ್ಲಿ ಪ್ರಯಾಣಿಕರಿಗೆ, ಪ್ರವಾಸಿಗರಿಗೆ ಉನ್ನತ ಮಟ್ಟದ ಸೇವಾ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುವುದು ಸರ್ಕಾರದ ಗುರಿಯಾಗಿದೆ. ಸರ್ಕಾರ ಈಗಿರುವ ಬಸ್ ನಿಲ್ದಾಣವನ್ನು ಹಾಳುಗೆಡವದೆ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಗ್ರಾಮಗಳಿಗೆ ತೆರಳುವ ಬಸ್‌ಗಳ ಸಂಚಾರಕ್ಕೆ ಮುಕ್ತವಾಗಿಡಲು ಮನಸ್ಸು ಮಾಡಿರುವುದು ಸ್ವಾಗತಾರ್ಹ. ಅದು ಕೇವಲ ಭರವಸೆಯಾಗಿ ಉಳಿಯದೆ, ಕಾರ್ಯಗತವಾಗಬೇಕು.

ಮೈಸೂರು ಜಿಲ್ಲೆಗೆ ಹೊಂದಿಕೊಂಡಿರುವ ಜಿಲ್ಲೆಗಳ ಜನರಿಗೆ ಈ ನಿಲ್ದಾಣ ಹೆಚ್ಚು ಪ್ರಯೋಜನಕಾರಿಯಾಗಿದೆ. ಏಕೆಂದರೆ, ಆಸುಪಾಸಿನಲ್ಲಿರುವ ಜಿಲ್ಲೆಗಳಿಂದ ಮೈಸೂರಿಗೆ ಕೂಲಿ ಕೆಲಸಕ್ಕೆ ಬರುವವರಿಗೆ, ವ್ಯಾಪಾರ – ವ್ಯವಹಾರಗಳಿಗೆ ಬರುವವರಿಗೆ ಈ ಹಳೆಯ ಬಸ್ ನಿಲ್ದಾಣ ಅನುಕೂಲಕರವಾಗಿದೆ. ಪರಸ್ಥಳಗಳಿಂದ ಮೈಸೂರಿನ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೂ ಈ ನಿಲ್ದಾಣವೇ ಸಹಕಾರಿಯಾಗಿದೆ. ಬೇರೆ ಊರುಗಳಿಂದ ಮೈಸೂರಿಗೆ ಬಂದು, ಬೆಂಗಳೂರು- ಮೈಸೂರು ರಸ್ತೆಯಲ್ಲಿರುವ ನಗರ ಬಸ್ ತಂಗುದಾಣದ ಬಳಿ ನಿಂತರೆ, ಇಲವಾಲ, ನಾಗವಾಲ, ಮಾತೃಮಂಡಳಿ, ಹೆಬಿಟೇಟ್ ಮಾಲ್, ರಾಜೇಂದ್ರನಗರ, ಆರ್. ಎಸ್. ನಾಯ್ಡು ನಗರ, ಕೆಸರೆ, ಎಫ್‌ಟಿಎಸ್, ಉದಯಗಿರಿ, ಜಲಪುರಿ, ಬನ್ನಿಮಂಟಪ ಇತ್ಯಾದಿ ಬಡಾವಣೆಗಳಿಗೆ ಹೋಗುವುದಕ್ಕೆ ಸಾಕಷ್ಟು ಬಸ್‌ಗಳು ಸಿಗುತ್ತವೆ. ಬಸ್ ನಿಲ್ದಾಣ ಬನ್ನಿಮಂಟಪಕ್ಕೆ ಸ್ಥಳಾಂತರವಾದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಇದನ್ನು ಸರ್ಕಾರ ಮತ್ತು ಕೆಎಸ್ಆರ್‌ಟಿಸಿ ಗಮನದಲ್ಲಿಟ್ಟುಕೊಂಡು ಬನ್ನಿಮಂಟಪಕ್ಕೆ ತೆರಳುವ ಬಸ್ ಮಾರ್ಗಗಳನ್ನು ನಿರ್ಧರಿಸಬೇಕು.

ಬಸ್ ನಿಲ್ದಾಣ ಸ್ಥಳಾಂತರದ ವಿಷಯ ಎದುರಾದಾಗ ಹಲವು ನಾಗರಿಕರು, ಮೈಸೂರಿನ ನಾಲ್ಕು ದಿಕ್ಕುಗಳಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು. ಆಗ ಜನರು ತಮಗೆ ಅನುಕೂಲವಾದ ನಿಲ್ದಾಣಗಳಿಗೆ ತೆರಳಿ, ಅಲ್ಲಿಂದ ತಮ್ಮ ಗಮ್ಯಗಳಿಗೆ ಸರಾಗವಾಗಿ ಪ್ರಯಾಣ ಮಾಡಬಹುದು ಎಂದು ವಾದ ಮಂಡನೆ ಮಾಡಿದ್ದರು. ಈ ಬಗ್ಗೆಯೂ ಸರ್ಕಾರ ಗಂಭೀರ ಚಿಂತನೆ ಮಾಡುವುದು ಅಗತ್ಯ.

 

Tags:
error: Content is protected !!