ಬಹಳ ದಿನಗಳ ನಂತರ ಕೊಟ್ರ ಬಂದ. ತಿಂಗಳಿಂದೆ ಫ್ರೆಶರ್ಸ್ ಡೇ ನಲ್ಲಿ ಅವ್ನ ಎಕ್ಕಾ ಮಕ್ಕಾ ಭಾಷ್ಣ ಮಾಡಿದ್ದು ವೈರಲ್ಲಾಗಿ, ಫುಲ್ ಖುಷಿಯಾಗಿದ್ದ. ಭಾಷ್ಣದಲ್ಲಿ ನಮ್ ಕಾಲೇಜ್ ಹಂಗೆ ಹಿಂಗೆ ಅಂತೆಲ್ಲಾ ರೈಲು ಬಿಟ್ಟಿದ್ದ. ಈಗ ನೋಡಿದ್ರೆ ಮತ್ತೆ ಕೊಟ್ರನ ಟೀಮಿನ ಹುಡುಗ್ರೆ ಎಲ್ಲಾ ಕ್ಲಾಸ್ ಲೀಡರ್‌ಆಗಿ ಎಲೆಕ್ಟ್ ಆಗಿದ್ದಾರೆ. ಕೊಟ್ರ ಇಡೀ ಕಾಲೇಜಿಗೆ ಲೀಡರ್. ‘ಅಲ್ಲಲೇ ಕೊಟ್ರ, ನಿನ್ ಟೀಮಿನ ಹುಡುಗ್ರೆ ಹೆಂಗೆ ಸಲೆಕ್ಟ್ ಆದ್ರೋ, ಅದೇನ್ ಮ್ಯಾಜಿಕ್ ಮಾಡಿದ್ಯೋ? ಅಂತಾ ಕೇಳಿದೆ.
ನನ್ನ ಪ್ರಶ್ನೆಯಿಂದ ಕೊಟ್ರ ಹಿಗ್ಗೀ ಹೀರೇಕಾಯಿ ಆಗಿಬಿಟ್ಟ. ‘ಎಲ್ಲಾ ನಿಮ್ ಆಸೀರ್ವಾದ ಸಾ..’ ಅಂದ. ‘ಅಲ್ಲಲೇ ನೀನ್ ಗೆದ್ದಿದ್ದಕ್ಕೂ ನನ್ ಆಶೀರ್ವಾದಕ್ಕೂ ಏನ್ ಸಂಬಂಧ?’ ಅಂದೆ. ‘ಹಂಗಲ್ಲಾ ಸಾ.. ನೀವೇ ಪೊಲಿಟಿಕಲ್ ಸೈನ್ಸ್ ಪಾಠ ಮಾಡ್ವಾಗ ಹೇಳಿದ್ರಲ್ಲಾ ಸಾ.. ಸೆಂಟ್ರಲ್ಲು ಮತ್ತು ಸ್ಟೇಟ್ ಎರಡ್ರಲ್ಲೂ ಒಂದೇ ಪಾರ್ಟಿ ರೂಲಿಂಗ್ ಇದ್ರೆ ಡೆವಲಪ್‌ಮೆಂಟ್ ಆಗುತ್ತೆ ಅಂತಾ ಅದುನ್ನೇ ನಾನು ಸ್ವಲ್ಪ ಇಂಪ್ರೂವ್ ಮಾಡಿ ಪ್ರಚಾರ ಮಾಡಿದೆ ಸಾ.. ನಮ್ ಟೀಮ್ ಹುಡುಗ್ರೆ ಗೆದ್ದು ಬಿಟ್ರು..’ ಅಂತಾ ನಕ್ಕ.
