ರಾಜಧಾನಿ ಬೆಂಗಳೂರಿನ ನಂತರ ನಾಗಾಲೋಟದಿಂದ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರು ಉಗ್ರರ ಅಡಗುತಾಣವಾಗುತ್ತಿದೆಯೇ? ನಿವೃತ್ತರ ಸ್ವರ್ಗ ಎಂದು ಕರೆಸಿಕೊಳ್ಳುವ ಅರಮನೆ ನಗರಿಯಲ್ಲಿ ಸದ್ದಿಲ್ಲದೇ ಉಗ್ರರ ಚಟುವಟಿಕೆ ನಡೆಯುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ. ದಶಕಗಳ ಹಿಂದಿನಿಂದಲೂ ದೇಶದ ಬೇರೆ ಬೇರೆ ಕಡೆಗಳಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆದಾಗೆಲ್ಲ, ಅದರ ಜತೆಗೆ ಮೈಸೂರಿನ ನಂಟು ಬೆಸೆದುಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
೨೦೦೬ರಲ್ಲಿ ಎ.ಕೆ.೪೭ ನೊಂದಿಗೆ ಮೂವರು ಭಯೋತ್ಪಾದಕರು ಸಸಾರೆ ಸಿಕ್ಕಲ್ಲಿಂದ ಹಿಡಿದು ೨೦೧೬ರಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಶೌಚಾಲಯದಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ನಾಲ್ವರನ್ನು ಎನ್‌ಐಎ ತನಿಖಾಧಿಕಾರಿಗಳು ಒಂದು ವರ್ಷದ ಬಳಿಕ ೨೦೧೭ರಲ್ಲಿ ಬಂಧಿಸಿದ್ದರು. ಮೊನ್ನೆ ಮೊನ್ನೆ ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ತೀರ್ಥಹಳ್ಳಿ ಮೂಲದ ಶಾರಿಖ್ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಮೂವರನ್ನು ವಶಕ್ಕೆ ಪಡೆದಿರುವುದು ಆತಂಕ ಹೆಚ್ಚಿಸಿದೆ.
ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ತನಿಖೆ ಮುಂದುರೆಸಿದೆ. ಬಂಧಿತ ಶಾರಿಖ್‌ನ ಸಹಚರರನ್ನೂ ಮಂಗಳೂರಿಗೆ ಕರೆದೊಯ್ದು ಆತನ ಜತೆಗೆ ನಂಟು ಇರುವುದನ್ನು ಖಚಿತಪಡಿಸಿಕೊಂಡಿದೆ. ಮೈಸೂರಿಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ಶಂಕಿತನಿಗೆ ಮೈಸೂರು ನಂಟು ಇರುವುದು ಖಚಿತವಾಗುತ್ತಿದ್ದಂತೆ ಮೈಸೂರು ನಗರದಲ್ಲಿ ಕಟ್ಟೆಚ್ಚರವಹಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಇದೆಲ್ಲವು ಆರಂಭ ಶೂರತ್ವ ಎಂದು ಸಾರ್ವಜನಿಕರೇ ಮೂಗು ಮುರಿಯುತ್ತಾರೆ. ದೇಶದ ಯಾವುದೇ ಭಾಗದಲ್ಲಿ ಭಯೋತ್ಪಾದನಾ ಕೃತ್ಯ ನಡೆದಾಗಲೂ ಮೈಸೂರಿನ ಜನನಿಬಿಡ ಸ್ಥಳಗಳಲ್ಲಿ ಕಟ್ಟೆಚ್ಚರವಹಿಸಲಾಗುತ್ತದೆ. ಬಸ್, ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ ಮರಳು ಮೂಟೆಗಳನ್ನಟ್ಟು ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸಿ, ನಿಮ್ಮ ಸುರಕ್ಷತೆ ಕಾಪಾಡಲು ನಾವಿದ್ದೇವೆ ಎಂದು ಸಾರ್ವಜನಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ಆದರೆ, ದಿನಕಳೆದಂತೆ ಶಸ್ತ್ರಸಜ್ಜಿತ ಸಿಬ್ಬಂದಿ ಸಂಖ್ಯೆ ಕಡಿಮೆಯಾಗುತ್ತಾ ಬಂದು ಒಂದು ದಿನ ಅಲ್ಲಿ ಯಾವುದೇ ಸಿಬ್ಬಂದಿ ಇಲ್ಲದೇ ಕೇವಲ ಹರಿದ ಚೀಲಗಳಲ್ಲಿ ಇಣುಕಿ ನೋಡುವ ಮರಳು ನಮ್ಮ ಭದ್ರತಾ ವ್ಯವಸ್ಥೆಯನ್ನು ಅಣಕಿಸುತ್ತವೆ.
೨೦೧೬ರಲ್ಲಿ ಮೈಸೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಶೌಚಾಲಯದಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾದಾಗ ಇಡೀ ಮೈಸೂರೇ ಬೆಚ್ಚಿ ಬಿದ್ದಿತ್ತು. ಕೂಡಲೇ ಶಸ್ತ್ರಸಜ್ಜಿತ ರಕ್ಷಣಾ ಸಿಬ್ಬಂದಿ ಇಡೀ ನ್ಯಾಯಾಲಯ ಸಂಕೀರ್ಣವನ್ನು ತಮ್ಮ ಸುಪರ್ದಿಗೆ ಪಡೆದು ಭದ್ರತೆ ಹೆಚ್ಚಿಸಿದ್ದಲ್ಲದೆ, ನ್ಯಾಯಾಲಯದ ಎಲ್ಲ ಪ್ರವೇಶ ದ್ವಾರಗಳಲ್ಲೂ ಮೆಟಲ್ ಡಿಟೆಕ್ಟರ್‌ಗಳನ್ನಿರಿಸಿ ನ್ಯಾಯಲಯಕ್ಕೆ ಬರುವ ಬರುವ ಪ್ರತಿಯೊಬ್ಬ ವಕೀಲರು, ಕಕ್ಷಿದಾರರನ್ನೂ ಲೋಹಶೋಧಕ ಯಂತ್ರಗಳ ಮೂಲಕ ತಪಾಸಣೆ ನಡೆಸಿ ಒಳಬಿಡಲಾಗುತ್ತಿತ್ತು. ಬಾಂಬ್ ಸ್ಫೋಟ ಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ನ್ಯಾಯಾಲಯದ ಪ್ರವೇಶ ದ್ವಾರಗಳಲ್ಲಿದ್ದ ಮೆಟಲ್ ಡಿಟೆಕ್ಟರ್‌ಗಳು, ಶಸ್ತ್ರ ಸಜ್ಜಿತ ಸಿಬ್ಬಂದಿಗಳೂ ಕಾಣದಂತಾದರೂ. ವ್ಯವಸ್ಥೆಯಲ್ಲಿನ ಈ ಲೋಪದಿಂದಾಗಿ ಮತ್ತೆಲ್ಲಾದರೂ ಬಾಂಬ್ ಸ್ಫೋಟವಾದಾಗಲೇ ನಮ್ಮ ಪೊಲೀಸ್ ವ್ಯವಸ್ಥೆ ಎಚ್ಚೆತ್ತು ಕೊಳ್ಳುವುದು ಎಂದು ಸಾರ್ವಜನಿಕರು ಟೀಕಿಸುವ ಹಂತಕ್ಕೆ ಬಂದು ತಲುಪಿದೆ.
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟಿಸಲು ಸಂಚು ರೂಪಿಸಿದ್ದವರ ಜಾಲ ರಾಜ್ಯದ ವಿವಿಧೆಡೆಯೂ ವಿಸ್ತರಿಸಿದೆ. ಮೈಸೂರು, ತಿ.ನರಸೀಪುರ, ಮಂಗಳೂರು, ಶಿವಮೊಗ್ಗ ಜಿಲ್ಲೆ ಸೇರಿದಂತೆ ಈವರೆಗೆ ಏಳು ಕಡೆ ಶೋಧ ನಡೆಸಿದ್ದೇವೆ ಎಂದು ರಾಜ್ಯ ಕಾನೂನು-ಸುವ್ಯವಸ್ಥೆ ವಿಭಾಗದ ಅಪರ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಅವರೇ ಹೇಳಿದ್ದಾರೆ. ಜತೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರೇ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಆಕಸ್ಮಿಕವಲ್ಲ. ಇದೊಂದು ಉದ್ದೇಶಪೂರ್ವಕ ಸಂಚು ಎಂದು ಟ್ವೀಟ್ ಮಾಡಿರುವುದು ಪ್ರಕರಣದ ಸೂಕ್ಷ್ಮತೆಯನ್ನು ತಿಳಿಸುತ್ತದೆ.
ಮಂಗಳೂರು ನಗರದಲ್ಲಿ ೨೦೨೦ರ ನವೆಂಬರ್‌ನಲ್ಲಿ ಲಷ್ಕರ್- ಎ- ತೊಯ್ಬಾ ಹಾಗೂ ತಾಲಿಬಾನ್ ಪರವಾಗಿ ಬರೆಯಲಾಗಿದ್ದ ಗೋಡೆ ಬರಹ ಪ್ರಕರಣದಲ್ಲೂ ಬಂಧಿತ ಶಾರಿಕ್ ಪ್ರಮುಖ ಆರೋಪಿಯಾಗಿದ್ದ. ಆಗ ಶಾರಿಕ್ ಹಾಗೂ ಮಾಜ್ ಮುನೀರ್ ಅಹಮದ್‌ನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಆ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಅಬ್ದುಲ್ ಮತೀನ್ ಹಾಗೂ ಅರಾಫತ್ ಅಲಿ ತಲೆ ಮರೆಸಿಕೊಂಡಿದ್ದರು. ಶಾರಿಕ್, ಮಾಜ್ ಮುನೀರ್ ಅಹಮದ್, ಸೈಯದ್ ಯಾಸಿನ್ ತಂಡವು ಭಯೋತ್ಪಾದನಾ ಸಂಘಟನೆಗಳಿಂದ ಪ್ರೇರಣೆಗೊಂಡು ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿತ್ತು ಎಂಬ ಅಂಶವನ್ನು ತನಿಖಾಧಿಕಾರಿಗಳೇ ಹೇಳಿದ್ದಾರೆ. ದೇಶದ ಹೊರಗಿನ ಯಾವುದೋ ಘಟನಾವಳಿಗಳನ್ನು ಮುಂದಿಟ್ಟುಕೊಂಡು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗುವುದು ಹಾಗೂ ಯುವಜನರನ್ನು
ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುವುದು ಆತಂಕಕಾರಿ ಬೆಳವಣಿಗೆ. ನಾಗರಿಕ ಸಮಾಜವನ್ನು ಭಯ ಮುಕ್ತಗೊಳಿಸಬೇಕಾದರೆ, ಭಯೋತ್ಪಾದನಾ ಚಟುವಟಿಕೆಯನ್ನು ಹತ್ತಿಕ್ಕಲು ಬೇರುಮಟ್ಟದಿಂದಲೇ ಈ ಕೃತ್ಯದಲ್ಲಿ ತೊಡಗುವವರನ್ನು ದಮನ ಮಾಡಬೇಕಾದ ಅಗತ್ಯವಿದೆ. ಜತೆಗೆ ಹಣದ ಆಸೆಗೆ ಬಿದ್ದು, ಇಂಥವರಿಗೆ ನಕಲಿ ಆಧಾರ್, ಪಾಸ್‌ಪೋರ್ಟ್ ಮಾಡಿಕೊಡುವ ಬ್ರೋಕರ್‌ಗಳು, ಸೈಬರ್ ಸೆಂಟರ್‌ನವರು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ. ಪೂರ್ವಾಪರ ವಿಚಾರಿಸದೆ ಹೆಚ್ಚಿನ ಬಾಡಿಗೆ ನೀಡಲು ಒಪ್ಪಿಕೊಳ್ಳುತ್ತಾರೆ ಎಂಬ ಒಂದೇ ಕಾರಣಕ್ಕೆ ಹಿಂದೆ-ಮುಂದೆ ಗೊತ್ತಿಲ್ಲದವರಿಗೆ ಮನೆ ಬಾಡಿಗೆ ಕೊಡುವ ಮುನ್ನ ಮನೆ ಮಾಲೀಕರು ಜಾಗೃತೆವಹಿಸಬೇಕಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕಾದರೆ, ಪ್ರತಿ ಹೆಜ್ಜೆಗೂ ದೂಷಣೆ ಮಾಡದೆ ನಾಗರಿಕರು ಕೂಡ ಪೊಲೀಸರಿಗೆ ಬೆಂಬಲವಾಗಿ ನಿಲ್ಲಬೇಕಾದ ಅಗತ್ಯವಿದೆ.