ಕೊಡಗು ಜಿಲ್ಲೆಯ ಕೊಯನಾಡು ಭಾಗದಲ್ಲಿ ಈ ಬಾರಿ ೩ ಬಾರಿ ಪಯಸ್ವಿನಿ ನದಿಯ ಪ್ರವಾಹದ ನೀರು ಮನೆಗಳಿಗೆ ನುಗ್ಗಿದೆ. ಅಯ್ಯೋ ೨೦೧೮ರಿಂದ ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಪ್ರತಿವರ್ಷ ಅನಾಹುತ ಸಂಭವಿಸುತ್ತಿದೆ, ಇದರಲ್ಲೇನಿದೆ ವಿಶೇಷ ಎಂದುಕೊಂಡರೆ ಅದಕ್ಕೆ ಕಾರಣ ಸರ್ಕಾರವೇ ಎಂಬುದು ಸ್ಪಷ್ಟ. ಹೌದು, ಕೊಯನಾಡು ಭಾಗದಲ್ಲಿ ಮಳೆಗಾಲದಲ್ಲಿ ಪ್ರವಾಹ ಎದುರಾಗಲು ಕಾರಣವಾಗಿರುವುದು ಸರ್ಕಾರ ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟೆನಿಂದ.
ಈ ಪ್ರದೇಶದಲ್ಲಿ ಸೇತುವೆಯೊಂದರ ಅವಶ್ಯಕತೆ ಬಹಳ ವರ್ಷಗಳಿಂದಲೂ ಇತ್ತು. ಅಥವಾ ಕೊಂಚ ದೂರದ ಪ್ರದೇಶದಲ್ಲಿರುವ ಸೇತುವೆ ಮೂಲಕ ಮತ್ತೊಂದು ಬದಿಯಲ್ಲಿ ರಸ್ತೆಯ ಅಭಿವೃದ್ಧಿ ಕಾರ್ಯ ಮಾಡಿದ್ದರೂ ಸಾಕಾಗುತ್ತಿತ್ತು. ಆದರೆ, ಸರ್ಕಾರ ಇಲ್ಲಿನ ಸ್ಥಳೀಯರಿಗೆ ನೀರಿನ ಅವಶ್ಯಕತೆ ಇಲ್ಲದಿದ್ದರೂ ಕಿಂಡಿ ಅಣೆಕಟ್ಟನ್ನು ಕಳೆದ ವರ್ಷ ನಿರ್ಮಿಸಿತ್ತು. ಅದರ ಪರಿಣಾಮ ಇಂದು ಸ್ಥಳೀಯರು ರಾತ್ರೋರಾತ್ರಿ ಮನೆಯಿಂದ ಓಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
೨೦೧೮ರಲ್ಲಿ ಸಂಭವಿಸಿದ ಮಹಾಮಳೆ ಮತ್ತು ಜಲಸ್ಫೋಟದ ಅನಾಹುತದಿಂದ ಸಾವು, ನೋವುಗಳಿಗೆ ಸಾಕ್ಷಿಯಾದ ಸಂಪಾಜೆ ಸಮೀಪದ ಕೊಯನಾಡು ಗ್ರಾಮದಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟೆ ನಿರ್ಮಿಸುವ ಸಂದರ್ಭದಲ್ಲೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಯೋಜನೆಯಿಂದ ಮತ್ತೊಂದು ಅಪಾಯ ಕಾದಿದ್ದು, ಕಾಮಗಾರಿಗೆ ತಡೆಯೊಡ್ಡುವಂತೆ ಸ್ಥಳೀಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಸ್ಥಳೀಯರ ಬೇಡಿಕೆ ಇಲ್ಲದಿದ್ದರೂ ವಿನಾಕಾರಣ ಕಿಂಡಿ ಅಣೆಕಟ್ಟೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ೧೦ಕ್ಕೂ ಹೆಚ್ಚು ಮನೆಗಳು, ಶಾಲೆ ಹಾಗೂ ಹೆದ್ದಾರಿ ಮುಳುಗಡೆಯಾಗಲಿದೆ ಎಂದು ಅಂದೇ ಗಮನ ಸೆಳೆದಿದ್ದರು.
ಪ್ರತಿವರ್ಷ ಮಳೆಗಾಲದಲ್ಲಿ ಪಯಸ್ವಿನಿ ನದಿ ಪ್ರವಾಹದ ರೀತಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತದೆ. ಇದರ ಪರಿಣಾಮವಾಗಿ ೨೦೧೮ ಮತ್ತು ೧೯ ರಲ್ಲಿ ಬಂಡೆಕಲ್ಲು, ಮರ, ಮರಳು, ಅಕ್ಕಪಕ್ಕದ ಮನೆಗಳು ಕೊಚ್ಚಿ ಹೋಗಿವೆ. ಅಂದು ನಡೆದ ಮಹಾಮಳೆಯ ಅನಾಹುತದ ಕುರುಹುಗಳು ಹಾಗೆಯೇ ಉಳಿದುಕೊಂಡಿವೆ.
ಅಪಾಯದ ಮುನ್ಸೂಚನೆ ಇದ್ದರೂ ಕಿಂಡಿ ಅಣೆಕಟ್ಟೆ ನಿರ್ಮಾಣ ಮಾಡಿ ಸರ್ಕಾರದ ಹಣ ಪೋಲು ಮಾಡಲಾಗುತ್ತಿದೆ. ಕೊಯನಾಡು ಗ್ರಾಮಕ್ಕೆ ಈ ಅಣೆಕಟ್ಟೆಯ ಅಗತ್ಯವಿಲ್ಲದಿದ್ದರೂ ಅನುದಾನ ಖರ್ಚು ಮಾಡುವ ಮತ್ತು ಇದರಿಂದ ದುರ್ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಕಿಂಡಿ ಅಣೆಕಟ್ಟೆ ನಿರ್ಮಾಣವಾದರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿದ್ದು, ಮಳೆಗಾಲದಲ್ಲಿ ಕಲ್ಲು, ಮರಳು, ಮರ ಮತ್ತಿತರ ತ್ಯಾಜ್ಯಗಳು ಇಲ್ಲಿ ಬಂದು ನಿಲ್ಲುವುದಲ್ಲದೆ ನದಿ ನೀರಿನ ಹರಿವಿಗೆ ತಡೆಯೊಡ್ಡಲಿದೆ. ಇದರಿಂದ ಪಕ್ಕದಲ್ಲೇ ಇರುವ ಶಾಲೆ, ಮನೆಗಳು ಹಾಗೂ ಹೆದ್ದಾರಿ ಸಂಪೂರ್ಣ ಜಲಾವೃತಗೊಳ್ಳಲಿದ್ದು, ಸಾವು, ನೋವುಗಳು ಕೂಡ ಸಂಭವಿಸಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದರು.
ಈ ನಿಷ್ಪ್ರಯೋಜಕ ಯೋಜನೆಯ ಬಗ್ಗೆ ಗ್ರಾ.ಪಂ.ಗೆ ದೂರು ನೀಡಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲವೆಂದು ಆರೋಪಿಸಿದ್ದ ಸ್ಥಳೀಯರು, ತಕ್ಷಣ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಮತ್ತು ಕಾಮಗಾರಿಯನ್ನು ಸ್ಥಗಿತಗೊಳಿಸುವ ಮೂಲಕ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಅನಾಹುತಗಳನ್ನು ತಡೆಯಬೇಕೆಂದು ಒತ್ತಾಯಿಸಿದ್ದರು. ಆದರೆ, ಅಂದು ಯಾರೂ ಈ ಬಗ್ಗೆ ಎಚ್ಚೆತ್ತುಕೊಳ್ಳಲಿಲ್ಲ.
ಪರಿಣಾಮ ಈ ಬಾರಿಯ ಮಹಾಮಳೆಗೆ ಮರದ ದಿಮ್ಮಿಗಳು ಕೊಚ್ಚಿಕೊಂದು ಬಂದು ಕಿಂಡಿ ಆಣೆಕಟ್ಟೆಯಲ್ಲಿ ಸಿಲುಕಿ ಸಮೀಪದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತಿದೆ. ಇಲ್ಲಿ ಸಿಲುಕಿಕೊಂಡಿರುವ ಮರದ ದಿಮ್ಮಿಗಳನ್ನು ತೆರವುಗೊಳಿಸುವುದೇ ಸ್ಥಳೀಯರು ಹಾಗೂ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಪ್ರವಾಹದಿಂದ ಸಮೀಪದ ಮನೆಗಳಲ್ಲಿದ್ದ ಕೋಳಿ, ಹಂದಿ ಮತ್ತಿತರ ಸಾಕುಪ್ರಾಣಿಗಳು ನೀರುಪಾಲಾಗಿವೆ.
ಸ್ಥಳೀಯ ನಿವಾಸಿಗಳು ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮವಾಗಿ ಇಂದು ಏನೂ ಅರಿಯದ ಸ್ಥಳೀಯ ಬಡಜನತೆ ಸಮಸ್ಯೆ ಎದುರಿಸುವಂತಾಗಿದೆ.
ಯಾರದ್ದೋ ಲಾಭಕ್ಕಾಗಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟೆಯಿಂದ ಸ್ಥಳೀಯ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿದೆ.
ಕಾನೂನು, ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಕಿಂಡಿ ಅಣೆಕಟ್ಟೆ ಕಾಮಗಾರಿಯಿಂದ ಯಾವುದೇ ಸಮಸ್ಯೆ ಆಗಿಲ್ಲ ಎಂದಿದ್ದರು. ಈ ಬಗ್ಗೆಯೂ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಸದ್ಯ ಕಿಂಡಿ ಅಣೆಕಟ್ಟೆಯಿಂದ ಸ್ಥಳೀಯರಿಗೆ ಸಮಸ್ಯೆ ಆಗುತ್ತಿರುವುದಂತು ಸತ್ಯ. ಸರ್ಕಾರ ಕಿಂಡಿ ಅಣೆಕಟ್ಟನ್ನು ತೆರವುಗೊಳಿಸಿ ಸ್ಥಳದಲ್ಲಿ ಸೇತುವೆ ನಿರ್ಮಿಸಿದಲ್ಲಿ ಸ್ಥಳೀಯರಿಗೆ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಮೂಲಕ ಮುಂದಿನ ವರ್ಷದಲ್ಲಾದರೂ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಬೇಕಾಗಿದೆ.