ದೇಶದ ಸರ್ವೋಚ್ಚ ನ್ಯಾಯಾಲಯ ಸೋಮವಾರ (ನ.೭)ರಂದು ಆರ್ಥಿಕವಾಗಿ ಹಿಂದುಳಿದ ವರ್ಗ(ಇಡಬ್ಯ್ಲೂಎಸ್)ಗಳಿಗೆ ಶೇ.೧೦ ಮೀಸಲಾತಿ ಸಂಬಂಧ ಮಹತ್ವದ ತೀರ್ಪು ನೀಡಿದೆ. ನ್ಯಾಯಾಲಯದ ಪಂಚ ಪೀಠ ನೀಡಿದ ಬಹುಮತ ಆಧರಿಸಿದ ತೀರ್ಪು ಇದಾಗಿದೆ. ಈ ಪೀಠದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರು ಇಡಬ್ಲ್ಯೂಎಸ್ ಮೀಸಲಾತಿಯನ್ನು ವಿರೋಧಿಸಿದ್ದರೆ, ಉಳಿದ ಮೂವರು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಬೇಲಾ ಎಂ.ತ್ರಿವೇದಿ ಮತ್ತು ಜೆ.ಬಿ.ಪರ್ದಿವಾಲಾ ಅವರು ಮೀಸಲಾತಿ ಪರವಾಗಿ ತೀರ್ಪು ನೀಡಿದ್ದಾರೆ.
ಕೇಂದ್ರ ಸರ್ಕಾರವು ೨೦೧೯ರಲ್ಲಿ ಸಂವಿಧಾನಕ್ಕೆ ೧೦೩ನೇ ತಿದ್ದುಪಡಿ ತಂದು ಇಡಬ್ಲ್ಯೂಎಸ್‌ಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಶೇ.೧೦ ಮೀಸಲಾತಿ ಜಾರಿಗೆ ತಂದಿತ್ತು. ಇದರ ವಿರುದ್ಧ ಹಲವು ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದವು.
ಇಡಬ್ಲ್ಯೂಎಸ್‌ಗೆ ಮೀಸಲಾತಿ ನೀಡಿರುವುದು ಸ್ವಾಗತಾರ್ಹ. ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಇದು ಟಾನಿಕ್ ಆಗುತ್ತದೆ ಎಂಬುದು ನಿಜ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೂಡ ಆರ್ಥಿಕ ಸಮಾನತೆ ಪ್ರತಿಪಾದಕರೇ ಆಗಿದ್ದರು. ಆದರೆ, ಮೂಲದಲ್ಲಿ ಮೀಸಲಾತಿ ಪರಿಕಲ್ಪನೆಯನ್ನು ಸಾಮಾಜಿಕ ನೆಲೆಗಟ್ಟಿನಲ್ಲಿ ನೋಡುವುದು ಅಗತ್ಯ. ಶ್ರೇಣೀಕೃತ ಜಾತಿವ್ಯವಸ್ಥೆಯಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ನಿರ್ಲಕ್ಷ್ಯಕ್ಕೊಳಗಾಗಿದ್ದ ದಮನಿತ ಸಮುದಾಯಗಳೇ ಮೀಸಲಾತಿ ಜಾರಿಗೆ ಕಾರಣ. ಅಸ್ಪೃಶ್ಯರ ನೆರಳೂ ಬೀಳಬಾರದು ಎಂಬಂತಹ ಕೆಟ್ಟ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಚ್ಚು ಕಡಿಮೆ ಅಂತಹದೇ ಶೋಚನೀಯ ಸ್ಥಿತಿಯಲ್ಲಿದ್ದ ಎಲ್ಲ ಜಾತಿಗಳ ಜೀವನ ಮಟ್ಟವನ್ನು ಸವರ್ಣೀಯರ ಬದುಕಿನ ಎತ್ತರಕ್ಕೆ ತರಬೇಕೆಂಬ ಮಹತ್ವಾಕಾಂಕ್ಷೆಯಲ್ಲಿ ಮೀಸಲಾತಿ ಜಾರಿಯಾಯಿತು. ಆದರೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೂಡ ಮೀಸಲಾತಿ ಸೌಲಭ್ಯ ಅರ್ಹತೆಯ ಪಟ್ಟಿಯಲ್ಲಿರುವ ಶೇ.೭೫ ರಷ್ಟು ಮಂದಿಯ ಬದುಕಿಗೆ ಸಮಾನತೆಯ ಬೆಳದಿಂಗಳು ಹರಿದು ಬಂದಿಲ್ಲ ಎಂಬುದು ವಾಸ್ತವ.
ಈಗಾಗಲೇ ಮೀಸಲಾತಿ ಸೌಲಭ್ಯ ಪಡೆದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವಗಗಳನ್ನು ಸಂವಿಧಾನದ ೧೦೩ನೇ ತಿದ್ದುಪಡಿಯಿಂದ ಹೊರಗಿಡಲಾಗಿದೆ. ಅದರರ್ಥ ಇಡಬ್ಲ್ಯೂಎಸ್ ಮೀಸಲಾತಿಯಿಂದ ಈ ಸಮುದಾಯಗಳನ್ನು ಹೊರಗಿಡಲಾಗಿದೆ. ಅದರೆ, ಇದು ಸಂವಿಧಾನದ ಮೂಲ ರಚನೆಗೆ ಧಕ್ಕೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರು ಪ್ರತಿಪಾದಿಸಿದ್ದಾರೆ. ಅಂದರೆ ಇಡಬ್ಲ್ಯೂಎಸ್ ಮೀಸಲಾತಿಗೆ ಅರ್ಹವಾಗಿದೆ. ಈಗಾಗಲೇ ಮೀಸಲಾತಿ ಪಡೆದಿರುವ ಎಲ್ಲ ಸಮುದಾಯಗಳೂ ಇದರಲ್ಲಿ ಸೇರ್ಪಡೆಯಾದಾಗ ಮಾತ್ರ ಸಂವಿಧಾನದ ಉದ್ದೇಶವನ್ನು ಎತ್ತಿಹಿಡಿದಂತಾಗುತ್ತದೆ ಎಂಬುದು ಅವರ ಅಭಿಮತ.
ಆದರೆ, ನ್ಯಾಯಮೂರ್ತಿ ಬೇಲಾ ಎಂ.ತ್ರಿವೇದಿ ಅವರು, ಮೀಸಲಾತಿಯ ಉದ್ದೇಶವು ೫೦ ವರ್ಷಗಳಲ್ಲಿ ಈಡೇರಬೇಕಿತ್ತು. ಸಮಾಜದ ಹಿತಾಸಕ್ತಿಗಾಗಿ ಮೀಸಲಾತಿ ಪದ್ಧತಿಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದಿದ್ದಾರೆ. ಅಲ್ಲದೆ, ಮೀಸಲಾತಿಗೆ ಕಾಲಮಿತಿ ಇರಬೇಕು. ಆಗ ಮಾತ್ರ ಜಾತಿ ಹಾಗೂ ವರ್ಗರಹಿತ ಸಮಾಜ ನಿರ್ಮಾಣ ಸಾಧ್ಯ ಎಂದಿದ್ದಾರೆ. ನ್ಯಾಯಮೂರ್ತಿಗಳ ಮಾತು ಕೂಡ ನಿಜ. ಆದರೆ, ಮೀಸಲಾತಿ ಸೌಲಭ್ಯದ ಉದ್ದೇಶ ಎಷ್ಟು ಪ್ರಮಾಣ ಈಡೇರಿದೆ ಎಂಬುದನ್ನೂ ಯೋಚಿಸುವುದು ಅಗತ್ಯ. ಈಗಲೂ ಗ್ರಾಮಾಂತರ ಪ್ರದೇಶಗಳಲ್ಲಿ ಜಾತಿ ವ್ಯವಸ್ಥೆಯ ಕ್ರೌರ್ಯ ಮುಂದುವರಿದಿದೆ. ಹೆಚ್ಚು ಕಡಿಮೆ ಪ್ರತಿದಿನ ದಲಿತರು, ದಮನಿತರ ಶೋಷಣೆಯ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವುದೇ ಸಾಕ್ಷಿ. ಇಂತಹ ಸನ್ನಿವೇಶವನ್ನು ಮನಗಂಡು ಮೀಸಲಾತಿ ಕಾಲಮಿತಿ ಬಗ್ಗೆ ಮಾತನಾಡಬೇಕಾಗುತ್ತದೆ.
ಬಹುಮುಖ್ಯವಾಗಿ ಇಡಬ್ಲ್ಯೂಎಸ್‌ನಿಂದ ಪರಿಶಿಷ್ಟರು, ಇತರೆ ಹಿಂದುಳಿದ ವರ್ಗಗಳನ್ನು ಹೊರಗಿಟ್ಟಿರುವುದು ಈ ಸಮುದಾಯಗಳನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟಕ್ಕೆ ದೂಡುವ ಸಾಧ್ಯತೆ ಇದೆ.
ಹೇಗೆಂದರೆ, ಮೀಸಲಾತಿ ಫಲಾನುಭವಿ ಸಮುದಾಯಗಳು ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಾಮಾನ್ಯ ವರ್ಗಗಳೊಂದಿಗೆ ಸ್ಪರ್ಧಿಸುವ ಅವಕಾಶ ಸಂವಿಧಾನ ಪ್ರದತ್ತವಾಗಿದೆ. ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಹಕ್ಕು ಪಡೆದ ಸಮುದಾಯದಲ್ಲಿ ಅತ್ಯುತ್ತಮ ಅಂಕಗಳಿಸಿರುವ ವಿದ್ಯಾರ್ಥಿಯು, ಸಾಮಾನ್ಯ ವರ್ಗದಲ್ಲಿ ಕೂಡ ಸ್ಥಾನ ಪಡೆಯಬಹುದು. ಉದ್ಯೋಗದಲ್ಲಿಯೂ ಅಷ್ಟೆ. ಇನ್ನು ಯಾವುದೇ ಚುನಾವಣೆಯಲ್ಲಿ ಮೀಸಲಾತಿ ಸೌಲಭ್ಯ ವ್ಯಕ್ತಿಯು ಸೂಕ್ತ ಅರ್ಹತೆಗಳಿದ್ದರೆ, ಸಾಮಾನ್ಯ ಕ್ಷೇತ್ರದಲ್ಲಿ ಕೂಡ ಸ್ಪರ್ಧಿಸಬಹುದು. ಅದರ ಪ್ರಕಾರ ಇಡಬ್ಲ್ಯೂಎಸ್ ಮೀಸಲಾತಿಯಲ್ಲಿ ಕೂಡ ಈಗಾಗಲೇ ಸಾಮಾಜಿಕವಾಗಿ ಮೀಸಲು ಪಡೆದಿರುವವರಿಗೂ ಸೌಲಭ್ಯ ದೊರೆಯುವಂತಾಗಬೇಕು ಎಂಬುದು ಈಗ ಚರ್ಚಿತ ವಿಷಯ.
ವಾಸ್ತವಿಕವಾಗಿ ಪರಾಮರ್ಶಿಸಿದರೆ, ಇಡಬ್ಲ್ಯೂಎಸ್‌ನಲ್ಲಿ ಮೀಸಲಾತಿ ಅರ್ಹತೆ ಪಡೆಯುವ ಅನೇಕ ಜನರಿಗಿಂತಲೂ ಈ ದಲಿತ ಸಮುದಾಯಗಳ ಬಹಳಷ್ಟು ಮಂದಿ ಆರ್ಥಿಕವಾಗಿ ದುರ್ಬಲರಾಗಿರುತ್ತಾರೆ ಎಂಬುದು ಅರಿವಾಗುತ್ತದೆ. ಅಂಬೇಡ್ಕರ್ ಅವರು ಮೀಸಲಾತಿ ನೀಡಿರುವುದೇ ಎಲ್ಲ ಸಮುದಾಯಗಳ ಜೀವನ ಶ್ರೇಷ್ಠಗೊಳ್ಳಬೇಕು ಎಂಬ ಮಹದಾಸೆಯಿಂದ. ಹಾಗಾಗಿಯೇ ಅವರು ಮಹಿಳೆಯರಿಗೂ ಆಸ್ತಿ ಹಕ್ಕು ಅಗತ್ಯ ಎಂದು ಪ್ರತಿಪಾದಿಸಿ, ತಮ್ಮ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ ಇಡಬ್ಲ್ಯೂಎಸ್‌ಗೆ ಮೀಸಲಾತಿ ನೀಡುವುದೂ ಸರಿ. ಆದರೆ, ಪರಿಶಿಷ್ಟರು ಮತ್ತು ಇತರೆ ಹಿಂದುಳಿದ ವರ್ಗಗಳನ್ನು ಹೊರಗಿಟ್ಟಿರುವುದು ಸರಿಯೇ ಎಂಬುದು ಗಂಭೀರ ಚಿಂತನೆ ಮಾಡಬೇಕಾದ ವಿಷಯ.