Mysore
20
clear sky

Social Media

ಗುರುವಾರ, 05 ಡಿಸೆಂಬರ್ 2024
Light
Dark

ಅರ್ಥಪೂರ್ಣ ಜನಗಣತಿ ದೇಶದ ಪ್ರಗತಿಗೆ ಆಧಾರ

ಪ್ರೊ. ಆರ್. ಎಂ. ಚಿಂತಾಮಣಿ

೨೦೨೧ರಲ್ಲಿ ನಡೆಯಬೇಕಾಗಿದ್ದ ಸ್ವತಂತ್ರ ಭಾರತದ ೮ನೇ ಜನಗಣತಿಯನ್ನು ಕೋವಿಡ್-೧೯ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಮುಂದೂಡಲಾಗಿತ್ತು. ಅದನ್ನು ಈಗ ೨೦೨೫-೨೬ರಲ್ಲಿ ನಡೆಸುವುದಾಗಿ ಸರ್ಕಾರ ನಿರ್ಧರಿಸಿದೆ ಎಂದು ವರದಿಗಳು ಹೇಳುತ್ತವೆ. ಇದು ಒಂದು ಪವಿತ್ರ ಕರ್ತವ್ಯವೆಂದು ತಿಳಿದು ದೇಶದ ನಾಗರಿಕರೆಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು. ತಮ್ಮ ಪಾಲಿನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು. ಇದು ಜನಸಂಖ್ಯಾ ಎಣಿಕೆ ಮಾತ್ರವಲ್ಲ. ಇದರಲ್ಲಿ ದೇಶದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಮಗ್ರ ಮಾಹಿತಿ ಒಳಗೊಂಡಿರುತ್ತದೆ. ಇದು ಮಹತ್ವದ ಐತಿಹಾಸಿಕ ದಾಖಲೆಯಾಗಿರುತ್ತದೆ. ಸರ್ಕಾರಗಳಿಗೆ ನೀತಿಗಳನ್ನು ರೂಪಿಸಲು ಆಧಾರಗಳನ್ನು ಒದಗಿಸುತ್ತದೆ.

ಇದು ಇಡೀ ವರ್ಷ ನಡೆಯುವ ಪ್ರಕ್ರಿಯೆ. ಪೂರ್ವಭಾವಿ ತಯಾರಿಗಳಿಂದ ಅಂತಿಮ ವರದಿ ತಯಾರಿಸುವವರೆಗೆ ಹಲವು ಹಂತಗಳಿವೆ. ದೊಡ್ಡ ಮೊತ್ತದ ವೆಚ್ಚವೂ ಆಗುತ್ತದೆ. ಈಗ ಅನಿವಾರ್ಯವಾಗಿ ಐದು ವರ್ಷ ಮುಂದೂಡ ಲ್ಪಟ್ಟಿದೆ. ವರದಿಯಾದಂತೆ ಈಗ ಜನಗಣತಿ ಮಾಡಿದ ನಂತರ ಈಗಿರುವ ನಿಯಮಗಳಂತೆ ೨೦೩೧ರಲ್ಲಿ ೯ನೇ ಜನಗಣತಿ ಮಾಡಬೇಕಾಗುತ್ತದೆ. ಐದೇ ವರ್ಷಗಳಲ್ಲಿ ಮತ್ತೊಂದು ಗಣತಿ ಸೂಕ್ತವೇ? ಸಾಧುವೆ? ಅಷ್ಟೊಂದು ದೊಡ್ಡ ವೆಚ್ಚ ಸರಿಯೇ? ಇಂಥ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಈಗ ನಡೆಯಲಿರುವ ಜನಗಣತಿಯಿಂದ ೧೦ ವರ್ಷಗಳ ನಂತರ ಮುಂದಿನ ಗಣತಿ ನಡೆಯಬೇಕೆಂದರೆ ಅದಕ್ಕಾಗಿ ಈಗಿರುವ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ದಶಕದ ಎರಡನೇ ವರ್ಷದ (೨೦೧೧, ೨೦೨೧, ೨೦೩೧ ಹೀಗೆ) ಬದಲಾಗಿ ದಶಕದ ೭ನೇ ವರ್ಷದಲ್ಲಿ (೨೦೩೬, ೨೦೪೬, ೨೦೫೬ ಹೀಗೆ) ಜನಗಣತಿ ನಡೆಸಬೇಕೆಂದು ನಿರ್ಧರಿಸಬೇಕಾಗುತ್ತದೆ. ಅದು ಅಷ್ಟು ಸರಳವಾಗಿಲ್ಲ. ಸಂಸತ್ತಿನಲ್ಲಿ ಮತ್ತು ರಾಜ್ಯಗಳ ಶಾಸನಸಭೆಗಳಲ್ಲಿ ವಿವರವಾದ ಚರ್ಚೆಗಳಾಗಿ ನಿರ್ಣಯಗಳನ್ನು ಅಂಗೀಕರಿಸಬೇಕಾಗುತ್ತದೆ. ಇದಕ್ಕೂ ಮೊದಲು ವಿವಿಧ ವಲಯಗಳ ಮತ್ತು ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಪಡೆಯಬೇಕು. ಸಾಧಕ-ಬಾಧಕಗಳ ಬಗ್ಗೆ ಅರ್ಥಶಾಸ್ತ್ರಜ್ಞರ ಮತ್ತು ಸಮಾಜಶಾಸ್ತ್ರಜ್ಞರ ಅಲ್ಲದೆ ಜನಸಂಖ್ಯಾ ತಜ್ಞರ ಅಭಿಪ್ರಾಯಗಳನ್ನೂ ಪಡೆದು ಕ್ರೋಢೀಕರಿಸಬೇಕು.