ಪರ್ವಾಗಿಲ್ಲ ಎಲೆಕ್ಷನ್ ಗೆಲ್ಲೋವಷ್ಟು ನನ್ ಪೊಲಿಟಿಕಲ್ ಸೈನ್ಸ್ ಪಾಠ ಪರಿಣಾಮಕಾರಿಯಾಗಿತ್ತೇ ಅಂತಾ ನನಗೆ ಆಶ್ಚರ್ಯ ಮತ್ತು ಖುಷಿ ಎರಡೂ ಆಯ್ತು.
ನನ್ನ ಎಂಟೈರ್‌ಟೀಚಿಂಗ್ ಕೆರಿಯರ್‌ನಲ್ಲಿ ಇಂತಹದ್ದೊಂದು ಹೊಗಳಿಕೆ ಮಾತು ಬಂದಿದ್ದು ಇದೇ ಮೊದಲು.
‘ ಅದೇನ್ ಇಂಪ್ರೂವ್ ಮಾಡಿದೆ ಹೇಳೋ ಕೊಟ್ರಾ’ ಅಂದೆ.
‘ಅದೇ ಸಾ.. ಸೆಂಟ್ರಲ್ಲಲ್ಲಿ ಪಾರ್ಟಿ ಅಧಿಕಾರದಲ್ಲಿ ಇದ್ರೆ ಅದು ಒಂದ್ ಇಂಜಿನ್ನು.. ಸ್ಟೇಟ್ ಅಲ್ಲಿ ಪಾರ್ಟಿ ಅಧಿಕಾರದಲ್ಲಿ ಇದ್ರೆ ಅದು ಮತ್ತೊಂದು ಇಂಜಿನ್ನು. ಈ ಎರಡೂ ಇಂಜಿನ್ನು ಒಂದೇ ಪಾರ್ಟಿಗೆ ಸೇರಿದ್ರೆ ಡಬಲ್ ಇಂಜಿನ್ ಆಗುತ್ತಲ್ವಾ ಸಾ’ ಅಂದ ಕೊಟ್ರ.
‘ಹೌದಪ್ಪಾ.. ಡಬಲ್ ಇಂಜಿನ್‌ಗೂ ನೀನು, ನಿನ್ ಟೀಮ್ ಗೆಲ್ಲೋಕು ಏನೋ ಸಂಬಂಧ?’ ಅಂತಾ ಪೆದ್ದುಪೆದ್ದಾಗಿ ಕೇಳಿದೆ.
‘ಸಾ. ನೀವ್ ಪೊಲಿಟಿಕಲ್ ಸೈನ್ಸ್ ಪಾಠ ಮಾಡೋದ್ರಲ್ಲಿ ಪಂಟರಿರಬಹುದು.. ಆದ್ರೆ, ಪಾಲಿಟಿಕ್ಸ್ ಅರ್ಥ ಮಾಡ್ಕೊಳ್ಳೋದ್ರಲ್ಲಿ ನಿಮ್ ಸ್ಟೂಡೆಂಟ್ ಗಳ ಥರಾನೇ ವೀಕು ಸಾ..’ ಅಂತಾ ಮಾನ ಮರ್ಯಾದೆ ಹರಾಜು ಹಾಕಲು ಯತ್ನಿಸಿದ.
‘ಲೇ ಕೊಟ್ರಾ ನೀನು, ನಿನ್ ಟೀಮ್ ಗೆದ್ದಿದೆ ಅಂತಾ ನನ್ ಬುಡುಕ್ಕೆ ಕೈಹಾಕಬೇಡ.. ಅದೇನು ಅಂತಾ ಬಿಡಿಸಿ ಹೇಳು.. ನಂಗೂ ಪಾಲಿಟಿಕ್ಸ್ ಬರೋದಿದ್ರೇ ಇವತ್ತುಂದಿನಾ ನಿನ್ನಂತೋರಿಗೆ ಪಾಠ ಮಾಡ್ತಾ ಕೂರ್ತಾ ಇರಲಿಲ್ಲಾ.. ನಾನೂ ಯೂನಿವರ್ಸಿಟಿ ವೈಸ್ ಛಾನ್ಸಲರ್ ಆಗಿರ್ತಿದ್ದೆ’ ಅಂದೆ.
‘ನೀವ್ ವೈಸ್ ಛಾನ್ಸುಲರ್ ಆಗೋದಾ.. ಇಂಪಾಸಿಬಲ್.. ಚಾನ್ಸೇ ಇಲ್ಲಾ ಸಾ..’ ಅಂದ. ‘ಯಾಕಲೇ ಹಂಗಂತೀ.. ನಂಗೇನು ಕ್ವಾಲಿಫಿಕೇಶನ್ ಇಲ್ವೇನೋ? ನಂದೂ ಪಿಎಚ್ಡಿ ಆಗಿದೆ, ನಾನೂ ಎಷ್ಟೊಂದು ಫಾರಿನ್ ಯೂನಿವರ್ಸಿಟಿಲೀ ಗೆಸ್ಟ್ ಲೆಕ್ಚರ್ ಕೊಟ್ಟಿದ್ದೀನಿ.. ಎಷ್ಟೊಂದು ಎಸ್ಸೆಗಳು ಫಾರಿನ್ ಜರ್ನಲ್‌ಗಳಲ್ಲಿ ಪಬ್ಲಿಷ್ ಆಗಿವೆ’ ಅಂದೆ. ‘ಸಾ.. ನಿಮ್ಮ ವೀಕ್ ನೆಸ್ ಏನಪ್ಪಾ ಅಂದ್ರೆ.. ಟ್ಯಾಲೆಂಟಿಗೂ ಕ್ವಾಲಿಫಿಕೇಶನ್ನಿಗೂ ಅರ್ಥಾನೇ ಗೊತ್ತಿಲ್ಲ ಸಾ.. ಅಕಾಡೆಮಿಕ್ ಕ್ವಾಲಿಫಿಕೇಶನ್ ಇದ್ರೆ ಸಾಲ್ದು.. ಪಾಲಿಟಿಕ್ಸ್ ಮಾಡೋ ಟ್ಯಾಲೆಂಟೂ ಇರಬೇಕು’ ಅಂದ. ಪ್ರಾಕ್ಟಿಕಲ್ಲಾಗಿ ನಂಗೇ ಪಾಠ ಮಾಡಿಬಿಟ್ಟ ಕೊಟ್ರ.
‘ಅದ್ಸರಿನಪ್ಪಾ ಅದೇನೋ ಇಂಜಿನ್ ಕಥೆ ಹೇಳಿದ್ಯಲ್ಲಾ.. ಅದುನ್ನಾ ಎಕ್ಸ್‌ಪ್ಲೈನ್ ಮಾಡು’ ಅಂದೆ.
‘ಅದೇ ಸಾ.. ಹೆಂಗೂ ಮೂರ್ನಾಲ್ಕು ವರ್ಷದಿಂದ ನಾನೇ ಕಾಲೇಜ್ ಲೀಡರ್ ಅಲ್ವಾ ಸಾ.. ಕಾಲೇಜ್ ಲೀಡರ್ ಟೀಮಿನವರೇ ಕ್ಲಾಸ್ ಲೀಡರ್ ಆದ್ರೆ, ಆಯಾ ಕ್ಲಾಸಿನ ಪ್ರಾಬ್ಲೆಮ್ ಸಾಲ್ವ್ ಮಾಡೋದು ಈಸಿ ಆಗುತ್ತೆ. ನಮ್ಮದು ಡಬಲ್ ಇಂಜಿನ್ ಸರ್ಕಾರ ಆಗುತ್ತೆ ಅಂತಾ ಪ್ರಚಾರ ಮಾಡಿದ್ವಿ .. ಬಹುತೇಕ ಎಲ್ರೂ ನಮ್ ಕಾನ್ಸೆಪ್ಟ್ ನಂಬಿ ನಮಗೆ ಓಟ್ ಹಾಕಿದ್ರು.. ನಾವ್ ಗೆದ್ವಿ’ ಅಂದ.
‘ಹಂಗಾದ್ರೆ ಯಾರೂ ತಕರಾರು ತೆಗೀಲಿಲ್ವಾ?’ ಅಂದೆ.
‘ಹೌದು ಸಾ.. ಕೆಲವ್ರ ಇದ್ದೆ ಇರ್ತಾರೆ, ಅವರದ್ದೆಲ್ಲ ಡಬಲ್ ಇಂಜಿನ್ ಆದ್ರೆ, ಡಬಲ್ ಖರ್ಚು.. ಡಬಲ್ ಕರಪ್ಶನ್.. ಡಬಲ್ ಇನೆಫಿಷಿಯೆನ್ಸಿ.. ಡಬಲ್ ನೆಪೊಟಿಸಂ.. ಡಬಲ್ ಡೆಟ್ ಅಂತೆಲ್ಲಾ ತಕರಾರು ತೆಗೆದ್ರು ಸಾ.. ಅವ್ರನ್ನಾ ಹೆಂಗ್ ಬಾಯಿ ಮುಚ್ಚಿಸಬೇಕೋ ಹಂಗೆ ಬಾಯಿ ಮುಚ್ಚಿಸಿದೆ ಸಾ..’ ಅಂದ.
‘ಅಂದ್ರೆ ಏನ್ ಬೆದರಿಕೆ ಹಾಕಿದ್ಯೇನೋ? ಅಥ್ವಾ ರೌಡಿಗಳನ್ನು ಬಿಟ್ಟು ಹೆದರಿಸಿದ್ಯಾ?’ ಅಂತಾ ಆತಂಕದಿಂದ ಕೇಳಿದೆ.
‘ಸಾ.. ಬೆದರಿಕೆ.. ರೌಡಿ ತಂತ್ರ ಎಲ್ಲಾ ನಿಮ್ಮ ಕಾಲದ್ದು.. ನಮ್ಮದೇನಿದ್ರು ಬರೀ ರೈಡು ಸಾ..’ ಅಂದ.
‘ಏನೋ ಅದು ರೈಡು?’ ಅಂದೆ.
‘ಅದೇ ಸಾ ಇಡಿ ರೈಡು..’ ‘ ಹಂಗಂದ್ರೆ?’ ಆಶ್ಚರ್ಯದಿಂದ ಕೇಳಿದೆ.
‘ಇಡಿ ಅಂದ್ರೆ ‘ಎಜುಕೇಷನಲ್ ಡಿಸಿಪ್ಲಿನ್’ ಅಂತಾ, ಯಾರ್ಯಾರು ಅವಾಜು ಹಾಕಿದ್ರೋ ಅವರ ಹಳೆ ರ್ಯಾಗಿಂಗ್ ಕೇಸ್‌ಗಳನ್ನು ಹೊರಗೆ ತೆಗೆದು ಎನ್ ಕ್ವಯರಿ ಅಂತಾ ಪಾಠ ನಡೆಯೋ ಟೈಮ್ನಲ್ಲಿ ಕಾಲೇಜು ಡಿಸಿಪ್ಲಿನ್ ಕಮಿಟಿಗೆ ಅಟೆಂಡ್ ಆಗೋಥರಾ ಮಾಡಿದಿನಿ ಸಾ.. ಇನ್ನೆಂದು ಅವ್ರ ನನ್ ವಿರುದ್ಧ ಆವಾಜು ಹಾಕಲ್ಲ ’ ಅಂದ. ಅದಾದ ಮೇಲೆ ಕೊಟ್ರನ ಎದುರು ನಾನು ಕೂಡಾ ಆವಾಜು ಹಾಕುವುದನ್ನು ನಿಲ್ಲಿಸಿದೆ!
-‘ಅಷ್ಟಾವಕ್ರಾ’