ಜನಗಣತಿ ಪ್ರಕ್ರಿಯೆ : ಮೊದಲು ಹಿಂದಿನ ಗಣತಿಗಳ ದಾಖಲೆಗಳ ಆಧಾರದ ಮೇಲೆ ಮತ್ತು ಇಂದಿನ ಅವಶ್ಯಕತೆಗಳನ್ನು ಗಮನಿಸಿ ಸಂಖ್ಯಾಶಾಸ್ತ್ರಜ್ಞರ ಮಾರ್ಗದರ್ಶನದಲ್ಲಿ ಕುಟುಂಬಗಳ ಸಮಗ್ರ ಮಾಹಿತಿಗಳನ್ನು ಪಡೆಯಲು ಪ್ರಶ್ನಾವಳಿಗಳ (ಉತ್ತರಗಳನ್ನು ದಾಖಲಿಸಲು ಸ್ಥಳಾವಕಾಶವಿರುವಂತೆ) ಪುಸ್ತಿಕೆಗಳು ತಯಾರಾಗಬೇಕು. ೧೪೦ ಕೋಟಿಗೂ ಹೆಚ್ಚಿರುವ ನಮ್ಮ ಜನಸಂಖ್ಯೆಯು ಸರಾಸರಿ ಐದು ಜನರ ಕುಟುಂಬಗಳಲ್ಲಿದೆ ಎಂದು ಗ್ರಹಿಸಿದರೂ ಸುಮಾರು ೩೦ ಕೋಟಿ ಪ್ರಶ್ನಾವಳಿ ಪುಸ್ತಿಕೆಗಳಾದರೂ ಬೇಕು. ಎರಡನೇ ಹಂತ ಜನಗಣತಿ ಸಿಬ್ಬಂದಿ ನೇಮಕಾತಿ, ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳು. ಮನೆಮನೆಗೆ ಹೋಗಿ ಮಾಹಿತಿ ಸಂಗ್ರಹಿಸುವ ಸಂಗ್ರಹಕಾರರು, ಮೇಲುಸ್ತುವಾರಿಗಳು, ಮಾಹಿತಿ ತುಂಬಿದ ಪುಸ್ತಿಕೆಗಳ ಸಂಗ್ರಹ ಕೇಂದ್ರಗಳ ಸಿಬ್ಬಂದಿ, ಅವುಗಳಲ್ಲಿ ಮಾಹಿತಿಗಳ ಕ್ರೋಢೀಕರಣ ಮತ್ತು ವಿಶ್ಲೇಷಣೆಗಾಗಿ ಸಂಖ್ಯಾ ಶಾಸ್ತ್ರ ಜ್ಞಾನ ಹೊಂದಿರುವ ಸಿಬ್ಬಂದಿ ಮತ್ತು ಅಂತಿಮ ಅಂಕಿಸಂಖ್ಯೆಗಳನ್ನು ತಯಾರಿಸಲು ಸಂಖ್ಯಾಶಾಸ್ತ್ರಜ್ಞರ ತಂಡ ಮುಂತಾದವರ ನೇಮಕಾತಿಯಾಗಬೇಕು. ಶಾಲಾ ಶಿಕ್ಷಕರು, ಕಾಲೇಜು ಅಧ್ಯಾಪಕರು, ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ವಿವಿಧ ಕೆಲಸಗಳಿಗೆ ನೇಮಕವಾಗುತ್ತಾರೆ. ಅವಶ್ಯಕತೆ ಇದ್ದರೆ ನಿರುದ್ಯೋಗಿ ಮತ್ತು ಅರೆ ಉದ್ಯೋಗಿ ಯುವಕರನ್ನು ನೇಮಿಸಬಹುದು. ಇವರೆಲ್ಲರಿಗೂ ಸಂಕ್ಷಿಪ್ತ ತರಬೇತಿ ಕೊಡುವುದಲ್ಲದೆ ಪ್ರಾತ್ಯಕ್ಷಿಕೆಗಳನ್ನೂ ಅವರವರ ಕಾರ್ಯಗಳಲ್ಲಿ ಏರ್ಪಡಿಸಲಾಗುತ್ತದೆ. ಇವೆಲ್ಲ ಪೂರ್ವ ತಯಾರಿಗಳು. ಇವರೆಲ್ಲ ತಮಗೆ ಬಂದ ಉತ್ತರಗಳನ್ನು ಮಾತ್ರ ಪ್ರಾಮಾಣಿಕವಾಗಿ ದಾಖಲಿಸಬೇಕಾಗುತ್ತದೆ. ತಮ್ಮ ಅಭಿಪ್ರಾಯವೇನನ್ನೂ ಸೇರಿಸಬಾರದು.

ಮೂರನೇ ಹಂತ ಪ್ರತ್ಯಕ್ಷ ಗಣತಿ ಕಾರ್ಯ. ಮಹತ್ವದ್ದು. ದೇಶಾದ್ಯಂತ ಜನಗಣತಿಯ ದಿನಾಂಕಗಳನ್ನು ಮೊದಲೇ ನಿರ್ಧರಿಸಲಾಗಿರುತ್ತದೆ. ಅದಕ್ಕೆ ಸಾಕಷ್ಟು ಪ್ರಚಾರವನ್ನೂ ಕೊಡಲಾಗಿರುತ್ತದೆ. ಒಟ್ಟು ೭ ಲಕ್ಷದಷ್ಟು ಹಳ್ಳಿಗಳು ಮತ್ತು ೮,೦೦೦ಕ್ಕೂ ಹೆಚ್ಚು ನಗರಗಳಲ್ಲಿ ಏಕಕಾಲಕ್ಕೆ ಈ ಕೆಲಸ ನಡೆಯಬೇಕಾಗುತ್ತದೆ. ಇದೊಂದು ದೊಡ್ಡ ಯಜ್ಞವಿದ್ದಂತೆ. ಎಲ್ಲರೂ ಸಂತೋಷದಿಂದ ಹಬ್ಬದಂತೆ ಇದರಲ್ಲಿ ಪಾಲ್ಗೊಳ್ಳಬೇಕು. ಗಣತಿಕಾರರು ಮನೆಮನೆಗೆ ಹೋಗಿ ಕುಟುಂಬದ ಯಜಮಾನನಿಂದ ಅಥವಾ ಬೇರೆ ಜವಾಬ್ದಾರಿಯುತ ವ್ಯಕ್ತಿಯಿಂದ ಉತ್ತರಗಳನ್ನು ದಾಖಲಿಸಬೇಕು. ತಾಳ್ಮೆ ಇರಲಿ, ಯಾವುದೇ ರೀತಿ ಒತ್ತಡಗಳನ್ನು ಹಾಕಬಾರದು. ನಿಗದಿತ ದಿನಗಳಲ್ಲಿ ಕೆಲಸ ಪೂರ್ಣಗೊಂಡ ನಂತರ ಗಣತಿಕಾರರು ಇನ್ನಷ್ಟು ನಿರ್ಧರಿತ ದಿನಗಳಲ್ಲಿ ಮೊದಲು ಬಿಟ್ಟು ಹೋದ ಅಥವಾ ಬೀಗ ಹಾಕಿದ ಮನೆಗಳಲ್ಲಿ ಕುಟುಂಬಗಳ ಮಾಹಿತಿಯನ್ನು ಹುಡುಕಿ ಸಂಗ್ರಹಿಸಬೇಕು. ಅಲ್ಲದೇ ಒಂದೆರಡು ದಿನ ರಾತ್ರಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಬಸ್ ಸ್ಟಾ ಂಡ್ ಮುಂತಾದಲ್ಲಿ ಮಲಗುವ ನಿರ್ಗತಿಕರ ವಿವರಗಳನ್ನೂ ಸಂಗ್ರಹಿಸಬೇಕು. ಒಟ್ಟಿನಲ್ಲಿ ದೇಶದಲ್ಲಿರುವ ಯಾರ ಮಾಹಿತಿಯೂ ಬಿಟ್ಟು ಹೋಗಬಾರದೆಂಬುದು ಇದರ ಉದ್ದೇಶ. ಹೀಗೆ ಜನಸಂಖ್ಯೆಯ ಮಾಹಿತಿ ಹೊಂದಿರುವ ಪುಸ್ತಿಕೆಗಳು ಸಂಗ್ರಹ ಸ್ಥಳಗಳಿಗೆ ತಲುಪಿಸಲ್ಪಟ್ಟ ನಂತರ ಮುಂದಿನ ಕೆಲಸಗಳನ್ನು ಸಂಬಂಧಪಟ್ಟವರು ಮುಂದುವರಿಸುತ್ತಾರೆ.

ನಾಗರಿಕರ ಕರ್ತವ್ಯ ಮತ್ತು ಜವಾಬ್ದಾರಿಗಳು: ದೇಶವಾಸಿಗಳ ಸತ್ಯನಿಷ್ಠೆ ಪಾಲ್ಗೊಳ್ಳುವಿಕೆ ಜನಗಣತಿಯ ಉಪಯುಕ್ತತೆಯನ್ನು ಹೆಚ್ಚಿಸುತ್ತದೆ. ಸರ್ಕಾರಗಳಿಗೆ ಸಮರ್ಪಕ ನೀತಿಗಳನ್ನು ರೂಪಿಸಲು ಸಹಕಾರಿಯಾಗುತ್ತದೆ. ದೇಶದ ಪ್ರಗತಿಗೆ ಪೂರಕವಾಗುತ್ತದೆ. ನಮ್ಮ ಜವಾಬ್ದಾರಿಯುತ ನಡೆ ಸಮಾಜದ ಕಲ್ಯಾಣಕ್ಕೆ ದಾರಿಯಾಗುತ್ತದೆ. ಗಣತಿಕಾರರು ಮನೆಗೆ ಬಂದಾಗ ಮುಖ್ಯಸ್ಥರು ತಮ್ಮ ಕುಟುಂಬದ ಎಲ್ಲ ವಿವರಗಳನ್ನೂ ಇದ್ದದ್ದು ಇದ್ದಂತೆಯೇ ಹೇಳಿ ದಾಖಲಾಗುವಂತೆ ನೋಡಿಕೊಳ್ಳಬೇಕು. ಯಾವುದೇ ಉತ್ಪ್ರೇಕ್ಷೆ ಅಥವಾ ಮುಚ್ಚುಮರೆ ಇರಬಾರದು. ಕುಟುಂಬದ ಆದಾಯ ಆಸ್ತಿ ಮತ್ತು ಸರ್ಕಾರದಿಂದ ಯಾವುದೇ ಸವಲತ್ತು ಪಡೆಯುತ್ತಿದ್ದರೆ ಅದೂ ಸೇರಿ ವಿವರಗಳನ್ನು ಸರಿಯಾಗಿ ಕೊಡಬೇಕು. ತಮ್ಮ ಧರ್ಮ, ಜಾತಿ, ಉಪಜಾತಿ ಮೊದಲಾದವುಗಳನ್ನು ದಾಖಲಿಸಬೇಕು. ಕುಟುಂಬದಲ್ಲಿ ಗಂಡಸರು, ಹೆಂಗಸರು ಮತ್ತು ಮಕ್ಕಳು ಅಲ್ಲದೆ ಅವರ ವಯಸ್ಸು, ಶಿಕ್ಷಣ ಇತ್ಯಾದಿ ವಿವರಗಳನ್ನು ದಾಖಲಿಸಬೇಕು. ಮುಖ್ಯಸ್ಥನ ಉದ್ಯೋಗ ಮತ್ತು ಆದಾಯ ಅಲ್ಲದೆ ಇತರೆ ಸದಸ್ಯರ ಉದ್ಯೋಗವನ್ನೂ ದಾಖಲಿಸಬೇಕು. ಕುಟುಂಬದಲ್ಲಿ ಗರ್ಭಿಣಿಯರಿದ್ದರೆ ಮತ್ತು ಯಾರಾದರೂ ಯಾವುದಾದರೂ ರೋಗದಿಂದ ಬಳಲುತ್ತಿದ್ದರೆ ಅದನ್ನೂ ಹೇಳಬೇಕು. ಗಣತಿದಾರರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಬೇಕು.

ಒಂದು ಮಾತು: ಹಿಂದಿನ ಜನಗಣತಿಯಲ್ಲಿ ಐದು ಸಾವಿರದವರೆಗೆ ಜನಸಂಖ್ಯೆ ಇರುವ ಊರುಗಳನ್ನು ಹಳ್ಳಿಗಳೆಂದು ಅದಕ್ಕಿಂತ ಹೆಚ್ಚಿರುವಂತವುಗಳನ್ನು ನಗರ, ಪಟ್ಟಣಗಳೆಂದು ಗುರುತಿಸಲಾಗಿತ್ತು. ಈಗ ತಂತ್ರಜ್ಞಾನ ಮುಂದುವರಿದಿದ್ದರಿಂದ ಹಳ್ಳಿಗಳಲ್ಲೂ ಮುಂತಾದವು ಬಂದು ನಗರ ಮನಸ್ಥಿತಿ ಹೆಚ್ಚಾಗಿದೆ. ಹಳ್ಳಿಗಳ ಸಂಖ್ಯೆ ಕಡಿಮೆಯಾದೀತೆ?

 

Tags: